ಪ್ರಧಾನ ಮಂತ್ರಿಯವರ ಕಛೇರಿ

ಭಾರತದ ರೈತರನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 27 SEP 2020 1:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ, ಕೋವಿಡ್ ಬಿಕ್ಕಟ್ಟಿನ ನಡುವೆಯೇ ದೇಶದ ರೈತ ಸಮುದಾಯ ಅದ್ಬುತ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದ್ದಾರೆ.

ಕೃಷಿ ಕ್ಷೇತ್ರ ಬಲಿಷ್ಠವಾದರೆ, ಆತ್ಮ ನಿರ್ಭರ್ ಭಾರತಕ್ಕೆ ಭದ್ರ ಬುನಾದಿ ಎಂದು ಪ್ರಧಾನಮಂತ್ರಿ ಹೇಳಿದರು. ಇತ್ತೀಚೆಗೆ, ಈ ವಲಯವನ್ನು ಹಲವು ಬಗೆಯ ನಿರ್ಬಂಧಗಳಿಂದ ಮುಕ್ತಗೊಳಿಸಲಾಗಿದೆ ಮತ್ತು ಹಲವು ಮಿಥ್ಯೆಗಳಿಂದ ಸ್ವತಂತ್ರಗೊಳಿಸಲು ಪ್ರಯತ್ನಿಸಲಾಗಿದೆ ಎಂದು ಉಲ್ಲೇಖಿಸಿದರು. ಹರಿಯಾಣದ ರೈತ ಶ್ರೀ ಕನ್ವಾರ್ ಚೌವ್ಹಾಣ್ ಅವರ ಉದಾಹರಣೆಯನ್ನು ನೀಡಿದ ಅವರು, ಆ ರೈತ ಮಂಡಿಯ ಹೊರಗೆ ತನ್ನ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಲು ಅತ್ಯಂತ ಕಷ್ಟಪಡುತ್ತಿದ್ದನು, ಆದರೆ 2014ರಲ್ಲಿ ಎಪಿಎಂಸಿ ಕಾಯ್ದೆಯಿಂದ ಹಣ್ಣು ಮತ್ತು ತರಕಾರಿಗಳನ್ನು ಹೊರಗಿಡಲಾಯಿತು, ಅದು ಆ ರೈತನಿಗೆ ಹೆಚ್ಚಿನ ಪ್ರಯೋಜನ ಕಲ್ಪಿಸಿತು. ಆತ ರೈತ ಉತ್ಪನ್ನ ಸಂಸ್ಥೆ ಸ್ಥಾಪಿಸಿದ ಮತ್ತು ಆತನ ಗ್ರಾಮದಲ್ಲಿನ ರೈತರು ಇದೀಗ ಸ್ವೀಟ್ ಕಾರ್ನ್ (ಸಿಹಿ ಜೋಳ) ಮತ್ತು ಬೇಬಿ ಕಾರ್ನ್ ಬೆಳೆಯುತ್ತಿದ್ದಾರೆ ಮತ್ತು ಅವುಗಳನ್ನು ನೇರವಾಗಿ ದೊಡ್ಡ ಪಂಚತಾರಾ ಹೋಟೇಲ್ ಗಳು, ದೆಹಲಿಯ ಅಜಾದ್ ಪುರ ಮಂಡಿಗೆ ಮತ್ತು ದೊಡ್ಡ ಸಗಟು ಮಾರಾಟ ಜಾಲಕ್ಕೆ ಮಾರಾಟ ಮಾಡುತ್ತಿದ್ದು, ಇದರಿಂದ ಅವರ ಆದಾಯ ಸ್ಥಿರವಾಗಿ ಹೆಚ್ಚಳವಾಗಿದೆ. ಈ ರೈತರು ತಮ್ಮ ಹಣ್ಣು ಮತ್ತು ತರಕಾರಿಗಳನ್ನು ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ವ್ಯಕ್ತಿಗೆ ಬೇಕಾದರೂ ಮಾರಾಟ ಮಾಡಬಹುದು, ಇದು ಪ್ರಗತಿಗೆ ಬುನಾದಿಯಾಗಿದೆ ಮತ್ತು ಅದನ್ನು ದೇಶಾದ್ಯಂತ ಎಲ್ಲ ರೈತರಿಗೆ ತಿಳಿಸಲಾಗುತ್ತಿದೆ ಮತ್ತು ಇದು ಎಲ್ಲ ಬಗೆಯ ಉತ್ಪನ್ನಗಳಿಗೂ ಅನ್ವಯವಾಗಲಿದೆ ಎಂದು ಪ್ರಧಾನಿ ಬಲವಾಗಿ ಪ್ರತಿಪಾದಿಸಿದರು.

