ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಂದ ಅಕ್ಟೋಬರ್ 5 ರಂದು ‘ಸಾಮಾಜಿಕ ಸಬಲೀಕರಣಕ್ಕಾಗಿ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ 2020’ ಶೃಂಗಸಭೆ ಉದ್ಘಾಟನೆ
ಅಕ್ಟೋಬರ್ 5 ರಿಂದ 9 ರವರಗೆ ನಡೆಯಲಿರುವ ಕೃತಕ ಬುದ್ಧಿಮತ್ತೆಯ ಬೃಹತ್ ವರ್ಚುವಲ್ ಶೃಂಗಸಭೆ
ಶೃಂಗಸಭೆಯಲ್ಲಿ ಭಾಗವಹಿಸಲಿರುವ ಜಾಗತಿಕ ಕೃತಕ ಬುದ್ಧಿಮತ್ತೆ ಉದ್ಯಮ ಪ್ರತಿನಿಧಿಗಳು
Posted On:
03 OCT 2020 5:30PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಸಾಮಾಜಿಕ ಸಬಲೀಕರಣಕ್ಕಾಗಿ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ’ - RAISE 2020- ಬೃಹತ್ ವರ್ಚುವಲ್ ಶೃಂಗಸಭೆಯನ್ನು ಅಕ್ಟೋಬರ್ 5 ರಂದು ಸಂಜೆ 7 ಗಂಟೆಗೆ ಉದ್ಘಾಟಿಸಲಿದ್ದಾರೆ.
2020 ರ ಅಕ್ಟೋಬರ್ 5 ರಿಂದ 9 ರವರೆಗೆ ನಡೆಯಲಿರುವ ಈ ಮೆಗಾ ವರ್ಚುವಲ್ ಶೃಂಗಸಭೆಯನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ನೀತಿ ಆಯೋಗ ಆಯೋಜಿಸುತ್ತಿವೆ.
RAISE 2020 ಶೃಂಗಸಭೆಯು ಆರೋಗ್ಯ ಪರಿವರ್ತನೆ, ಕೃಷಿ, ಶಿಕ್ಷಣ ಮತ್ತು ಸ್ಮಾರ್ಟ್ ಮೊಬಿಲಿಟಿ ಮುಂತಾದ ಕ್ಷೇತ್ರಗಳಲ್ಲಿ ಸಾಮಾಜಿಕ ಪರಿವರ್ತನೆ, ಸೇರ್ಪಡೆ ಮತ್ತು ಸಬಲೀಕರಣಕ್ಕಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸುವ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ರೂಪುರೇಷೆ ರೂಪಿಸುವ ಜಾಗತಿಕ ಸಭೆಯಾಗಿದೆ.
RAISE 2020 ರಲ್ಲಿ, ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆಯ ಸಂಶೋಧನೆ, ನೀತಿ ಮತ್ತು ಅನುಶೋಧನಾ ಕ್ಷೇತ್ರಗಳ ಪ್ರತಿನಿಧಿಗಳು ಮತ್ತು ತಜ್ಞರು ಭಾಗವಹಿಸಲಿದ್ದಾರೆ. ಶೃಂಗಸಭೆಯಲ್ಲಿ ‘ಸಾಂಕ್ರಾಮಿಕ ಸಿದ್ಧತೆಗಾಗಿ ಕೃತಕ ಬುದ್ಧಿಮತ್ತೆಯ ಬಳಕೆ’, ಡಿಜಿಟಲೀಕರಣದ ಮೇಲೆ ಅನುಶೋಧನೆಯ ಪ್ರಭಾವ, ‘ಅಂತರ್ಗತ ಕೃತಕ ಬುದ್ಧಿಮತ್ತೆ, ‘ಯಶಸ್ವಿ ಅನುಶೋಧನೆಯ ಪಾಲುದಾರಿಕೆಗಳು’ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು.
RAISE 2020 ಶೃಂಗಸಭೆಯು ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕೆಲವು ಸ್ಟಾರ್ಟ್ಅಪ್ ಉದ್ಯಮಗಳನ್ನು ಸಹ ಒಳಗೊಂಡಿರುತ್ತದೆ. ಕೃತಕ ಬುದ್ಧಿಮತ್ತೆ ಪರಿಹಾರ ಸವಾಲು ಮೂಲಕ ಆಯ್ಕೆ ಮಾಡಲಾದ ಸ್ಟಾರ್ಟ್ಅಪ್ ಗಳು 2020 ರ ಅಕ್ಟೋಬರ್ 6 ರಂದು ‘ಎಐ ಸ್ಟಾರ್ಟ್ಅಪ್ ಪಿಚ್ ಫೆಸ್ಟ್’ ನಲ್ಲಿ ತಮ್ಮ ಪರಿಹಾರಗಳನ್ನು ಪ್ರದರ್ಶಿಸುತ್ತವೆ. ಇದು ಮಾನ್ಯತೆ, ಗುರುತಿಸುವಿಕೆ ಮತ್ತು ಮಾರ್ಗದರ್ಶನದ ಮೂಲಕ ಟೆಕ್ ಉದ್ಯಮಿಗಳು ಮತ್ತು ಸ್ಟಾರ್ಟ್ಅಪ್ ಗಳಿಗೆ ಭಾರತ ಸರ್ಕಾರ ನೀಡುತ್ತಿರುವ ನಿರಂತರ ಬೆಂಬಲದ ಭಾಗವಾಗಿದೆ.
ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಾಗಿದೆ. ಅಲ್ಲದೇ, ಐಐಟಿಗಳಂತಹ ಪ್ರಮುಖ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳು, ದೃಢವಾದ ಮತ್ತು ಸರ್ವವ್ಯಾಪಿ ಡಿಜಿಟಲ್ ಮೂಲಸೌಕರ್ಯಗಳು ಮತ್ತು ಪ್ರತಿವರ್ಷ ಹೊಸದಾಗಿ ತಯಾರಾಗುವ ಲಕ್ಷಾಂತರ ಎಸ್‌ಟಿಇಎಂ ಪದವೀಧರರಿಗೆ ನೆಲೆಯಾಗಿದೆ. ಕೃತಕ ಬುದ್ಧಿಮತ್ತೆ ಅಭಿವೃದ್ಧಿಯಲ್ಲಿ ಜಾಗತಿಕ ನಾಯಕನಾಗಲು ಭಾರತವು ಉತ್ತಮ ಸ್ಥಾನದಲ್ಲಿದೆ. 2035 ರ ವೇಳೆಗೆ ಕೃತಕ ಬುದ್ಧಿಮತ್ತೆ ಕ್ಷೇತ್ರವು ಭಾರತದ ಆರ್ಥಿಕತೆಗೆ 957 ಶತಕೋಟಿ ಡಾಲರ್ ಮೊತ್ತವನ್ನು ಸೇರಿಸಬಹುದೆಂದು ಉದ್ಯಮ ವಿಶ್ಲೇಷಕರು ಹೇಳಿತ್ತಾರೆ.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಉತ್ಸಾಹದಲ್ಲಿ, ಪ್ರಧಾನ ಮಂತ್ರಿ ಶ್ರೀನರೇಂದ್ರಮೋದಿಯವರು ಕೃತಕ ಬುದ್ಧಿಮತ್ತೆಯನ್ನು ಸಮಗ್ರ ಅಭಿವೃದ್ಧಿಗೆ ಬಳಸಿಕೊಳ್ಳಲು ಯೋಜಿಸಿದ್ದಾರೆ, ಇದು ದೇಶದ 'ಎಲ್ಲರಿಗೂ ಎಐ' ಎಂಬ ಮಂತ್ರವನ್ನು ಪ್ರತಿನಿಧಿಸುತ್ತದೆ. ಪ್ರಧಾನಮಂತ್ರಿಯವರ ದೃಷ್ಟಿಕೋನದಂತೆ ಭಾರತವು ಶೀಘ್ರದಲ್ಲೇ ಅಂತರರಾಷ್ಟ್ರೀಯ ಸಮುದಾಯದಲ್ಲಿ ಕೃತಕ ಬುದ್ಧಿಮತ್ತೆ ಕ್ಷೇತ್ರದ ನಾಯಕನಾಗುವುದು ಮಾತ್ರವಲ್ಲದೆ, ಸಾಮಾಜಿಕ ಸಬಲೀಕರಣಕ್ಕಾಗಿ ಕೃತಕ ಬುದ್ಧಿಮತ್ತೆಯನ್ನು ಹೇಗೆ ಜವಾಬ್ದಾರಿಯುತವಾಗಿ ಬಳಸಬೇಕು ಎಂಬುದನ್ನು ಜಗತ್ತಿಗೆ ತೋರಿಸುವ ಮಾದರಿಯೂ ಆಗಲಿದೆ.
RAISE 2020 ಶೃಂಗಸಭೆಯು (http://raise2020.indiaai.gov.in/) ಕೃತಕ ಬುದ್ಧಿಮತ್ತೆಯನ್ನು ನೈತಿಕವಾಗಿ ಅಭಿವೃದ್ಧಿಪಡಿಸುವ ಮತ್ತು ಬಳಸುವ ಅಗತ್ಯತೆಯ ಬಗ್ಗೆ ಸಾಮೂಹಿಕ ಜಾಗೃತಿ ಮೂಡಿಸಲು ವಿಚಾರ ವಿನಿಮಯಕ್ಕೆ ಅನುಕೂಲವಾಗಲಿದೆ.
RAISE 2020 ಬಗ್ಗೆ:
RAISE 2020, ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆಯ ಮೂಲಕ ಸಾಮಾಜಿಕ ಪರಿವರ್ತನೆ, ಸೇರ್ಪಡೆ ಮತ್ತು ಸಬಲೀಕರಣಕ್ಕಾಗಿ ಭಾರತದ ದೃಷ್ಟಿ ಮತ್ತು ಮಾರ್ಗಸೂಚಿಯನ್ನು ಮುನ್ನಡೆಸಲು ಕೃತಕ ಬುದ್ಧಿಮತ್ತೆಯ ಕುರಿತಾದ ಜಾಗತಿಕ ಸಭೆಯಾಗಿದೆ. ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆಯೋಜಿಸಿರುವ ಈ ಶೃಂಗಸಭೆಯಲ್ಲಿ ಜಾಗತಿಕ ಉದ್ಯಮದ ಮುಖಂಡರು, ಪ್ರಮುಖ ತಜ್ಞರು, ಸರ್ಕಾರಿ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.
ವೆಬ್‌ಸೈಟ್: http://raise2020.indiaai.gov.in/
***
***
(Release ID: 1661430)
Visitor Counter : 278
Read this release in:
Assamese
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam