ಪ್ರಧಾನ ಮಂತ್ರಿಯವರ ಕಛೇರಿ

ಉನ್ನತ ಶಿಕ್ಷಣ ಸಮಾವೇಶ ಉದ್ದೇಶಿಸಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಪಠ್ಯ

Posted On: 07 AUG 2020 1:07PM by PIB Bengaluru

ನಮಸ್ಕಾರ!  ನಾನು ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾಗಿರುವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರಿಗೆ, ಶ್ರೀ ಸಂಜಯ್ ಧೋತ್ರೆ ಅವರಿಗೆ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅತ್ಯಂತ ಮಹತ್ವಪೂರ್ಣ ಪಾತ್ರ ನಿರ್ವಹಿಸಿದ ದೇಶದ ಖ್ಯಾತ ವಿಜ್ಞಾನಿ ಡಾ. ಕಸ್ತೂರಿ ರಂಗನ್ ಹಾಗೂ ಅವರ ತಂಡದವರಿಗೆ, ಈ ಸಮಾವೇಶದಲ್ಲಿ ಭಾಗವಹಿಸುತ್ತಿರುವ ಕುಲಪತಿಗಳು, ಇತರ ಎಲ್ಲ ಶಿಕ್ಷಣ ತಜ್ಞರು ಹಾಗೂ ಎಲ್ಲರಿಗೂ ಶುಭ ಕೋರುತ್ತೇನೆ.

ರಾಷ್ಟ್ರೀಯ ಶಿಕ್ಷಣ ನೀತಿಯ ನಿಟ್ಟಿನಲ್ಲಿ ಇಂದಿನ ಈ ಕಾರ್ಯಕ್ರಮ ಬಹಳ ಮಹತ್ವಪೂರ್ಣವಾಗಿದೆ. ಇಂದಿನ ಸಮಾವೇಶದಿಂದ ಭಾರತದ ಶೈಕ್ಷಣಿಕ ಜಗತ್ತಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ವಿಭಿನ್ನ ಆಯಾಮಗಳ ಬಗ್ಗೆ ವಿಸ್ತ್ರತವಾದ ಮಾಹಿತಿ ದೊರೆಯುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಹೆಚ್ಚು ಸ್ಪಷ್ಟ ಮಾಹಿತಿ ಪಡೆದುಕೊಂಡಷ್ಟೂ ಸುಲಭವಾಗಿ ಜಾರಿಗೊಳಿಸುವುದು ಸಾಧ್ಯವಾಗುತ್ತದೆ.

ಸ್ನೇಹಿತರೇ, 3 ರಿಂದ 4 ವರ್ಷಗಳ ಸಾಕಷ್ಟು ಆಳವಾದ ವಿಚಾರ-ವಿಮರ್ಶೆಗಳ ಬಳಿಕ, ಲಕ್ಷಾಂತರ ಸಲಹೆಗಳ ಬಗ್ಗೆ ದೀರ್ಘವಾದ ಪರಾಮರ್ಶೆ ನಡೆಸಿದ ನಂತರವೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಮೋದಿಸಲಾಗಿದೆ. ಇಂದು ದೇಶಾದ್ಯಂತ ಇದರ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಬೇರೆ ಬೇರೆ ಕ್ಷೇತ್ರಗಳ ಜನರು, ವಿಭಿನ್ನ ವಿಚಾರಧಾರೆಗಳನ್ನು ಹೊಂದಿರುವವರು ತಮ್ಮ ನಿಲುವುಗಳನ್ನು ನೀಡುತ್ತಿದ್ದಾರೆ. ಶಿಕ್ಷಣ ನೀತಿಯನ್ನು ವಿಮರ್ಶೆ ಮಾಡುತ್ತಿದ್ದಾರೆ. ಇದು ಆರೋಗ್ಯಕರವಾದ ಚರ್ಚೆಯಾಗಿದೆ. ಇಂತಹ ಚರ್ಚೆ ಎಷ್ಟು ಹೆಚ್ಚಾಗುತ್ತದೆಯೋ ದೇಶದ ಶಿಕ್ಷಣ ವ್ಯವಸ್ಥೆಗೆ ಅಷ್ಟೇ ಲಾಭವಾಗುತ್ತದೆ. ಶಿಕ್ಷಣ ನೀತಿ ಬಂದ ಬಳಿಕ ದೇಶದ ಯಾವುದೇ ವಲಯ ಹಾಗೂ ವರ್ಗದಿಂದ ಇದೊಂದು  ಪೂರ್ವಾಗ್ರಹ ಪೀಡಿತ ನೀತಿ ಎನ್ನುವ ನಿಟ್ಟಿನಲ್ಲಿ ಮಾತು ಕೇಳಿಬರಲಿಲ್ಲ ಅಥವಾ ಯಾರೊಬ್ಬರ ಪರವಾಗಿದೆ ಎನ್ನುವ ಮಾತೂ ಕೇಳಿಬರಲಿಲ್ಲ ಎನ್ನುವುದು ನಿಜಕ್ಕೂ ಸಂತಸದ ವಿಚಾರ. ಎಷ್ಟೋ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಶೈಕ್ಷಣಿಕ ವ್ಯವಸ್ಥೆಯಲ್ಲಿ ಜನರು ಯಾವ ರೀತಿಯ ಬದಲಾವಣೆ ಬಯಸುತ್ತಿದ್ದರೋ ಅದು ಅವರಿಗೆ ಈಗ ನೋಡಲು ಸಿಕ್ಕಿದೆ ಎನ್ನುವುದನ್ನೂ ಇದು ತೋರಿಸುತ್ತದೆ.

ಇಷ್ಟು ದೊಡ್ಡ ಪರಿವರ್ತನೆಯನ್ನು ನಿರ್ಧರಿಸಲಾಗಿದೆ, ಆದರೆ, ಇದನ್ನು ಜಾರಿಗೊಳಿಸುವುದು ಹೇಗೆ ಎನ್ನುವ ಕುರಿತು ಕೆಲವು ಜನರಲ್ಲಿ ಪ್ರಶ್ನೆ ಎದ್ದಿರುವುದು ಸಹಜವೇ ಆಗಿದೆ. ಈಗ ಎಲ್ಲರ ದೃಷ್ಟಿ ಇದರ ಅನುಷ್ಠಾನದ ಮೇಲೆ ಕೇಂದ್ರೀಕೃತವಾಗಿದೆ. ವ್ಯವಸ್ಥೆಗಳನ್ನು ನಿರ್ಮಿಸಲು ಹಲವಾರು ಸುಧಾರಣೆಗಳು ಅಗತ್ಯವಾಗಿದೆ. ಅವುಗಳನ್ನು ನಾವೆಲ್ಲರೂ ಸೇರಿಯೇ ಮಾಡಬೇಕಿದೆ ಹಾಗೂ ಮಾಡಲೇಬೇಕಾಗಿದೆ. ತಾವೆಲ್ಲರೂ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ ಮಾಡುವ ನಿಟ್ಟಿನಲ್ಲಿ ನೇರವಾಗಿ ಭಾಗಿಯಾಗುತ್ತೀರಿ,  ಹೀಗಾಗಿ, ತಮ್ಮ ಪಾತ್ರ ಇಲ್ಲಿ ಬಹಳ ಮುಖ್ಯವಾಗಿದೆ. ಇನ್ನು, ರಾಜಕೀಯ ಇಚ್ಛಾಶಕ್ತಿಯ ಮಾತು ಬಂದರೆ, ನಾನು ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ನಿಮ್ಮೊಂದಿಗೆ ನಿಲ್ಲುತ್ತೇನೆ.

ಬಾಂಧವರೇ, ಪ್ರತಿಯೊಂದು ದೇಶವೂ ತನ್ನ ಶಿಕ್ಷಣ ವ್ಯವಸ್ಥೆಯನ್ನು ತನ್ನ ರಾಷ್ಟ್ರೀಯ ಮೌಲ್ಯಗಳೊಂದಿಗೆ ಮತ್ತು ರಾಷ್ಟ್ರೀಯ ಗುರಿಗಳಿಗೆ ಅನುಸಾರವಾಗಿ ಸುಧಾರಣೆ ಮಾಡಿಕೊಳ್ಳುತ್ತ ಸಾಗುತ್ತದೆ. ದೇಶದ ಶಿಕ್ಷಣ ವ್ಯವಸ್ಥೆ ಕೇವಲ ವರ್ತಮಾನಕ್ಕಷ್ಟೇ ಅಲ್ಲ ಮುಂದಿನ ಪೀಳಿಗೆಯ ಭವಿಷ್ಯವನ್ನೂ ಖಾತ್ರಿಪಡಿಸಬೇಕು ಎಂಬುದು ಇದರ ಕಲ್ಪನೆಯಾಗಿದೆ. ಭಾರತದ ರಾಷ್ಟ್ರೀಯ ಶಿಕ್ಷಣ ನೀತಿಯ ಹಿಂದಿನ ಕಲ್ಪನೆಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 21ನೇ ಶತಮಾನದ ಭಾರತಕ್ಕೆ ನವ ಭಾರತಕ್ಕೆ ಅಡಿಪಾಯ ಹಾಕಲಿದೆ. 21ನೇ ಶತಮಾನದ ಭಾರತದಲ್ಲಿ ನಮ್ಮ ಯುವ ಪೀಳಿಗೆಗೆ ಅಗತ್ಯವಾದ ಕೌಶಲ್ಯ ಮತ್ತು ಶಿಕ್ಷಣಕ್ಕೆ ಇದು ಒತ್ತು ನೀಡಿದೆ.