ಪ್ರಧಾನಮಂತ್ರಿ ಅವರು, ಮಹಾರಾಷ್ಟ್ರದ ರೈತ ಉತ್ಪನ್ನ ಸಂಸ್ಥೆ, ಶ್ರೀ ಸ್ವಾಮಿ ಸಮರ್ಥ ರೈತ ಉತ್ಪನ್ನ ಕಂಪನಿ ನಿಯಮಿತದ ಉದಾಹರಣೆಯನ್ನು ಹಂಚಿಕೊಳ್ಳುತ್ತಾ, ಎಪಿಎಂಸಿ ವ್ಯಾಪ್ತಿಯಿಂದ ಹಣ್ಣು ಮತ್ತು ತರಕಾರಿಗಳನ್ನು ಹೊರಗಿಟ್ಟಿರುವುದರಿಂದ ರೈತರಿಗೆ ಭಾರಿ ಪ್ರಮಾಣದ ಲಾಭವಾಗುತ್ತಿವೆ ಎಂದು ಹೇಳಿದರು. ಪುಣೆ ಮತ್ತು ಮುಂಬೈಗಳಲ್ಲಿ ರೈತರು ವಾರದ ಮಾರುಕಟ್ಟೆಗಳನ್ನು ತಾವೇ ನಡೆಸುತ್ತಿದ್ದಾರೆ ಮತ್ತು ಮಧ್ಯವರ್ತಿಗಳಿಲ್ಲದೆ ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದರು. ಅಲ್ಲದೆ, ಪ್ರಧಾನಿ ಅವರು ತಮಿಳುನಾಡಿನ ಬಾಳೆಹಣ್ಣು ರೈತರ ಉತ್ಪನ್ನ ಕಂಪನಿಯ ಕುರಿತು ಮಾತನಾಡಿದರು, ಅದು ಲಾಕ್ ಡೌನ್ ವೇಳೆ ನೂರಾರು ಟನ್ ತರಕಾರಿ, ಹಣ್ಣು ಮತ್ತು ಬಾಳೆಹಣ್ಣುಗಳನ್ನು ಸಮೀಪದ ಗ್ರಾಮಗಳಿಂದ ದೊಡ್ಡ ಮಟ್ಟದಲ್ಲಿ ಖರೀದಿಸಿ ಅವುಗಳನ್ನು ಚೆನ್ನೈನಲ್ಲಿ ಕಾಂಬೋ ಕಿಟ್ ರೂಪದಲ್ಲಿ ಮಾರಾಟ ಮಾಡಿದರು ಎಂದರು. ಲಕ್ನೋದ ಇರ್ದಾ ರೈತ ಉತ್ಪನ್ನ ಗುಂಪಿನ ಬಗ್ಗೆ ಉಲ್ಲೇಖಿಸಿದ ಪ್ರಧಾನಿ ಅವರು, ಲಾಕ್ ಡೌನ್ ವೇಳೆ ಬೆಳೆಗಾರರ ತೋಟಗಳಿಂದ ನೇರವಾಗಿ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿದ ಸಂಸ್ಥೆ, ಮಧ್ಯವರ್ತಿಗಳಿಲ್ಲದೆ ನೇರವಾಗಿ ಲಕ್ನೋದ ಮಾರುಕಟ್ಟೆಗೆ ನೇರವಾಗಿ ಮಾರಾಟ ಮಾಡಿತು ಎಂದು ಹೇಳಿದರು.

ಹೊಸ ಹೊಸ ಆವಿಷ್ಕಾರಗಳು ಮತ್ತು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದ ಕೃಷಿ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಅವರು ಗುಜರಾತ್ ನ ರೈತ ಇಸ್ಮಾಯಿಲ್ ಭಾಯ್ ತಮ್ಮ ಕುಟುಂಬದ ನಿರುತ್ಸಾಹದ ನಡುವೆಯೇ ಕೃಷಿಯನ್ನು ಕೈಗೆತ್ತಿಕೊಂಡಿದ್ದರು. ಆತ ಹನಿ ನೀರಾವರಿ ಬಳಸಿ ಆಲೂಗಡ್ಡೆ ಬೆಳೆಯಲಾರಂಭಿಸಿದನು, ಉತ್ತಮ ಗುಣಮಟ್ಟದ ಆಲೂ ಬೆಳೆಯುವುದಕ್ಕೆ ಆತ ಈಗ ಅತ್ಯಂತ ಹೆಸರುವಾಸಿ. ಆತ ಮಧ್ಯವರ್ತಿಯಿಲ್ಲದೆ ನೇರವಾಗಿ ಆಲೂಗಡ್ಡೆಗಳನ್ನು ಬೃಹತ್ ಕಂಪನಿಗೆ ಮಾರಾಟ ಮಾಡಲು ತೊಡಗಿದನು ಮತ್ತು ಭಾರಿ ಲಾಭ ಗಳಿಸಿದರು. ಪ್ರಧಾನಮಂತ್ರಿ ಅವರು ಮಣಿಪುರದ ಶ್ರೀಮತಿ ಬಿಜಯ್ ಶಾಂತಿ ಅವರ ಕತೆಯನ್ನು ಹಂಚಿಕೊಂಡು, ಕಮಲದ ಕಾಡದಿಂದ ದಾರವನ್ನು ಮಾಡುವ ಹೊಸ ನವೋದ್ಯಮವನ್ನು ಆರಂಭಿಸಿದರು. ಆಕೆಯ ಪ್ರಯತ್ನಗಳು ಮತ್ತು ಆವಿಷ್ಕಾರದಿಂದಾಗಿ ಕಮಲ ಬೆಳೆಯಲ್ಲಿ ಮತ್ತು ಜವಳಿ ವಲಯದಲ್ಲಿ ಹೊಸ ಅವಕಾಶಗಳು ಹುಟ್ಟಿಕೊಂಡವು ಎಂದು ಪ್ರಧಾನಿ ಹೇಳಿದರು.

***


(Release ID: 1659655) Visitor Counter : 253