ಪ್ರಧಾನ ಮಂತ್ರಿಯವರ ಕಛೇರಿ

ಡಿಸೆಂಬರ್ 29ರಂದು ಪ್ರಧಾನಮಂತ್ರಿ ಅವರಿಂದ ನ್ಯೂ ಭೌಪುರ್- ನ್ಯೂ ಖುರ್ಜಾ ಮಾರ್ಗ ಮತ್ತು ಪೂರ್ವ ಸರಕು ಕಾರಿಡಾರ್ ನ ಕಾರ್ಯಾಚರಣೆ ನಿಯಂತ್ರಣ ಕೇಂದ್ರ ಉದ್ಘಾಟನೆ

Posted On: 27 DEC 2020 3:52PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇದೇ ಡಿಸೆಂಬರ್ 29ರಂದು ಬೆಳಿಗ್ಗೆ 11 ಗಂಟೆಗೆ ನಿರ್ದಿಷ್ಟ ಪೂರ್ವ  ಸರಕು ಕಾರಿಡಾರ್ (ಇಡಿಎಫ್ ಸಿ)ನ ನ್ಯೂ ಭೌಪುರ್- ನ್ಯೂ ಖುರ್ಜಾ ಮಾರ್ಗವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದ ವೇಳೆ ಪ್ರಧಾನಿ ಅವರು, ಪ್ರಯಾಗ್ ರಾಜ್ ನಲ್ಲಿನ ಇಡಿಎಫ್ ಸಿ ಕಾರ್ಯಾಚರಣೆ ನಿಯಂತ್ರಣ ಕೇಂದ್ರ (ಒಸಿಸಿ)ವನ್ನೂ ಸಹ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿ ಬೆನ್ ಪಟೇಲ್, ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್  ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.

351 ಕಿಲೋಮೀಟರ್ ಉದ್ದದ ಇಡಿಎಫ್ ಸಿಯ  ನ್ಯೂ ಭೌಪುರ್- ನ್ಯೂ ಖುರ್ಜಾ  ಮಾರ್ಗ ಉತ್ತರ ಪ್ರದೇಶದಲ್ಲಿದೆ ಮತ್ತು ಅದನ್ನು 5,750 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ವಲಯದಿಂದಾಗಿ ಸ್ಥಳೀಯ ಉದ್ದಿಮೆಗಳಿಗೆ ವಿಫುಲ ಅವಕಾಶಗಳು ತೆರೆದುಕೊಳ್ಳಲಿವೆ, ಅವುಗಳೆಂದರೆ ಅಲ್ಯುಮಿನಿಯಂ ಉದ್ದಿಮೆ (ಕಾನ್ಪುರ್ ದೆಹಾತ್ ಜಿಲ್ಲೆಯ ಫುಖ್ರಾಯನ್ ಪ್ರಾಂತ್ಯ), ಹೈನುಗಾರಿಕೆ ವಲಯ (ಔರಿಯಾ ಜಿಲ್ಲೆ), ಜವಳಿ ಉತ್ಪನ್ನ/ಬ್ಲಾಕ್ ಪ್ರಿಂಟಿಂಗ್ (ಇತ್ವಾ ಜಿಲ್ಲೆ), ಗಾಜಿನ ವಸ್ತುಗಳ ಉದ್ದಿಮೆ(ಫಿರೋಜಾಬಾದ್ ಜಿಲ್ಲೆ), ಮಡಿಕೆ ಉದ್ಯಮ( ಬುಲಂದ್ ಶೆಹರ್ ನ ಖುರ್ಜಾ ಪ್ರಾಂತ್ಯ), ಇಂಗು ಉತ್ಪಾದನೆ (ಹತ್ರಾಸ್ ಜಿಲ್ಲೆ) ಮತ್ತು ಬೀಗ ಮತ್ತು ಹಾರ್ಡ್ ವೇರ್ (ಆಲಿಘಡ್ ಜಿಲ್ಲೆ). ಹೊಸ ಮಾರ್ಗದಿಂದ ಹಾಲಿ ಇರುವ ಕಾನ್ಫುರ-ದೆಹಲಿ ಮುಖ್ಯ ಮಾರ್ಗದಲ್ಲಿನ ವಾಹನ ದಟ್ಟಣೆ ತಗ್ಗಲಿದೆ ಮತ್ತು ಭಾರತೀಯ ರೈಲ್ವೆ ವೇಗದ ರೈಲುಗಳನ್ನು ಓಡಿಸಲು ಸಾಧ್ಯವಾಗಲಿದೆ.