ಭಾರತವನ್ನು ಇನ್ನಷ್ಟು ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಲು, ಅಭಿವೃದ್ಧಿಯ ಹೊಸ ಎತ್ತರಕ್ಕೆ ತಲುಪಿಸಲು,  ದೇಶದ ನಾಗರಿಕರನ್ನು ಸಶಕ್ತರನ್ನಾಗಿಸಲು, ಅವರಿಗೆ ವಿಪುಲ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶಗಳ ನಿಟ್ಟಿನಲ್ಲಿ ಈ ಶಿಕ್ಷಣ ನೀತಿಯಲ್ಲಿ ಹೆಚ್ಚು ಗಮನ ಹರಿಸಲಾಗಿದೆ. ಭಾರತದ ಯಾವುದೇ ವಿದ್ಯಾರ್ಥಿ ಪೂರ್ವ ಪ್ರಾಥಮಿಕವೇ ಇರಲಿ ಅಥವಾ ಕಾಲೇಜಿನಲ್ಲಿ ಓದುತ್ತಿರಲಿ, ವೈಜ್ಞಾನಿಕ ವಿಧಾನದಲ್ಲಿ ಓದಿದಾಗ, ವೇಗವಾಗಿ ಬದಲಾಗುತ್ತಿರುವ ಸಮಯ ಮತ್ತು ಬದಲಾಗುತ್ತಿರುವ ಅವಶ್ಯಕತೆಗಳ ಭಾಗವಾಗಿ ಅಧ್ಯಯನ ಮಾಡಿದಾಗ  ಆತ ರಾಷ್ಟ್ರ ನಿರ್ಮಾಣದಲ್ಲಿ ರಚನಾತ್ಮಕವಾದ ಪಾತ್ರ ನಿಭಾಯಿಸಲು ಸಾಧ್ಯವಾಗುತ್ತದೆ.

ಸ್ನೇಹಿತರೇ, ಕಳೆದ ಅನೇಕ ವರ್ಷಗಳಿಂದ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚಿನ ಬದಲಾವಣೆ ಆಗಿರಲಿಲ್ಲ. ಇದರ ಪರಿಣಾಮದಿಂದಾಗಿ, ನಮ್ಮ ಸಮಾಜದಲ್ಲಿ ಕುತೂಹಲ ಮತ್ತು ಕಲ್ಪನೆಗಳ ಮಹತ್ವಕ್ಕೆ ಉತ್ತೇಜನ ದೊರೆಯುವ ಬದಲು ಇಲಿಗಳ ಓಟದಂತೆ ತಲೆತಗ್ಗಿಸಿ ಅನುಸರಿಸುವ ಮನಃಸ್ಥಿತಿಗೆ ಉತ್ತೇಜನ ದೊರೆಯಲು ಆರಂಭವಾಗಿತ್ತು. ಒಮ್ಮೆ ಡಾಕ್ಟರ್ ಆಗಲು ಸ್ಪರ್ಧೆ ಏರ್ಪಟ್ಟಿತು, ಇನ್ನೊಮ್ಮೆ ಇಂಜಿನಿಯರ್ ಆಗಲು, ಮತ್ತೊಮ್ಮೆ ವಕೀಲರಾಗಲು ಸ್ಪರ್ಧೆ ನಡೆಯಿತು. ಆದರೆ, ಆಸಕ್ತಿ, ಸಾಮರ್ಥ್ಯ ಹಾಗೂ ಬೇಡಿಕೆಗಳ ಕ್ರೋಡೀಕರಣ ಮಾಡದೆ ಕೇವಲ ಸ್ಪರ್ಧೆ ಮಾಡುವ ಪ್ರವೃತ್ತಿಯಿಂದ ಶಿಕ್ಷಣವನ್ನು ಹೊರಗೆ ತರುವ ಅಗತ್ಯವಿತ್ತು. ನಮ್ಮ ಶಿಕ್ಷಣದಲ್ಲಿಯೇ ಪ್ರೇರಣೆ ಇಲ್ಲದೆ ಹೋದರೆ, ಮೌಲ್ಯವಿಲ್ಲದಿದ್ದರೆ, ಶಿಕ್ಷಣದ ಉದ್ದೇಶವೇ ಇಲ್ಲವಾದರೆ, ನಮ್ಮ ವಿದ್ಯಾರ್ಥಿಗಳು, ಯುವಜನರಲ್ಲಿ ವಿಮರ್ಶಾತ್ಮಕ ಚಿಂತನೆ ಮತ್ತು ಅನ್ವೇಷಣಾ ಮನೋಭಾವಗಳು ಹೇಗೆ ಬೆಳೆಯುತ್ತದೆ?

