ನಾಗರೀಕ ವಿಮಾನಯಾನ ಸಚಿವಾಲಯ

ಉಷ್ಣ ವಿದ್ಯುತ್ ಯೋಜನೆಗಳ ಸಂಶೋಧನೆ ಮತ್ತು ಪರಿವೀಕ್ಷಣೆಗೆ ಡ್ರೋನ್ ಗಳನ್ನು ಬಳಸಲು ಎನ್ ಟಿಪಿಸಿಗೆ ಅನುಮತಿ


ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದಿಂದ ಷರತ್ತುಬದ್ಧ ವಿನಾಯಿತಿ

Posted On: 23 OCT 2020 12:53PM by PIB Bengaluru

ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ(ಎನ್ ಟಿಪಿಸಿ)ಕ್ಕೆ ಡ್ರೋನ್ ಗಳ ಬಳಕೆಗೆ ಷರತ್ತುಬದ್ಧ ಅನುಮತಿ ನೀಡಿದೆ. ಮಧ್ಯಪ್ರದೇಶದ ವಿಂಧ್ಯಾಚಲ ಸೂಪರ್ ಥರ್ಮಲ್ ಪವರ್ ಸ್ಟೇಷನ್, ಗದರ್ವಾರ ಸೂಪರ್ ಥರ್ಮಲ್ ಪವರ್ ಪ್ಲಾಂಟ್ ಮತ್ತು ಛತ್ತೀಸ್ ಗಢದ  ಸಿಪಾಟ್ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ ಘಟಕಗಳಲ್ಲಿ ಡ್ರೋನ್ ಬಳಸಿ ಸಂಶೋಧನೆ ಮತ್ತು ಪರಿವೀಕ್ಷಣೆ ಚಟುವಟಿಕೆಗಳನ್ನು ನಡೆಸಲು ಹಾಗೂ ರಿಮೋಟ್ ಪೈಲಟ್ ಏರ್ ಕ್ರಾಫ್ಟ್ ವ್ಯವಸ್ಥೆ (ಆರ್ ಪಿಎಎಸ್ ) ನಿಯೋಜನೆಗೆ ಷರತ್ತುಬದ್ಧ ವಿನಾಯಿತಿ ನೀಡಿದೆ.

ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಅಂಬರ್ ದುಬೆ ಮಾತನಾಡಿ, `ಎನ್ ಟಿಪಿಸಿ ಕಂಪನಿಯು ತನ್ನ ಮೂರು ಘಟಕಗಳಲ್ಲಿ ಡ್ರೋನ್ ಗಳನ್ನು ಬಳಸಿ, ಭೂಪ್ರದೇಶದ ನಕ್ಷೆ, ಸಮೀಕ್ಷೆ, ದಾಸ್ತಾನು ಗಾತ್ರದ ವಿಶ್ಲೇಷಣೆ, ವೈಮಾನಿಕ ಪರಿವೀಕ್ಷಣೆ ಕಾರ್ಯ ನಡೆಸಲಿದೆ. ಡ್ರೋನ್ ಗಳ ಬಳಕೆಯಿಂದ ಅತ್ಯಂತ ನಿಖರವಾದ ಶ್ರೇಷ್ಠ ದತ್ತಾಂಶ ಕ್ರೋಡೀಕರಿಸಲು ನೆರವಾಗಲಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಇದು ಸಾಧ್ಯವಾಗಲಿದೆ. ಮೂಲಸೌಕರ್ಯ, ಗಣಿಗಾರಿಕೆ, ಕೃಷಿ ಮತ್ತು ಪ್ರಕೃತಿ ವಿಕೋಪ ಪರಿಹಾರ ಕಾರ್ಯಾಚರಣೆ ಮತ್ತಿತರ ಕಾರ್ಯಗಳಿಗೆ ಕೈಗಾರಿಕಾ ಡ್ರೋನ್ ಗಳ ಬಳಕೆ ಉತ್ತೇಜಿಸುವ ಕೇಂದ್ರ ಸರಕಾರದ ಪ್ರಯತ್ನಗಳಿಗೆ ಅನುಗುಣವಾಗಿ, ಎನ್ ಟಿಪಿಸಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆಎಂದರು.

ಷರತ್ತುಬದ್ಧ ಅನುಮತಿ ಡಿಸೆಂಬರ್ 31 ವರೆಗೆ ಅನ್ವಯವಾಗಲಿದೆ. ಎನ್ ಟಿಪಿಸಿ ತನ್ನ ಮೂರು ಘಟಕಗಳಾದ ಮಧ್ಯಪ್ರದೇಶದ ವಿಂಧ್ಯಾಚಲ ಸೂಪರ್ ಥರ್ಮಲ್ ಪವರ್ ಸ್ಟೇಷನ್, ಗದರ್ವಾರ ಸೂಪರ್ ಥರ್ಮಲ್ ಪವರ್ ಪ್ಲಾಂಟ್ ಮತ್ತು ಛತ್ತೀಸ್ಗಢದ  ಸಿಪಾಟ್ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ ನಲ್ಲಿ ಡ್ರೋನ್ ಕಾರ್ಯಾಚರಣೆ ನಡೆಸಲು ವಿಧಿಸಲಾಗಿರುವ ಷರತ್ತುಗಳು ಮತ್ತು ಇತಿಮಿತಿಗಳು ಕೆಳಕಂಡಂತಿವೆ.

  1. ನಾಗರಿಕ ವಿಮಾನಯಾನ ಸಚಿವಾಲಯದ 1937 ಏರ್ ಕ್ರಾಫ್ಟ್ ನಿಯಮಾವಳಿ 15 ಮತ್ತು ಸಿಎಆರ್ ಸೆಕ್ಷನ್ 3 ನಿಯಾಮವಳಿಗಳಿಂದ ಎನ್ ಟಿಪಿಸಿಗೆ ವಿನಾಯಿತಿ ನೀಡಲಾಗಿದೆ.
  2. ರಿಮೋಟ್ ಪೈಲಟ್ ಏರ್ ಕ್ರಾಫ್ಟ್ ವ್ಯವಸ್ಥೆಯ ಕಾರ್ಯಾಚರಣೆಗೆ ಮುನ್ನ ಎನ್ ಟಿಪಿಸಿಯು ಸ್ಥಳೀಯ ಆಡಳಿತ, ರಕ್ಷಣಾ ಸಚಿವಾಲಯ, ಗೃಹ ಸಚಿವಾಲಯ, ಭಾರತೀಯ ವಾಯುಪಡೆ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು.
  3. ಬಳಕೆ ಮಾಡುವ ಡ್ರೋನ್ ಸ್ವೀಕೃತಿ ಸಂಖ್ಯೆ ಮತ್ತಿತರ ಅಗತ್ಯ ಮಾಹಿತಿಗಳನ್ನು ಒದಗಿಸಬೇಕು.
  4. ಡಿಜಿಸಿಎಗೆ ಕಾರ್ಯಾಚರಣೆಯ ಸಮಗ್ರ ವಿವರ ಒದಗಿಸಬೇಕು. ಡಿಜಿಸಿಎ ಅನುಮತಿ ನಂತರವೇ ಎನ್ ಟಿಪಿಸಿ ಕಾರ್ಯಾಚರಣೆ ಆರಂಭಿಸಬೇಕು.
  5. ವೈಮಾನಿಕ ಛಾಯಾಗ್ರಾಹಣ ನಡೆಸಲು ಎನ್ ಟಿಪಿಸಿ, ಡಿಜಿಸಿಎಯಿಂದ ಅಗತ್ಯ ಅನುಮತಿ ಪಡೆಯಬೇಕು.
  6. ಡ್ರೋನ್(ಆರ್ ಪಿಎಎಸ್ )ಮೂಲಕ ತೆಗೆಯುವ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಎನ್ ಟಿಪಿಸಿ ಮಾತ್ರ ಬಳಸಬೇಕು.
  7. ಆರ್ ಪಿಎಎಸ್ ಮತ್ತು ಆರ್ ಪಿಎಎಸ್ ಮೂಲಕ ಸಂಗ್ರಹಿಸುವ ದತ್ತಾಂಶ ಭದ್ರತೆ ಎನ್ ಟಿಪಿಎಸ್ ಜವಾಬ್ದಾರಿಯಾಗಿರುತ್ತದೆ.
  8. ಡ್ರೋನ್ ಕಾರ್ಯಾಚರಣೆಯನ್ನು ಹಗಲು ವೇಳೆಯಲ್ಲಿ ಮಾತ್ರ ನಡೆಸಬೇಕು.
  9. ಕಾರ್ಯಾಚರಣೆಯಿಂದ ಯಾವುದೇ ಕಾನೂನು ಪ್ರಕರಣ ಅಥವಾ ವಿವಾದ ಸೃಷ್ಟಿಯಾದರೆ, ಎನ್ ಟಿಪಿಸಿಯೇ ಅದರ ಹೊಣೆ ಹೊಬೇಕು. ಇದರಿಂದ ನಾದರೂ ನಷ್ಟ ಉಂಟಾದರೆ ಡಿಜಿಸಿಎಗೆ ತುಂಬಿಕೊಡಬೇಕು.
  10. ಡ್ರೋನ್ ಕಾರ್ಯಕ್ಷಮತೆಯನ್ನು ಎನ್ ಟಿಪಿಸಿಯೇ  ದೃಢಪಡಿಸಬೇಕು ಮತ್ತು ಜವಾಬ್ದಾರಿ ಹೊರಬೇಕು.
  11. ಯಾವುದೇ ವ್ಯಕ್ತಿಗೆ ಕಾರ್ಯಾಚರಣೆ ವೇಳೆ ಗಾಯಗಳಾದರೆ ವೈದ್ಯಕೀಯ ಮತ್ತು ಕಾನೂನಾತ್ಮಕ ಸಮಸ್ಯೆಗಳ ಜವಾಬ್ದಾರಿಯನ್ನು ಎನ್ ಟಿಇಪಿಸಿ ಹೊರಬೇಕು.
  12. ಯಾವುದೇ ರೀತಿಯ ಹಾನಿಗೆ ಅಗತ್ಯವಾದ ವಿಮಾ ರಕ್ಷಣೆ ಹೊಂದಿರಬೇಕು ಎಂಬ ನಿಯಮ ಸೇರಿದಂತೆ  ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಡಿಜಿಸಿಎ ಇಲಾಖೆಯು ಎನ್ ಟಿಪಿಸಿಗೆ ಒಟ್ಟು 18 ಷರತ್ತುಗಳನ್ನು ವಿಧಿಸಿದೆ.

***


(Release ID: 1667057) Visitor Counter : 283