ಪ್ರಧಾನ ಮಂತ್ರಿಯವರ ಕಛೇರಿ
ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಘಟಿಕೋತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
ಶಿಕ್ಷಣ ಕ್ಷೇತ್ರದ ಸುಧಾರಣೆ, ಮೂಲಸೌಕರ್ಯ ಸೃಷ್ಟಿ ಮತ್ತು ವಿನ್ಯಾಸಿತ ಸುಧಾರಣೆಗೆ ವಿಶೇಷ ಗಮನ
ರಾಷ್ಟ್ರೀಯ ಶಿಕ್ಷಣ ನೀತಿ, ಶಿಕ್ಷಣ ರಂಗಕ್ಕೆ ಹೊಸ ಆಯಾಮ ಮತ್ತು ಹೊಸ ಬಲ ನೀಡುತ್ತದೆ
ಎಲ್ಲ ಹಂತದ ಶಿಕ್ಷಣದಲ್ಲಿ ಬಾಲಕಿಯರ ಒಟ್ಟು ದಾಖಲಾತಿ ಅನುಪಾತ ಬಾಲಕರಿಗಿಂತ ಹೆಚ್ಚಾಗಿದೆ
ಕೌಶಲ, ಮರು ಕೌಶಲ ಮತ್ತು ಕೌಶಲ ವರ್ಧನೆ ಅತ್ಯಗತ್ಯವಾಗಿದೆ: ಪ್ರಧಾನಿ ನರೇಂದ್ರ ಮೋದಿ
Posted On:
19 OCT 2020 2:01PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಘಟಿಕೋತ್ಸವ 2020ನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಮೈಸೂರು ವಿಶ್ವವಿದ್ಯಾಲಯ ಪ್ರಾಚೀನ ಭಾರತದ ಶ್ರೇಷ್ಠ ಶಿಕ್ಷಣ ವ್ಯವಸ್ಥೆ ಮತ್ತು ಭವಿಷ್ಯದ ಭಾರತದ ಆಶೋತ್ತರಗಳು ಮತ್ತು ಸಾಮರ್ಥ್ಯದ ಕೇಂದ್ರವಾಗಿದೆ ಹಾಗೂ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಎಂ. ವಿಶ್ವೇಶ್ವರಯ್ಯನವರ ಸಂಕಲ್ಪವನ್ನು ಸಾಕಾರಗೊಳಿಸಿದೆ ಎಂದರು.
ಭಾರತರತ್ನ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರಂಥ ವಿದ್ವಾಂಸರು ಈ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡಿದ್ದಾರೆ ಎಂದರು.
ಕಲಿತ ವಿದ್ಯೆಯನ್ನು ತಮ್ಮ ನಿಜ ಬದುಕಿನ ವಿವಿಧ ಹಂತಗಳಲ್ಲಿ ಸಮರ್ಥವಾಗಿ ಬಳಸುವಂತೆ ಅವರು ಕರೆ ನೀಡಿದರು. ನೈಜ ಜೀವನ ಒಂದು ಶ್ರೇಷ್ಠ ವಿಶ್ವವಿದ್ಯಾಲಯ ಎಂದು ಬಣ್ಣಿಸಿದ ಅವರು, ಅದು ಜ್ಞಾನವನ್ನು ಬಳಸುವ ಅನೇಕ ಮಾರ್ಗಗಳನ್ನು ತೋರಿಸುತ್ತದೆ ಎಂದರು.
ಪ್ರಧಾನಮಂತ್ರಿಯವರು ಕನ್ನಡದ ಹೆಸರಾಂತ ಚಿಂತಕ, ಲೇಖಕ ಗೊರೊರು ರಾಮಸ್ವಾಮಿ ಅಯ್ಯಂಗಾರ್ ಅವರ ‘ಶಿಕ್ಷಣವೇ ಜೀವನದ ಬೆಳಕು’ ಎಂಬ ಹೇಳಿಕೆ ಉಲ್ಲೇಖಿಸಿದರು.
