ಪ್ರಧಾನ ಮಂತ್ರಿಯವರ ಕಛೇರಿ
ಗುವಾಹಟಿ ಐಐಟಿಯ ಘಟಿಕೋತ್ಸವ ಉದ್ದೇಶಿಸಿ ಪ್ರಧಾನಿ ಭಾಷಣ
ವಿಪತ್ತು ನಿರ್ವಹಣೆ ಮತ್ತು ಅಪಾಯವನ್ನು ಕಡಿಮೆ ಮಾಡುವ ಕೇಂದ್ರವನ್ನು ಸ್ಥಾಪಿಸುವಂತೆ ಐಐಟಿ ಗುವಾಹಟಿಗೆ ಪ್ರಧಾನಿ ಕರೆ
ರಾಷ್ಟ್ರೀಯ ಶಿಕ್ಷಣ ನೀತಿ 2020, ಭಾರತವನ್ನು ಪ್ರಮುಖ ಜಾಗತಿಕ ಶೈಕ್ಷಣಿಕ ತಾಣವನ್ನಾಗಿ ಮಾಡುತ್ತದೆ: ಪ್ರಧಾನಿ
Posted On:
22 SEP 2020 2:31PM by PIB Bengaluru
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಗುವಾಹಟಿ ಐಐಟಿಯ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದರು.
ज्ञानम् विज्ञान सहितम् यत् ज्ञात्वा मोक्ष्यसे अशुभात्। ಎಂಬ ಮಾತನ್ನು ಉಲ್ಲೇಖಿಸಿದ ಅವರು, ವಿಜ್ಞಾನ ಸೇರಿದಂತೆ ಎಲ್ಲಾ ಜ್ಞಾನವು ಸಮಸ್ಯೆಗಳನ್ನು ಪರಿಹರಿಸುವ ಸಾಧನವಾಗಿವೆ ಎಂದು ಪ್ರಧಾನಿ ಹೇಳಿದರು.
ಐಐಟಿಗಳಂತಹ ಸಂಸ್ಥೆಗಳು ಇಂದು ಸಾಧಿಸುತ್ತಿರುವ ಪ್ರಗತಿಯ ಹೆಮ್ಮೆಯಾಗುತ್ತಿದೆ ಎಂದ ಅವರು, ಹೊಸತನಕ್ಕಾಗಿ ತುಡಿಯುವ ಈ ಶಕ್ತಿಯೇ ನಮ್ಮ ದೇಶವನ್ನು ಸಾವಿರಾರು ವರ್ಷಗಳಿಂದ ಜೀವಂತವಾಗಿರಿಸಿದೆ ಎಂದು ಹೇಳಿದರು.
ಭಾರತದ ಭವಿಷ್ಯವನ್ನು ರೂಪಿಸುವ ಯುವಜನರ ಕನಸುಗಳು ಮತ್ತು ಆಕಾಂಕ್ಷೆಗಳ ಬಗ್ಗೆ ಹೇಳುತ್ತಾ, ಯುವಕರು ಭವಿಷ್ಯಕ್ಕೆ ಸಿದ್ಧರಾಗಿರಬೇಕು ಮತ್ತು ಭವಿಷ್ಯಕ್ಕೆ ಸದೃಢರಾಗಿರಬೇಕು ಎಂದು ಪ್ರಧಾನಿ ಕರೆ ಕೊಟ್ಟರು. ಐಐಟಿ ಗುವಾಹಟಿ ಈಗಾಗಲೇ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಪ್ರಾರಂಭಿಸಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು.
ಈ ಸಾಂಕ್ರಾಮಿಕದ ಸಂದರ್ಭದ ತೊಂದರೆಗಳ ನಡುವೆಯೂ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುವಲ್ಲಿ ಮತ್ತು ಸಂಶೋಧನಾ ಕಾರ್ಯಗಳನ್ನು ಮುಂದುವರೆಸುವಲ್ಲಿ, ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಸಂಸ್ಥೆಯ ಪ್ರಯತ್ನವನ್ನು ಪ್ರಧಾನಿ ಶ್ಲಾಘಿಸಿದರು.
2020ರ ರಾಷ್ಟ್ರೀಯ ಶಿಕ್ಷಣ ನೀತಿಯು, 21 ನೇ ಶತಮಾನದ ಅಗತ್ಯಗಳಿಗಾಗಿ ಮತ್ತು ಭಾರತವನ್ನು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಜಾಗತಿಕ ನಾಯಕನನ್ನಾಗಿ ಮಾಡಲು ಉದ್ದೇಶಿಸಿದೆ ಎಂದು ಪ್ರಧಾನಿ ಹೇಳಿದರು. ಎನ್‌ಇಪಿ 2020 ಅನ್ನು ಬಹು-ಶಿಸ್ತೀಯವನ್ನಾಗಿ ಮಾಡಲಾಗಿದೆ ಮತ್ತು ವಿವಿಧ ಕೋರ್ಸ್‌ಗಳನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡುತ್ತದೆ ಮತ್ತು ಬಹು ಪ್ರವೇಶ ಮತ್ತು ನಿರ್ಗಮನಗಳಿಗೆ ಅವಕಾಶ ನೀಡುತ್ತದೆ ಎಂದು ಶ್ರೀ ಮೋದಿ ಹೇಳಿದರು.
ಸಂಶೋಧನಾ ನಿಧಿಗೆ ಸಂಬಂಧಿಸಿದಂತೆ ಎಲ್ಲಾ ಧನಸಹಾಯ ಸಂಸ್ಥೆಗಳೊಂದಿಗೆ ಉತ್ತಮ ಸಮನ್ವಯಕ್ಕಾಗಿ ಎನ್ಇಪಿಯು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಸ್ಥಾಪನೆಯನ್ನು ಪ್ರಸ್ತಾಪಿಸಿದೆ ಮತ್ತು ವಿಜ್ಞಾನ ಅಥವಾ ಮಾನವಿಕವಾಗಿರಲಿ ಎಲ್ಲಾ ವಿಭಾಗಗಳಿಗೆ ಹಣವನ್ನು ಒದಗಿಸುತ್ತದೆ ಎಂದು ಪ್ರಧಾನಿ ಹೇಳಿದರು.
ವಿದೇಶಿ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಕಡಲಾಚೆಯ ಕ್ಯಾಂಪಸ್‌ಗಳನ್ನು ತೆರೆಯಲು ಎನ್‌ಇಪಿ ಅವಕಾಶ ನೀಡುತ್ತಿದ್ದು, ಇದು ಭಾರತೀಯ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟಕ್ಕೆ ತೆರೆದುಕೊಳ್ಳಲು ಅವಕಾಶ ಸಿಗುತ್ತದೆ ಎಂದು ಪ್ರಧಾನಿ ಹೇಳಿದರು. ಎನ್‌ಇಪಿಯು ಭಾರತವನ್ನು ವಿಶ್ವದ ಪ್ರಮುಖ ಶೈಕ್ಷಣಿಕ ತಾಣವನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದರು.
ಈಶಾನ್ಯ ಪ್ರದೇಶವು ಭಾರತದ ‘ಆಕ್ಟ್ ಈಸ್ಟ್ ಪಾಲಿಸಿ’ ಯ ಕೇಂದ್ರಬಿಂದುವಾಗಿದೆ ಮತ್ತು ಆಗ್ನೇಯ ಏಷ್ಯಾದೊಂದಿಗಿನ ಭಾರತದ ಸಂಬಂಧಗಳಿಗೆ ಹೆಬ್ಬಾಗಿಲಾಗಿದೆ ಎಂದು ಪ್ರಧಾನಿ ಹೇಳಿದರು. ಈ ದೇಶಗಳೊಂದಿಗಿನ ಸಂಬಂಧಗಳ ಮುಖ್ಯ ಆಧಾರವೆಂದರೆ ಸಂಸ್ಕೃತಿ, ವಾಣಿಜ್ಯ, ಸಂಪರ್ಕ ಮತ್ತು ಸಾಮರ್ಥ್ಯ. ಇವುಗಳೊಂದಿಗೆ ಶಿಕ್ಷಣವು ಮತ್ತೊಂದು ಹೊಸ ಮಾಧ್ಯಮವಾಗಲಿದೆ ಮತ್ತು ಐಐಟಿ ಗುವಾಹಟಿ ಅದರ ಪ್ರಮುಖ ಕೇಂದ್ರವಾಗಬಹುದು ಎಂದು ಅವರು ಹೇಳಿದರು. ಇದು ಈಶಾನ್ಯಕ್ಕೆ ಹೊಸ ಗುರುತನ್ನು ನೀಡುತ್ತದೆ ಮತ್ತು ಹೊಸ ಅವಕಾಶಗಳು ಸಹ ಇಲ್ಲಿ ಹೊರಹೊಮ್ಮುತ್ತವೆ ಎಂದರು.
ಈ ಪ್ರದೇಶದ ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶೇಷವಾಗಿ ರೈಲ್ವೆ, ಹೆದ್ದಾರಿಗಳು, ವಾಯುಮಾರ್ಗಗಳು ಮತ್ತು ಜಲಮಾರ್ಗಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಈಶಾನ್ಯದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಪ್ರಧಾನಿ ಹೇಳಿದರು.
ಘಟಿಕೋತ್ಸವದಲ್ಲಿ 300 ಯುವಜನರಿಗೆ ಪಿಎಚ್‌ಡಿ ನೀಡಲಾಗುತ್ತಿರುವ ಬಗ್ಗೆ ಪ್ರಧಾನಿ ಸಂತೋಷ ವ್ಯಕ್ತಪಡಿಸಿದರು. ದೇಶದ ಸುಧಾರಣೆಗಾಗಿ ತಮ್ಮ ಸಂಶೋಧನೆಯನ್ನು ಮುಂದುವರೆಸುವಂತೆ ಅವರಿಗೆ ವಿನಂತಿಸಿದರು. ವಿದ್ಯಾರ್ಥಿಗಳು ತಮ್ಮ ಸಂಶೋಧನೆಯನ್ನು ಈ ಪ್ರದೇಶದ ಅಭಿವೃದ್ಧಿಯ ಸಾಧ್ಯತೆಗಳೊಂದಿಗೆ ಹೇಗೆ ಜೋಡಿಸಬಹುದು ಎಂಬುದರ ಕುರಿತು ಯೋಚಿಸುವಂತೆ ಅವರು ಕರೆ ನೀಡಿದರು.
ವಿಪತ್ತು ನಿರ್ವಹಣೆ ಮತ್ತು ಅಪಾಯವನ್ನು ಕಡಿಮೆ ಮಾಡುವ ಕೇಂದ್ರವನ್ನು ಸ್ಥಾಪಿಸುವಂತೆ ಪ್ರಧಾನಿ ಐಐಟಿ ಗುವಾಹಟಿಯನ್ನು ಒತ್ತಾಯಿಸಿದರು. ಇದರಿಂದಾಗಿ ಈ ಪ್ರದೇಶದ ವಿಪತ್ತುಗಳನ್ನು ಎದುರಿಸುವಲ್ಲಿ ಪರಿಣತಿಯನ್ನು ಒದಗಿಸಬಹುದು ಎಂದು ಅವರು ಹೇಳಿದರು.
***
(Release ID: 1657767)
Visitor Counter : 236
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam