ಪ್ರಧಾನ ಮಂತ್ರಿಯವರ ಕಛೇರಿ

ಬ್ರಿಟನ್ ಪ್ರಧಾನಿ ಶ್ರೀ ಬೋರಿಸ್ ಜಾನ್ಸನ್ ಅವರೊಂದಿಗೆ ಪ್ರಧಾನಿ ಮಾತುಕತೆ

Posted On: 27 NOV 2020 7:48PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬ್ರಿಟನ್ ಪ್ರಧಾನಿ  ಶ್ರೀ ಬೋರಿಸ್ ಜಾನ್ಸನ್ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.

ಕೋವಿಡ್-19 ಸಾಂಕ್ರಾಮಿಕದಿಂದ ಉದ್ಭವಿಸಿರುವ ಸವಾಲುಗಳ ಬಗ್ಗೆ ಉಭಯ ನಾಯಕರು ಮಾಹಿತಿ ವಿನಿಮಯ ಮಾಡಿಕೊಂಡರು. ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಮತ್ತು ಬ್ರಿಟನ್ ನಡುವಿನ ಭರವಸೆಯ ಸಹಕಾರವನ್ನೂ ಅವರು ಪರಿಶೀಲಿಸಿದರು.

ಕೋವಿಡ್ ಹಾಗೂ ಬ್ರೆಕ್ಸಿಟ್ ನಂತರದ ದಿನಗಳಲ್ಲಿ ಭಾರತ-ಬ್ರಿಟನ್ ಸಹಭಾಗಿತ್ವಕ್ಕೆ ಭಾರೀ ಜಿಗಿತ ನೀಡುವ ಬಗ್ಗೆ ಉಭಯ ನಾಯಕರು ಪುನರುಚ್ಚರಿಸಿದರು. ವ್ಯಾಪಾರ ಮತ್ತು ಹೂಡಿಕೆ, ವೈಜ್ಞಾನಿಕ ಸಂಶೋಧನೆ, ವೃತ್ತಿಪರರು ಮತ್ತು ವಿದ್ಯಾರ್ಥಿಗಳ ಸಂಚಾರ ಹಾಗೂ ರಕ್ಷಣೆ ಮತ್ತು ಭದ್ರತೆಯಂತಹ ಕ್ಷೇತ್ರಗಳಲ್ಲಿ ಸಹಯೋಗವನ್ನು ಹೆಚ್ಚಿಸಲು ಭಾರೀ ಅವಕಾಶಗಳಿರುವ ಬಗ್ಗೆ ಸಮ್ಮತಿ ಸೂಚಿಸಿದರು.

ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಬ್ರಿಟನ್ ಕೈಜೋಡಿಸುವುದಕ್ಕೆ ಅವರು ನಿರ್ದಿಷ್ಟ ಒತ್ತು ನೀಡಿದರು. ಅಂತರರಾಷ್ಟ್ರೀಯ ಸೌರ ಒಕ್ಕೂಟ ಮತ್ತು ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಒಕ್ಕೂಟದಂತಹ ವೇದಿಕೆಗಳ ಅಡಿಯಲ್ಲಿ ಪರಸ್ಪರರ ಸಹಯೋಗವನ್ನು ಶ್ಲಾಘಿಸಿದರು.

ಭಾರತ-ಬ್ರಿಟನ್ ಸಹಭಾಗಿತ್ವಕ್ಕೆ ಮಹತ್ವಾಕಾಂಕ್ಷೆಯ ದೀರ್ಘಕಾಲೀನ ಮಾರ್ಗಸೂಚಿಯನ್ನು ತ್ವರಿತವಾಗಿ ಅಂತಿಮಗೊಳಿಸಲು ಎರಡೂ ಕಡೆಯ ಅಧಿಕಾರಿಗಳು ತಮ್ಮ ಕೆಲಸವನ್ನು ಮುಂದುವರಿಸುವ ಬಗ್ಗೆ ಉಭಯ ನಾಯಕರು ಒಪ್ಪಿಕೊಂಡರು.

***


(Release ID: 1676927) Visitor Counter : 222