ಪ್ರಧಾನ ಮಂತ್ರಿಯವರ ಕಛೇರಿ
ಅಕ್ಟೋಬರ್ 24ರಂದು ಗುಜರಾತ್ ನಲ್ಲಿ ಮೂರು ಪ್ರಮುಖ ಯೋಜನೆಗಳ ಉದ್ಘಾಟಿಸಲಿರುವ ಪ್ರಧಾನಮಂತ್ರಿ
ಗುಜರಾತ್ ರೈತರಿಗಾಗಿ “ಕಿಸಾನ್ ಸೂರ್ಯೋದಯ ಯೋಜನೆ’ಗೆ ಚಾಲನೆ ನೀಡಲಿರುವ ಪ್ರಧಾನಿ
ಯು.ಎನ್. ಮೆಹ್ತಾ ಹೃದ್ರೋಗ ಮತ್ತು ಸಂಶೋಧನಾ ಕೇಂದ್ರಕ್ಕೆ ಸೇರಿದ ಮಕ್ಕಳ ಹೃದ್ರೋಗ ಆಸ್ಪತ್ರೆಯನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಅವರಿಂದ ಗಿರ್ನಾರ್ ನಲ್ಲಿ ರೋಪ್ ವೆ ಉದ್ಘಾಟನೆ
Posted On:
22 OCT 2020 5:21PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಕ್ಟೋಬರ್ 24ರಂದು ಗುಜರಾತ್ ನಲ್ಲಿ ಮೂರು ಪ್ರಮುಖ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಪ್ರಧಾನಮಂತ್ರಿ ಅವರು ಗುಜರಾತ್ ನ ರೈತರಿಗಾಗಿ ‘ಕಿಸಾನ್ ಸೂರ್ಯೋದಯ ಯೋಜನೆ’ಗೆ ಚಾಲನೆ ನೀಡಲಿದ್ದಾರೆ. ಅಲ್ಲದೆ ಅವರು ಯು.ಎನ್. ಮೆಹ್ತಾ ಹೃದ್ರೋಗ ಮತ್ತು ಸಂಶೋಧನಾ ಕೇಂದ್ರಕ್ಕೆ ಸೇರಿದ ಮಕ್ಕಳ ಹೃದ್ರೋಗ ಆಸ್ಪತ್ರೆಯನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ ಹಾಗೂ ಅಹಮದಾಬಾದ್ ನಲ್ಲಿ ಅಹಮದಾಬಾದ್ ಸಿವಿಲ್ ಆಸ್ಪತ್ರೆ, ಟೆಲಿ ಕಾರ್ಡಿಯಾಲಜಿಗೆ ಆರಂಭಿಸಿರುವ ಮೊಬೈಲ್ ಅಪ್ಲಿಕೇಶನ್ ಅನ್ನು ಅನಾವರಣಗೊಳಿಸುವರು. ಇದೇ ವೇಳೆ ಪ್ರಧಾನಮಂತ್ರಿ ಅವರು ಗಿರ್ನಾರ್ ನಲ್ಲಿ ರೋಪ್ ವೆ ಅನ್ನು ಉದ್ಘಾಟಿಸಲಿದ್ದಾರೆ.
ಕಿಸಾನ್ ಸೂರ್ಯೋದಯ ಯೋಜನೆ
ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಇತ್ತೀಚೆಗೆ ಹಗಲು ವೇಳೆ ರೈತರ ನೀರಾವರಿಗಾಗಿ ವಿದ್ಯುತ್ ಪೂರೈಸುವ ‘ಕಿಸಾನ್ ಸೂರ್ಯೋದಯ ಯೋಜನೆ’ಯನ್ನು ಪ್ರಕಟಿಸಿದ್ದರು. ಈ ಯೋಜನೆ ಅಡಿ ರೈತರಿಗೆ ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆವರೆಗೆ ವಿದ್ಯುತ್ ಪೂರೈಕೆ ಮಾಡಲಾಗುವುದು. ರಾಜ್ಯ ಸರ್ಕಾರ ಇದಕ್ಕಾಗಿ ವಿದ್ಯುತ್ ಪ್ರಸರಣಾ ಮೂಲಸೌಕರ್ಯವನ್ನು ಸೃಷ್ಟಿಸಲು 2023ರ ವರೆಗೆ ಬಜೆಟ್ ನಲ್ಲಿ 3500 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ತೆಗೆದಿರಿಸಿದೆ. ಈ ಯೋಜನೆ ಅಡಿ ಹೆಚ್ಚುವರಿಯಾಗಿ 220 ಕೆವಿ ಉಪ ಕೇಂದ್ರಗಳನ್ನು ಸ್ಥಾಪಿಸುವುದಲ್ಲದೆ, 234, 66 ಕಿಲೋವ್ಯಾಟ್ ವಿದ್ಯುತ್ ಪ್ರಸರಣಾ ಮಾರ್ಗಗಳು ಒಟ್ಟು 3490 ಸರ್ಕಿಟ್ ಕಿ.ಮೀ.(ಸಿಕೆಎಂ) ಉದ್ದದ ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುವುದು.
