ಪ್ರಧಾನ ಮಂತ್ರಿಯವರ ಕಛೇರಿ

ಅಜ್ಞಾತ ಸ್ವಾತಂತ್ರ್ಯ ಹೋರಾಟಗಾರರ ಕಥೆಗಳನ್ನು ಮುನ್ನೆಲೆಗೆ ತರುವಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪ್ರಧಾನಿ ಸಲಹೆ

Posted On: 30 AUG 2020 3:04PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಇತ್ತೀಚಿನ ಮನ್ ಕಿ ಬಾತ್ ನಲ್ಲಿ, ಅಜ್ಞಾತ ಸ್ವಾತಂತ್ರ್ಯ ಹೋರಾಟಗಾರರ ಕಥೆಗಳನ್ನು ಮುನ್ನೆಲೆಗೆ ತರುವಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸೂಚಿಸಿದರು.

ಯಾರಾದರೂ ತಮ್ಮ ಯಶಸ್ಸಿನ ಬಗ್ಗೆ ಯೋಚಿಸುವಾಗ, ಯಾವಾಗಲೂ ತಮ್ಮ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತಾರೆ ಎಂದು ಪ್ರಧಾನಿ ಹೇಳಿದರು. ಕೋವಿಡ್ ಬಿಕ್ಕಟ್ಟು ಶಿಕ್ಷಕರಿಗೆ ಒಂದು ಸವಾಲನ್ನು ಒಡ್ಡಿದೆ, ಅವರು ಹೊಸ ಸಾಧನಗಳು ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಅದನ್ನು ಅವಕಾಶವನ್ನಾಗಿ ಪರಿವರ್ತಿಸಿದ್ದಾರೆ, ಹಾಗೂ ಅದನ್ನು ಅವರು ವಿದ್ಯಾರ್ಥಿಗಳಿಗೆ ತಲುಪಿಸಿದ್ದಾರೆ ಎಂದರು. ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಯೋಜನಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

2022 ರಲ್ಲಿ ದೇಶವು ತನ್ನ 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದೆ ಎಂದ ಪ್ರಧಾನಿ, ವಿದ್ಯಾರ್ಥಿಗಳು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಹೇಳಿದರು. ನಮ್ಮ ವಿದ್ಯಾರ್ಥಿಗಳಿಗೆ ಅವರ ಸುತ್ತಮುತ್ತಲಿನ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ತಿಳಿಸಿದಾಗ ಮಾತ್ರ ವಿದ್ಯಾರ್ಥಿಗಳ ವ್ಯಕ್ತಿತ್ವದ ಮೇಲೆ ಸ್ವಾತಂತ್ರ್ಯ ಹೋರಾಟದ ಅನುರಣನವನ್ನು ನಾವು ನೋಡುತ್ತೇವೆ ಎಂದು ಅವರು ಹೇಳಿದರು.

ಅವರು ವಾಸಿಸುವ ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಯಾವುದೇ ಘಟನೆಗಳು ನಡೆದಿದೆಯೇ ಎಂಬುದು ವಿದ್ಯಾರ್ಥಿಗಳಿಗೆ ಸಂಶೋಧನೆಯ ವಿಷಯವಾಗಬಹುದು  ಎಂದು ಪ್ರಧಾನಿ ಸಲಹೆ ನೀಡಿದರು. ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಹತ್ತಿರದ ಸ್ಥಳಕ್ಕೆ ವಿದ್ಯಾರ್ಥಿಗಳ ಭೇಟಿಯನ್ನು ಯೋಜಿಸಬಹುದು. ನಮ್ಮ ಸ್ವಾತಂತ್ರ್ಯದ 75 ನೇ ವರ್ಷವನ್ನು ಗುರುತಿಸಲು ಕೆಲವು ಶಾಲೆಗಳ ವಿದ್ಯಾರ್ಥಿಗಳು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಮೇಲೆ 75 ಕವನಗಳು ಮತ್ತು ರೂಪಕಗಳನ್ನು ಬರೆಯಲು ನಿರ್ಧರಿಸಬಹುದು ಎಂದು ಅವರು ಹೇಳಿದರು.

ಪ್ರಯತ್ನಗಳು ದೇಶಕ್ಕಾಗಿ ಬದುಕಿದ ಮತ್ತು ಮರಣ ಹೊಂದಿದ ಆದರೆ ಬೆಳಕಿಗೆ ಬಂದಿಲ್ಲದ ಲಕ್ಷಾಂತರ ವೀರರ ಕಥೆಗಳನ್ನು ಮುನ್ನೆಲೆಗೆ ತರುತ್ತವೆ ಎಂದು ಪ್ರಧಾನಿ ಹೇಳಿದರು. ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಿದ್ದು, ಕುರಿತು ತಯಾರಿ ಪ್ರಾರಂಭಿಸುವಂತೆ ಮತ್ತು ಅದಕ್ಕಾಗಿ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಶಿಕ್ಷಕರಿಗೆ ಪ್ರಧಾನಮಂತ್ರಿ ಕರೆ ನೀಡಿದರು.

***



(Release ID: 1649873) Visitor Counter : 215