ಪ್ರಧಾನ ಮಂತ್ರಿಯವರ ಕಛೇರಿ

ದೆಹಲಿಯ ಮೆಟ್ರೋ ನೇರಳೆ ಮಾರ್ಗದಲ್ಲಿ ದೇಶದ ಪ್ರಪ್ರಥಮ ಚಾಲಕ ರಹಿತ ರೈಲು ಕಾರ್ಯಾಚರಣೆ ಉದ್ಘಾಟಿಸಿದ ಪ್ರಧಾನಮಂತ್ರಿ

ಏರ್ ಪೋರ್ಟ್ ಎಕ್ಸ್ ಪ್ರೆಸ್ ಮಾರ್ಗದಲ್ಲಿ ರಾಷ್ಟ್ರೀಯ ಸಮಾನ ಸಂಚಾರ ಕಾರ್ಡ್ ಸೇವೆಯ ಸಂಪೂರ್ಣ ಕಾರ್ಯಾಚರಣೆಗೂ ಚಾಲನೆ ನೀಡಿದ ಪ್ರಧಾನಮಂತ್ರಿ

ನಗರೀಕರಣವನ್ನು ಒಂದು ಸವಾಲಾಗಿ ನೋಡಬಾರದು ಬದಲಾಗಿ ದೇಶದಲ್ಲಿ ಉತ್ತಮ ಮೂಲಸೌಕರ್ಯ ನಿರ್ಮಿಸಲು ಅದನ್ನು ಅವಕಾಶವಾಗಿ ಬಳಸಿಕೊಳ್ಳಬೇಕು ಮತ್ತು ಸುಗಮ ಜೀವನ ಹೆಚ್ಚಿಸಬೇಕು :ಪ್ರಧಾನಮಂತ್ರಿ

ವಿವಿಧ ರೀತಿಯ ಮೆಟ್ರೋ – ಆರ್.ಆರ್.ಟಿ.ಎಸ್, ಮೆಟ್ರೋಲೈಟ್, ಮೆಟ್ರೋ ನಿಯೋ ಮತ್ತು ವಾಟರ್ ಮೆಟ್ರೋ ಕಾಮಗಾರಿ ಕೈಗೊಳ್ಳಲಾಗಿದೆ: ಪ್ರಧಾನಮಂತ್ರಿ

ವಿವಿಧ ಕ್ಷೇತ್ರಗಳಲ್ಲಿನ ಸೇವೆಗಳ ಏಕೀಕರಣದ ಉದಾಹರಣೆಗಳನ್ನು ಪಟ್ಟಿ ಮಾಡಿದ ಪ್ರಧಾನಮಂತ್ರಿ

Posted On: 28 DEC 2020 12:26PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿ ಮೆಟ್ರೋ ನೇರಳೆ ಮಾರ್ಗದಲ್ಲಿಂದು ಭಾರತದ ಪ್ರಪ್ರಥಮ ಚಾಲಕ ರಹಿತ ರೈಲು ಸೇವೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ಕಳೆದ ವರ್ಷ ಅಹಮದಾಬಾದ್ ನಲ್ಲಿ ಆರಂಭಿಸಲಾಗಿದ್ದ ರಾಷ್ಟ್ರೀಯ ಸಮಾನ ಸಾರಿಗೆ ಕಾರ್ಡ್ ಅನ್ನು ದೆಹಲಿ ಮೆಟ್ರೋದ ವಿಮಾನ ನಿಲ್ದಾಣ ಎಕ್ಸ್ ಪ್ರೆಸ್ ಮಾರ್ಗಕ್ಕೂ ವಿಸ್ತರಿಸಿದರು. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ದೆಹಲಿ ಮುಖ್ಯಮಂತ್ರಿ ಶ್ರೀ ಅರವಿಂದ್ ಕೇಜ್ರೀವಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಇಂದಿನ ಈ ಕಾರ್ಯಕ್ರಮ ನಗರ ಅಭಿವೃದ್ಧಿಯನ್ನು ಭವಿಷ್ಯದ ಸನ್ನದ್ಧತೆಯನ್ನಾಗಿ ಮಾಡುವ ಪ್ರಯತ್ನ ಎಂದು ಬಣ್ಣಿಸಿದರು. ದೇಶವನ್ನು ಭವಿಷ್ಯದ ಅಗತ್ಯಗಳಿಗೆ ಅಣಿಗೊಳಿಸುವುದು ಆಡಳಿತ ಮಹತ್ವದ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಕೆಲವು ದಶಕಗಳ ಹಿಂದೆ ನಗರೀಕರಣದ ಬೇಡಿಕೆಯ ಭಾವನೆಗಳು ಬಂದಾಗ, ಭವಿಷ್ಯದ ಅಗತ್ಯಗಳ ಬಗ್ಗೆ ಹೆಚ್ಚು ಗಮನ ಹರಿಸಲಾಗಿಲ್ಲ, ಅರೆಮನಸ್ಸಿನಿಂದ ಕೆಲಸ ಮಾಡಲಾಯಿತು ಮತ್ತು ಗೊಂದಲ ಮುಂದುವರೆಯಿತು ಎಂದು ಅವರು ವಿಷಾದಿಸಿದರು. ಇದಕ್ಕಿಂತ ಭಿನ್ನವಾಗಿ, ಆಧುನಿಕ ಚಿಂತನೆಗಳು ನಗರೀಕರಣವನ್ನು ಒಂದು ಸವಾಲಾಗಿ ನೋಡಬಾರದು ಬದಲಾಗಿ ಅದನ್ನು ದೇಶದಲ್ಲಿ ಉತ್ತಮ ಮೂಲಸೌಕರ್ಯಗಳನ್ನು ನಿರ್ಮಿಸುವ ಅವಕಾಶವಾಗಿ ಬಳಸಿಕೊಳ್ಳಬೇಕು ಎಂದು ಹೇಳುತ್ತವೆ, ಈ ಮೂಲಕ ನಾವು ಸುಗಮ ಜೀವನವನ್ನು ಹೆಚ್ಚಿಸಬಹುದು ಎಂದರು. ಈ ವಿಭಿನ್ನ ಚಿಂತನೆ ನಗರೀಕರಣದ ಪ್ರತಿಯೊಂದು ಆಯಾಮದಲ್ಲೂ ಕಾಣಸಿಗುತ್ತದೆ. 2014ರಲ್ಲಿ ಕೇವಲ 5 ನಗರಗಳಲ್ಲಿ ಮಾತ್ರ ಮೆಟ್ರೋ ರೈಲು ಇತ್ತು, ಈಗ 18 ನಗರಗಳಲ್ಲಿ ಮೆಟ್ರೋ ರೈಲುಗಳಿವೆ. 2025ರ ಹೊತ್ತಿಗೆ ನಾವು ಇದನ್ನು ನಗರಗಳಿಗೆ ವಿಸ್ತರಿಸಲಿದ್ದೇವೆ ಎಂದರು. 2014ರಲ್ಲಿ ಕೇವಲ 248 ಕಿ.ಮೀ. ಮೆಟ್ರೋ ರೈಲು  ಮಾರ್ಗಗಳು ದೇಶದಲ್ಲಿ ಕಾರ್ಯಾಚರಣೆಯಲ್ಲಿದ್ದವು. ಆದರೆ ಇಂದು ಮೂರು ಪಟ್ಟು ಹೆಚ್ಚಾಗಿದ್ದು 700 ಕಿ.ಮೀ. ಆಗಿದೆ. 2025ರ ಹೊತ್ತಿಗೆ ನಾನು ಇದನ್ನು 1700 ಕಿ.ಮೀ.ಗೆ ವಿಸ್ತರಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು. ಇವು ಕೇವಲ ಅಂಕಿ ಸಂಖ್ಯೆಗಳಲ್ಲ ಇವೆಲ್ಲವೂ ಕೋಟ್ಯಂತರ ಭಾರತೀಯರ ಸುಗಮ ಜೀವನಕ್ಕೆ ಸಾಕ್ಷಿ ಎಂದರು.  ಮೂಲಸೌಕರ್ಯಗಳು ಅಂದರೆ ಕೇವಲ ಕಲ್ಲು ಮತ್ತು ಇಟ್ಟಿಗೆ, ಸಿಮೆಂಟ್ ಜಲ್ಲಿ, ಮಿಶ್ರಣ ಮತ್ತು ಕಬ್ಬಿಣದಿಂದ ಮಾಡಿದ ನಿರ್ಮಾಣವಲ್ಲ, ಅವು ದೇಶದ ಜನರ, ಮಧ್ಯಮವರ್ಗದವರ ಆಶೋತ್ತರಗಳ ಈಡೇರಿಕೆಯ ಸಾಕ್ಷಿ ಎಂದರು. 
