ಆಯುಷ್

ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪಥಿ ವೈದ್ಯ ಶಿಕ್ಷಣಕ್ಕೆ ದೊರೆಯಲಿದೆ ಕ್ರಾಂತಿಕಾರಿ ಪುನಃಶ್ಚೇತನ

Posted On: 15 SEP 2020 12:15PM by PIB Bengaluru

ಆಯುಷ್ ಸಚಿವಾಲಯಕ್ಕೆ ಸಂಬಂಧಿಸಿದ ಎರಡು ಪ್ರಮುಖ ವಿಧೇಯಕಗಳು ಸಂಸತ್ತಿನಲ್ಲಿ ಅಂಗೀಕಾರಗೊಳ್ಳುವುದರೊಂದಿಗೆ, ದೇಶವೀಗ ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪಥಿಯಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತರಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಂತಾಗಿದೆ.

ಭಾರತೀಯ ವೈದ್ಯ ಪದ್ಧತಿಗೆ ರಾಷ್ಟ್ರೀಯ ಆಯೋಗಕ್ಕಾಗಿರುವ ವಿಧೇಯಕ ,2020 ಮತ್ತು ಹೋಮಿಯೋಪಥಿಗಾಗಿ ರಾಷ್ಟ್ರೀಯ ಆಯೋಗ ವಿಧೇಯಕ 2020 ಗಳು ಲೋಕಸಭೆಯಲ್ಲಿ 2020 ಸೆಪ್ಟೆಂಬರ್ 14 ರಂದು ಅಂಗೀಕಾರಗೊಂಡಿವೆ. ಅವಳಿ ವಿಧೇಯಕಗಳು ಹಾಲಿ ಇರುವ ಭಾರತೀಯ ವೈದ್ಯಕೀಯ ಕೇಂದ್ರೀಯ ಮಂಡಳಿ ಕಾಯ್ದೆ, 1970 ಮತ್ತು ಹೋಮಿಯೋಪಥಿ ಕೇಂದ್ರೀಯ ಮಂಡಳಿ ಕಾಯ್ದೆ, 1973 ನ್ನು ಸ್ಥಳಾಂತರಿಸಲಿವೆ.

ರಾಜ್ಯ ಸಭೆಯು ಎರಡೂ ವಿಧೇಯಕಗಳನ್ನು ಈಗಾಗಲೇ 2020 ಮಾರ್ಚ್ 18 ರಂದು ಅಂಗೀಕರಿಸಿದೆ. ವಿಧೇಯಕಗಳಿಗೆ ಸಂಸತ್ತಿನ ಅಂಗೀಕಾರ ದೊರೆತಿರುವುದು ಆಯುಷ್ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲು. ಮೇಲ್ಕಾಣಿಸಿದ ವಿಧೇಯಕಗಳ ಜಾರಿಯು ಈಗಿರುವ ಭಾರತೀಯ ವೈದ್ಯಕೀಯ ಕೇಂದ್ರೀಯ ಮಂಡಳಿ ( ಸಿ.ಸಿ..ಎಂ.) ಮತ್ತು ಹೋಮಿಯೋಪಥಿಗಾಗಿರುವ ಕೇಂದ್ರೀಯ ಮಂಡಳಿಯನ್ನು ಪುನಶ್ಚೇತನಗೊಳಿಸಲಿದೆ.

ಭಾರತೀಯ ವೈದ್ಯ ಪದ್ದತಿಯ ರಾಷ್ಟ್ರೀಯ ಆಯೋಗ ಮತ್ತು ಹೋಮಿಯೋಪಥಿಗಾಗಿರುವ ರಾಷ್ಟ್ರೀಯ ಆಯೋಗಗಳು ಅನುಕ್ರಮವಾಗಿ ಭಾರತೀಯ ಪದ್ದತಿಯ ವೈದ್ಯ ಶಿಕ್ಷಣದಲ್ಲಿ ಮತ್ತು ಹೋಮಿಯೋಪಥಿ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವ ಉದ್ದೇಶವನ್ನು ಹೊಂದಿವೆ.

ಭಾರತೀಯ ವೈದ್ಯ ಪದ್ಧತಿಗಳಿಗಾಗಿ ರಾಷ್ಟ್ರೀಯ ಆಯೋಗ ವಿಧೇಯಕ ,2019 ಮತ್ತು ಹೋಮಿಯೋಪಥಿಗಾಗಿ ರಾಷ್ಟ್ರೀಯ ಆಯೋಗ ವಿಧೇಯಕ , 2019 ನ್ನು ರಾಜ್ಯ ಸಭೆಯಲ್ಲಿ 2019 ಜನವರಿ 7 ರಂದು ಮಂಡಿಸಲಾಗಿತ್ತು. ಉಭಯ ವಿಧೇಯಕಗಳೂ ಬಳಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಗೆ ಪರಿಶೀಲನೆಗೆ ರವಾನಿಸಲ್ಪಟ್ಟವು.

ಸಮಿತಿಯು ವಿಧೇಯಕಗಳನ್ನು ಪರಿಶೀಲಿಸಿತ್ತು ಮತ್ತು ಕೆಲವು ನಿರ್ದಿಷ್ಟ ತಿದ್ದುಪಡಿಗಳನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆ, 2019 ಕ್ಕೆ ಅನುಗುಣವಾಗುವಂತೆ ಸಲಹೆ ಮಾಡಿತ್ತು. ಅದರನ್ವಯ ಸಚಿವಾಲಯವು ಪ್ರಮುಖ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಂಡು ಮೇಲೆ ಹೇಳಲಾದ ವಿಧೇಯಕಗಳಿಗೆ ಅಧಿಕೃತ ತಿದ್ದುಪಡಿಗಳನ್ನು ಅಳವಡಿಸಿಕೊಂಡಿತು, ಬಳಿಕ ಅವುಗಳು 2020 ಮಾರ್ಚ್ 18 ರಂದು ರಾಜ್ಯ ಸಭೆಯಲ್ಲಿಭಾರತೀಯ ವೈದ್ಯ ಪದ್ಧತಿಗಾಗಿ ರಾಷ್ಟ್ರೀಯ ಆಯೋಗ ವಿಧೇಯಕ 2020, ಮತ್ತು ಹೋಮಿಯೋಪಥಿಗಾಗಿ ರಾಷ್ಟ್ರೀಯ ಆಯೋಗ ವಿಧೇಯಕ ,2020 ಎಂಬುದಾಗಿ ಅಂಗೀಕಾರಗೊಂಡವು.

***



(Release ID: 1654537) Visitor Counter : 635