PIB Headquarters
ಕೋವಿಡ್-19 ಪಿ ಐ ಬಿ ದೈನಿಕ ವರದಿ
Posted On:
02 AUG 2020 6:29PM by PIB Bengaluru
ಕೋವಿಡ್-19 ಪಿ ಐ ಬಿ ದೈನಿಕ ವರದಿ
(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು
ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)
ಭಾರತವು ಏಕದಿನ ಗರಿಷ್ಟ ಗುಣಮುಖ ಪ್ರಕರಣಗಳನ್ನು ದಾಖಲಿಸಿದ್ದು, 51,255 ಮಂದಿ ಒಂದೇ ದಿನದಲ್ಲಿ ಕೋವಿಡ್ -19 ರಿಂದ ಗುಣಮುಖರಾಗಿದ್ದಾರೆ. ; ಒಟ್ಟು ಗುಣಮುಖರಾದವರ ಸಂಖ್ಯೆ ಸುಮಾರು 11.5 ಲಕ್ಷ; ಗುಣಮುಖ ದರ ಹೊಸ ದಾಖಲೆ ಬರೆದಿದ್ದು 65.44 % ಆಗಿದೆ; ಪ್ರಕರಣಗಳಲ್ಲಿ ಸಾವಿನ ದರ ಸತತ ಇಳಿಮುಖವಾಗಿ 2.13 % ನಲ್ಲಿದೆ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 51,000 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. 51,225 ರೋಗಿಗಳು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಭಾರತದಲ್ಲಿ ಕೋವಿಡ್ -19 ರಿಂದ ಗುಣಮುಖರಾದವರ ಒಟ್ಟು ಸಂಖ್ಯೆ 11,45,629. ಕಳೆದ 24 ಗಂಟೆಗಳಲ್ಲಿ ಗರಿಷ್ಟ ಸಂಖ್ಯೆಯ ಕೋವಿಡ್ -19 ರೋಗಿಗಳು ಗುಣಮುಖರಾಗುವುದರೊಂದಿಗೆ ಗುಣಮುಖ ದರ ಗರಿಷ್ಟ ಅಂದರೆ 65.44 % ಆಗಿದೆ. ಹೆಚ್ಚು ಹೆಚ್ಚು ಕೋವಿಡ್ -19 ಬಾಧಿತರು ಗುಣಮುಖರಾಗಿ ಬಿಡುಗಡೆಯಾಗುತ್ತಿದ್ದಾರೆ. 2020 ರ ಜೂನ್ 10 ರಂದು ಮೊದಲ ಬಾರಿಗೆ ಗುಣಮುಖರಾದ ರೋಗಿಗಳ ಸಂಖ್ಯೆ , ಸಕ್ರಿಯ ರೋಗಿಗಳ ಸಂಖ್ಯೆಯನ್ನು ಮೀರಿಸಿತ್ತು. ಆಗ ಈ ಅಂತರ 1,573 ಇದ್ದಿತ್ತು ಮತ್ತು ಅದು ಇಂದು 5,77,899 ಕ್ಕೇರಿದೆ. ಸಕ್ರಿಯ ಪ್ರಕರಣಗಳ ಹೊರೆ ಎಂದರೆ ದೇಶದಲ್ಲಿರುವ ಒಟ್ಟು ಸಕ್ರಿಯ ಕೋವಿಡ್ -19 ಪ್ರಕರಣಗಳ ಸಂಖ್ಯೆಯಾಗಿದ್ದು, ಪ್ರಸ್ತುತ ಸಕ್ರಿಯ ಪ್ರಕರಣಗಳ (5,67,730) ಪ್ರಮಾಣ , ಒಟ್ಟು ಪ್ರಕರಣಗಳು ಮತ್ತು ಆಸ್ಪತ್ರೆಗಳಲ್ಲಿ ಮತ್ತು ಮನೆಗಳಲ್ಲಿ ವೈದ್ಯಕೀಯ ನಿಗಾದಲ್ಲಿರುವವರ ಸಂಖ್ಯೆಗೆ ಹೋಲಿಸಿದಾಗ 32.43 % ನಷ್ಟಿದೆ. ಜಾಗತಿಕ ಸರಾಸರಿಗೆ ಹೋಲಿಸಿದರೆ ಭಾರತದಲ್ಲಿ ಮೃತ್ಯು ಪ್ರಕರಣಗಳ ದರ (ಸಿ.ಎಫ್.ಆರ್.) ಅತ್ಯಂತ ಕಡಿಮೆ ಎಂದರೆ 2.31 % ಆಗಿದೆ.