ಸರ್ಕಾರ, ಮೆಟ್ರೋ ನೀತಿಯನ್ನು ಪ್ರಥಮ ಬಾರಿಗೆ ರೂಪಿಸಿದ್ದು, ಅದನ್ನು ಸರ್ವಾಂಗೀಣ ವ್ಯೂಹದೊಂದಿಗೆ ಜಾರಿ ಮಾಡಿದೆ ಪ್ರಧಾನಮಂತ್ರಿಯವರು ಹೇಳಿದರು. ಸ್ಥಳೀಯ ಬೇಡಿಕೆ, ಸ್ಥಳೀಯ ಗುಣಮಟ್ಟದ ಉತ್ತೇಜನ, ಮೇಕ್ ಇನ್ ಇಂಡಿಯಾ ವಿಸ್ತರಣೆ ಅನುಗುಣವಾಗಿ,ಕಾರ್ಯನಿರ್ವಹಿಸಲು ಮತ್ತು ಆಧುನಿಕ ತಂತ್ರಜ್ಞಾನ ಬಳಕೆಗೆ ಒತ್ತು ನೀಡಿದೆ ಎಂದರು. ಮೆಟ್ರೋ ವಿಸ್ತರಣೆ, ಆಧುನಿಕ ಸಾರಿಗೆ ವಿಧಾನಗಳನ್ನು ನಗರದ ಜನರ ಅಗತ್ಯಕ್ಕೆ ಅನುಗುಣವಾಗಿ ಬಳಸಬೇಕು ಮತ್ತು ವೃತ್ತಿಪರ ಜೀವನಶೈಲಿ  ಅಲ್ಲಿರಬೇಕು ಎಂಬುದನ್ನು ಸ್ಪಷ್ಟಪಡಿಸಿದೆ ಎಂದರು. ಈ ಕಾರಣಕ್ಕಾಗಿಯೇ ವಿವಿಧ ನಗರಗಳಲ್ಲಿ ವಿವಿಧ ಮಾದರಿಯ ಮೆಟ್ರೋ ರೈಲುಗಳ ಕಾಮಗಾರಿ ಮಾಡಲಾಗುತ್ತಿದೆ ಎಂದರು. ಪ್ರಧಾನಮಂತ್ರಿಯವರು ಮೆಟ್ರೋ ರೈಲಿನಲ್ಲಿ ಯಾವ ರೀತಿಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂಬ ವಿವಿಧ ವಿಧಾನಗಳ ಪಟ್ಟಿ ಮಾಡಿದರು. ದೆಹಲಿ ಮತ್ತು ಮೀರಟ್ ನಡುವೆ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌.ಆರ್‌.ಟಿ.ಎಸ್) ಸಂಚರಿಸಲಿದ್ದು, ದೆಹಲಿ ಮತ್ತು ಮೀರಟ್ ನ ಅಂತರವನ್ನು ಒಂದು ಗಂಟೆಗೂ ಹೆಚ್ಚು ಸಮಯ  ಉಳಿಸಲಿದೆ ಎಂದು ತಿಳಿಸಿದರು. ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ನಗರಗಳಲ್ಲಿ, ಮೆಟ್ರೊ ಲೈಟ್ ಆವೃತ್ತಿಯಲ್ಲಿ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದರು. ಮೆಟ್ರೊ ಲೈಟ್ ಆವೃತ್ತಿಯನ್ನು ಸಾಮಾನ್ಯ ಮೆಟ್ರೊದ ಶೇ.40ರಷ್ಟು ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು. ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ನಗರಗಳಲ್ಲಿ ಮೆಟ್ರೋ ನಿಯೋ ಕಾಮಗಾರಿ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಇದನ್ನು ಸಾಮಾನ್ಯ ಮೆಟ್ರೊದ ಶೇ.25 ರಷ್ಟು ವೆಚ್ಚದಲ್ಲಿ ನಿರ್ಮಿಸಲಾಗುವುದು. ಅಂತೆಯೇ, ವಾಟರ್ ಮೆಟ್ರೋ ನಮ್ಮ ಚಿಂತನೆಗಿಂತ ಭಿನ್ನವಾಗಿದೆ. ದೊಡ್ಡ ಜಲಮೂಲಗಳಿರುವ ನಗರಗಳಿಗೆ, ವಾಟರ್ ಮೆಟ್ರೋ ವ್ಯವಸ್ಥೆ ಕುರಿತು ಚಿಂತಿಸಲಾಗುತ್ತಿದೆ. ಇದು ದ್ವೀಪಗಳ ಸಮೀಪವಿರುವ ಜನರಿಗೆ ಕೊನೆಯ ಮೈಲಿ ಸಂಪರ್ಕವನ್ನು ಒದಗಿಸುತ್ತದೆ ಎಂದರು.
ಇಂದು ಮೆಟ್ರೋ ಕೇವಲ ಸಾರ್ವಜನಿಕ ಸಾರಿಗೆ ಮಾಧ್ಯಮವಾಗಿ ಮಾತ್ರವೇ ಉಳಿದಿಲ್ಲ, ಆದರೆ ಅದು ಮಾಲಿನ್ಯ ತಗ್ಗಿಸುವಲ್ಲಿ ದೊಡ್ಡ ಕಾರ್ಯ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಮೆಟ್ರೋ ಜಾಲದ ಕಾರಣದಿಂದ ಸಾವಿರಾರು ವಾಹನಗಳು ರಸ್ತೆಗೆ ಇಳಿಯುವುದು ತಪ್ಪಿದೆ, ಅವು ರಸ್ತೆ ಸಂಚಾರ ಸ್ಥಗಿತಕ್ಕೆ ಮತ್ತು ಮಾಲಿನ್ಯಕ್ಕೆ ಕಾರಣವಾಗುತ್ತಿದ್ದವು ಎಂದರು 
ಮೆಟ್ರೋ ಸೇವೆಗಳ ವಿಸ್ತರಣೆಗೆ ಮೇಕ್ ಇನ್ ಇಂಡಿಯಾ ಮಹತ್ವದ್ದು ಎಂದು ಪ್ರಧಾನಮಂತ್ರಿ ಹೇಳಿದರು. ಮೇಕ್ ಇನ್ ಇಂಡಿಯಾ ವೆಚ್ಚ ತಗ್ಗಿಸುತ್ತದೆ, ವಿದೇಶೀ ವಿನಿಮಯ ಉಳಿಸುತ್ತದೆ, ದೇಶದ ಜನರಿಗೆ ಹೆಚ್ಚು ಉದ್ಯೋಗಾವಕಾಶ ಕಲ್ಪಿಸುತ್ತದೆ ಎಂದರು. ರೈಲು ಗುಣಮಟ್ಟೀಕರಣ ಪ್ರತಿ ಕೋಚ್‌ ನ ವೆಚ್ಚವನ್ನು ಈಗ 12 ಕೋಟಿಯಿಂದ 8 ಕೋಟಿಗೆ ಇಳಿಸಿದೆ ಎಂದು ಅವರು ಒತ್ತಿ ಹೇಳಿದರು. ಇಂದು, ನಾಲ್ಕು ದೊಡ್ಡ ಕಂಪನಿಗಳು ದೇಶದಲ್ಲಿ ಮೆಟ್ರೋ ಬೋಗಿಗಳನ್ನು ತಯಾರಿಸುತ್ತಿವೆ ಮತ್ತು ಡಜನ್ನು ಗಟ್ಟಲೆ ಕಂಪನಿಗಳು ಮೆಟ್ರೋ ಘಟಕಗಳ ತಯಾರಿಕೆಯಲ್ಲಿ ತೊಡಗಿವೆ. ಇದು ಮೇಕ್ ಇನ್ ಇಂಡಿಯಾ ಮತ್ತು ಸ್ವಾವಲಂಬಿ ಭಾರತ ಅಭಿಯಾನಕ್ಕೆ ಸಹಾಯ ಮಾಡುತ್ತಿವೆ. ಚಾಲಕ ರಹಿತ ಮೆಟ್ರೋ ರೈಲು ಸಾಧನೆಯೊಂದಿಗೆ ನಮ್ಮ ದೇಶ ಇಂಥ ಸೌಲಭ್ಯ ಇರುವ ಕೆಲವೇ ದೇಶಗಳ ಸಾಲಿಗೆ ಸೇರಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಬ್ರೇಕ್ ಹಾಕಿದಾಗ ಶೇ. 50ರಷ್ಟು ವಿದ್ಯುಚ್ಛಕ್ತಿ ಗ್ರಿಡ್‌ ಗೆ ವಾಪಸಾಗುವ ಬ್ರೇಕಿಂಗ್ ವ್ಯವಸ್ಥೆಯನ್ನು ಬಳಸಲಾಗುತ್ತಿದೆ ಎಂದು ಅವರು ಹೇಳಿದರು. ಇಂದು ಮೆಟ್ರೊ ರೈಲುಗಳಲ್ಲಿ 130 ಮೆಗಾವ್ಯಾಟ್ ಸೌರಶಕ್ತಿ ಬಳಸಲಾಗುತ್ತಿದ್ದು, ಇದನ್ನು 600 ಮೆಗಾವ್ಯಾಟ್‌ ಗೆ ಹೆಚ್ಚಿಸಲಾಗುವುದು ಎಂದರು. 
ಸಮಾನ ಸಾರಿಗೆ ಕಾರ್ಡ್ ಬಗ್ಗೆ ಮಾತನಾಡಿದ ಅವರು, ಅದೇ ಗುಣಮಟ್ಟ ಮತ್ತು ಸೌಲಭ್ಯವನ್ನು ಆಧುನೀಕರಣಕ್ಕೆ ನೀಡುವುದೂ ಅಷ್ಟೇ ಮುಖ್ಯವಾಗಿದೆ ಎಂದರು. ಸಮಾನ ಸಾರಿಗೆ ಕಾರ್ಡ್ ರಾಷ್ಟ್ರ ಮಟ್ಟದಲ್ಲಿ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಒಂದು ಕಾರ್ಡ್ ಪ್ರಯಾಣಿಕರಿಗೆ ತಾವು ಎಲ್ಲಿ ಬೇಕಾದರೂ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಲು ಅವಕಾಶ ನೀಡುತ್ತದೆ ಎಂದರು. 
ಸಮಾನ ಸಾರಿಗೆ ಕಾರ್ಡ್ ಉದಾಹರಣೆ ನೀಡಿದ ಪ್ರಧಾನಮಂತ್ರಿಯವರು, ಅಂಥ ವ್ಯವಸ್ಥೆಗಳ ಏಕೀಕರಣದ ಮೂಲಕ ದೇಶದ ಶಕ್ತಿ ಇನ್ನೂ ಉತ್ತಮ ಸಹಯೋಗಿ ಮತ್ತು ಸಮರ್ಥ ಮಾರ್ಗದಲ್ಲಿ ಬಳಕೆಯಾಗುತ್ತದೆ ಎಂದರು.  “ಒಂದು ರಾಷ್ಟ್ರ ಒಂದು ಸಾರಿಗೆ ಕಾರ್ಡ್ ನಂತೆ ನಮ್ಮ ಸರ್ಕಾರ ಕಳೆದ ಕೆಲವು ವರ್ಷಗಳಲ್ಲಿ ದೇಶದ ವ್ಯವಸ್ಥೆಯ ಏಕೀಕರಣಕ್ಕೆ ಹಲವು ಕಾರ್ಯ ಮಾಡಿದೆ ಎಂದು ಶ್ರೀ ಮೋದಿ ಹೇಳಿದರು.  
