ಪ್ರಧಾನ ಮಂತ್ರಿಯವರ ಕಛೇರಿ
ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ ಆಡಳಿತ ಕಟ್ಟಡ ಮತ್ತು ಕಾಲೇಜು ಉದ್ಘಾಟಿಸಿದ ಪ್ರಧಾನಿ
ಕೃಷಿ ಸಂಸ್ಥೆಗಳು ಹೊಸ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಿವೆ, ಕೃಷಿಯನ್ನು ಸಂಶೋಧನೆ ಮತ್ತು ಮುಂದುವರಿದ ತಂತ್ರಜ್ಞಾನದೊಂದಿಗೆ ಸಂಪರ್ಕಿಸಲು ನೆರವಾಗಲಿವೆ: ಪ್ರಧಾನಿ
ಆತ್ಮನಿರ್ಭರ ಅಭಿಯಾನವನ್ನು ಯಶಸ್ವಿಗೊಳಿಸಲು ಜನತೆಗೆ ಪ್ರಧಾನಿ ಮನವಿ
ಬುಂದೇಲ್ ಖಂಡ್ ವಲಯದ 10 ಸಾವಿರ ಕೋಟಿ ರೂ.ಗೂ ಅಧಿಕ ಮೌಲ್ಯದ 500 ಜಲ ಸಂಬಂಧಿ ಯೋಜನೆಗಳಿಗೆ ಅನುಮೋದನೆ; 3000 ಕೋಟಿ ರೂ. ಮೌಲ್ಯದ ಕಾಮಗಾರಿ ಈಗಾಗಲೇ ಆರಂಭ
Posted On:
29 AUG 2020 3:13PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉತ್ತರ ಪ್ರದೇಶದ ಝಾನ್ಸಿಯ ರಾಣಿ ಲಕ್ಷ್ಮೀ ಬಾಯಿ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ ಆಡಳಿತ ಕಟ್ಟಡ ಮತ್ತು ಕಾಲೇಜು ಉದ್ಘಾಟಿಸಿದರು. ಅವರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದ ಪ್ರಧಾನಿ, ಈ ವಿಶ್ವವಿದ್ಯಾಲಯದಿಂದ ಪದವಿ ಪಡೆದ ನಂತರ ವಿದ್ಯಾರ್ಥಿಗಳು ದೇಶದ ಕೃಷಿ ವಲಯವನ್ನು ಸಬಲೀಕರಿಸಲು ಸಕ್ರಿಯವಾಗಿ ಕೊಡುಗೆ ನೀಡಬೇಕು ಎಂದರು. ಹೊಸ ಕಟ್ಟಡದಿಂದ ಒದಗಿಸಲಾಗುವ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಶ್ರಮಪಡಲು ಉತ್ತೇಜನ ಮತ್ತು ಪ್ರೋತ್ಸಾಹ ನೀಡುತ್ತದೆ ಎಂದರು.
“ನನ್ನ ಝಾನ್ಸಿಯನ್ನು ಬಿಟ್ಟುಕೊಡುವುದಿಲ್ಲ’ ಎಂಬ ರಾಣಿ ಲಕ್ಷ್ಮೀಬಾಯಿ ಅವರ ಘೋಷಣೆಯನ್ನು ಉಲ್ಲೇಖಿಸಿದ ಪ್ರಧಾನಿಯವರು, ಝಾನ್ಸಿ ಮತ್ತು ಬುಂದೇಲ್ ಖಂಡದ ಜನತೆಗೆ ಆತ್ಮ ನಿರ್ಭರ ಭಾರತ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಕೊಡುಗೆ ನೀಡುವಲ್ಲಿ ಕೃಷಿಯ ಮಹತ್ವದ ಪಾತ್ರವಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಕೃಷಿಯಲ್ಲಿ ಸ್ವಾವಲಂಬನೆ ಎಂದರೆ ರೈತರನ್ನು ಉತ್ಪಾದಕ ಮತ್ತು ಉದ್ಯಮಿಗಳನ್ನಾಗಿ ಮಾಡುವ ಗುರಿಯಾಗಿದೆ ಎಂದು ಅವರು ಹೇಳಿದರು. ಈ ಸ್ಫೂರ್ತಿಗೆ ಅನುಗುಣವಾಗಿ ಹಲವಾರು ಐತಿಹಾಸಿಕ ಕೃಷಿ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು. ಇತರ ಕೈಗಾರಿಕೆಗಳಂತೆಯೇ, ಈಗ ರೈತರು ಕೂಡ ತಮ್ಮ ಉತ್ಪನ್ನಗಳನ್ನು ದೇಶದಲ್ಲಿ ಎಲ್ಲಿ ಬೇಕಾದರೂ, ಎಲ್ಲ್ಲಿ ಅವರಿಗೆ ಉತ್ತಮ ಬೆಲೆ ದೊರಕುತ್ತದೋ ಅಲ್ಲಿ ಮಾರಾಟ ಮಾಡಬಹುದು. ಕ್ಲಸ್ಟರ್ ಆಧಾರಿತ ವಿಧಾನದಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸಲು ಮತ್ತು ಕೈಗಾರಿಕೆಗಳನ್ನು ಉತ್ತೇಜಿಸಲು 1 ಲಕ್ಷ ಕೋಟಿ ರೂ.ಗಳ ವಿಶೇಷ ಮೀಸಲು ನಿಧಿಯನ್ನು ಸ್ಥಾಪಿಸಲಾಗಿದೆ ಎಂದರು. ಆಧುನಿಕ ತಂತ್ರಜ್ಞಾನದೊಂದಿಗೆ ಕೃಷಿಯನ್ನು ಸಂಪರ್ಕಿಸಲು ಸ್ಥಿರ ಪ್ರಯತ್ನಗಳು ಮುಂದುವರೆದಿದೆ ಎಂದ ಪ್ರಧಾನಿ, ಸಂಶೋಧನಾ ಸಂಸ್ಥೆಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ ಎಂದು ಹೇಳಿದರು. ಆರು ವರ್ಷಗಳ ಹಿಂದೆ ಕೇವಲ ಒಂದೇ ಒಂದಿದ್ದ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯಗಳು ಪ್ರಸ್ತುತ ಮೂರು ಆಗಿದೆ ಎಂದರು. ಇದರ ಜೊತೆಗೆ ಮೂರು ರಾಷ್ಟ್ರೀಯ ಸಂಸ್ಥೆಗಳು ಅಂದರೆ ಐಎಆರ್.ಐ ಜಾರ್ಖಂಡ್, ಐಎಆರ್.ಐ ಅಸ್ಸಾಂ ಮತ್ತು ಬಿಹಾರದ ಮೋತಿಹಾರಿಯ ಮಹಾತ್ಮಾ ಗಾಂಧಿ ಸಮಗ್ರ ಕೃಷಿ ಸಂಸ್ಥೆಗಳನ್ನು ಕೂಡ ಸ್ಥಾಪಿಸಲಾಗಿದೆ. ಈ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳನ್ನು ನೀಡುವುದಷ್ಟೇ ಅಲ್ಲದೆ, ಸ್ಥಳೀಯ ರೈತರಿಗೆ ತಂತ್ರಜ್ಞಾನದ ಪ್ರಯೋಜನ ಒದಗಿಸುವುದರೊಂದಿಗೆ ಅವರ ಸಾಮರ್ಥ್ಯ ವರ್ಧನೆಗೂ ನೆರವು ನೀಡುತ್ತದೆ ಎಂದರು.
ಕೃಷಿ ಸಂಬಂಧಿತ ಸವಾಲುಗಳನ್ನು ಎದುರಿಸಲು ಆಧುನಿಕ ತಂತ್ರಜ್ಞಾನದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಇತ್ತೀಚಿನ ಮಿಡತೆ ದಾಳಿಯ ಉದಾಹರಣೆ ನೀಡಿದರು. ಸರ್ಕಾರ ಮಿಡತೆ ದಾಳಿ ಹಬ್ಬದಂತೆ ಯುದ್ಧೋಪಾದಿಯಲ್ಲಿ ಹೋರಾಟ ನಡೆಸಿ, ನಷ್ಟದ ಪ್ರಮಾಣ ತಗ್ಗಿಸಿತು ಎಂದರು. ವಿವಿಧ ನಗರಗಳಲ್ಲಿ 12ಕ್ಕೂ ಹೆಚ್ಚು ನಿಯಂತ್ರಣ ಕೊಠಡಿ ತೆರೆಯಲಾಯಿತು, ರೈತರಿಗೆ ಮುಂಚಿತವಾಗಿಯೇ ಜಾಗೃತಿ ಮೂಡಿಸಲಾಗಿತ್ತು, ಮಿಡತೆ ಸಾಯಿಸಲು ರಾಸಾಯನಿಕ ಸಿಂಪರಣೆಗೆ 12ಕ್ಕೂ ಹೆಚ್ಚು ಆಧುನಿಕ ಯಂತ್ರ ಬಳಸಲಾಯಿತು, ಡ್ರೋನ್ ಬಳಸಲಾಯಿತು ರೈತರಿಗೆ ಒದಗಿಸಲಾಯಿತು ಎಂದರು.
