ಪ್ರಧಾನ ಮಂತ್ರಿಯವರ ಕಛೇರಿ

100ನೇ ಕಿಸಾನ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ


ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಸಂಬಂಧಿಸಿದ ಸಂಸ್ಕರಣಾ ಉದ್ಯಮ ನಮ್ಮ ಆದ್ಯತೆಯಾಗಿದೆ

ಕೃಷಿಯಲ್ಲಿ ಖಾಸಗಿ ಹೂಡಿಕೆ ರೈತರಿಗೆ ನೆರವಾಗಲಿದೆ: ಪ್ರಧಾನಮಂತ್ರಿ

Posted On: 28 DEC 2020 5:49PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಸಂಗೋಲದಿಂದ ಪಶ್ಚಿಮ ಬಂಗಾಳದ ಶಾಲಿಮಾರ್ ನಡುವಿನ 100ನೇ ಕಿಸಾನ್ ರೈಲಿಗೆ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಸಿರು ನಿಶಾನೆ ತೋರಿದರು. ಕೇಂದ್ರ ಸಚಿವರುಗಳಾದ ಶ್ರೀ ನರೇಂದ್ರಸಿಂಗ್ ತೋಮರ್ ಮತ್ತು ಶ್ರೀ ಪೀಯೂಷ್ ಗೋಯೆಲ್ ಅವರೂ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ದೇಶದ ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ  ಕಿಸಾನ್ ರೈಲು ಸೇವೆ ಪ್ರಮುಖ ಹೆಜ್ಜೆಯಾಗಿದೆ ಎಂದರು. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಕೂಡ ಕೇವಲ 4 ತಿಂಗಳುಗಳಲ್ಲಿ 100 ಕಿಸಾನ್ ರೈಲುಗಳನ್ನು ಆರಂಭಿಸಲಾಗಿದೆ ಎಂದರು. ಸೇವೆ ಕೃಷಿ ಸಂಬಂಧಿತ ಆರ್ಥಿಕತೆಯಲ್ಲಿ ಪ್ರಮುಖ ಬದಲಾವಣೆ ತರಲಿದೆ ಮತ್ತು ದೇಶದ ಶೀಥಲೀಕರಣ ಘಟಕ ಪೂರೈಕೆ ಸರಪಳಿಯ ಬಲವರ್ಧನೆ ಮಾಡಲಿದೆ ಎಂದು ತಿಳಿಸಿದರು. ಕಿಸಾನ್ ರೈಲಿನ ಮೂಲಕ ಸಾಗಾಟಕ್ಕೆ ಯಾವುದೇ ಕನಿಷ್ಠ ಪ್ರಮಾಣವನ್ನು ನಿಗದಿ ಮಾಡದಿರುವ ಹಿನ್ನೆಲೆಯಲ್ಲಿ ಸಣ್ಣ ರೈತರು ಕೂಡ ಕಡಿಮೆ ವೆಚ್ಚದಲ್ಲಿ ದೊಡ್ಡ ಮಾರುಕಟ್ಟೆ ತಲುಪಬಹುದಾಗಿದೆ ಎಂದರು.