ಒಂದು ರಾಷ್ಟ್ರ, ಒಂದು ಫಾಸ್ಟ್ ಟ್ಯಾಗ್ ದೇಶಾದ್ಯಂತ ಹೆದ್ದಾರಿಗಳಲ್ಲಿ ಪ್ರಯಾಣವನ್ನು ತಡೆರಹಿತಗೊಳಿಸಿದೆ. ಇದು ಪ್ರಯಾಣಿಸುವವರಿಗೆ ಆಗುತ್ತಿದ್ದ ವಿಳಂಬ ತಪ್ಪಿಸಿದೆ. ಒಂದು ದೇಶ ಒಂದು ತೆರಿಗೆ ಅಂದರೆ ಜಿಎಸ್ಟಿ ತೆರಿಗೆ ವ್ಯವಸ್ಥೆಯಲ್ಲಿದ್ದ ಸಂಕೀರ್ಣತೆಯನ್ನು ಕೊನೆಗಾಣಿಸಿದೆ ಮತ್ತು ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಏರರೂಪತೆ ತಂದಿದೆ. ಒಂದು ರಾಷ್ಟ್ರ ಒಂದು ಪವರ್ ಗ್ರಿಡ್ ಸೂಕ್ತ ಪ್ರಮಾಣದ ಮತ್ತು ನಿರಂತರ ವಿದ್ಯುತ್ ಲಭ್ಯತೆಯನ್ನು ದೇಶದ ಎಲ್ಲ ಭಾಗದಲ್ಲೂ ಖಾತ್ರಿಪಡಿಸುತ್ತಿದೆ, ವಿದ್ಯುತ್ ಸೋರಿಕೆ ತಗ್ಗಿದೆ ಎಂದರು.
ಒಂದು ರಾಷ್ಟ್ರ ಒಂದು ಗ್ಯಾಸ್ ಗ್ರಿಡ್, ತಡೆರಹಿತ ಅನಿಲ ಸಂಪರ್ಕದೊಂದಿಗೆ ಕನಸಾಗಿದ್ದ ಪ್ರದೇಶಗಳಲ್ಲಿ ಅನಿಲ ಆಧಾರಿತ ಮತ್ತು ಅನಿಲ ಉಳಿತಾಯದ ಖಾತ್ರಿಪಡಿಸಿದೆ. ಒಂದು ರಾಷ್ಟ್ರ ಒಂದು ಆರೋಗ್ಯ ವಿಮೆ ಯೋಜನೆ ಅಂದರೆ ಆಯುಷ್ಮಾನ್ ಭಾರತ್ ಮೂಲಕ ಭಾರತದ ಲಕ್ಷಾಂತರ ಜನರು ದೇಶದ ಎಲ್ಲೆಡೆ ಪ್ರಯೋಜನ ಪಡೆಯುತ್ತಿದ್ದಾರೆ. ಒಂದು ರಾಷ್ಟ್ರ ಒಂದು ಪಡಿತರ ಚೀಟಿಯ ಮೂಲಕ ಹೊಸ ಪಡಿತರ ಚೀಟಿಗಳನ್ನು ಮಾಡಿಸುವ ತೊಂದರೆ ತಪ್ಪಿಸಿ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ನಾಗರಿಕರಿಗೆ ಸ್ವಾತಂತ್ರ್ಯ ನೀಡಲಾಗಿದೆ, ಅದೇ ರೀತಿ, ಹೊಸ ಕೃಷಿ ಸುಧಾರಣೆಗಳು ಮತ್ತು ವ್ಯವಸ್ಥೆಗಳಿಂದಾಗಿ ದೇಶವು ಒಂದು ರಾಷ್ಟ್ರ, ಇ-ನಾಮ್ ನಂಥ ಒಂದು ಕೃಷಿ ಮಾರುಕಟ್ಟೆಯ ದಿಕ್ಕಿನತ್ತ ಸಾಗುತ್ತಿದೆ ಎಂದರು.
                                                         
   

****    

 (Release ID: 1684205) Visitor Counter : 13