ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಕೋವಿಡ್-19: ಕೇಂದ್ರ ಸರ್ಕಾರದಿಂದ ಕಾರ್ಮಿಕ ಕಲ್ಯಾಣ ಮತ್ತು ಉದ್ಯೋಗ ಸೃಷ್ಟಿಗೆ ಅಭೂತಪೂರ್ವ ಕ್ರಮಗಳು: ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಶ್ರೀ ಸಂತೋಷ್ ಗಂಗ್ವಾರ್


ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ನಿಧಿಯಿಂದ ಸುಮಾರು 2 ಕೋಟಿ ಕಾರ್ಮಿಕರಿಗೆ ಸುಮಾರು 5000 ಕೋಟಿ ರೂ. ಬಿಡುಗಡೆ

ಕಾರ್ಮಿಕ ಸಚಿವಾಲಯದ 20 ನಿಯಂತ್ರಣ ಕೊಠಡಿಗಳ ಮೂಲಕ, ಸುಮಾರು 2 ಲಕ್ಷ ಕಾರ್ಮಿಕರಿಗೆ ಸುಮಾರು 300 ಕೋಟಿ ರೂ. ಬಾಕಿ ವೇತನ ಬಿಡುಗಡೆ

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಅಸಂಘಟಿತ ಕಾರ್ಮಿಕರು, ಬಡವರು ಮತ್ತು ನಿರ್ಗತಿಕರು ಸೇರಿದಂತೆ 80 ಕೋಟಿ ಜನರಿಗೆ 1.7 ಲಕ್ಷ ಕೋಟಿ ವೆಚ್ಚದಲ್ಲಿ 5 ಕೆ.ಜಿ. ಗೋಧಿ / ಅಕ್ಕಿ ಮತ್ತು 1 ಕೆ.ಜಿ. ದ್ವಿದಳ ಧಾನ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ.

ಮನ್ರೆಗಾ ಅಡಿಯಲ್ಲಿ ದಿನಗೂಲಿ 182 ರೂ.ನಿಂದ 202 ರೂ. ಗೆ ಹೆಚ್ಚಳ

ಸುಮಾರು 50 ಲಕ್ಷ ಬೀದಿ ಬದಿ ವ್ಯಾಪಾರಿಗಳು ತಮ್ಮ ವ್ಯವಹಾರಗಳನ್ನು ಪುನರಾರಂಭಿಸಲು ಒಂದು ವರ್ಷದವರೆಗೆ 10,000 ರೂ.ವರೆಗಿನ ಮೇಲಾಧಾರವಿಲ್ಲದ ಮೂಲ ಬಂಡವಾಳ ಸಾಲಕ್ಕೆ ಅನುಕೂಲವಾಗುವಂತೆ ಸ್ವನಿಧಿ ಯೋಜನೆ ಪ್ರಾರಂಭಿಸಲಾಗಿದೆ

ವಲಸೆ ಕಾರ್ಮಿಕರ ಕಲ್ಯಾಣ ಕ್ರಮಗಳು ಮತ್ತು ಉದ್ಯೋಗವನ್ನು ನಿರ್ವಹಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲು ಮತ್ತು ವಿವಿಧ ಸರ್ಕಾರಿ ಯೋಜನೆಗಳನ್ನು ಬಳಸಿಕೊಳ್ಳಲು ಅನುಕೂಲವಾಗುವಂತೆ ಅವರ ಡೇಟಾವನ್ನು ಸಂಗ್ರಹಿಸಲು ಜುಲೈನಲ್ಲಿ ರಾಜ್ಯಗಳಿಗೆ ಸಲಹಾ ಮಾರ್ಗಸೂಚಿ ಪ್ರಕಟಿಸಲಾಗಿದೆ

Posted On: 16 SEP 2020 9:39AM by PIB Bengaluru

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಭಾರತದಾದ್ಯಂತ ವಲಸೆ ಕಾರ್ಮಿಕರೂ ಸೇರಿದಂತೆ ಕಾರ್ಮಿಕ ಕಲ್ಯಾಣ ಮತ್ತು ಉದ್ಯೋಗಕ್ಕಾಗಿ ಕೇಂದ್ರ ಸರ್ಕಾರವು ಹಲವಾರು ಅಭೂತಪೂರ್ವ ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಶ್ರೀ ಸಂತೋಷ್ ಗಂಗ್ವಾರ್ ಹೇಳಿದ್ದಾರೆ.

  • ಕಾರ್ಮಿಕ ವಿಷಯವು ಸಮವರ್ತಿ ಪಟ್ಟಿಯಲ್ಲಿದೆ. ಆದ್ದರಿಂದ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಷಯಗಳ ಬಗ್ಗೆ ಕಾನೂನು ರಚಿಸಬಹುದು. ಇದಲ್ಲದೆ, ವಲಸೆ ಕಾರ್ಮಿಕ ಕಾಯ್ದೆ ಸೇರಿದಂತೆ ಬಹುತೇಕ ಕೇಂದ್ರ ಕಾರ್ಮಿಕ ಕಾಯಿದೆಗಳನ್ನು ರಾಜ್ಯ ಸರ್ಕಾರವು ಪ್ರತ್ಯೇಕವಾಗಿ ಜಾರಿಗೆ ತರುತ್ತಿದೆ.
  • ವಲಸೆ ಕಾರ್ಮಿಕ ಕಾಯ್ದೆಯ ನಿಬಂಧನೆಗಳ ಪ್ರಕಾರ, ವಲಸೆ ಕಾರ್ಮಿಕರ ನೋಂದಣಿಯನ್ನು ಆಯಾ ರಾಜ್ಯ ಸರ್ಕಾರಗಳು ಮಾಡಬೇಕು ಮತ್ತು ಅಂಕಿಅಂಶವನ್ನು ರಾಜ್ಯ ಸರ್ಕಾರಗಳು ನಿರ್ವಹಿಸಬೇಕಾಗುತ್ತದೆ. ಆದಾಗ್ಯೂ, ಕೋವಿಡ್-19 ಸನ್ನಿವೇಶದಲ್ಲಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಲಾಕ್ ಡೌನ್ ಸಮಯದಲ್ಲಿ ತಮ್ಮ ತವರು ರಾಜ್ಯಗಳಿಗೆ ಹೋಗುವ ವಲಸೆ ಕಾರ್ಮಿಕರ ಅಂಕಿಅಂಶವನ್ನು ಸಂಗ್ರಹಿಸಲು ಉಪಕ್ರಮಗಳನ್ನು ಕೈಗೊಂಡಿತು. ವಿವಿಧ ರಾಜ್ಯ ಸರ್ಕಾರಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ, ಕೋವಿಡ್-19 ಅವಧಿಯಲ್ಲಿ ಸುಮಾರು ಒಂದು ಕೋಟಿ ವಲಸೆ ಕಾರ್ಮಿಕರು ತಮ್ಮ ಮೂಲ ರಾಜ್ಯಗಳಿಗೆ ಮರಳಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ವಿವಿಧ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಸಚಿವರು ಹೇಳಿದರು.

  • ಲಾಕ್ ಡೌನ್ ಘೋಷಣೆಯಾದ ಕೂಡಲೇ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ ಎಲ್ಲಾ ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ನಿಧಿಯಿಂದ ನಿರ್ಮಾಣ ಕಾರ್ಮಿಕರಿಗೆ ಹಣಕಾಸಿನ ನೆರವು ನೀಡುವಂತೆ ಸೂಚನೆಗಳನ್ನು ಕಳುಹಿಸಲಾಯಿತು. ವಲಸೆ ಕಾರ್ಮಿಕರಲ್ಲಿ ಹೆಚ್ಚಿನವರು ನಿರ್ಮಾಣ ಕಾರ್ಮಿಕರಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಇಲ್ಲಿಯವರೆಗೆ ಸುಮಾರು ಎರಡು ಕೋಟಿ ವಲಸೆ ಕಾರ್ಮಿಕರಿಗೆ ವಿವಿಧ ರಾಜ್ಯಗಳು ನಿರ್ವಹಿಸುತ್ತಿರುವ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸೆಸ್ ನಿಧಿಯಿಂದ ನೇರವಾಗಿ 5000.00 ಕೋಟಿ ರೂ. ನೀಡಲಾಗಿದೆ.
  • ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಕುಂದುಕೊರತೆಗಳನ್ನು ಬಗೆಹರಿಸಲು, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ದೇಶಾದ್ಯಂತ 20 ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿತ್ತು. ಲಾಕ್ ಡೌನ್ ಸಮಯದಲ್ಲಿ, ಕಾರ್ಮಿಕರ 15000 ಕ್ಕೂ ಹೆಚ್ಚು ದೂರುಗಳನ್ನು ನಿಯಂತ್ರಣ ಕೊಠಡಿಗಳ ಮೂಲಕ ಬಗೆಹರಿಸಲಾಗಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮಧ್ಯಸ್ಥಿಕೆಯಿಂದಾಗಿ ಎರಡು ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ಅವರ ಸುಮಾರು 295 ಕೋಟಿ ರೂ ಬಾಕಿ ವೇತನವನ್ನು ಕೊಡಿಸಲಾಗಿದೆ.
  • ಲಾಕ್ಡೌನ್ ನಂತರ ದೇಶದ ಬಡ, ನಿರ್ಗತಿಕ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಸಹಾಯ ಮಾಡಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ 1.7 ಲಕ್ಷ ಕೋಟಿ ರೂ. ಪ್ಯಾಕೇಜ್ ಅಡಿಯಲ್ಲಿ 80 ಕೋಟಿ ಜನರಿಗೆ 5 ಕೆ.ಜಿ. ಗೋಧಿ / ಅಕ್ಕಿ ಮತ್ತು 1 ಕೆ.ಜಿ. ದ್ವಿದಳ ಧಾನ್ಯಗಳನ್ನು ಒದಗಿಸಲಾಗುತ್ತಿದೆ. ಎಲ್ಲಾ ಫಲಾನುಭವಿಗಳಿಗೆ 2020 ನವೆಂಬರ್ ವರೆಗೆ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುವುದು. ಸಾಂಕ್ರಾಮಿಕದ ಸಂದರ್ಭದಲ್ಲಿ ಯಾರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳುವುದು ಸರ್ಕಾರದ ಗುರಿಯಾಗಿದೆ.
  • ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯೋಜನೆ ಅಡಿಯಲ್ಲಿ ದಿನಗೂಲಿಯನ್ನು 182 ರಿಂದ 202 ರೂ.ಗೆ ಹೆಚ್ಚಿಸಲಾಗಿದೆ.
  • ಕೃಷಿ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಿಗೆ ಮೂಲಸೌಕರ್ಯ ಲಾಜಿಸ್ಟಿಕ್ಸ್, ಸಾಮರ್ಥ್ಯ ವೃದ್ಧಿ, ಮತ್ತು ಆಡಳಿತ ಸುಧಾರಣೆಗಳನ್ನು ಬಲಪಡಿಸುವ ಕ್ರಮಗಳನ್ನು ಘೋಷಿಸಲಾಗಿದೆ.
  • ಬೀದಿ ಬದಿ ವ್ಯಾಪಾರಿಗಳು ತಮ್ಮ ವ್ಯವಹಾರಗಳನ್ನು ಪುನರಾರಂಭಿಸಲು ಭಾರತ ಸರ್ಕಾರವು ಒಂದು ವರ್ಷದವರೆಗೆ 10,000 ರೂ. ವರೆಗಿನ ಮೇಲಾಧಾರ ಮುಕ್ತ ಮೂಲ ಬಂಡವಾಳ ಸಾಲಕ್ಕೆ ಅನುಕೂಲವಾಗುವಂತೆ ಪಿಎಂ ಸ್ವನಿಧಿ ಯೋಜನೆಯನ್ನು ಪ್ರಾರಂಭಿಸಲಾಗಿದೆ.