ಪ್ರಯಾಗ್ ರಾಜ್ ನಲ್ಲಿನ ಆತ್ಯಾಧುನಿಕ ತಂತ್ರಜ್ಞಾನದ ಈ ಕಾರ್ಯಾಚರಣೆ ನಿಯಂತ್ರಣ ಕೇಂದ್ರ (ಒಸಿಸಿ), ಇಡೀ ಇಡಿಎಫ್ ಸಿ ಮಾರ್ಗಕ್ಕೆ ನಿಯಂತ್ರಣ ಕೋಣೆಯಾಗಿ ಕಾರ್ಯನಿರ್ವಹಿಸಲಿದೆ. ಒಸಿಸಿ ಜಾಗತಿಕವಾಗಿ ಅತಿ ದೊಡ್ಡ ಕಟ್ಟಡವನ್ನು ಹೊಂದಿದ ಸಂಸ್ಥೆಯಾಗಿದ್ದು, ಆಧುನಿಕ ವಿನ್ಯಾಸ, ದಕ್ಷತೆ ಮತ್ತು ಅತ್ಯುತ್ತಮ ಧ್ವನಿಜ್ಞಾನದ ವ್ಯವಸ್ಥೆ ಹೊಂದಿದೆ. ಈ ಕಟ್ಟಡ ಪರಿಸರ ಸ್ನೇಹಿಯಾಗಿದ್ದು, ಈ ಹಸಿರು ಕಟ್ಟಡಕ್ಕೆ ಗ್ರಿಹಾ-4 ರೇಟಿಂಗ್ ಇದೆ ಮತ್ತು ಅದನ್ನು ‘ಸುಗಮ್ಯ ಭಾರತ್ ಅಭಿಯಾನ’ದ ಮಾನದಂಡಗಳಂತೆ ನಿರ್ಮಿಸಲಾಗಿದೆ.

ಪೂರ್ವ ನಿರ್ದಿಷ್ಟ ಸರಕು ಕಾರಿಡಾರ್ (ಇಡಿಎಫ್ ಸಿ) ಕುರಿತು

ಇಡಿಎಫ್ ಸಿ (1856 ಕಿಲೋ. ಮೀಟರ್ ) ಲೂಧಿಯಾನ(ಪಂಜಾಬ್ ) ಸಮೀಪದ ಸಾಹ್ನೆವಾಲ್ ನಿಂದ ಆರಂಭವಾಗಲಿದೆ ಮತ್ತು ಅದು ಪಂಜಾಬ್, ಹರಿಯಾಣ, ಉತ್ತರಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ಮೂಲಕ ಸಾಗಿ ಪಶ್ಚಿಮ ಬಂಗಾಳದ ಡಂಕುಣಿ ತಲುಪಲಿದೆ. ಇದನ್ನು ಭಾರತೀಯ ನಿರ್ದಿಷ್ಟ ಸರಕು ಕಾರಿಡಾರ್ ನಿಗಮ(ಡಿಎಫ್ ಸಿಸಿಐಎಲ್ ) ನಿರ್ಮಾಣ ಮಾಡಿದೆ ಮತ್ತು  ಅದನ್ನು ನಿರ್ದಿಷ್ಟ ಸರಕು ಕಾರಿಡಾರ್ ಗಳನ್ನು ನಿರ್ಮಾಣ ಮಾಡಲು ಮತ್ತು ಕಾರ್ಯಾಚರಣೆಗೊಳಿಸಲು ವಿಶೇಷ ಉದ್ದೇಶದ ನಿಗಮದಂತೆ ರಚನೆ ಮಾಡಲಾಗಿದೆ. ಡಿಎಫ್ ಸಿಸಿಐಎಲ್ ಪಶ್ಚಿಮ ನಿರ್ದಿಷ್ಠ ಸರಕು ಕಾರಿಡಾರ್ (1504 ಕಿ.ಮೀ ಉದ್ದದ ಮಾರ್ಗ)ವನ್ನು ನಿರ್ಮಿಸುತ್ತಿದ್ದು, ಇದು ಉತ್ತರ ಪ್ರದೇಶದ ದಾದ್ರಿಯಿಂದ ಮುಂಬೈನ ಜವಹರಲಾಲ್ ನೆಹರೂ ಬಂದರು ಸಂಪರ್ಕಿಸಲಿದೆ ಮತ್ತು ಆ ಮಾರ್ಗ ಉತ್ತರಪ್ರದೇಶ, ಹರಿಯಾಣ, ರಾಜಸ್ತಾನ್, ಗುಜರಾತ್ ಮತ್ತು ಮಹಾರಾಷ್ಟ್ರದ ಮೂಲಕ ಸಾಗುತ್ತದೆ.

*** 



(Release ID: 1684284) Visitor Counter : 135