21ನೇ ಶತಮಾನದ ಅಗತ್ಯಗಳಿಗೆ ಅನುಗುಣವಾಗಿ ಭಾರತದ ಶಿಕ್ಷಣ ವ್ಯವಸ್ಥೆಯ ಪರಿವರ್ತನೆಯ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ ಎಂದ ಅವರು, ಮೂಲಸೌಕರ್ಯ ಸೃಷ್ಟಿ ಮತ್ತು ವಿನ್ಯಾಸಿತ ಸುಧಾರಣೆಗಳಿಗೆ ವಿಶೇಷ ಗಮನ ಹರಿಸಲಾಗಿದೆ ಎಂದು ತಿಳಿಸಿದರು. ಭಾರತವನ್ನು ಒಂದು ಉನ್ನತ ಶಿಕ್ಷಣ ತಾಣವಾಗಿ ಮಾಡಲು ಮತ್ತು ನಮ್ಮ ಯುವಜನರನ್ನು ಸ್ಪರ್ಧಾತ್ಮಕಗೊಳಿಸಲು ಗುಣಾತ್ಮಕವಾಗಿ ಮತ್ತು ಪ್ರಮಾಣಾತ್ಮಕ ಪ್ರಯತ್ನ ಸಾಗಿದೆ ಎಂದರು.
ಸ್ವಾತಂತ್ರ್ಯ ಬಂದು ಹಲವು ವರ್ಷಗಳ ಬಳಿಕವೂ 2014ರವರೆಗೆ ದೇಶದಲ್ಲಿ 16 ಐಐಟಿಗಳು ಮಾತ್ರ ಇದ್ದವು. ಕಳೆದ 6 ವರ್ಷಗಳಲ್ಲಿ ಪ್ರತಿ ವರ್ಷಕ್ಕೆ ಒಂದರಂತೆ ಹೊಸ ಐಐಟಿ ಸ್ಥಾಪಿಸಲಾಗಿದೆ. ಇದರಲ್ಲಿ ಒಂದು ಕರ್ನಾಟಕದ ಧಾರವಾಡದಲ್ಲೂ ಇದೆ ಎಂದರು. 2014ರವರೆಗೆ ಕೇವಲ 9 ಐಐಐಟಿಗಳು, 13 ಐಐಎಂಗಳು ಮತ್ತು 7 ಏಮ್ಸ್ ದೇಶದಲ್ಲಿತ್ತು. ನಂತರದ 5 ವರ್ಷಗಳಲ್ಲಿ ದೇಶದಲ್ಲಿ 16 ಐಐಐಟಿಗಳು, 7 ಐಐಎಂಗಳು ಮತ್ತು 8 ಏಮ್ಸ್ ಗಳು ಸ್ಥಾಪನೆಯಾಗಿವೆ ಇಲ್ಲವೇ ಸ್ಥಾಪನೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಉನ್ನತ ಶಿಕ್ಷಣದಲ್ಲಿನ ಪ್ರಯತ್ನಗಳು ಕಳೆದ 5-6 ವರ್ಷಗಳಲ್ಲಿ ಕೇವಲ ಹೊಸ ಸಂಸ್ಥೆ ಸ್ಥಾಪಿಸುವುದಕ್ಕಷ್ಟೇ ಸೀಮಿತವಾಗಿಲ್ಲ, ಜೊತೆಗೆ ಲಿಂಗ ಸಮಾನತೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯ ಖಾತ್ರಿಗಾಗಿ ಆಡಳಿತ ಸುಧಾರಣೆಯೂ ಈ ಸಂಸ್ಥೆಗಳಲ್ಲಿ ನಡೆದಿದೆ. ಈ ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತತೆಯನ್ನೂ ನೀಡಲಾಗಿದ್ದು, ಅವರು ತಮ್ಮ ಅಗತ್ಯಗಳಿಗೆ ತಕ್ಕಂತೆ ನಿರ್ಣಯ ಕೈಗೊಳ್ಳಬಹುದಾಗಿದೆ ಎಂದರು.
ಪ್ರಥಮ ಐಐಎಂ ಕಾಯ್ದೆ ದೇಶಾದ್ಯಂತದ ಐಐಎಂಗಳಿಗೆ ಹೆಚ್ಚಿನ ಅಧಿಕಾರ ನೀಡಿದೆ ಎಂದು ತಿಳಿಸಿದರು. ವೈದ್ಯಕೀಯ ಶಿಕ್ಷಣದಲ್ಲಿ ಪಾರದರ್ಶಕತೆ ತರಲು ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆ ಮಾಡಲಾಗಿದೆ. ಹೋಮಿಯೋಪತಿ ಮತ್ತು ಭಾರತೀಯ ವೈದ್ಯ ಪದ್ಧತಿಗಳಲ್ಲಿ ಸುಧಾರಣೆ ತರಲು ಎರಡು ಹೊಸ ಕಾಯ್ದೆ ರೂಪಿಸಲಾಗಿದೆ ಎಂದರು.
ದೇಶದ ಎಲ್ಲ ಹಂತಗಳ ಶಿಕ್ಷಣದಲ್ಲೂ ಒಟ್ಟಾರೆ ಬಾಲಕಿಯ ದಾಖಲಾತಿ ಪ್ರಮಾಣ ಬಾಲಕರಿಗಿಂತ ಹೆಚ್ಚಾಗಿದೆ ಎಂದು ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಇಡೀ ಶಿಕ್ಷಣ ವಲಯದಲ್ಲೇ ಮೂಲಭೂತ ಬದಲಾವಣೆಗಳನ್ನು ತರಲು ಹೊಸ ಚೈತನ್ಯ ನೀಡುತ್ತದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಹೊಂದಿಕೊಳ್ಳುವ ಮತ್ತು ಹೆಚ್ಚು ಅಳವಡಿಸಿಕೊಳ್ಳುವಂಥ ಶಿಕ್ಷಣ ವ್ಯವಸ್ಥೆಯೊಂದಿಗೆ ನಮ್ಮ ಯುವಜನರನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸಲು ಬಹು ಆಯಾಮ ಹೊಂದಿದೆ ಎಂದರು. ಕೌಶಲ, ಮರು ಕೌಶಲ ಮತ್ತು ಕೌಶಲ್ಯವರ್ಧನೆ ಈ ಹೊತ್ತಿನ ಅತ್ಯಗತ್ಯವಾಗಿದೆ ಎಂದು ಹೇಳಿದರು.
ದೇಶದ ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಮೈಸೂರು ವಿಶ್ವವಿದ್ಯಾಲಯವು, ಹೊರಹೊಮ್ಮುತ್ತಿರುವ ಹೊಸ ಸನ್ನಿವೇಶಗಳಿಗೆ ಅನುಗುಣವಾಗಿ ನಾವಿನ್ಯತೆ ರೂಢಿಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ತಿಳಿಸಿದರು. ಇನ್ ಕ್ಯುಬೇಷನ್ ಕೇಂದ್ರಗಳು, ತಂತ್ರಜ್ಞಾನ ಅಭಿವೃದ್ಧಿ ಕೇಂದ್ರಗಳು, ಕೈಗಾರಿಕೆ- ಶಿಕ್ಷಣ ಸಂಸ್ಥೆಗಳ ಸಂಪರ್ಕ ಮತ್ತು ಅಂತ ಶಿಸ್ತೀಯ ಸಂಶೋಧನೆಗಳಿಗೆ ಗಮನ ಹರಿಸುವಂತೆ ಆಗ್ರಹಿಸಿದರು. ಸಂಬಂಧಿತ ಜಾಗತಿಕ ಮತ್ತು ಸಮಕಾಲೀನ ವಿಷಯಗಳೊಂದಿಗೆ ಸ್ಥಳೀಯ ಸಂಸ್ಕೃತಿ, ಸ್ಥಳೀಯ ಕಲೆ ಮತ್ತು ಇತರ ಸಾಮಾಜಿಕ ವಿಚಾರಗಳ ಬಗ್ಗೆ ಸಂಶೋಧನೆಗೆ ಉತ್ತೇಜನ ನೀಡುವಂತೆ ಅವರು ವಿಶ್ವವಿದ್ಯಾಲಯಕ್ಕೆ ಮನವಿ ಮಾಡಿದರು. ತಮ್ಮ ವೈಯಕ್ತಿಕ ಶಕ್ತಿಗೆ ಅನುಗುಣವಾಗಿ ಔನ್ನತ್ಯ ಸಾಧಿಸುವಂತೆ ಅವರು ವಿದ್ಯಾರ್ಥಿಗಳಿಗೆ ಆಗ್ರಹಿಸಿದರು.
***
(Release ID: 1665807)
Visitor Counter : 190
Read this release in:
English
,
Urdu
,
Marathi
,
Hindi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam