ಪ್ರಧಾನ ಮಂತ್ರಿಯವರ ಕಛೇರಿ
ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್ ಎ ಒ) 75ನೇ ವಾರ್ಷಿಕೋತ್ಸವ
75 ರೂಪಾಯಿ ಸ್ಮಾರಕ ನಾಣ್ಯ ಬಿಡುಗಡೆ; ಅಭಿವೃದ್ಧಿಪಡಿಸಿರುವ 8 ಬೆಳೆಗಳ 17 ಜೈವಿಕ ತಳಿಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಿ ನರೇಂದ್ರ ಮೋದಿ
Posted On:
14 OCT 2020 11:13AM by PIB Bengaluru
ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ ಎ ಒ)ದ 75ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 16 (ಶುಕ್ರವಾರ) ರಂದು 75 ರೂಪಾಯಿಗಳ ಸ್ಮಾರಕ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ, ಅದು ಭಾರತ ಮತ್ತು ಎಫ್ ಎಒ ಸಂಸ್ಥೆಯ ನಡುವಿನ ಸುದೀರ್ಘ ಸಂಬಂಧದ ಪ್ರತೀಕವಾಗಿದೆ. ಅಲ್ಲದೆ, ಪ್ರಧಾನಮಂತ್ರಿ ಅವರು ಇದೇ ವೇಳೆ ಇತ್ತೀಚೆಗೆ ಅಭಿವೃದ್ಧಿಪಡಿಸಿರುವ 8 ಬೆಳೆಗಳ 17 ಜೈವಿಕ ತಳಿಗಳನ್ನೂ ಸಹ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಕೇಂದ್ರ ಸರ್ಕಾರ ಕೃಷಿ ಮತ್ತು ಪೌಷ್ಟಿಕತೆಗೆ ಹೆಚ್ಚಿನ ಆದ್ಯತೆ ನೀಡಿರುವುದರ ಸಂಕೇತ ಈ ಕಾರ್ಯಕ್ರಮವಾಗಿದ್ದು, ಹಸಿವು, ಅಪೌಷ್ಟಿಕತೆ ಮತ್ತು ಪೌಷ್ಟಿಕಾಂಶ ಕೊರತೆಗಳನ್ನು ಸಂಪೂರ್ಣವಾಗಿ ನಿವಾರಿಸುವ ದೃಢಸಂಕಲ್ಪ ಮಾಡಲಾಗಿದೆ. ಅದನ್ನು ದೇಶಾದ್ಯಂತ ಇರುವ ಅಂಗನವಾಡಿ ಕೇಂದ್ರಗಳು, ಕೃಷಿ ವಿಜ್ಞಾನ ಕೇಂದ್ರಗಳು, ಸಾವಯವ ಮತ್ತು ತೋಟಗಾರಿಕೆ ಮಿಷನ್ ನಲ್ಲಿ ಕೈಗೊಂಡಿರುವ ಕ್ರಮಗಳ ಮೂಲಕ ಕಾಣಬಹುದಾಗಿದೆ. ಕೇಂದ್ರ ಕೃಷಿ ಸಚಿವರು, ಹಣಕಾಸು ಸಚಿವರು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಭಾರತ ಮತ್ತು ಎಫ್ ಎ ಒ
ಸಮಾಜದಲ್ಲಿನ ಸೂಕ್ಷ್ಮ ಹಾಗೂ ದುರ್ಬಲ ವರ್ಗಗಳ ಸಮುದಾಯಗಳನ್ನು ಆರ್ಥಿಕವಾಗಿ ಮತ್ತು ಪೌಷ್ಟಿಕವಾಗಿ ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಎಫ್ ಎಒ ಕೈಗೊಂಡಿರುವ ಕಾರ್ಯಗಳಿಗೆ ಸರಿಸಮಾನವಾದುದಿಲ್ಲ. ಭಾರತ, ಎಫ್ ಎಒ ಜೊತೆ ಐತಿಹಾಸಿಕ ಸಂಬಂಧವನ್ನು ಹೊಂದಿದೆ. 1956-1967ರ ನಡುವಿನ ಅವಧಿಯಲ್ಲಿ ಎಫ್ ಎಒದ ಮಹಾನಿರ್ದೇಶಕರಾಗಿ ಭಾರತೀಯ ನಾಗರಿಕ ಸೇವಾ ಅಧಿಕಾರಿ ಡಾ.ವಿನಯ್ ರಾಜನ್ ಸೇನ್ ಸೇವೆ ಸಲ್ಲಿಸಿದ್ದರು. 2020ನೇ ಸಾಲಿನಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪಡೆದ ವಿಶ್ವ ಆಹಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಇವರ ಸೇವಾವಧಿಯಲ್ಲಿಯೇ ಎಂಬುದು ಗಮನಾರ್ಹ. ಭಾರತ 2016 ಅನ್ನು ಅಂತಾರಾಷ್ಟ್ರೀಯ ಬೇಳೆಕಾಳುಗಳ ವರ್ಷ ಎಂದು ಘೋಷಿಸುವಂತೆ ಹಾಗೂ 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸುವಂತೆ ಮಾಡಿದ್ದ ಪ್ರಸ್ತಾವವನ್ನು ಎಫ್ ಎಒ ಅನುಮೋದಿಸಿತ್ತು.