ಸ್ನೇಹಿತರೇ, ಇಂದು ಗುರು ರವೀಂದ್ರನಾಥ ಠ್ಯಾಗೋರ್ ಅವರ ಪುಣ್ಯತಿಥಿಯನ್ನೂ ಆಚರಿಸಲಾಗುತ್ತಿದೆ. “ಉತ್ತಮ ಶಿಕ್ಷಣವೆಂದರೆ ನಮಗೆ ಕೇವಲ ಮಾಹಿತಿಯನ್ನಷ್ಟೇ ನೀಡುವುದಲ್ಲ, ಬದಲಿಗೆ ನಮ್ಮ ಜೀವನದ ಸಮಗ್ರ ಅಸ್ತಿತ್ವವನ್ನು ಸಾಮರಸ್ಯಗೊಳಿಸುವುದು’ ಎಂದು ಅವರು ಹೇಳಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿಯ ಗಮನ ನಿಶ್ಚಿತವಾಗಿಯೂ ಇದೇ ಮಾರ್ಗದಲ್ಲಿದೆ. ಹೀಗಾಗಿ, ಈಗ ಸಣ್ಣದಾಗಿ ಯೋಚಿಸುವ ಬದಲು ಸಮಗ್ರ ದೃಷ್ಟಿಕೋನದ ಅಗತ್ಯವಿದೆ.

ಸ್ನೇಹಿತರೇ, ಇಂದು ರಾಷ್ಟ್ರೀಯ ಶಿಕ್ಷಣ ನೀತಿ ಮೂರ್ತರೂಪ ತಳೆದಿದೆ. ಇದನ್ನು ರೂಪಿಸಲು ಆರಂಭದ ದಿನಗಳಲ್ಲಿ ಎದುರಾದ ಸವಾಲುಗಳ ಬಗ್ಗೆಯೂ ಈ ಸಮಯದಲ್ಲಿ ತಮ್ಮೊಂದಿಗೆ ಚರ್ಚಿಸಲು ಬಯಸುತ್ತೇನೆ. ಆಗ ಮುಖ್ಯವಾಗಿ ಎರಡು ಬೃಹತ್ ಸವಾಲುಗಳಿದ್ದವು, ಅದೆಂದರೆ, ನಮ್ಮ ಶೈಕ್ಷಣಿಕ ವ್ಯವಸ್ಥೆ ನಮ್ಮ ಯುವಕರಿಗೆ ಕ್ರಿಯಾಶೀಲ, ಕೌತುಕಭರಿತ ಹಾಗೂ ಬದ್ಧತೆಯುಳ್ಳ ಬದುಕಿಗೆ ಮುನ್ನುಡಿ ಬರೆಯುವತ್ತ ಪ್ರೇರಣೆ ನೀಡುತ್ತಿದೆಯೇ ಎನ್ನುವುದು. ನೀವು ಈ ಕ್ಷೇತ್ರದಲ್ಲಿಯೇ ಬಹಳ ವರ್ಷಗಳಿಂದ ಇರುವುದರಿಂದ ತಮಗೇ ಇದಕ್ಕೆ ಉತ್ತಮ ಉತ್ತರ ತಿಳಿದಿರುತ್ತದೆ. 

ಸ್ನೇಹಿತರೇ, ನಮ್ಮ ಎದುರಿಗಿದ್ದ ಎರಡನೇ ಸವಾಲೆಂದರೆ, ನಮ್ಮ ಶಿಕ್ಷಣ ವ್ಯವಸ್ಥೆ ನಮ್ಮ ಯುವಕರನ್ನು ಸ್ವಾವಲಂಬಿಯನ್ನಾಗಿ ಮಾಡುತ್ತಿದೆಯೇ, ದೇಶದಲ್ಲಿ ಸ್ವಾವಲಂಬಿ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೊಡುಗೆ ನೀಡುತ್ತಿದೆಯೇ ಎನ್ನುವುದು. ಈ ಪ್ರಶ್ನೆಗೂ ತಮಗೆಲ್ಲ ಉತ್ತರ ತಿಳಿದಿರುತ್ತದೆ. ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವಾಗ ಈ ಎಲ್ಲ ಸವಾಲುಗಳ ಬಗ್ಗೆ ಆಳವಾದ ಅಧ್ಯಯನ ನಡೆಸಲಾಯಿತು ಎನ್ನುವುದು ನನಗೆ ಸಂತಸ ತಂದಿರುವ ಸಂಗತಿಯಾಗಿದೆ.

