ಪ್ರಧಾನ ಮಂತ್ರಿಯವರ ಕಛೇರಿ

ಮಧ್ಯಪ್ರದೇಶದಲ್ಲಿ ಸೆಪ್ಟೆಂಬರ್ 12ರಂದು ಪಿಎಂಎವೈ-ಜಿ ಅಡಿಯಲ್ಲಿ ನಿರ್ಮಿಸಿರುವ 1.75 ಲಕ್ಷ ಮನೆಗಳ ಲೋಕಾರ್ಪಣೆ ಮಾಡಲಿರುವ ಪ್ರಧಾನಮಂತ್ರಿ; ‘ಗೃಹಪ್ರವೇಶ’ದಲ್ಲಿ ಭಾಗಿ

Posted On: 10 SEP 2020 5:38PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧ್ಯಪ್ರದೇಶ ರಾಜ್ಯದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ-ಗ್ರಾಮೀಣ(ಪಿಎಂಎವೈ-ಜಿ) ಅಡಿ ನಿರ್ಮಿಸಿರುವ 1.75 ಲಕ್ಷ ಮನೆಗಳ ಲೋಕಾರ್ಪಣೆ ಮತ್ತು ‘ಗೃಹಪ್ರವೇಶ’ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 12ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲಿದ್ದಾರೆ. ಈ ಎಲ್ಲ ಮನೆಗಳನ್ನು ಪ್ರಸಕ್ತ ಸವಾಲಿನ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ನಿರ್ಮಿಸಿ ಪೂರ್ಣಗೊಳಿಸಲಾಗಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಡಿಡಿ ನ್ಯೂಸ್ ಕೂಡ ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಲಿದೆ.
ಹಿನ್ನೆಲೆ
ಪ್ರಧಾನಮಂತ್ರಿ ಅವರು “2022ರೊಳಗೆ ಸರ್ವರಿಗೂ ಸೂರು” ಕಲ್ಪಿಸಲು ಕರೆ ನೀಡಿ, ಅದಕ್ಕಾಗಿ 2016ರ ನವೆಂಬರ್ 20ರಂದು ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಪಿಎಂಎವೈ-ಜಿಗೆ ಚಾಲನೆ ನೀಡಿದ್ದರು. ಈವರೆಗೆ ದೇಶಾದ್ಯಂತ ಈ ಯೋಜನೆಯಡಿ 1.14 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಮಧ್ಯಪ್ರದೇಶ ರಾಜ್ಯದಲ್ಲಿ 17 ಲಕ್ಷ ಬಡ ಕುಟುಂಬಗಳು ಈವರೆಗೆ ಈ ಯೋಜನೆಯ ಲಾಭ ಪಡೆದಿದ್ದಾರೆ. ಇವರೆಲ್ಲಾ ಬಡಜನರಾಗಿದ್ದು, ಒಂದೊ ಅವರಿಗೆ ವಸತಿ ಇರಲಿಲ್ಲ ಅಥವಾ ಅವರು ಶಿಥಿಲಾವಸ್ಥೆಯ ತಾತ್ಕಾಲಿಕವಾಗಿ ಸ್ಥಳಾಂತರ ಮಾಡುವಂತಹ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು.
ಪಿಎಂಎವೈ-ಜಿ ಅಡಿಯಲ್ಲಿ ಪ್ರತಿಯೊಬ್ಬ ಫಲಾನುಭವಿಗೆ ಶೇ.100ರಷ್ಟು ಅನುದಾನ 1.20 ಲಕ್ಷ ರೂಪಾಯಿ ನೀಡಲಾಗುವುದು. ಇದರಲ್ಲಿ ಕೇಂದ್ರ ಮತ್ತು ರಾಜ್ಯಗಳ ಪಾಲು 60:40. ಪಿಎಂಎವೈ-ಜಿ ಅಡಿಯಲ್ಲಿ ನಿರ್ಮಿಸಲಾದ ಎಲ್ಲ ಮನೆಗಳಿಗೂ ನಾಲ್ಕು ಕಂತುಗಳಲ್ಲಿ ಆರ್ಥಿಕ ನೆರವು ನೀಡಲಾಗುವುದು. ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನಾನಾ ಹಂತದ ನಿರ್ಮಾಣ ಕಾರ್ಯದ ಜಿಯೋಟ್ಯಾಗ್ ಮಾಡಿರುವ ಛಾಯಾಚಿತ್ರಗಳನ್ನು ಆಧರಿಸಿ ಬಿಡುಗಡೆ ಮಾಡಲಾಗುವುದು. ಈ ಯೋಜನೆ ಅಡಿ 2022ರ ವೇಳೆಗೆ 2.95 ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ.
ಪ್ರತಿ ಮನೆಗೆ ನೀಡುವ ಸಹಾಯವಲ್ಲದೆ, ಹೆಚ್ಚುವರಿಯಾಗಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನ್ರೇಗಾ) ಅಡಿಯಲ್ಲಿ 90/95 ಮಾನವ ದಿನಗಳಿಗೆ ಕೌಶಲ್ಯ ಹೊಂದಿಲ್ಲದ ಕಾರ್ಮಿಕರಿಗೆ ನೀಡುವ ಕೂಲಿ ಹಣ ಹಾಗೂ ಸ್ವಚ್ಛ ಭಾರತ್ ಗ್ರಾಮೀಣ ಅಡಿ ಶೌಚಾಲಯ ನಿರ್ಮಾಣಕ್ಕೆ 12,000 ರೂ. ನೆರವು ನೀಡಲಾಗುವುದು ಅಥವಾ ಯಾವುದೇ ನಿಗದಿತ ಮೂಲದಿಂದ ಸಹಾಯ ನೀಡಲಾಗುವುದು. ಈ ಯೋಜನೆಯಡಿ ಭಾರತ ಸರ್ಕಾರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಇತರೆ ಯೋಜನೆಗಳು ಸಂಯೋಜಿಸಲು ಅವಕಾಶವಿದ್ದು, ಅದರಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಎಲ್ ಪಿ ಜಿ ಸಂಪರ್ಕ, ವಿದ್ಯುತ್ ಸಂಪರ್ಕ, ಜಲಜೀವನ್ ಮಿಷನ್ ಅಡಿ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗುವುದು. ಮಧ್ಯಪ್ರದೇಶ ಸರ್ಕಾರ ತನ್ನ ‘ಸಮೃದ್ಧ ಪರ್ಯಾವಾಸ್ ಅಭಿಯಾನ’ದಡಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ, ಪಡಿತರ ಕಾರ್ಡ್, ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್  ಸೇರಿ 17 ಯೋಜನೆಗಳ ಮೂಲಕ ಹೆಚ್ಚುವರಿ ಪ್ರಯೋಜನಗಳನ್ನು ಫಲಾನುಭವಿಗಳಿಗೆ ಒದಗಿಸಿಕೊಡುತ್ತಿದೆ.

***(Release ID: 1653172) Visitor Counter : 192