ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಸಕ್ರಿಯ ಕೋವಿಡ್ ಸೋಂಕು ಪ್ರಕರಣಗಳ ಸುಸ್ಥಿರ ಇಳಿಕೆ ಮುಂದುವರಿಕೆ; 136 ದಿನಗಳ ನಂತರ 4.10 ಲಕ್ಷಕ್ಕಿಂತಲೂ ಕೆಳಗಿಳಿಕೆ


ಕಳೆದ 8 ದಿನಗಳಿಂದ ಹೊಸ ಸೋಂಕು ಪ್ರಕರಣಗಳಿಗಿಂತ ಗುಣಮುಖವಾಗುತ್ತಿರುವ ಪ್ರಕರಣಗಳೇ ಅಧಿಕ

Posted On: 05 DEC 2020 11:13AM by PIB Bengaluru

ಭಾರತದಲ್ಲಿ ಇಂದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4.10ಲಕ್ಷ (4,09,689)ಕ್ಕಿಂತಲೂ ಕೆಳಗೆ ಇಳಿಕೆಯಾಗಿದೆ. 136 ದಿನಗಳ ನಂತರ ದಾಖಲಾದ ಅತಿ ಕಡಿಮೆ ಪ್ರಮಾಣ ಇದಾಗಿದೆ. 2020ರ ಜುಲೈ 22ರಂದು ಒಟ್ಟು 4,11,133 ಸಕ್ರಿಯ ಪ್ರಕರಣಗಳಿದ್ದವು.

ಸಕ್ರಿಯ ಪ್ರಕರಣಗಳಿಗಿಂತ ಗುಣಮುಖವಾಗುತ್ತಿರುವ ಪ್ರಕರಣಗಳೇ ಅಧಿಕವಾಗುತ್ತಿರುವ ಪ್ರವೃತ್ತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಭಾರತದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ ಒಟ್ಟು ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಶೇ.4.26ರಷ್ಟು ಮಾತ್ರ. ಹೊಸದಾಗಿ ಅಧಿಕ ಸಂಖ್ಯೆಯ ಸೋಂಕಿತರು ಗುಣಮುಖವಾಗಿರುವ ಹಿನ್ನೆಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 6,393ರಷ್ಟು ಇಳಿಕೆಯಾಗಿದೆ.

ಕಳೆದ ಎಂಟು ದಿನಗಳಿಂದ ದೇಶದಲ್ಲಿ ಪ್ರತಿದಿನ ಹೊಸದಾಗಿ ದಾಖಲಾಗುತ್ತಿರುವ ಪ್ರಕರಣಗಳಿಗಿಂತ ಹೊಸದಾಗಿ ಗುಣಮುಖವಾಗುತ್ತಿರುವ ಪ್ರಕರಣಗಳೇ ಅತ್ಯಧಿಕವಾಗಿವೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 36,652 ಸೋಂಕು  ಪ್ರಕರಣಗಳು ದೃಢಪಟ್ಟಿವೆ. ಅದೇ ರೀತಿ ಕಳೆದ 24 ಗಂಟೆಗಳಲ್ಲಿ 42,533 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಗುಣಮುಖವಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಇಂದು ಚೇತರಿಕೆ ಪ್ರಮಾಣ ಶೇ.94.28ಕ್ಕೆ ಏರಿಕೆಯಾಗಿದೆ.

ಈವರೆಗೆ ಒಟ್ಟು ಗುಣಮುಖರಾದವರ ಸಂಖ್ಯೆ 9,058,822 ಇದೆ. ಸಕ್ರಿಯ ಪ್ರಕರಣಗಳು ಮತ್ತು ಗುಣಮುಖವಾಗುತ್ತಿರುವವರ ನಡುವಿನ ವ್ಯತ್ಯಾಸ ಸುಮಾರು 86.50ಲಕ್ಷದ ಸನಿಹದಲ್ಲಿದೆ ಮತ್ತು ಸದ್ಯ 86,49,133ರಷ್ಟಿದೆ.

ಹೊಸದಾಗಿ ಗುಣಮುಖವಾಗಿರುವ ಪ್ರಕರಣಗಳಲ್ಲಿ ಶೇ 78.06ರಷ್ಟು ಪ್ರಕರಣ ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.

ಮಹಾರಾಷ್ಟ್ರದಲ್ಲಿ ಒಂದೇ ದಿನ ಅತ್ಯಧಿಕ ಸಂಖ್ಯೆಯ 6,776 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಆನಂತರ ಕೇರಳದಲ್ಲಿ 5,496 ಮತ್ತು ದೆಹಲಿಯಲ್ಲಿ 4,862 ಸೋಂಕಿತರು ಗುಣಮುಖರಾಗಿದ್ದಾರೆ.

WhatsApp Image 2020-12-05 at 10.12.04 AM.jpeg

ಹೊಸದಾಗಿ ಪತ್ತೆಯಾಗಿರುವ ಸೋಂಕು ಪ್ರಕರಣಗಳಲ್ಲಿ ಶೇ.76.90ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.

ಕೇರಳದಲ್ಲಿ ಪ್ರತಿದಿನ ಅತ್ಯಧಿಕ 5,718 ಸೋಂಕು ಪ್ರಕರಣ ದೃಢಪಟ್ಟಿವೆ. ಆನಂತರ ಮಹಾರಾಷ್ಟ್ರದಲ್ಲಿ 5,229 ಹೊಸ ಕೋವಿಡ್ ಪ್ರಕರಣ ವರದಿಯಾಗಿವೆ. ದೆಹಲಿಯಲ್ಲಿ ಹೊಸದಾಗಿ 4,067 ಕೋವಿಡ್ ಪ್ರಕರಣ ದೃಢಪಟ್ಟಿವೆ.

WhatsApp Image 2020-12-05 at 10.10.04 AM.jpeg

ಕಳೆದ 24 ಗಂಟೆಗಳಲ್ಲಿ 512 ಸೋಂಕಿತರು ಮರಣವನ್ನಪ್ಪಿರುವುದಾಗಿ ವರದಿಯಾಗಿದೆ.

ಹೊಸದಾಗಿ ಸಾವನ್ನಪ್ಪಿರುವ ಸೋಂಕಿತರಲ್ಲಿ ಶೇ.78.32ರಷ್ಟು ಪ್ರಕರಣ ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.ಮಹಾರಾಷ್ಟ್ರದಲ್ಲಿ ಅತ್ಯಧಿಕ (127) ಸಾವು ಸಂಭವಿಸಿದ್ದರೆ, ಆನಂತರ ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಕ್ರಮವಾಗಿ 73 ಮತ್ತು 52 ಸೋಂಕಿತರು ಸಾವನ್ನಪ್ಪಿರುವುದಾಗಿ ವರದಿಯಾಗಿವೆ.

WhatsApp Image 2020-12-05 at 10.11.08 AM.jpeg

***



(Release ID: 1678547) Visitor Counter : 174