ಸ್ನೇಹಿತರೇ, ಬದಲಾಗುತ್ತಿರುವ ಸಮಯದೊಂದಿಗೆ ಹೊಸ ವಿಶ್ವದ ವ್ಯವಸ್ಥೆ ಹಾಗೂ ಹೊಸ ಬಣ್ಣ, ಹೊಸ ರೂಪದೊಂದಿಗೆ ವ್ಯವಸ್ಥೆಯಲ್ಲಿ ಬದಲಾವಣೆ ಬರುತ್ತಿದೆ. ಹೊಸದಾಗಿ ಜಾಗತಿಕ ಮಾನದಂಡವೂ ಸಿದ್ಧವಾಗುತ್ತದೆ. ಇದರ ಭಾಗವಾಗಿ, ಭಾರತದ ಶಿಕ್ಷಣ ವ್ಯವಸ್ಥೆ ಸ್ವಯಂ ಬದಲಾವಣೆ ಮಾಡಿಕೊಳ್ಳುತ್ತಿದೆ. ಶಾಲಾ ಶಿಕ್ಷಣದಲ್ಲಿ 10+2ರ ಸ್ವರೂಪದಿಂದ ಮುಂದೆ ಸಾಗಿ 5+3+3+4ರ ಶೈಕ್ಷಣಿಕ ಸ್ವರೂಪ ಆಗುತ್ತಿರುವುದೂ ಈ ದಿಕ್ಕಿನಲ್ಲೇ ಇಟ್ಟ ಒಂದು ಹೆಜ್ಜೆಯಾಗಿದೆ. ನಾವು ನಮ್ಮ ವಿದ್ಯಾರ್ಥಿಗಳನ್ನು ಜಾಗತಿಕ ನಾಗರಿಕರನ್ನಾಗಿ ರೂಪಿಸಬೇಕಿದೆ. ಜೊತೆಗೇ ನಮ್ಮ ಬೇರುಗಳೊಂದಿಗೂ ಬಾಂಧವ್ಯ ಹೊಂದಿರುವಂತೆ ನೋಡಿಕೊಳ್ಳಬೇಕಿದೆ. ಬೇರಿನಿಂದ ಜಗತ್ತಿನವರೆಗೆ, ಮನುಷ್ಯನಿಂದ ಮಾನವತೆಯವರೆಗೆ, ಇತಿಹಾಸದಿಂದ ಆಧುನಿಕತೆಯವರೆಗೆ ಎಲ್ಲ ಬಿಂದುಗಳನ್ನೂ ಸ್ಪರ್ಶಿಸುವಂತೆ ಈ ರಾಷ್ಟ್ರೀಯ ಶೀಕ್ಷಣ ನೀತಿಯ ಸ್ವರೂಪವನ್ನು ಸಿದ್ಧಪಡಿಸಲಾಗಿದೆ.

ಸ್ನೇಹಿತರೇ, ಮಕ್ಕಳು ಮನೆಯಲ್ಲಿ ಮಾತನಾಡುವ ಭಾಷೆ ಹಾಗೂ ಶಾಲೆಯಲ್ಲಿ ಓದುವ ಭಾಷೆ ಒಂದೇ ಆಗಿದ್ದರೆ ಅವರ ಕಲಿಕೆಯ ವೇಗ ಉತ್ತಮವಾಗುತ್ತದೆ ಎನ್ನುವುದು ತಿಳಿದಿರುವ ವಿಚಾರ. ಹೀಗಾಗಿ, ಮಕ್ಕಳಿಗೆ 5ನೇ ತರಗತಿಯವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುವ ಅವಕಾಶ ಈಗ ದೊರೆಯಲಿದೆ. ಇದರಿಂದ ಮಕ್ಕಳ ಶೈಕ್ಷಣಿಕ ತಳಪಾಯ ದೃಢವಾಗುತ್ತದೆ. ಮುಂದಿನ ಉನ್ನತ ಶಿಕ್ಷಣಕ್ಕೂ ಆ ತಳಪಾಯ ಆಧಾರವಾಗಿ ಕಲಿಕೆ ಚುರುಕಾಗುತ್ತದೆ.