2020-21ನೇ ಸಾಲಿನಲ್ಲಿ ಈ ಯೋಜನೆ ಅಡಿ ದಾಹೋಡ್, ಪಟಾಣ್, ಮಹಿಸಾಗರ್, ಪಂಚಮಹಲ್, ಛೋಟಾ ಉದೇಪುರ್, ಖೇಡಾ, ತಪಿ, ವಲ್ಸದ್, ಆನಂದ್ ಮತ್ತು ಗಿರ್-ಸೊಮನಾಥ್ ಪ್ರದೇಶಗಳನ್ನು ಸೇರಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ 2022-23ರ ವೇಳೆಗೆ ಹಂತ ಹಂತವಾಗಿ ಜಾರಿಗೊಳಿಸಲಾಗುವುದು.
ಯುಎನ್ ಮೆಹ್ತಾ ಮತ್ತು ಹೃದ್ರೋಗ ಸಂಶೋಧನಾ ಕೇಂದ್ರಕ್ಕೆ ಸೇರಿದ ಮಕ್ಕಳ ಹೃದ್ರೋಗ ಆಸ್ಪತ್ರೆ
ಪ್ರಧಾನಮಂತ್ರಿ ಅವರು ಇದೇ ವೇಳೆ ಯು.ಎನ್. ಮೆಹ್ತಾ ಹೃದ್ರೋಗ ಮತ್ತು ಸಂಶೋಧನಾ ಕೇಂದ್ರಕ್ಕೆ ಸೇರಿದ ಮಕ್ಕಳ ಹೃದ್ರೋಗ ಆಸ್ಪತ್ರೆಯನ್ನು ಉದ್ಘಾಟಿಸುವರು ಹಾಗೂ ಅಹಮದಾಬಾದ್ ನಲ್ಲಿ ಅಹಮದಾಬಾದ್ ಸಿವಿಲ್ ಆಸ್ಪತ್ರೆ ಟೆಲಿಕಾರ್ಡಿಯಾಲಜಿಗೆ ಸಿದ್ಧಪಡಿಸಿರುವ ಮೊಬೈಲ್ ಆಪ್ ಅನ್ನು ಬಿಡುಗಡೆ ಮಾಡುವರು. ಯು.ಎನ್. ಮೆಹ್ತಾ ಸಂಸ್ಥೆ ಇದೀಗ ಹೃದ್ರೋಗಕ್ಕೆ ಸಂಬಂಧಿಸಿದ ಭಾರತದ ಅತಿ ದೊಡ್ಡ ಆಸ್ಪತ್ರೆಯಾಗಲಿದೆ. ಇಲ್ಲಿ ವಿಶ್ವದರ್ಜೆಯ ಮೂಲಸೌಕರ್ಯ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಕೆಲವೇ ಆಸ್ಪತ್ರೆಗಳಲ್ಲಿ ಇದು ಕೂಡ ಒಂದಾಗಿದೆ.
ಯು.ಎನ್. ಮೆಹ್ತಾ ಹೃದ್ರೋಗ ಕೇಂದ್ರ 470 ಕೋಟಿ ರೂ. ವೆಚ್ಚದಲ್ಲಿ ವಿಸ್ತರಣಾ ಕಾರ್ಯವನ್ನು ಕೈಗೊಂಡಿದೆ. ಈ ವಿಸ್ತರಣಾ ಯೋಜನೆಯಲ್ಲಿ ಹಾಸಿಗೆಗಳ ಸಾಮರ್ಥ್ಯವನ್ನು 450 ರಿಂದ 1251ಕ್ಕೆ ಹೆಚ್ಚಳವಾಗಲಿದೆ. ಈ ಸಂಸ್ಥೆ ದೇಶದ ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಹೃದ್ರೋಗ ತರಬೇತಿ ಕೇಂದ್ರವಾಗಲಿದೆ ಹಾಗೂ ವಿಶ್ವದಲ್ಲೇ ಅತಿ ದೊಡ್ಡ ಏಕೈಕ ಸೂಪರ್ ಸ್ಪೆಷಾಲಿಟಿ ಹೃದ್ರೋಗ ಆಸ್ಪತ್ರೆಯೂ ಸಹ ಆಗಲಿದೆ.
ಇದರ ಕಟ್ಟಡ ಭೂಕಂಪನ ನಿರೋಧಕವಾಗಿದ್ದು, ಹಲವು ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು, ಅಗ್ನಿಶಾಮಕ ಹೈಡ್ರೆಂಟ್ ವ್ಯವಸ್ಥೆ ಹಾಗೂ ಅಗ್ನಿ ನಿರೋಧಕ ವ್ಯವಸ್ಥೆಯನ್ನು ಒಳಗೊಂಡಿದೆ. ಈ ಸಂಶೋಧನಾ ಕೇಂದ್ರ, ವೆಂಟಿಲೇಟರ್, ಐಎಬಿಪಿ, ಹಿಮೊಡಯಾಲಿಸಿಸ್, ಇಸಿಎಂಒ ಇತ್ಯಾದಿ ಒಳಗೊಂಡಿರುವ ಭಾರತದ ಮೊದಲ ಅತ್ಯಾಧುನಿಕ ಗಾಲಿಗಳ ಮೇಲೆ ಹೃದ್ರೋಗ ತೀವ್ರ ನಿಗಾ ಘಟಕ ಹೊಂದುವ ಸಂಸ್ಥೆಯಾಗಲಿದೆ. ಈ ವ್ಯವಸ್ಥೆಯಲ್ಲಿ ಶಸ್ತ್ರ ಚಿಕಿತ್ಸೆಯೂ ಸಹ ಮಾಡಬಹುದಾಗಿದ್ದು, ಅದಕ್ಕೆ ಈ ಸಂಸ್ಥೆಯಲ್ಲಿ 14 ಶಸ್ತ್ರ ಚಿಕಿತ್ಸಾ ಕೇಂದ್ರಗಳು ಮತ್ತು 7 ಹೃದ್ರೋಗ ಕ್ಯಾಥೆಟರೈಸೇಷನ್ ಪ್ರಯೋಗಾಲಯಗಳು ಆರಂಭವಾಗಿವೆ.
ಗಿರ್ನಾರ್ ರೋಪ್ ವೆ
ಪ್ರಧಾನಮಂತ್ರಿ ಅವರು ಅಕ್ಟೋಬರ್ 24, 2020ರಂದು ಗಿರ್ನಾರ್ ನಲ್ಲಿ ರೋಪ್ ವೆ ಉದ್ಘಾಟಿಸುವುದರೊಂದಿಗೆ ಗುಜರಾತ್ ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಮತ್ತೊಮ್ಮೆ ಮುಂಚೂಣಿಗೆ ಬರಲಿದೆ. ಆರಂಭಿಕವಾಗಿ 25 ರಿಂದ 30 ಕ್ಯಾಬಿನ್ ಗಳನ್ನು ಇದು ಒಳಗೊಂಡಿರಲಿದ್ದು, ಪ್ರತಿ ಕ್ಯಾಬಿನ್ ನಲ್ಲೂ 8 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯವಿರಲಿದೆ. 2.3 ಕಿ.ಮೀ. ಉದ್ದವನ್ನು ರೋಪ್ ವೆ ಮೂಲಕ ಕೇವಲ 7.5 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ. ಇದಲ್ಲದೆ ಗಿರ್ನಾರ್ ಶ್ರೇಣಿಯ ಸುತ್ತಲಿನ ಹಸಿರು ಸೌಂದರ್ಯವನ್ನು ರೋಪ್ ವೆನಲ್ಲಿ ಕುಳಿತು ಕಣ್ತುಂಬಿಕೊಳ್ಳಲು ಅವಕಾಶವಿದೆ.
***
(Release ID: 1667055)
Visitor Counter : 208
Read this release in:
Urdu
,
Assamese
,
English
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam