ಹಣಕಾಸು ಸಚಿವಾಲಯ

ಸಿಪಿಎಸ್ ಇಗಳ  ಬಂಡವಾಳ ವೆಚ್ಚದ ಕುರಿತು 4ನೇ ಪರಿಶೀಲನಾ ಸಭೆ ನಡೆಸಿದ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್  

Posted On: 19 OCT 2020 1:29PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿಗಳು ಮತ್ತು ಕಲ್ಲಿದ್ದಲು ಸಚಿವಾಲಯ ಹಾಗೂ ಸಚಿವಾಲಯಗಳ ವ್ಯಾಪ್ತಿಗೆ ಬರುವ 14 ಕೇಂದ್ರ ಸರ್ಕಾರಿ ಒಡೆತನದ ಸಾರ್ವಜನಿಕ ಉದ್ದಿಮೆ (ಸಿಪಿಎಸ್ )ಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ವರ್ಷದ ಬಂಡವಾಳ ವೆಚ್ಚ (ಕ್ಯಾಪೆಕ್ಸ್) ಕುರಿತಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲನಾ ಸಭೆ ನಡೆಸಿದರು. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆರ್ಥಿಕ ಪ್ರಗತಿಯನ್ನು ಚುರುಕುಗೊಳಿಸಲು ನಾನಾ ಪಾಲುದಾರರೊಂದಿಗೆ ಹಣಕಾಸು ಸಚಿವರು ನಡೆಸುತ್ತಿರುವ ಸರಣಿ ಸಭೆಗಳಲ್ಲಿ ಇದು ನಾಲ್ಕನೆಯ ಸಭೆಯಾಗಿದೆ.

2019-20ನೇ ಸಾಲಿನ ಹಣಕಾಸು ವರ್ಷದಲ್ಲಿ 14 ಸಿಪಿಎಸ್ಇಗಳಿಗೆ 1,11,672 ಕೋಟಿ ರೂ. ಕ್ಯಾಪೆಕ್ಸ್ ಗುರಿ ನೀಡಲಾಗಿತ್ತು. ಅವುಗಳು 1,16,323 ಕೋಟಿ ರೂ. ಅಂದರೆ ಶೇ. 104ರಷ್ಟು ಪ್ರಗತಿ ಸಾಧಿಸಿವೆ. 2019-20ನೇ ಹಣಕಾಸು ವರ್ಷದಲ್ಲಿ ಅರ್ಧ ವರ್ಷದ ಸಾಧನೆಯಲ್ಲಿ 43,097 ಕೋಟಿ ರೂ. (ಶೇ.39) ಗಳಿಸಿತ್ತು ಮತ್ತು 2020-21ನೇ ಸಾಲಿನ ಹಣಕಾಸು ವರ್ಷದಲ್ಲಿ ಮೊದಲ ಅರ್ಧ ವರ್ಷದಲ್ಲಿ 37,423 ಕೋಟಿ ರೂ. ಅಂದರೆ (ಶೇ.32ರಷ್ಟು) ಪ್ರಗತಿ ಸಾಧಿಸಲಾಗಿದೆ. 2020-21ನೇ ಸಾಲಿಗೆ ಕ್ಯಾಪೆಕ್ಸ್ ಗುರಿ 1,15,934 ಕೋಟಿ ರೂ.ನಿಗದಿಪಡಿಸಲಾಗಿದೆ.

ಸಿಪಿಎಸ್ಇಗಳ ಸಾಧನೆಯನ್ನು ಪರಿಶೀಲನೆ ನಡೆಸಿದ ಶ್ರೀಮತಿ ನಿರ್ಮಲಾ ಸೀತಾರಾಮನ್, ಆರ್ಥಿಕ ಪ್ರಗತಿಗೆ ಸಿಪಿಎಸ್ಇಗಳ ಕ್ಯಾಪೆಕ್ಸ್ ಅತ್ಯಂತ ಗಂಭೀರ ಚಾಲನಾ ಅಂಶವಾಗಿದೆ ಮತ್ತು 2020-21 ಮತ್ತು 2021-22ನೇ ಸಾಲಿಗೆ ಅದನ್ನು ಇನ್ನಷ್ಟು ಹೆಚ್ಚಳ ಮಾಡಬೇಕಿದೆ ಎಂದರು. 2020-21ನೇ ಹಣಕಾಸು ವರ್ಷದ 3ನೇ ತ್ರೈಮಾಸಿಕದ ಕೊನೆಯ ವೇಳೆಗೆ ಒಟ್ಟು ಬಂಡವಾಳದ ಶೇ.75ರಷ್ಟು ಬಂಡವಾಳ ವೆಚ್ಚ ಆಗಿರುವುದನ್ನು ಖಾತ್ರಿಪಡಿಸಲು ಸಿಪಿಎಸ್ಇಗಳ ಪ್ರಗತಿ ಮೇಲೆ ಸಂಬಂಧಿಸಿದ ಕಾರ್ಯದರ್ಶಿಗಳು ತೀವ್ರ ನಿಗಾ ಇಡಬೇಕು ಎಂದು ಹಣಕಾಸು ಸಚಿವರು ಸೂಚಿಸಿದರು ಹಾಗೂ ಅದಕ್ಕಾಗಿ ಸೂಕ್ತ ಯೋಜನೆಗಳನ್ನು ರೂಪಿಸುವಂತೆ ಅವರು ಕರೆ ನೀಡಿದರು. ಕ್ಯಾಪೆಕ್ಸ್ ಗುರಿ ಸಾಧನೆಗೆ ಸಿಪಿಎಸ್ಇಗಳ ಸಿಎಂಡಿಗಳು ಮತ್ತು ಸಂಬಂಧಿಸಿದ ಸಚಿವಾಲಯಗಳ ಕಾರ್ಯದರ್ಶಿಗಳ ಹಂತದಲ್ಲಿ ಇನ್ನೂ ಹೆಚ್ಚಿನ ಸಮನ್ವಯದ ಪ್ರಯತ್ನಗಳು ಅಗತ್ಯವಿದೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು.

ಭಾರತೀಯ ಆರ್ಥಿಕತೆ ಬೆಳವಣಿಗೆಗೆ ಒತ್ತು ನೀಡುವಲ್ಲಿ ಸಿಪಿಎಸ್ಇಗಳು ವಹಿಸುತ್ತಿರುವ ಮಹತ್ವದ ಪಾತ್ರವನ್ನು ಉಲ್ಲೇಖಿಸಿದ ಹಣಕಾಸು ಸಚಿವರು ಸಿಪಿಎಸ್ಇಗಳು ತಮ್ಮ ಗುರಿಗಳನ್ನು ಸಾಧಿಸಲು ಉತ್ತಮ ಪ್ರಗತಿ ಸಾಧಿಸಬೇಕು ಎಂದು ಉತ್ತೇಜನ ನೀಡಿದರು ಹಾಗೂ 2020-21ನೇ ಹಣಕಾಸು ವರ್ಷಕ್ಕೆ ನಿಗದಿಪಡಿಸಿರುವ ಬಂಡವಾಳವನ್ನು ಸಕಾಲದಲ್ಲಿ ಸೂಕ್ತ ರೀತಿಯಲ್ಲಿ ವ್ಯಯಿಸುವುದನ್ನು ಖಾತ್ರಿಪಡಿಸಬೇಕು ಎಂದರು. ಕೋವಿಡ್-19ನಿಂದ ಆಗಿರುವ ಪರಿಣಾಮಗಳಿಂದ ದೇಶದ ಆರ್ಥಿಕತೆ ಪುನಃಶ್ಚೇತನಕ್ಕೆ ಸಹಾಯ ಮಾಡುವಲ್ಲಿ ಸಿಪಿಎಸ್ಇಗಳ ಉತ್ತಮ ಸಾಧನೆ ಸಹಕಾರಿಯಾಗಲಿದೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು.

ಸಿಪಿಎಸ್ಇಗಳ ಕ್ಯಾಪೆಕ್ಸ್ ಪರಿಶೀಲನಾ ಸಭೆಯನ್ನು ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು ಸಾರ್ವಜನಿಕ ಉದ್ಯಮಗಳ ಇಲಾಖೆ ಜಂಟಿಯಾಗಿ ನಡೆಸಿತು.

***



(Release ID: 1665825) Visitor Counter : 205