ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಯು.ಕೆ. – ಭಾರತ ನಡುವಿನ ಅಂತಾರಾಷ್ಟ್ರೀಯ ವಿಮಾನ ಸಂಚಾರದ ತಾತ್ಕಾಲಿಕ ನಿಲುಗಡೆಗೆ ಜನವರಿ 7 ವರೆಗೆ ವಿಸ್ತರಣೆಗೆ ಆರೋಗ್ಯ ಸಚಿವಾಲಯದ ಶಿಫಾರಸು


ಹೊಸ ವರ್ಷ ಸಂಭ್ರಮಾಚರಣೆ ಹಿನ್ನೆಲೆ ಸೋಂಕು ಹರಡುವಿಕೆಗೆ ತೀವ್ರ ನಿಗಾ ವಹಿಸಲು ರಾಜ್ಯಗಳಿಗೆ ಸೂಚನೆ

Posted On: 30 DEC 2020 11:39AM by PIB Bengaluru

ಕೇಂದ್ರ ಆರೋಗ್ಯ ಸಚಿವಾಲಯ,ಯು.ಕೆ.ಯಿಂದ ಹೊರಟು ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವುದನ್ನು 2021ರ ಜ.7(ಗುರುವಾರ) ವರೆಗೆ ವಿಸ್ತರಿಸಲು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಶಿಫಾರಸು ಮಾಡಿದೆ.

ಆರೋಗ್ಯ ಸೇವೆಗಳ ಮಹಾನಿರ್ದೇಶಕರು(ಡಿಜಿಎಚ್ ಎಸ್) ನೇತೃತ್ವದ ಜಂಟಿ ಮೇಲ್ವಿಚಾರಣಾ ಸಮಿತಿ(ಜೆಎಂಜಿ) ಮತ್ತು ಡಿಜಿ, ಐಸಿಎಂಆರ್ ಹಾಗೂ ನೀತಿ ಆಯೋಗದ ಸದಸ್ಯ (ಆರೋಗ್ಯ) ಇವರು ನೀಡಿದ ಮಾಹಿತಿ ಆಧರಿಸಿ ಈ ಶಿಫಾರಸು ಮಾಡಲಾಗಿದೆ.

ಬ್ರಿಟನ್ ನಿಂದ ಹೊರಟು ಭಾರತಕ್ಕೆ ಬರುವ ಎಲ್ಲ ವಿಮಾನಗಳ ಸಂಖ್ಯೆ ಮಿತಿಗೊಳಿಸಿ ವಿಧಿಸಿರುವ ನಿರ್ಬಂಧವನ್ನು ತೆರವು ಮಾಡುವ ಬಗ್ಗೆ 2021ರ ಜನವರಿ 7ರ ನಂತರ ನಾಗರಿಕ ವಿಮಾನಯಾನ ಸಚಿವಾಲಯ ಪರಿಶೀಲನೆ ನಡೆಸಬಹುದು ಎಂದು ಸಲಹೆ ನೀಡಲಾಗಿದೆ. ಆ ಕಾರ್ಯತಂತ್ರವನ್ನು ನಾಗರಿಕ ವಿಮಾನಯಾನ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ  ಕಲ್ಯಾಣ ಸಚಿವಾಲಯದ ಜೊತೆ ಸೇರಿ ಸಮಾಲೋಚನೆ ನಡೆಸಿದ ನಂತರ ರೂಪಿಸಬಹುದು ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ಸದ್ಯದ ಚಳಿಗಾಲ ಮತ್ತು ಹೊಸ ವರ್ಷಾಚರಣೆ ಹಾಗೂ ಆದಕ್ಕೆ ಸಂಬಂಧಿಸಿದಂತೆ ಹಲವು ಆಚರಣೆಗಳಲ್ಲಿ ಜನರು ಹೆಚ್ಚಾಗಿ ಗುಂಪು ಗೂಡುವುದನ್ನು  ತಪ್ಪಿಸಲು ಮತ್ತು ಸೋಂಕು ಅತ್ಯಂತ ವೇಗವಾಗಿ ಹರಡುವುದನ್ನು ನಿಯಂತ್ರಿಸಲು ಎಲ್ಲ ರಾಜ್ಯಗಳು ಸಾಧ್ಯವಾದ ತೀವ್ರ ನಿಗಾ ವ್ಯವಸ್ಥೆ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಎಲ್ಲ ರಾಜ್ಯಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.

ಅಲ್ಲದೆ,  ಇತ್ತೀಚೆಗೆ ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿ ಹಾಗೂ ಸೂಚನೆಗಳನ್ನು ಪಾಲಿಸುವಂತೆ ಆರೋಗ್ಯ ಸಚಿವಾಲಯ ಪುನರುಚ್ಚರಿಸಿದೆ. ಗೃಹ ವ್ಯವಹಾರಗಳ ಸಚಿವಾಲಯ, ರಾಜ್ಯಗಳು ತಮ್ಮಲ್ಲಿನ ಸ್ಥಿತಿಗತಿಯನ್ನು ಆಧರಿಸಿ, ಕೋವಿಡ್-19 ಹರಡದಂತೆ ರಾತ್ರಿ ಕರ್ಫ್ಯೂ ಸೇರಿದಂತೆ ಸ್ಥಳೀಯ ಮಟ್ಟದಲ್ಲಿ ಹಲವು ನಿರ್ಬಂಧಗಳನ್ನು ಕೈಗೊಳ್ಳುವುದು ಕಡ್ಡಾಯವೆಂದು ಸೂಚಿಸಿದೆ.

ಗೃಹ ಸಚಿವಾಲಯ ಸರಕು ಮತ್ತು ಸಾರ್ವಜನಿಕರ ಅಂತರ ರಾಜ್ಯ ಮತ್ತು ರಾಜ್ಯದೊಳಗಿನ ಪ್ರಯಾಣಕ್ಕೆ ಯಾವುದೇ ನಿರ್ಬಂಧ ಹೇರುವಂತಿಲ್ಲ ಎಂದೂ ಸಹ ಸೂಚನೆ ನೀಡಿದೆ. ಈ ಬಗ್ಗೆ ಗಮನ ಸೆಳೆದಿರುವ, ಆರೋಗ್ಯ ಕಾರ್ಯದರ್ಶಿ ಎಲ್ಲ ರಾಜ್ಯಗಳು ಪ್ರಾಮಾಣಿಕವಾಗಿ ಸ್ಥಳೀಯ ಸ್ಥಿತಿಗತಿಯನ್ನು ಅವಲೋಕಿಸಬೇಕು ಮತ್ತು 2020ರ ಡಿಸೆಂಬರ್ 30,31 ಮತ್ತು 2021ರ ಜನವರಿ 1ರಂದು ಸೂಕ್ತ ನಿರ್ಬಂಧಗಳನ್ನು ವಿಧಿಸುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

***



(Release ID: 1684657) Visitor Counter : 224