ಕಿಸಾನ್ ರೈಲು ಯೋಜನೆ ರೈತರ ಸೇವೆ ಮಾಡುವ ಸರ್ಕಾರದ ಬದ್ಧತೆಯನ್ನು ಮಾತ್ರವೇ ಪ್ರದರ್ಶಿಸುವುದಿಲ್ಲ ಜೊತೆಗೆ ನಮ್ಮ ರೈತರು ಎಷ್ಟು ತ್ವರಿತವಾಗಿ ಹೊಸ ಸಾಧ್ಯತೆಗಳಿಗೆ ಅಣಿಯಾಗುತ್ತಾರೆ ಎಂಬುದಕ್ಕೂ ಸಾಕ್ಷಿಯಾಗಿದೆ ಎಂದರು. ಈಗ ರೈತರು ತಮ್ಮ ಬೆಳೆಯನ್ನು ಇತರ ರಾಜ್ಯಗಳಲ್ಲಿಯೂ ಮಾರಾಟ ಮಾಡಬಹುದಾಗಿದೆ ಇದರಲ್ಲಿ ರೈತರ ರೈಲು (ಕಿಸಾನ್ ರೈಲು) ಮತ್ತು ಕೃಷಿ ವಿಮಾನ (ಕೃಷಿ ಉಡಾನ್) ಮಹತ್ವದ ಪಾತ್ರ ವಹಿಸುತ್ತಿವೆ ಎಂದರು. ಕೃಷಿ ರೈಲು ಬೇಗ ನಾಶವಾಗುವ ವಸ್ತುಗಳಾದ ಹಣ್ಣು, ತರಕಾರಿ, ಹಾಲು, ಮೀನು ಇತ್ಯಾದಿಗಳನ್ನು ಸಂಪೂರ್ಣ ಸುರಕ್ಷಿತವಾಗಿ ಸಾಗಾಟ ಮಾಡುವ ಸಂಚಾರಿ ಶೀಥಲೀಕರಣ ಘಟಕಗಳಾಗಿವೆ ಎಂದರು. “ಭಾರತವು ಸ್ವಾತಂತ್ರ್ಯ ಪೂರ್ವದಿಂದಲೂ ಬೃಹತ್ ರೈಲು ಜಾಲವನ್ನು ಒಳಗೊಂಡಿದೆ. ಆದರೆ ಈಗಷ್ಟೇ ಇದರ ಶಕ್ತಿಯನ್ನು ಕಿಸಾನ್ ರೈಲಿನ ಮೂಲಕ ಸೂಕ್ತವಾಗಿ ಪಡೆದುಕೊಳ್ಳಲಾಗುತ್ತಿದೆಎಂದೂ ಪ್ರಧಾನಮಂತ್ರಿ ಹೇಳಿದರು.

ಕಿಸಾನ್ ರೈಲಿನಂತಹ ಸೌಲಭ್ಯವು ಪಶ್ಚಿಮ ಬಂಗಾಳದ ಲಕ್ಷಾಂತರ ಸಣ್ಣ ರೈತರಿಗೆ ದೊಡ್ಡ ಸೌಲಭ್ಯವನ್ನು ನೀಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸೌಲಭ್ಯವು ರೈತರಿಗೆ ಮಾತ್ರವಲ್ಲದೆ ಸ್ಥಳೀಯ ಸಣ್ಣ ಉದ್ಯಮಿಗೂ ಲಭ್ಯವಿದೆ. ಕೃಷಿ ಕ್ಷೇತ್ರದ ತಜ್ಞರು ಮತ್ತು ಇತರ ದೇಶಗಳ ಅನುಭವಗಳು ಮತ್ತು ಹೊಸ ತಂತ್ರಜ್ಞಾನವನ್ನು ಭಾರತೀಯ ಕೃಷಿಯಲ್ಲಿ ಅಳವಡಿಸಲಾಗುತ್ತಿದೆ ಎಂದರು.

ಬೇಗ ಹಾಳಾಗುವ ಉತ್ಪನ್ನಗಳ ಸಂಗ್ರಹಣಾ ಕೇಂದ್ರಗಳನ್ನು ರೈಲ್ವೆ ನಿಲ್ದಾಣಗಳ ಸುತ್ತಮುತ್ತಲ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ರೈತರು ಅಲ್ಲಿ ತಮ್ಮ ಉತ್ಪನ್ನ ಸಂಗ್ರಹಿಸಿಡಬಹುದಾಗಿದೆ. ಸಾಧ್ಯವಾದಷ್ಟು ಹಣ್ಣು ಮತ್ತು ತರಕಾರಿಗಳನ್ನು ಮನೆಗಳಿಗೆ ಪೂರೈಸುವ ಪ್ರಯತ್ನ ಇದಾಗಿದೆ. ಹೆಚ್ಚಿನ ಉತ್ಪನ್ನವನ್ನು ಹಣ್ಣಿನರಸ, ಉಪ್ಪಿನಕಾಯಿ, ಸಾಸ್, ಚಿಪ್ಸ್ ಇತ್ಯಾದಿಗಳ ಉತ್ಪಾದನೆಯಲ್ಲಿ ತೊಡಗಿರುವ ಉದ್ಯಮಿಗಳಿಗೆ ತಲುಪಬೇಕು ಎಂದು ಪ್ರಧಾನಮಂತ್ರಿ ಹೇಳಿದರು.

ಕೃಷಿ ಉತ್ಪನ್ನಗಳಲ್ಲಿ ಮೌಲ್ಯವರ್ಧನೆಗೆ ಸಂಬಂಧಿಸಿದಂತೆ ದಾಸ್ತಾನು-ಸಂಬಂಧಿತ ಮೂಲಸೌಕರ್ಯ ಮತ್ತು ಸಂಸ್ಕರಣಾ ಕೈಗಾರಿಕೆಗಳ ಮೇಲೆ ಸರ್ಕಾರದ ಆದ್ಯತೆ ಕೇಂದ್ರೀಕರಿಸಲಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಬೃಹತ್ ಆಹಾರ ಉದ್ಯಾನ, ಶೀಥಲೀಕರಣ ಘಟಕ ಮೂಲಸೌಕರ್ಯ ಮತ್ತು ಕೃಷಿ ಸಂಸ್ಕರಣೆ ಕ್ಲಸ್ಟರ್ ಅಡಿಯಲ್ಲಿ ಪ್ರಧಾನಮಂತ್ರಿ ಕೃಷಿ  ಸಂಪದ ಯೋಜನೆಯಡಿ ಇಂತಹ ಸುಮಾರು 6500 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು. ಆತ್ಮ ನಿರ್ಭರ ಭಾರತ ಅಭಿಯಾನದ ಪ್ಯಾಕೇಜ್ ಅಡಿಯಲ್ಲಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳಿಗೆ 10000 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದೂ ತಿಳಿಸಿದರು.

ಗ್ರಾಮೀಣ ಜನರು, ರೈತರು ಮತ್ತು ಯುವಕರ ಭಾಗವಹಿಸುವಿಕೆ ಮತ್ತು ಬೆಂಬಲವೇ ಸರ್ಕಾರದ ಪ್ರಯತ್ನಗಳನ್ನು ಯಶಸ್ವಿಗೊಳಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು. ಕೃಷಿ ಉತ್ಪಾದಕ ಸಂಸ್ಥೆಗಳು (ಎಫ್‌.ಪಿಒ) ಮತ್ತು ಮಹಿಳಾ ಸ್ವಸಹಾಯ ಗುಂಪುಗಳಂತಹ ಸಹಕಾರಿ ಗುಂಪುಗಳು ಕೃಷಿ-ವ್ಯವಹಾರ ಮತ್ತು ಕೃಷಿ-ಮೂಲಸೌಕರ್ಯಗಳಲ್ಲಿ ಆದ್ಯತೆಯನ್ನು ಪಡೆಯುತ್ತವೆ. ಇತ್ತೀಚಿನ ಸುಧಾರಣೆಗಳು ಕೃಷಿ ವ್ಯವಹಾರ ವಿಸ್ತರಣೆಗೆ ಕಾರಣವಾಗುತ್ತವೆ ಮತ್ತು ಗುಂಪುಗಳು ಅತಿದೊಡ್ಡ ಫಲಾನುಭವಿಗಳಾಗಿರುತ್ತವೆ. ಕೃಷಿಯಲ್ಲಿ ಖಾಸಗಿ ಹೂಡಿಕೆ ಗುಂಪುಗಳಿಗೆ ಸಹಾಯ ಮಾಡುವ ಸರ್ಕಾರದ ಪ್ರಯತ್ನವನ್ನು ಬೆಂಬಲಿಸುತ್ತದೆ. "ನಾವು ಭಾರತೀಯ ಕೃಷಿ ಮತ್ತು ರೈತರನ್ನು ಸಂಪೂರ್ಣ ಸಮರ್ಪಣೆಯೊಂದಿಗೆ ಬಲಪಡಿಸುವ ಹಾದಿಯಲ್ಲಿ ಸಾಗುತ್ತೇವೆ" ಎಂದು ಪ್ರಧಾನಮಂತ್ರಿ ಹೇಳಿದರು.

***



(Release ID: 1684295) Visitor Counter : 224