ಸ್ನೇಹಿತರೇ, ಇಲ್ಲಿಯವರೆಗೆ ನಮ್ಮ ಶಿಕ್ಷಣ ವ್ಯವಸ್ಥೆ ‘ಏನನ್ನು ಯೋಚಿಸಬೇಕು’ ಎನ್ನುವುದರ ಬಗ್ಗೆ ಗಮನ ಹರಿಸಿದೆ. ಆದರೆ, ಇನ್ನು ಮುಂದೆ ಹೊಸ ಶಿಕ್ಷಣ ನೀತಿಯಲ್ಲಿ ‘ಹೇಗೆ ಯೋಚಿಸಬೇಕು’ ಎನ್ನುವುದರ ಬಗ್ಗೆ ಆದ್ಯತೆ ನೀಡಲಾಗುತ್ತದೆ. ನಾನು ಇದನ್ನೇಕೆ ಹೇಳುತ್ತಿದ್ದೇನೆಂದರೆ, ನಮಗೀಗ ಮಾಹಿತಿ ಹಾಗೂ ವಿಷಯಗಳ ಯಾವುದೇ ಕೊರತೆಯಿಲ್ಲ. ಮಾಹಿತಿ ಅರಿಯುವಲ್ಲಿ ಒಂದು ರೀತಿಯ ಪ್ರವಾಹವೇ ಬಂದಿದೆ. ಮೊಬೈಲ್ ಫೋನ್ ನಲ್ಲಿಯೇ ಎಲ್ಲ ಮಾಹಿತಿ ಸಿಗುತ್ತದೆ. ಫೋನ್ ನಲ್ಲಿ ಮಾಹಿತಿ ಪಡೆದುಕೊಳ್ಳುವುದೋ ಅಥವಾ ಓದುವುದೋ ಎನ್ನುವ ಕುರಿತು ಇಲ್ಲಿ ಚಿಂತಿಸಬೇಕಾಗಿದೆ. ಸರ್ಕಾರವೂ ಈ ನಿಟ್ಟಿನಲ್ಲಿ ಗಮನ ಹರಿಸಿ ಶಿಕ್ಷಣ ನೀತಿಯಲ್ಲಿ ಬೃಹತ್ ಪಠ್ಯಕ್ರಮದ ಅನಿವಾರ್ಯತೆಯನ್ನು ಕಡಿಮೆಗೊಳಿಸಲು ಯತ್ನಿಸಿದೆ. ಮಕ್ಕಳಿಗೆ ಕಲಿಯಲು ವಿಚಾರಣೆ ಆಧಾರಿತ, ಅನ್ವೇಷಣೆ -ಆಧಾರಿತ, ಚರ್ಚೆ ಆಧಾರಿತ ಹಾಗೂ ವಿಶ್ಲೇಷಣೆ ಆಧಾರಿತ ಮಾರ್ಗಗಳನ್ನು ನೀಡಲು ಆದ್ಯತೆ ನೀಡಲಾಗಿದೆ.  ಇದರಿಂದ ಮಕ್ಕಳಲ್ಲಿ ಕಲಿಯುವ ಆಸಕ್ತಿ ಹೆಚ್ಚುತ್ತದೆ ಹಾಗೂ ತರಗತಿಯಲ್ಲಿ ಅವರ ಪಾಲ್ಗೊಳ್ಳುವಿಕೆಯೂ ಹೆಚ್ಚುತ್ತದೆ.

ಸ್ನೇಹಿತರೇ, ತಮ್ಮ ಆಸಕ್ತಿಯನ್ನು ಅನುಸರಿಸುವ ಅವಕಾಶ ಪ್ರತಿ ವಿದ್ಯಾರ್ಥಿಗೆ ಸಿಗಲೇಬೇಕು. ಅವರು ತಮ್ಮ ಆಸಕ್ತಿ ಹಾಗೂ ಅಗತ್ಯಗಳಿಗೆ ಅನುಸಾರವಾಗಿ ಯಾವುದೇ ಪದವಿ ಅಥವಾ ಕೋರ್ಸ್ ಮಾಡಬಹುದು ಅಥವಾ ಅವರಿಗೆ ಮನಸ್ಸಾದರೆ ಅದನ್ನ ಅವರು ತ್ಯಜಿಸಲೂಬಹುದು. ಕೋರ್ಸ್ ಮಾಡಿದ ಬಳಿಕ ಉದ್ಯೋಗಕ್ಕೆ ಹೋದಾಗಲೇ ತಮ್ಮ ಶಿಕ್ಷಣವು ಉದ್ಯೋಗಕ್ಕೆ ಬೇಕಾದ ಎಲ್ಲ ಅಗತ್ಯಗಳನ್ನು ಪೂರೈಸುವುದಿಲ್ಲ ಎನ್ನುವುದು ಅನೇಕ ಬಾರಿ ಅನುಭವಕ್ಕೆ ಬರುತ್ತಲೇ ಇರುತ್ತದೆ. ಕೆಲವು ವಿದ್ಯಾರ್ಥಿಗಳಿಗೆ ಮಧ್ಯದಲ್ಲೇ ಕೋರ್ಸ್ ಬಿಟ್ಟು ಉದ್ಯೋಗ ಮಾಡುವ ಅನಿವಾರ್ಯತೆ ಎದುರಾಗುತ್ತದೆ. ಈ ಎಲ್ಲ ವಿದ್ಯಾರ್ಥಿಗಳ ಅಗತ್ಯಗಳನ್ನು ಮನಗಂಡು ಬಹು ಪ್ರವೇಶ ಹಾಗೂ ನಿರ್ಗಮನದ ಆಯ್ಕೆಯನ್ನು ನೀಡಲಾಗಿದೆ. ಯಾವುದೇ ವಿದ್ಯಾರ್ಥಿ ತನ್ನ ಉದ್ಯೋಗಕ್ಕೆ ಅಗತ್ಯವಾದ ಕೌಶಲಗಳನ್ನು ಪಡೆಯಲು ಪುನಃ ತನ್ನ ಕೋರ್ಸ್ ಗೆ ವಾಪಸಾಗಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಆತ ಇನ್ನಷ್ಟು ಪರಿಣಾಮಕಾರಿಯಾಗಿ ಓದಿನಲ್ಲಿ ಭಾಗಿಯಾಗಲು ಸಾಧ್ಯವಾಗುತ್ತದೆ. ಇದು ಇದರ ಇನ್ನೊಂದು ಆಯಾಮವೂ ಇದೆ.

ಈಗ ಯಾವುದೇ ವಿದ್ಯಾರ್ಥಿ ಕೋರ್ಸ್ ಮಧ್ಯದಲ್ಲೇ ಬಿಟ್ಟು ಇನ್ನೊಂದು ಕೋರ್ಸ್ ಗೆ ಪ್ರವೇಶ ಪಡೆಯಲು ಸಾಧ್ಯವಿದೆ. ಇಂಥದ್ದೊಂದು ಸ್ವಾತಂತ್ರ್ಯ ವಿದ್ಯಾರ್ಥಿಗಳಿಗೆ ಸಿಗುತ್ತದೆ. ಇದಕ್ಕಾಗಿ ಅವರು ಒಂದು ನಿಶ್ಚಿತ ಸಮಯದವರೆಗೆ ಬಿಡುವು ಪಡೆದುಕೊಂಡು ಎರಡನೇ ಕೋರ್ಸ್ ಗೆ ಸೇರ್ಪಡೆಯಾಗಬಹುದು. ಉನ್ನತ ಶಿಕ್ಷಣವನ್ನು ವಿಭಾಗಗಳೆಂಬ ಗೋಡೆಯಿಂದ ಮುಕ್ತಿಗೊಳಿಸಲು ಬಹು ಪ್ರವೇಶ ಹಾಗೂ ನಿರ್ಗಮನದ ಅವಕಾಶವನ್ನೂ ನೀಡಲಾಗುತ್ತಿದೆ. ಈ ಮೂಲಕ, ನಾವು ಈ ಶತಮಾನದೊಂದಿಗೆ ಸಾಗುತ್ತಿದ್ದೇವೆ, ಇಲ್ಲಿ ಯಾವುದೇ ವ್ಯಕ್ತಿ ಜೀವನವಿಡೀ ಒಂದೇ  ವೃತ್ತಿಗೆ ನೆಚ್ಚಿಕೊಂಡು ಕೂರುವುದಿಲ್ಲ. ಬದಲಾವಣೆ ಮಾಡುತ್ತಿರುತ್ತಾನೆ. ಇದಕ್ಕಾಗಿ ಆತನಿಗೆ ಸತತವಾಗಿ ಕೌಶಲಗಳನ್ನು ಬೆಳೆಸಿಕೊಳ್ಳುವ, ವೃದ್ಧಿಸಿಕೊಳ್ಳುವ ಅವಶ್ಯಕತೆ ಇರುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇದಕ್ಕೂ ಗಮನ ನೀಡಲಾಗಿದೆ.

ಸ್ನೇಹಿತರೇ, ಯಾವುದೇ ದೇಶದ ಅಭಿವೃದ್ಧಿಯಲ್ಲಿ ಅದರ ಘನತೆಯ ಪಾತ್ರ ಮಹತ್ವದ್ದಾಗಿದೆ. ಸಮಾಜದ ಯಾವುದೇ ವ್ಯಕ್ತಿ ಯಾವುದೇ ಕೆಲಸ ಮಾಡುತ್ತಿರಬಹುದು, ಯಾರೂ ಕನಿಷ್ಠವಾಗುವುದಿಲ್ಲ. ಭಾರತದಂಥ ಸಾಂಸ್ಕೃತಿಕವಾಗಿ ಸಮೃದ್ಧವಾಗಿರುವ ದೇಶದಲ್ಲಿ ಈ ತಾರತಮ್ಯ ಎಲ್ಲಿಂದ ಬಂತು ಎಂದು ಯೋಚಿಸಬೇಕಿದೆ. ಮೇಲು-ಕೀಳಿನ ಭಾವನೆ, ಶ್ರಮಿಕರ ಬಗ್ಗೆ ಹೀನವಾದ ಭಾವನೆ ಯಾವ ರೀತಿಯಲ್ಲಿ ನಮ್ಮ ಮನಸ್ಸಿನ ಒಳಗೆ ವಿಕೃತಿಯಾಗಿ ನೆಲೆ ನಿಂತಿದೆ, ಇಂಥ ವಿಪರೀತವಾದ ಮನಃಸ್ಥಿತಿ ಹೇಗೆ ಬಂತು ಎಂದು ತಿಳಿಯಬೇಕಿದೆ. ಇದಕ್ಕೆ ಒಂದು ದೊಡ್ಡ ಕಾರಣವೆಂದರೆ, ನಮ್ಮ ಶಿಕ್ಷಣವು ಸಮಾಜದ ಈ ಸ್ತರದೊಂದಿಗೆ ಎಂದೂ ಜೋಡಿಸಲ್ಪಡಲಿಲ್ಲ. ಗ್ರಾಮಗಳಿಗೆ ಹೋಗಿ ರೈತರು, ಶ್ರಮಿಕರು, ಕಠಿಣ ಪರಿಶ್ರಮಿಗಳು ಮಾಡುತ್ತಿರುವ ಕಾರ್ಯವನ್ನು ನೋಡಿದರೆ ನಮಗೆ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅವರೆಲ್ಲ ಎಂಥ ಮಹಾನ್ ಕಾರ್ಯ ಮಾಡುತ್ತಿದ್ದಾರೆ, ಸಮಾಜದ ಅವಶ್ಯಕತೆಗಳನ್ನು ಹೇಗೆ ಪೂರೈಸುತ್ತ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ಅವರ ಶ್ರಮಕ್ಕೆ ಗೌರವ ನೀಡುವುದನ್ನು ನಮ್ಮ ಮಕ್ಕಳಿಗೆ ಕಲಿಸುವುದು ಅಗತ್ಯ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿ ಶಿಕ್ಷಣ ಹಾಗೂ ಶ್ರಮಕ್ಕೆ ಗೌರವ ನೀಡುವ ಕುರಿತು ಗಮನ ನೀಡಲಾಗಿದೆ.

ಸ್ನೇಹಿತರೇ, 21ನೇ ಶತಮಾನದಲ್ಲಿ ಇಡೀ ವಿಶ್ವ ಭಾರತದ ಮೇಲೆ ಅಪಾರ ನಿರೀಕ್ಷೆಯಿಟ್ಟಿದೆ. ಪ್ರತಿಭೆ ಮತ್ತು ಮತ್ತು ತಂತ್ರಜ್ಞಾನದ ಪರಿಹಾರಗಳನ್ನು ಇಡೀ ಜಗತ್ತಿಗೆ ನೀಡುವ ಸಾಮರ್ಥ್ಯ ಭಾರತಕ್ಕಿದೆ.  ನಮ್ಮ ಈ ಜವಾಬ್ದಾರಿಯನ್ನೂ ರಾಷ್ಟ್ರೀಯ ಶಿಕ್ಷಣ ನೀತಿ ಗಮನಕ್ಕೆ ತೆಗೆದುಕೊಂಡಿದೆ. ಭವಿಷ್ಯದ ತಂತ್ರಜ್ಞಾನಕ್ಕಾಗಿ ಮಾನಸಿಕತೆಯನ್ನು ವಿಕಸನಗೊಳಿಸುವ ಭಾವನೆಯನ್ನೂ ರಾಷ್ಟ್ರೀಯ ಶಿಕ್ಷಣ ನೀತಿ ಒಳಗೊಂಡಿದೆ. ಈಗ ತಂತ್ರಜ್ಞಾನವನ್ನು ನಾವು ಬಹಳ ವೇಗವಾಗಿ, ಉತ್ತಮ ರೀತಿಯಲ್ಲಿ, ಅತ್ಯಂತ ಕಡಿಮೆ ವೆಚ್ಚದಲ್ಲಿ, ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗೂ ತಲುಪುವಂತಹ ಮಾಧ್ಯಮವನ್ನಾಗಿ ರೂಪಿಸಿದ್ದೇವೆ. ನಾವು ಇದರ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬೇಕಿದೆ.

ಈ ರಾಷ್ಟ್ರೀಯ ಶಿಕ್ಷಣ ನೀತಿ ತಂತ್ರಜ್ಞಾನ ಆಧಾರಿತ ಗುಣಮಟ್ಟದ ವಿಷಯಗಳು ಹಾಗೂ ಕೋರ್ಸ್ ಗಳನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಸಹಾಯ ಮಾಡುತ್ತದೆ. ಬೇಸಿಕ್ ಕಂಪ್ಯೂಟಿಂಗ್ ಹಾಗೂ ಕೋಡಿಂಗ್ ಗೆ ಆದ್ಯತೆ ನೀಡಲಾಗಿದೆ. ಸಂಶೋಧನೆಗೂ ಒತ್ತು ನೀಡಲಾಗಿದೆ. ಇದು ಕೇವಲ ಶೈಕ್ಷಣಿಕ ವ್ಯವಸ್ಥೆಯನ್ನು ಮಾತ್ರವಲ್ಲ, ಇಡೀ ಸಮಾಜದ ಗತಿಯನ್ನೇ ಬದಲಿಸುವ ಮಾಧ್ಯಮವಾಗುತ್ತದೆ. ವರ್ಚ್ಯುವಲ್ ಲ್ಯಾಬ್ ಲಕ್ಷಾಂತರ ವಿದ್ಯಾರ್ಥಿಗಳನ್ನು ಉತ್ತಮ ಶಿಕ್ಷಣದತ್ತ ಕೊಂಡೊಯ್ಯಲಿದೆ. ಅವರಿಗೆ ಈ ಮೊದಲು ಇಂಥ ವಿಷಯಗಳನ್ನು ಅಧ್ಯಯನ ಮಾಡಲು ಸಾಧ್ಯವೇ ಇರುತ್ತಿರಲಿಲ್ಲ.  ಹೀಗೆ, ರಾಷ್ಟ್ರೀಯ ಶಿಕ್ಷಣ ನೀತಿ ನಮ್ಮ ದೇಶದಲ್ಲಿ


(Release ID: 1644765) Visitor Counter : 291