ಹಣಕಾಸು ಆಯೋಗ
15 ನೇ ಹಣಕಾಸು ಆಯೋಗದ ಚರ್ಚೆಗಳು ಮುಕ್ತಾಯ: ಅಂತಿಮಗೊಂಡ ವರದಿ
Posted On:
30 OCT 2020 2:20PM by PIB Bengaluru
ಶ್ರೀ ಎನ್ ಕೆ ಸಿಂಗ್ ನೇತೃತ್ವದ ಹದಿನೈದನೇ ಹಣಕಾಸು ಆಯೋಗವು ಇಂದು 2021-2022 ರಿಂದ 2025-2026ರ ವರದಿಯ ಕುರಿತ ತಮ್ಮ ಚರ್ಚೆಯನ್ನು ಮುಕ್ತಾಯಗೊಳಿಸಿ ವರದಿಯನ್ನು ಅಂತಿಮಗೊಳಿಸಿದೆ. ವರದಿಗೆ ಹದಿನೈದನೇ ಹಣಕಾಸು ಆಯೋಗದ ಅಧ್ಯಕ್ಷರಾದ ಶ್ರೀ ಎನ್.ಕೆ.ಸಿಂಗ್ ಮತ್ತು ಆಯೋಗದ ಸದಸ್ಯರಾದ ಶ್ರೀ. ಅಜಯ್ ನಾರಾಯಣ್ ಝಾ, ಪ್ರೊ.ಅನೂಪ್ ಸಿಂಗ್, ಡಾ.ಅಶೋಕ್ ಲಹಿರಿ ಮತ್ತು ಡಾ.ರಮೇಶ್ ಚಂದ್ ಅವರು ಸಹಿ ಮಾಡಿದ್ದಾರೆ.

ಆಯೋಗವು ತನ್ನ ವರದಿಯನ್ನು 2020 ರ ನವೆಂಬರ್ 9 ರಂದು ರಾಷ್ಟ್ರಪತಿಯವರಿಗೆ ಸಲ್ಲಿಸುವುದು ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ.
ಆಯೋಗವು ವರದಿಯ ಪ್ರತಿಯನ್ನು ಮುಂದಿನ ತಿಂಗಳ ಕೊನೆಯಲ್ಲಿ ಪ್ರಧಾನ ಮಂತ್ರಿಯವರಿಗೆ ಸಲ್ಲಿಸಲಿದೆ.

ಈ ವರದಿಯನ್ನು ಕೇಂದ್ರ ಹಣಕಾಸು ಸಚಿವರು ಸರ್ಕಾರದ ಕ್ರಮ ಕೈಗೊಂಡ ವರದಿಯೊಂದಿಗೆ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. 2021-22 ರಿಂದ 2025-26ರ 5 ಹಣಕಾಸು ವರ್ಷಗಳಿಗೆ ಸಂಬಂಧಿಸಿದ ಶಿಫಾರಸುಗಳನ್ನು ವರದಿಯು ಒಳಗೊಂಡಿದೆ. 2019 ರ ಡಿಸೆಂಬರ್‌ನಲ್ಲಿ ರಾಷ್ಟ್ರಪತಿಯವರಿಗೆ ಸಲ್ಲಿಸಲಾದ 2020-21ನೇ ಸಾಲಿನ ಹದಿನೈದನೇ ಹಣಕಾಸು ಆಯೋಗದ ವರದಿಯನ್ನು ಸರ್ಕಾರವು ಸಂಸತ್ತಿನಲ್ಲಿ ಕ್ರಮ ಕೈಗೊಂಡ ವರದಿಯೊಂದಿಗೆ ಮಂಡಿಸಿತ್ತು.
ಸಂವಿಧಾನದ 280 ನೇ ವಿಧಿಯ ಕಲಂ (1) ರ ಅನುಸಾರ ಹದಿನೈದನೇ ಹಣಕಾಸು ಆಯೋಗವನ್ನು ಗೌರವಾನ್ವಿತ ರಾಷ್ಟ್ರಪತಿಯವರು ರಚಿಸಿದ್ದಾರೆ, ಹಣಕಾಸು ಆಯೋಗ (ವಿವಿಧ ನಿಬಂಧನೆಗಳು) ಕಾಯ್ದೆ 1951 (1951 ರ 33) ರ ನಿಬಂಧನೆಗಳೊಂದಿಗೆ ಶ್ರೀ ಎನ್.ಕೆ. ಸಿಂಗ್ ಅಧ್ಯಕ್ಷರಾಗಿ, ಶ್ರೀ ಶಕ್ತಿಕಾಂತ ದಾಸ್, ಡಾ.ಅನೂಪ್ ಸಿಂಗ್, ಡಾ.ಅಶೋಕ್ ಲಹಿರಿ ಮತ್ತು ಡಾ.ರಮೇಶ್ ಚಂದ್ ಸದಸ್ಯರಾಗಿ ಮತ್ತು ಕಾರ್ಯದರ್ಶಿಯಾಗಿ ಶ್ರೀ ಅರವಿಂದ್ ಮೆಹ್ತಾ ಅವರನ್ನು ನೇಮಿಸಲಾಯಿತು. ಶ್ರೀ ಶಕ್ತಿಕಾಂತ ದಾಸ್ ಅವರಿಂದ ತೆರವಾದ ಸದಸ್ಯ ಸ್ಥಾನಕ್ಕೆ ಶ್ರೀ. ಅಜಯ್ ನಾರಾಯಣ್ ಝಾ ಅವರನ್ನು ನೇಮಿಸಲಾಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ವಿವಿಧ ಹಂತಗಳ ಸ್ಥಳೀಯ ಆಡಳಿತಗಳು, ಹಿಂದಿನ ಹಣಕಾಸು ಆಯೋಗಗಳ ಅಧ್ಯಕ್ಷರು ಮತ್ತು ಸದಸ್ಯರು, ಆಯೋಗದ ಸಲಹಾ ಮಂಡಳಿ ಮತ್ತು ಇತರ ಕ್ಷೇತ್ರಗಳ ತಜ್ಞರು ಮತ್ತು ಶ್ರೇಷ್ಠ ಶಿಕ್ಷಣ ಸಂಸ್ಥೆಗಳೊಂದಿಗೆ ನಡೆಸಿದ ಬಹು ಆಯಾಮದ ಸಮಾಲೋಚನೆಗಳ ನಂತರ ಆಯೋಗವು ತಮ್ಮ ವರದಿಯನ್ನು ಅಂತಿಮಗೊಳಿಸಿದೆ.
***
(Release ID: 1668823)
Visitor Counter : 1794
Read this release in:
Marathi
,
Tamil
,
Hindi
,
Punjabi
,
Manipuri
,
English
,
Urdu
,
Bengali
,
Assamese
,
Telugu
,
Malayalam