ಕಳೆದ ಆರು ವರ್ಷಗಳಲ್ಲಿ, ಹಳ್ಳಿಗಳಲ್ಲಿ ತಳಮಟ್ಟದಲ್ಲಿ ಸಂಶೋಧನೆ ಮತ್ತು ಕೃಷಿಯ ನಡುವೆ ಸಂಪರ್ಕ ಸ್ಥಾಪಿಸಲು ಮತ್ತು ರೈತರಿಗೆ ವೈಜ್ಞಾನಿಕ ಸಲಹೆಗಳನ್ನು ನೀಡಲು ಸರ್ಕಾರ ಪ್ರಯತ್ನಿಸಿದೆ ಎಂದು ಪ್ರಧಾನಿ ಹೇಳಿದರು. ಕ್ಯಾಂಪಸ್ ನಿಂದ ರೈತರ ಭೂಮಿಗೆ ಕೃಷಿಜ್ಞಾನ ಮತ್ತು ಪರಿಣತಿಯ ಹರಿವನ್ನು ಸುಗಮಗೊಳಿಸಲು ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ವಿಶ್ವವಿದ್ಯಾಲಯಗಳ ಸಹಕಾರವನ್ನು ಅವರು ಕೋರಿದರು. ಕೃಷಿಗೆ ಸಂಬಂಧಿಸಿದ ಜ್ಞಾನ ಮತ್ತು ಅದರ ಪ್ರಾಯೋಗಿಕ ಅನ್ವಯವನ್ನು ಶಾಲಾ ಮಟ್ಟಕ್ಕೆ ಕೊಂಡೊಯ್ಯುವ ಅಗತ್ಯವನ್ನು ಪ್ರತಿಪಾದಿಸಿದ ಪ್ರಧಾನಿ, ಕೃಷಿ ವಿಷಯವನ್ನು ಗ್ರಾಮಗಳಲ್ಲಿ ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಪರಿಚಯಿಸುವ ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ಎರಡು ಪ್ರಯೋಜನಗಳಿವೆ – ಮೊದಲನೆಯದು, ಇದು ವಿದ್ಯಾರ್ಥಿಗಳಲ್ಲಿ ಕೃಷಿ ಸಂಬಂಧಿತ ತಿಳಿವಳಿಕೆ ಮೂಡಿಸುತ್ತದೆ, ಎರಡನೆಯದು, ಇದು ವಿದ್ಯಾರ್ಥಿಗಳಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಕೃಷಿಯ ಬಗ್ಗೆ, ಆಧುನಿಕ ಕೃಷಿ ತಂತ್ರಜ್ಞಾನಗಳು ಹಾಗೂ ಮಾರುಕಟ್ಟೆಯ ಬಗ್ಗೆ ಮಾಹಿತಿ ನೀಡುತ್ತದೆ. ಇದು ದೇಶದಲ್ಲಿ ಕೃಷಿ ಉದ್ಯಮಶೀಲತೆಯನ್ನೂ ಉತ್ತೇಜಿಸುತ್ತದೆ ಎಂದರು.
ಕೊರೊನಾ ವೈರಾಣು ಸಾಂಕ್ರಾಮಿಕದ ಸಂದರ್ಭದಲ್ಲಿ ಜನರ ಸಂಕಷ್ಟ ತಗ್ಗಿಸಲು ಕೈಗೊಂಡ ಕ್ರಮಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಉತ್ತರ ಪ್ರದೇಶದ ಕೋಟ್ಯಂತರ ಬಡವರಿಗೆ ಮತ್ತು ಗ್ರಾಮೀಣ ಕುಟುಂಬಗಳಿಗೆ ಉಚಿತ ಪಡಿತರ ವಿತರಿಸಲಾಯಿತು. ಬುಂದೇಲ್ ಖಂಡದಲ್ಲಿ ಈ ಅವಧಿಯಲ್ಲಿ ಸುಮಾರು 10 ಲಕ್ಷ ಬಡ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಿಸಲಾಗಿದೆ ಎಂದರು. ಗರೀಬ್ ಕಲ್ಯಾಣ ರೋಜ್ಗಾರ್ ಅಭಿಯಾನದ ಅಡಿಯಲ್ಲಿ 700 ಕೋಟಿ ರೂ.ಗೂ ಹೆಚ್ಚು ಹಣವನ್ನು ಉತ್ತರಪ್ರದೇಶದಲ್ಲಿ ವಿನಿಯೋಗಿಸಲಾಗಿದೆ, ಇದರಡಿಯಲ್ಲಿ ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ಒದಗಿಸಲಾಗಿದೆ ಎಂದರು.
ಈ ಹಿಂದೆ ನೀಡಿದ್ದ ಪ್ರತಿಮನೆಗೂ ಕುಡಿಯುವ ನೀರು ಪೂರೈಸುವ ಭರವಸೆ ಈಡೇರಿಸಲು ತ್ವರಿತ ಗತಿಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಈ ಪ್ರದೇಶದಲ್ಲಿ ಸುಮಾರು 10 ಸಾವಿರ ಕೋಟಿ ರೂ. ಮೌಲ್ಯದ 500 ಜಲ ಸಂಬಂಧಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಪೈಕಿ 3000 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಕಳೆದ ಎರಡು ತಿಂಗಳುಗಳಲ್ಲಿ ಆರಂಭಿಸಲಾಗಿದೆ. ಇದು ಬುಂದೇಲ್ ಖಂಡದ ಲಕ್ಷಾಂತರ ಕೋಟ್ಯಂತರ ಕುಟುಂಬಗಳಿಗೆ ನೇರವಾಗಿ ಪ್ರಯೋಜನ ಒದಗಿಸಲಿದೆ ಎಂದರು. ಅಟಲ್ ಭೂ ಜಲ ಯೋಜನೆಯನ್ನು ಅಂತರ್ಜಲ ಮಟ್ಟ ಹೆಚ್ಚಿಸಲು ಬುಂದೇಲ್ ಖಂಡದಲ್ಲಿ ಆರಂಭಿಸಲಾಗಿದೆ ಎಂದೂ ತಿಳಿಸಿದರು. 700 ಕೋಟಿ ರೂ. ಗೂ ಹೆಚ್ಚು ಮೌಲ್ಯವನ್ನೊಳಗೊಂಡ ಯೋಜನೆಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಝಾನ್ಸಿ, ಮೊಹೋಬಾ, ಬಂಡಾ, ಹಮೀರ್ ಪುರ, ಚಿತ್ರಕೂಟ ಮತ್ತು ಲಲಿತ್ ಪುರ ಮತ್ತು ಪಶ್ಚಿಮ ಉತ್ತರ ಪ್ರದೇಶದ ನೂರಾರು ಗ್ರಾಮಗಳ ಅಂತರ್ಜಲ ಮಟ್ಟ ಹೆಚ್ಚಿಸಿದೆ ಎಂದರು.
ಬುಂದೇಲ್ ಖಂಡ್ ಬೆಟ್ವಾ, ಕೆನ್ ಮತ್ತು ಯಮುನಾ ನದಿಗಳಿಂದ ಆವೃತವಾಗಿದ್ದರೂ, ಇಡೀ ಪ್ರದೇಶ ನದಿಗಳ ಸಂಪೂರ್ಣ ಪ್ರಯೋಜನವನ್ನು ಪಡೆಯುತ್ತಿಲ್ಲ ಎಂದು ಪ್ರಧಾನಿ ಹೇಳಿದರು. ಈ ಪರಿಸ್ಥಿತಿಯನ್ನು ಬದಲಾಯಿಸಲು ಸರ್ಕಾರ ಸತತ ಪ್ರಯತ್ನಗಳನ್ನು ಮಾಡುತ್ತಿದೆ ಎಂದರು. ಕೆನ್ – ಬೆಟ್ವಾ ನದಿ ಜೋಡಣೆ ಯೋಜನೆ ಈ ಪ್ರದೇಶದ ಹಣೆ ಬರಹವನ್ನೇ ಬದಲಾಯಿಸಲಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದೊಂದಿಗೆ ಸಹಕರಿಸುತ್ತಿದೆ ಮತ್ತು ಶ್ರಮಿಸುತ್ತಿದೆ ಎಂದರು. ಒಮ್ಮೆ ಬುಂದೇಲ್ ಖಂಡ್ ಸಾಕಷ್ಟು ನೀರು ಪಡೆದ ಬಳಿಕ, ಇಲ್ಲಿನ ಜೀವನ ಸಂಪೂರ್ಣ ಬದಲಾಗಲಿದೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು. ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ಹೆದ್ದಾರಿ, ರಕ್ಷಣಾ ಕಾರಿಡಾರ್ನಂಥ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಯೋಜನೆ ಇಲ್ಲಿ ಸಾವಿರಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದರು. ಜೈ ಜವಾನ್, ಜೈ ಕಿಸಾನ್ ಮತ್ತು ಜೈ ವಿಜ್ಞಾನ ಮಂತ್ರ ಬುಂದೇಲ್ ಖಂಡದ ನಾಲ್ಕೂ ದಿಕ್ಕಿನಲ್ಲಿ ಅಣುರಣಿಸುತ್ತಿದೆ ಎಂದರು. ಬುಂದೇಲಖಂಡದ ಪುರಾತನ ಪರಿಚಯವನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.
***
(Release ID: 1649586)
Visitor Counter : 196
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam