ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಅವರಿಂದ ಜೆಎನ್ ಯು ಆವರಣದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ


ರಾಷ್ಟ್ರದ ಹಿತಾಸಕ್ತಿ ಎದುರು ಯಾವುದೇ ಆದರ್ಶ ಮುಂದಿಡಬಾರದು

ಚಿಂತನೆಗಳ ಹಂಚಿಕೆ ಮತ್ತು ಹೊಸ ಚಿಂತನೆಗಳ ಹರಿವಿಗೆ ಯಾವುದೇ ಅಡೆತಡೆಗಳಿರಬಾರದು: ಪ್ರಧಾನಮಂತ್ರಿ ನರೇಂದ್ರ ಮೋದಿ

Posted On: 12 NOV 2020 8:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಜೆಎನ್ ಯು ಆವರಣದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಜೆಎನ್ ಯು ವಿದ್ಯಾರ್ಥಿಗಳು ಮತ್ತು ದೇಶದ ಯುವಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ರಾಷ್ಟ್ರೀಯ ಹಿತಾಸಕ್ತಿ ಎದುರು ಆದರ್ಶಗಳಿಗೆ ಆದ್ಯತೆ ನೀಡುವುದರಿಂದ ಆಗುವ ಹಾನಿಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅವರು, ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಸಂಗತಿ ಅತ್ಯಂತ ಹಾನಿಯನ್ನು ಉಂಟುಮಾಡಿದೆ ಎಂದರು. “ರಾಷ್ಟ್ರೀಯ ಹಿತಾಸಕ್ತಿ ವಿಚಾರದಲ್ಲಿ ನನ್ನ ಆದರ್ಶ ಹೀಗೆ ಹೇಳುತ್ತದೆ, ನಾನು ಆದೇ ನೀತಿಯ ಚೌಕಟ್ಟಿನಲ್ಲಿ ಯೋಚಿಸುತ್ತೇನೆ. ನಾನು ಅದೇ ಮಾನದಂಡದಡಿ ಕಾರ್ಯ ನಿರ್ವಹಿಸುತ್ತೇನೆ ಎನ್ನುವುದು ತಪ್ಪು” ಎಂದು ಶ್ರೀ ಮೋದಿ ಹೇಳಿದರು. ಆದರೂ ಒಬ್ಬರ ಆದರ್ಶಗಳ ಬಗ್ಗೆ ಹೆಮ್ಮೆ ಇರುವುದು ಸ್ವಾಭಾವಿಕ. ಆದರೆ ರಾಷ್ಟ್ರೀಯ ಹಿತಾಸಕ್ತಿ ವಿಚಾರ ಬಂದಾಗ ನಮ್ಮ ಆದರ್ಶ ರಾಷ್ಟ್ರಕ್ಕೆ ಪೂರಕವಾಗಿರಬೇಕೆ ಹೊರತು ಅದರ ವಿರುದ್ಧವಾಗಿರಬಾರದು ಎಂದು ಅವರು ಪ್ರತಿಪಾದಿಸಿದರು.

ನಮ್ಮ ದೇಶದ ಇತಿಹಾಸದಲ್ಲಿ ದೇಶದ ಎದುರು ಯಾವುದೇ ಸಂದರ್ಭದಲ್ಲಿ ಕಷ್ಟಕರ ಪರಿಸ್ಥಿತಿ ಎದುರಾದರೂ, ರಾಷ್ಟ್ರೀಯ ಹಿತಾಸಕ್ತಿಗಾಗಿ ಎಲ್ಲ ಆದರ್ಶಗಳನ್ನು ಹೊಂದಿರುವ ಜನರು ಒಗ್ಗೂಡುತ್ತಾರೆ ಎಂದು ಪ್ರಧಾನಮಂತ್ರಿ ವಿದ್ಯಾರ್ಥಿಗಳಿಗೆ ಹೇಳಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲ ಆದರ್ಶಗಳನ್ನು ಹೊಂದಿದ್ದ ಜನರು ಮಹಾತ್ಮ ಗಾಂಧೀಜಿ ಅವರ ನಾಯಕತ್ವದಲ್ಲಿ ಒಗ್ಗೂಡಿದ್ದರು. ಅವರು ದೇಶಕ್ಕಾಗಿ ಒಟ್ಟಾಗಿ ಹೋರಾಟ ನಡೆಸಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಸಹ ದೇಶ ಅಂತಹುದೇ ಐಕ್ಯತೆಯನ್ನು ಕಂಡಿತ್ತು. ಕಾಂಗ್ರೆಸ್ ನ ಮಾಜಿ ನಾಯಕರು ಮತ್ತು ಕಾರ್ಯಕರ್ತರು ಕೂಡ ತುರ್ತು ಪರಿಸ್ಥಿತಿ ವಿರುದ್ಧದ ಚಳವಳಿಯಲ್ಲಿ ಭಾಗಿಯಾಗಿದ್ದರು. ಆರ್ ಎಸ್ ಎಸ್ ಸ್ವಯಂ ಸೇವಕರು ಮತ್ತು ಜನಸಂಘದ ಜನರೂ ಕೂಡ ಹೋರಾಟದಲ್ಲಿದ್ದರು. ಸಮಾಜವಾದಿಗಳು ಮತ್ತು ಕಮ್ಯುನಿಸ್ಟರು ಕೂಡ ಒಗ್ಗೂಡಿದ್ದರು.

ಇಂತಹ ಐಕ್ಯತೆ ವಿಚಾರದಲ್ಲಿ ಪ್ರತಿಯೊಬ್ಬರೂ ತಮ್ಮ ಆದರ್ಶದ ಜೊತೆಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಆಗ ಒಂದೇ ಒಂದು ಉದ್ದೇಶ ಅದು ರಾಷ್ಟ್ರೀಯ ಹಿತಾಸಕ್ತಿ ಆಗಿರುತ್ತದೆ. ಆದ್ದರಿಂದ ರಾಷ್ಟ್ರೀಯ ಏಕತೆ, ಸಮಗ್ರತೆ ಮತ್ತು ರಾಷ್ಟ್ರದ ಹಿತಾಸಕ್ತಿ ಪ್ರಶ್ನೆ ಯಾವಾಗ ಎದುರಾದರೂ ಯಾವುದೇ ಆದರ್ಶಗಳ ಹೊರೆಯಡಿ ನಿರ್ಧಾರಗಳನ್ನು ಕೈಗೊಂಡರೆ ಅಂತಹ ಸಂದರ್ಭಗಳಲ್ಲಿ ರಾಷ್ಟ್ರಕ್ಕೆ ನಷ್ಟವಾಗುತ್ತದೆ ಎಂದು ಹೇಳಿದರು.

ಚಿಂತನೆಗಳನ್ನು ಹಂಚಿಕೊಳ್ಳುವುದು ಮತ್ತು ಹೊಸ ಚಿಂತನೆಗಳ ಹರಿವಿಗೆ ಯಾವುದೇ ಅಡೆತಡೆ ಇರಬಾರದು ಎಂದು ಪ್ರಧಾನಮಂತ್ರಿ ಸ್ಪಷ್ಟಪಡಿಸಿದರು. ನಮ್ಮ ದೇಶ ಭಿನ್ನ ವೈಚಾರಿಕ ಆದರ್ಶಗಳನ್ನು ಬಿತ್ತಿದ ಮತ್ತು ಅವು ಬೆಳೆಸಿದ ನೆಲವಾಗಿದೆ. ನಮ್ಮ ಯುವಕರು ಈ ಪರಂಪರೆಯನ್ನು ಬಲವರ್ಧನೆಗೊಳಿಸುವ ಅಗತ್ಯವಿದೆ. ಈ ಪರಂಪರೆಯಿಂದಾಗಿ ಭಾರತ ಜಗತ್ತಿನಲ್ಲಿಯೇ ಅತ್ಯಂತ ಕ್ರಿಯಾಶೀಲ ಪ್ರಜಾಪ್ರಭುತ್ವವನ್ನು ಹೊಂದುವಂತಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಪ್ರಧಾನಮಂತ್ರಿ ಅವರು, ವಿದ್ಯಾರ್ಥಿಗಳ ಎದುರು ತಮ್ಮ ಸರ್ಕಾರದ ಸುಧಾರಣಾ ಕಾರ್ಯಸೂಚಿ ನೀತಿಯನ್ನು ಮುಂದಿಟ್ಟರು. ಅವರು 130 ಕೋಟಿಗೂ ಅಧಿಕ ಭಾರತೀಯರ ಸಾಮೂಹಿಕ ಆತ್ಮಪ್ರಜ್ಞೆಯಿಂದಾಗಿ ಆತ್ಮನಿರ್ಭರ ಭಾರತ ಚಿಂತನೆ ಹುಟ್ಟಿಕೊಂಡಿದೆ ಮತ್ತು ಅದು ನಮ್ಮೆಲ್ಲರ ಆಶೋತ್ತರಗಳ ಭಾಗವಾಗಿದೆ ಎಂದು ಅವರು ಹೇಳಿದರು. ಭಾರತದಲ್ಲಿ ಸುಧಾರಣೆಗಳನ್ನು ಮುಂದುವರಿಸುತ್ತಿರುವ ಕುರಿತು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಒಳ್ಳೆಯ ಸುಧಾರಣೆಗಳನ್ನು ಕೆಟ್ಟ ರಾಜಕಾರಣ ಎಂದು ಬಿಂಬಿಸುವ ಸ್ಥಿತಿಯಿಂದ ಒಳ್ಳೆಯ ಸುಧಾರಣೆಗಳಿಂದ ಒಳ್ಳೆಯ ರಾಜಕಾರಣಕ್ಕೆ ಬದಲಾಗಿದೆ. ಇಂದು ಪ್ರತಿಯೊಂದು ಸುಧಾರಣೆಗಳ ಹಿಂದೆ ಎಲ್ಲ ರೀತಿಯಲ್ಲೂ ಭಾರತವನ್ನು ಉತ್ತಮಗೊಳಿಸುವ ಸಂಕಲ್ಪವಿದೆ ಎಂದು ಅವರು ಹೇಳಿದರು. ಸುಧಾರಣೆಗಳ ಹಿಂದೆ ಒಳ್ಳೆಯ ಉದ್ದೇಶ ಮತ್ತು ದೃಢತೆ ಇರುವುದರಿಂದ ನಾವು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಸುಧಾರಣೆಗಳನ್ನು ಕೈಗೊಳ್ಳುವ ಮುನ್ನ ಒಂದು ಸುರಕ್ಷತಾ ಜಾಲವನ್ನು ಸೃಷ್ಟಿಸಲಾಗಿದೆ. ಆ ಸುರಕ್ಷತೆಗೆ ವಿಶ್ವಾಸವೇ ಆಧಾರವಾಗಿದೆ ಎಂದು ಹೇಳಿದರು.

ದೀರ್ಘಕಾಲ ಬಡವರನ್ನು ಕೇವಲ ಘೋಷಣೆಗಳಿಗೆ ಸೀಮಿತಗೊಳಿಸಲಾಗಿತ್ತು ಮತ್ತು ದೇಶದ ಬಡವರನ್ನು ವ್ಯವಸ್ಥೆಯ ಜೊತೆ ಸಂಪರ್ಕಿಸಲು ಯಾವುದೇ ಪ್ರಯತ್ನಗಳನ್ನು ಮಾಡಿರಲಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಬಡವರು ಅತ್ಯಂತ ನಿರ್ಲಕ್ಷ್ಯಕ್ಕೊಳಗಾಗಿದ್ದರು, ಅವರ ಜೊತೆ ಯಾವುದೇ ಸಂಪರ್ಕವಿರಲಿಲ್ಲ ಮತ್ತು ಮೊದಲು ಹಣಕಾಸಿನಿಂದ ಬಹುತೇಕ ಹೊರಗಿಡಲಾಗಿತ್ತು ಎಂದರು. ಇದೀಗ ಬಡವರು ತಮ್ಮದೇ ಆದ ಕಚ್ಚಾ ಮನೆ, ಶೌಚಾಲಯ, ವಿದ್ಯುತ್ ಸಂಪರ್ಕ, ಅಡುಗೆ ಅನಿಲ, ಶುದ್ಧ ಕುಡಿಯುವ ನೀರು, ಡಿಜಿಟಲ್ ಬ್ಯಾಂಕಿಂಗ್, ಕೈಗೆಟಕುವ ದರದಲ್ಲಿ ಮೊಬೈಲ್ ಸಂಪರ್ಕ ಮತ್ತು ವೇಗದ ಅಂತರ್ಜಾಲ ಸಂಪರ್ಕಗಳನ್ನು ಹೊಂದುತ್ತಿದ್ದಾರೆ. ಬಡವರ ಸುತ್ತ ಹೆಣೆದಿರುವ ಸುರಕ್ಷತಾ ಜಾಲ ಇದಾಗಿದ್ದು, ಅವರ ಭವಿಷ್ಯದ ಆಶೋತ್ತರಗಳನ್ನು ಈಡೇರಿಸಲು ಇವು ಅತ್ಯಗತ್ಯವಾಗಿವೆ. ಅಂತೆಯೇ ಉತ್ತಮ ನೀರಾವರಿ ಮೂಲಸೌಕರ್ಯ, ಮಂಡಿಗಳ ಆಧುನೀಕರಣ, ಇ-ನ್ಯಾಮ್, ಮಣ್ಣಿನ ಆರೋಗ್ಯ ಕಾರ್ಡ್,ಎಂ ಎಸ್ ಪಿ ಅಡಿ ಯೂರಿಯಾ ಲಭ್ಯತೆ ಅಂಶಗಳ ಮೂಲಕ ರೈತರ ಸುತ್ತ ಸುರಕ್ಷಿತ ಜಾಲವನ್ನು ಸೃಷ್ಟಿಸಲಾಗಿದೆ. ಸರ್ಕಾರ ಮೊದಲು ಅವರ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಇದೀಗ ಅವರ ಆಶೋತ್ತರಗಳಿಗಾಗಿ ಕಾರ್ಯನಿರ್ವಹಿಸುತ್ತಿದೆ.

ಸ್ವಾಮಿ ವಿವೇಕಾನಂದರು ಪ್ರತಿಯಬ್ಬ ವ್ಯಕ್ತಿಯಲ್ಲೂ ಅದನ್ನು ಕಾಣಲು ಬಯಸಿದ್ದಂತೆ ಅವರು,  ಜೆಎನ್ ಯುನಲ್ಲಿ ಪ್ರತಿಯೊಬ್ಬರಿಗೂ ಪ್ರೇರಣೆ ಪಡೆಯಲಿ ಮತ್ತು ಧೈರ್ಯ ತುಂಬಲಿ, ಎಂದರು.  ಸ್ವಾಮೀಜಿ ಅವರ ಮೂಲ ತತ್ವ, ಅನುಕಂಪ ಅಥವಾ ಸಹಾನೂಭೂತಿಯಾಗಿತ್ತು, ಈ ಪ್ರತಿಮೆ ಅದನ್ನು ಬೋಧಿಸಲಿ ಎಂದರು ಹೇಳಿದರು. ಈ ಪ್ರತಿಮೆ ರಾಷ್ಟ್ರದ ಬಗೆಗಿನ ದೃಢ ಬದ್ಧತೆಯನ್ನು ಕಲಿಸಲಿ, ರಾಷ್ಟ್ರದ ಬಗೆಗೆ ನಿಕಟ ಪ್ರೇಮವನ್ನು ಕಲಿಸಲಿ. ಅದು ಸ್ವಾಮೀಜಿಯ ಜೀವನದ ಪ್ರಮುಖ ಸಂದೇಶವಾಗಿತ್ತು ಎಂದರು. ಈ ಪ್ರತಿಮೆ ರಾಷ್ಟ್ರಕ್ಕೆ ಒಗ್ಗೂಡುವ ಕನಸಿಗೆ ಪ್ರೇರಣೆ ನೀಡಲಿ ಮತ್ತು ಯುವ ಶಕ್ತಿ ಆಧಾರಿತ ಅಭಿವೃದ್ಧಿ ದೃಷ್ಟಿಕೋನದಲ್ಲಿ ಮುಂದುವರಿಯಲು ದಾರಿದೀಪವಾಗಲಿದೆ. ಅದು ಸ್ವಾಮೀಜಿ ಅವರ ಅಪೇಕ್ಷೆಯಾಗಿತ್ತು ಎಂದರು. ಸದೃಢ ಮತ್ತು ಸಮೃದ್ಧ ಭಾರತ ನಿರ್ಮಾಣದ ಸ್ವಾಮೀಜಿ ಅವರ ಕನಸು ನನಸಾಗಿಸುವ ನಿಟ್ಟಿನಲ್ಲಿ ಈ ಪ್ರತಿಮೆ ನಮಗೆ ಪ್ರೇರಣೆ ನೀಡುವುದನ್ನು ಮುಂದುವರಿಸಲಿ ಎಂದು ಪ್ರಧಾನಮಂತ್ರಿ ಅವರು ಆಶಿಸಿದರು.

***


(Release ID: 1672450) Visitor Counter : 278