  • ತಮ್ಮ ತವರು ರಾಜ್ಯಗಳಿಗೆ ಹಿಂದಿರುಗಿದ ವಲಸೆ ಕಾರ್ಮಿಕರ ಉದ್ಯೋಗಕ್ಕೆ ಅನುಕೂಲವಾಗುವಂತೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನವನ್ನು 116 ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ. ಅಭಿಯಾನದಡಿಯಲ್ಲಿ, ವಲಸೆ ಕಾರ್ಮಿಕರ ಪಾಲ್ಗೊಳ್ಳುವಿಕೆಯೊಂದಿಗೆ ಗ್ರಾಮೀಣ ಮೂಲಸೌಕರ್ಯವನ್ನು ನಿರ್ಮಿಸಲಾಗುವುದು ಮತ್ತು ಉದ್ದೇಶಕ್ಕಾಗಿ ಸುಮಾರು 50,000 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗುವುದು. ಇದೇ ರೀತಿ, ವಲಸೆ ಕಾರ್ಮಿಕರ ಉದ್ಯೋಗಕ್ಕೆ ಅನುಕೂಲವಾಗುವಂತೆ ಸಾರಿಗೆ ಸಚಿವಾಲಯವು ರಸ್ತೆ, ಹೆದ್ದಾರಿ ಇತ್ಯಾದಿಗಳನ್ನು ನಿರ್ಮಿಸಲು ವಲಸೆ ಕಾರ್ಮಿಕರನ್ನು ಒಳಗೊಂಡ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ.
  • ವಲಸೆ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು, ಎಂಎಸ್ಎಂಇ ವಲಯವನ್ನು ಬಲಪಡಿಸಲು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸಲು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನಿರ್ದಿಷ್ಟವಾಗಿ ಆತ್ಮನಿರ್ಭರ ಭಾರತ ಅಡಿಯಲ್ಲಿ ಇಪ್ಪತ್ತು ಲಕ್ಷ ಕೋಟಿ ರೂ.ಗಳ ಹಣಕಾಸು ಪ್ಯಾಕೇಜ್ ಅನ್ನು ಪ್ರಾರಂಭಿಸಲಾಗಿದೆ.
  • ಕಾರ್ಮಿಕರಿಗೆ ತಮ್ಮ ಇಪಿಎಫ್ ಖಾತೆಯ ಮೂಲಕ ಕನಿಷ್ಠ ಹಣಕಾಸಿನ ನೆರವು ನೀಡುವ ಸಲುವಾಗಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಎಲ್ಲಾ ಇಪಿಎಫ್ ಸದಸ್ಯರಿಗೆ ತಮ್ಮ ಇಪಿಎಫ್ ಖಾತೆ ಒಟ್ಟು ಭವಿಷ್ಯ ನಿಧಿಯ ಶೇ.75 ರಷ್ಟನ್ನು ಹಿಂಪಡೆಯಲು ಅನುಮತಿ ನೀಡಿದೆ. ಇಲ್ಲಿಯವರೆಗೆ ಸುಮಾರು 39,000  ಕೋಟಿ ರೂ.ಗಳನ್ನು ಇಪಿಎಫ್ ಸದಸ್ಯರು ಹಿಂಪಡೆದಿದ್ದಾರೆ.
  • ಕೆಲಸಕ್ಕಾಗಿ ಮತ್ತೆ ನಿರ್ದಿಷ್ಟ ರಾಜ್ಯಗಳಿಗೆ ಮರಳುತ್ತಿರುವ ವಲಸೆ ಕಾರ್ಮಿಕರಿಗೆ ಅನುಕೂಲವಾಗುವಂತೆ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 2020 ಜುಲೈ 27 ರಂದು ಎಲ್ಲಾ ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹಾ ಮಾರ್ಗಸೂಚಿಗಳನ್ನು ಹೊರಡಿಸಿದೆ. , ಮಾರ್ಗಸೂಚಿಗಳ ಅಡಿಯಲ್ಲಿ, ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಉದ್ಯೋಗಕ್ಕಾಗಿ ಹಿಂತಿರುಗುತ್ತಿರುವ ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ವಿವಿಧ ಕ್ರಮಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಮಟ್ಟದ ನೋಡಲ್ ಅಧಿಕಾರಿಯನ್ನು ನಾಮನಿರ್ದೇಶನ ಮಾಡಲು ನಿರ್ದೇಶಿಸಲಾಗಿದೆ. ಇದಲ್ಲದೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರೂಪಿಸಿದ ಶಿಷ್ಟಾಚಾರದ ಪ್ರಕಾರ ವಲಸೆ ಕಾರ್ಮಿಕರನ್ನು ಪರೀಕ್ಷಿಸಲು ಮೂಲ ಮತ್ತು ಕೆಲಸ ನೀಡುವ ರಾಜ್ಯವು ಸಹಕರಿಸುತ್ತವೆ. ವಲಸೆ ಕಾರ್ಮಿಕರನ್ನು ಸುಲಭವಾಗಿ ಗುರುತಿಸಲು ಮತ್ತು ಅವರ ಕಲ್ಯಾಣ ಕ್ರಮಗಳಿಗಾಗಿ ಸರಿಯಾದ ದತ್ತಾಂಶವನ್ನು ಸಿದ್ಧಪಡಿಸುವಂತೆ ರಾಜ್ಯಗಳಿಗೆ ನಿರ್ದೇಶಿಸಲಾಗಿದೆ. ಮಾಹಿತಿಯು ಅವರನ್ನು ಭಾರತ ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗೆ ದಾಖಲಿಸಲು ನೆರವಾಗುತ್ತದೆ.

***


(Release ID: 1654965) Visitor Counter : 447