ಅಪೌಷ್ಟಿಕತೆ ನಿವಾರಣೆ
ಭಾರತ, ಸುಮಾರು 100 ಮಿಲಿಯನ್ ಜನರನ್ನು ಗುರಿಯಾಗಿಟ್ಟುಕೊಂಡು ಬೆಳವಣಿಗೆ ಕುಂಠಿತ ತಗ್ಗಿಸಲು, ಅಪೌಷ್ಟಿಕತೆ ನಿವಾರಿಸಲು ಮತ್ತು ರಕ್ತಹೀನತೆ ತಗ್ಗಿಸಲು ಮತ್ತು ನವಜಾತ ಶಿಶುವಿನ ತೂಕ ಹೆಚ್ಚಳ ಉದ್ದೇಶದಿಂದ ಮಹತ್ವಾಕಾಂಕ್ಷೆಯ ಪೋಷಣ್ ಅಭಿಯಾನವನ್ನು ಕೈಗೆತ್ತಿಕೊಂಡಿದೆ. ಅಪೌಷ್ಟಿಕತೆ ಜಾಗತಿಕ ಸಮಸ್ಯೆಯಾಗಿದ್ದು, ಸುಮಾರು ಎರಡು ಬಿಲಿಯನ್ ಜನರು ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿದ್ದಾರೆ. ಮಕ್ಕಳ ಸಾವಿನಲ್ಲಿ ಸುಮಾರು ಶೇ.45ರಷ್ಟು ಅಪೌಷ್ಟಿಕತೆಗೆ ಸಂಬಂಧಿಸಿದವುಗಳು. ಹಾಗಾಗಿ ಸೂಕ್ತ ರೀತಿಯಲ್ಲಿ ಅದನ್ನು ವಿಶ್ವಸಂಸ್ಥೆಯ 17 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಒಂದನ್ನಾಗಿ ಪರಿಗಣಿಸಲಾಗಿದೆ.
ಅಂತಾರಾಷ್ಟ್ರೀಯ ಆದ್ಯತೆಗಳಿಗೆ ಅನುಗುಣವಾಗಿ, ಕಬ್ಬಿಣಾಂಶ, ಸತು, ಕ್ಯಾಲ್ಸಿಯಂ, ಒಟ್ಟು ಪ್ರೊಟೀನ್, ಲೈಸಿನ್ ಮತ್ತು ಟ್ರಿಫ್ಟೊಪಾನ್, ಅಂಥೋಸಯಾನಿನ್, ಪ್ರೊವಿಟಮಿನ್, ಓಲಿಕ್ ಆಮ್ಗ ಸೇರಿ ಗುಣಮಟ್ಟದ ಪ್ರೊಟೀನ್ ಮತ್ತು ಪೌಷ್ಟಿಕಾಂಶ ವಿರೋಧಿ ಅಂಶಗಳನ್ನು ತಗ್ಗಿಸುವುದು ಇತ್ಯಾದಿ ಕ್ರಮಗಳಿಗೆ ಸರ್ಕಾರ ಅಗ್ರ ಆದ್ಯತೆಯನ್ನು ನೀಡಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ನಾಯಕತ್ವದಲ್ಲಿ ರಾಷ್ಟ್ರೀಯ ಕೃಷಿ ಸಂಶೋಧನಾ ವ್ಯವಸ್ಥೆಯಡಿ, ಕಳೆದ ಐದು ವರ್ಷಗಳಿಂದೀಚೆಗೆ 53 ಹೊಸ ಅಂತಹ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. 2014ಕ್ಕೆ ಮುನ್ನ ಕೇವಲ ಒಂದೇ ಒಂದು ಜೈವಿಕ ತಳಿಯನ್ನು ಅಭಿವೃದ್ಧಿಪಡಿಸಲಾಗಿತ್ತು.
ಭಾರತದ ಥಾಲಿ (ಊಟದ ತಟ್ಟೆ) ಪೌಷ್ಟಿಕ ಥಾಲಿಯಾಗಿ ಪರಿವರ್ತನೆ
ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿರುವ ಇತ್ತೀಚೆಗೆ ಅಭಿವೃದ್ಧಿಪಡಿಸಿರುವ 8 ಬೆಳೆಗಳ 17 ಜೀವಿಕ ತಳಿಗಳಲ್ಲಿ 3.0 ಪಟ್ಟು ಪೌಷ್ಟಿಕಾಂಶ ಅಧಿಕವಾಗಿದೆ. ಭತ್ತದ ತಳಿ ಸಿಆರ್ ಧಾನ್ 315ನಲ್ಲಿ ಹೆಚ್ಚಿನ ಸತುವಿನ ಅಂಶವಿದೆ; ಗೋಧಿ ತಳಿ ಎಚ್ ಐ 1633ಯಲ್ಲಿ ಪ್ರೊಟೀನ್, ಕಬ್ಬಿಣಾಂಶ ಮತ್ತು ಸತುವಿನ ಅಂಶ ಅಧಿಕವಾಗಿರಲಿದೆ; ಎಚ್ ಡಿ 3298ನಲ್ಲಿ ಪ್ರೋಟೀನ್ ಮತ್ತು ಕಬ್ಬಿಣಾಂಶ ಅಧಿಕವಾಗಿದ್ದರೆ; ಡಿಬಿಡಬ್ಲೂ 303 ಮತ್ತು ಡಿಡಿಡಬ್ಲೂ 48 ಗೋಧಿಯ ತಳಿಗಳಲ್ಲಿ ಹೆಚ್ಚಿನ ಪ್ರೋಟೀನ್ ಇರಲಿದೆ; ಲಾದೋವಾಲ್ ಗುಣಮಟ್ಟದ ಪ್ರೋಟೀನ್ ಹೈಬ್ರೀಡ್ ಜೋಳ 1,2 ಮತ್ತು 3 ತಳಿಗಳಲ್ಲಿ ಲೈಸಿನ್ ಮತ್ತು ಟ್ರಿಫ್ಟೊಪಾನ್ ಅಂಶಗಳಿರುತ್ತವೆ; ಸಿಎಫ್ ಎಂವಿ1 ಮತ್ತು 2 ರಾಗಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ಸತುವಿನ ಅಂಶ ಅಧಿಕವಾಗಿರುತ್ತದೆ; ಸಿಎಲ್ ಎಂವಿ1 ರಾಗಿಯಲ್ಲಿ ಅಧಿಕ ಕಬ್ಬಿಣಾಂಶ ಮತ್ತು ಸತು ಇರುತ್ತದೆ; ಸಾಸಿವೆ 32ಯಲ್ಲಿ ಎರುಸಿಕ್ ಆಮ್ಲ ಕಡಿಮೆ ಇರುತ್ತದೆ; ಗಿರಿನಾರ್ 4 ಮತ್ತು 4 ತಳಿಯ ಶೇಂಗಾದಲ್ಲಿ ಒಲಿಸಿಕ್ ಆಮ್ಗ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಮತ್ತು ಮರಗೆಣಸು ಶ್ರೀ ನಿಲೀಮ ಮತ್ತು ಡಿಎ 340ಯಲ್ಲಿ ಸತು, ಕಬ್ಬಿಣಾಂಶ ಮತ್ತು ಅಂಥೋಸಯಾನಿನ್ ಅಂಶ ಹೆಚ್ಚಿರುತ್ತದೆ.
ಈ ಎಲ್ಲ ವೈವಿಧ್ಯ ತಳಿಗಳು ಮತ್ತು ಇತರೆ ಆಹಾರ ಪದಾರ್ಥಗಳು, ಸಾಮಾನ್ಯ ಭಾರತೀಯ ಥಾಲಿ (ಊಟ)ವನ್ನು ಪೌಷ್ಟಿಕ ಥಾಲಿಗಳನ್ನಾಗಿ ಪರಿವರ್ತಿಸಲಿವೆ. ಈ ತಳಿಗಳನ್ನು ಸ್ಥಳೀಯವಾಗಿ ರೈತರ ಬಳಿ ಇದ್ದ ತಳಿಗಳನ್ನು ಮತ್ತು ಭೂ ಗುಣವನ್ನು ಆಧರಿಸಿ ಅಭಿವೃದ್ಧಿಪಡಿಸಲಾಗಿದೆ. ಅಸ್ಸಾಂನ ಗಾರೋ ಗುಡ್ಡಗಾಡು ಪ್ರದೇಶದಿಂದ ಸಂಗ್ರಹಿಸಿದ ಭತ್ತದ ತಳಿಯನ್ನು ಮತ್ತು ಗುಜರಾತ್ ನ ಡಾಂಗ್ ಜಿಲ್ಲೆಯಲ್ಲಿ ಸಂಗ್ರಹಿಸಿದ ಸಿರಿಧಾನ್ಯವನ್ನು ಆಧರಿಸಿ ಹೆಚ್ಚಿನ ಸತುವಿನ ಅಂಶವಿರುವ ಭತ್ತದ ತಳಿಯನ್ನು ಅಭಿವೃದ್ಧಿಪಡಿಸಲಾಗಿದೆ.
ಐಸಿಎಆರ್, ಕೌಟುಂಬಿಕ ವ್ಯವಸಾಯ ಪದ್ದತಿಯನ್ನು ಕೃಷಿ ಮತ್ತು ಪೌಷ್ಟಿಕಾಂಶದೊಂದಿಗೆ ಸಂಯೋಜಿಸಿ ಉತ್ತೇಜನ ನೀಡಲು ಪೌಷ್ಟಿಕ ಸೂಕ್ಷ್ಮ ಕೃಷಿ ಸಂಪನ್ಮೂಲ ಮತ್ತು ಆವಿಷ್ಕಾರ (ನಾರಿ) ಕಾರ್ಯಕ್ರಮವನ್ನು ಆರಂಭಿಸಿದೆ. ಅದರಲ್ಲಿ ಪೌಷ್ಟಿಕಾಂಶ ಭದ್ರತೆಯನ್ನು ಹೆಚ್ಚಿಸಲು ನ್ಯೂಟ್ರಿ ಸ್ಮಾರ್ಟ್ ಗ್ರಾಮಗಳು ಮತ್ತು ಪ್ರದೇಶವಾರು ನಿರ್ದಿಷ್ಠ ಕೈ ತೋಟಗಳ ಮಾದರಿಗಳನ್ನು ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದ್ದು, ಆ ಮೂಲಕ ಸ್ಥಳೀಯವಾಗಿ ಲಭ್ಯವಿರುವ ಆರೋಗ್ಯಕರ ಮತ್ತು ಸೂಕ್ತ ಪೌಷ್ಠಿಕಾಂಶ ಮತ್ತು ಪೌಷ್ಟಿಕ ಅಂಶಗಳನ್ನು ಒಳಗೊಂಡಿರುವ ವೈವಿಧ್ಯಮಯ ಆಹಾರಪದ್ದತಿಯನ್ನು ಉತ್ತೇಜಿಸಲಾಗುತ್ತಿದೆ.
ಜೈವಿಕವಾಗಿ ಅಭಿವೃದ್ದಿಪಡಿಸಲಾಗಿರುವ ತಳಿಗಳನ್ನು ಸರ್ಕಾರದ ಮಧ್ಯಾಹ್ನದ ಬಿಸಿಯೂಟ ಯೋಜನೆ, ಅಂಗನವಾಗಿ ಇತ್ಯಾದಿಗಳ ಜೊತೆ ಸಂಯೋಜಿಸಲಾಗಿದ್ದು, ಆ ಮೂಲಕ ಅಪೌಷ್ಟಿಕತೆ ನಿವಾರಣೆ ಮತ್ತು ಉತ್ಕೃಷ್ಠ ಆಹಾರಧಾನ್ಯಗಳ ಮೂಲಕ ಭಾರತವನ್ನು ಕುಪೋಷಣ ಮುಕ್ತಗೊಳಿಸುವ ಗುರಿ ಇದೆ. ಇದರಿಂದ ರೈತರಿಗೆ ಹೆಚ್ಚಿನ ಆದಾಯ ದೊರಕುವುದಲ್ಲದೆ ಅವರಿಗೆ ಉದ್ಯಮಶೀಲತೆ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ತೆರೆಯಲಿದೆ.
***
(Release ID: 1664290)
Visitor Counter : 368
Read this release in:
Punjabi
,
English
,
Urdu
,
Marathi
,
Hindi
,
Assamese
,
Manipuri
,
Bengali
,
Gujarati
,
Odia
,
Tamil
,
Telugu
,
Malayalam