ಪ್ರಧಾನ ಮಂತ್ರಿಯವರ ಕಛೇರಿ

ಜಿ 20 ರಾಷ್ಟ್ರಗಳ ನಾಯಕರ 15ನೇ ಶೃಂಗಸಭೆ (ನವೆಂಬರ್ 21, 22 - 2020)

Posted On: 19 NOV 2020 8:33PM by PIB Bengaluru

ಸೌದಿ ಅರೆಬಿಯಾದ ಗೌರವಾನ್ವಿತ ದೊರೆ ಮತ್ತು ಎರಡು ಪವಿತ್ರ ಮಸೀದಿಗಳ ಉಸ್ತುವಾರಿ ಹೊತ್ತಿರುವ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜಿ20 ರಾಷ್ಟ್ರಗಳ ನಾಯಕರ 15ನೇ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಸೌದಿ ಅರೆಬಿಯಾದ ದೊರೆ ಅಧ್ಯಕ್ಷತೆ ವಹಿಸಲಿರುವ ಸಭೆ 2020 ನವೆಂಬರ್ 21 ಮತ್ತು 22ರಂದು ನಡೆಯಲಿದ್ದು, ಸಭೆಯ ಘೋಷವಾಕ್ಯ “21ನೇ ಶತಮಾನದ ಅವಕಾಶಗಳನ್ನು ಎಲ್ಲರೂ ಅರಿತುಕೊಳ್ಳುವುದು’’ಎಂಬುದಾಗಿದೆ. ಸಭೆ ವರ್ಚುವಲ್ ರೂಪದಲ್ಲಿ ನಡೆಯಲಿದೆ.

ಶೃಂಗಸಭೆ 2020ರಲ್ಲಿ ನಡೆಯುತ್ತಿರುವ ಜಿ-20 ನಾಯಕರ ಎರಡನೆ ಸಭೆಯಾಗಿದೆ. ಪ್ರಧಾನಮಂತ್ರಿ ಮತ್ತು ಸೌದಿ ಅರೆಬಿಯಾದ ದೊರೆ ನಡುವಿನ ದೂರವಾಣಿ ಸಮಾಲೋಚನೆ ನಂತರ ಕಳೆದ ಮಾರ್ಚ್ 2020ರಲ್ಲಿ ಜಿ20 ರಾಷ್ಟ್ರಗಳ ಅಸಮಾನ್ಯ ನಾಯಕರ ಶೃಂಗಸಭೆ ನಡೆದಿತ್ತು. ಅಲ್ಲಿ ನಾಯಕರು ಕೋವಿಡ್-19 ಸಾಂಕ್ರಾಮಿಕ ಹರಡುವುದನ್ನು ನಿಯಂತ್ರಿಸಲು ಜಿ20 ರಾಷ್ಟ್ರಗಳ ನಡುವೆ ಪರಸ್ಪರ ಸಹಕಾರ ನೀಡುವುದು ಹಾಗೂ ಜಾಗತಿಕ ಸಮನ್ವಯದ ಪ್ರತಿಕ್ರಿಯೆ ಕಾರ್ಯತಂತ್ರ ರೂಪಿಸಿದ್ದರು.

ಬರಲಿರುವ ಶೃಂಗಸಭೆಯಲ್ಲಿ ಕೋವಿಡ್-19 ನಂತರದಲ್ಲಿ ಸಮಗ್ರ, ಸ್ಥಿತಿ ಸ್ಥಾಪಕತ್ವ ಮತ್ತು ಸುಸ್ಥಿರ ಪುನಶ್ಚೇತನದ ಕುರಿತ ಚರ್ಚೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಜಿ20 ನಾಯಕರ ಶೃಂಗಸಭೆ ವೇಳೆ ನಾಯಕರು ಸಾಂಕ್ರಾಮಿಕ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು ಮತ್ತು ಉದ್ಯೋಗಗಳ ಮರು ಸ್ಥಾಪನೆ ಮಾರ್ಗೋಪಾಯಗಳ ಬಗ್ಗೆ ಚರ್ಚೆ ನಡೆಸುವರು. ಅಲ್ಲದೆ ಸಮಗ್ರ, ಸುಸ್ಥಿರ ಮತ್ತು ಸ್ಥಿತಿ ಸ್ಥಾಪಕತ್ವ ಭವಿಷ್ಯ ನಿರ್ಮಾಣಕ್ಕೆ ದೂರದೃಷ್ಟಿಯ ಯೋಜನೆ ರೂಪಿಸುವ ನಿಟ್ಟಿನಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.

ಭಾರತ, ಸೌದಿ ಅರೆಬಿಯಾದ ಜೊತೆ ಜಿ20 ಟ್ರೊಯಿಕಾವನ್ನು ಪ್ರವೇಶಿಸಲಿದೆ. ಇಟಲಿ, 2020 ಡಿಸೆಂಬರ್ 1 ರಂದು ಜಿ20 ರಾಷ್ಟ್ರಗಳ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದೆ.

***



(Release ID: 1674229) Visitor Counter : 252