ಮೊದಲ ಅಖಿಲ ಭಾರತ ಮಟ್ಟದಲ್ಲಿ ಮೊದಲ ಸಾರ್ಸ್ –ಕೋವ್ -2 ರ 1000 ವಂಶವಾಹಿಗಳ ಅನುಕ್ರಮಣಿಕೆ ಯಶಸ್ವೀ ಪೂರ್ಣ ಎಂದು ಡಾ. ಹರ್ಷವರ್ಧನ್ ಘೋಷಣೆ
ಭಾರತದಾದ್ಯಂತ ಸಾರ್ಸ್ –ಕೋವ್ -2ರ 1000 ವಂಶವಾಹಿಗಳ ಅನುಕ್ರಮಣಿಕೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗು ಭೂ ವಿಜ್ಞಾನಗಳ ಸಚಿವರಾದ ಡಾ. ಹರ್ಷವರ್ಧನ್ ನಿನ್ನೆ ಪ್ರಕಟಿಸಿದರು. ಜೈವಿಕ ತಂತ್ರಜ್ಞಾನ ಇಲಾಖೆಯ (ಡಿ.ಬಿ.ಟಿ.) ಸಭೆ ನಡೆಸಿದ ಅವರು ಕೋವಿಡ್ -19 ಕ್ಕೆ ಸಂಬಂಧಿಸಿದಂತೆ ಡಿ.ಬಿ.ಟಿ. , ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ಸಹಾಯ ಮಂಡಳಿ (ಬಿ.ಐ.ಆರ್.ಎ.ಸಿ.) ಮತ್ತು ಡಿ.ಬಿ.ಟಿ. –ಸ್ವಾಯತ್ತ ಸಂಸ್ಥೆಗಳ (ಎ.ಐ.ಗಳು) ಕಾರ್ಯಚಟುವಟಿಕೆಗಳನ್ನು ಪರಾಮರ್ಶಿಸಿದರು. ಸಭೆಯಲ್ಲಿ ಡಾ. ಹರ್ಷವರ್ಧನ್ ಅವರು ದಾಖಲೆ ಅವಧಿಯಲ್ಲಿ ಜೈವಿಕ ತಂತ್ರಜ್ಞಾನ ಇಲಾಖೆ ಸ್ಥಾಪಿಸಿದ ಕೋವಿಡ್ -19 ಕ್ಕಾಗಿಯೇ ಇರುವ 5 ಜೈವಿಕ –ಸಂಗ್ರಹಾಲಯಗಳ ಬೃಹತ್ ಜಾಲವನ್ನು ಕಾರ್ಯಾರಂಭಗೊಳಿಸಿ ರಾಷ್ಟ್ರಕ್ಕೆ ಸಮರ್ಪಿಸಿದರು. ಅವುಗಳೆಂದರೆ -ಟ್ರಾನ್ಸ್ಲೇಶನಲ್ ಆರೋಗ್ಯ ವಿಜ್ಞಾನ ಮತು ತಂತ್ರಜ್ಞಾನ ಸಂಸ್ಥೆ (ಟಿ.ಎಚ್.ಎಸ್.ಟಿ.ಐ.) ಫರಿದಾಬಾದ್, ಜೀವ ವಿಜ್ಞಾನಗಳ ಸಂಸ್ಥೆ (ಐ.ಎಲ್.ಎಸ್.) ಭುವನೇಶ್ವರ, ಪಿತ್ತಜನಕಾಂಗ ಮತ್ತು ಪಿತ್ತರಸ ವಿಜ್ಞಾನಗಳ ಸಂಸ್ಥೆ ( ಐ.ಎಲ್.ಬಿ. ಎಸ್.) , ಹೊಸದಿಲ್ಲಿ, ಕೋಶ ವಿಜ್ಞಾನಗಳ ರಾಷ್ಟ್ರೀಯ ಕೇಂದ್ರ (ಎನ್.ಸಿ.ಸಿ.ಎಸ್.) ಪುಣೆ, ಕಾಂಡ ಕೋಶ ವಿಜ್ಞಾನಗಳ ಮತ್ತು ಪುನರುತ್ಪಾದಕ ವೈದ್ಯಕೀಯ ಸಂಸ್ಥೆ (ಇನ್ ಸ್ಟೆಮ್ ) ಬೆಂಗಳೂರು. ಈ ಜಾಗತಿಕ ಸಾಂಕ್ರಾಮಿಕವನ್ನು ನಿವಾರಿಸುವಲ್ಲಿ ಡಿ.ಬಿ.ಟಿ.ಯ ಅವಿರತ ಶ್ರಮವನ್ನು ಅವರು ಕೊಂಡಾಡಿದರು.
ವಿಶ್ವದ ಅತ್ಯಂತ ದೊಡ್ಡ ಆನ್ ಲೈನ್ ಹ್ಯಾಕಥಾನ್ ನ ಗ್ರಾಂಡ್ ಫಿನಾಲೆಯಲ್ಲಿ ಭಾಗವಹಿಸಿದವರ ಜೊತೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ನ ಗ್ರಾಂಡ್ ಫಿನಾಲೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, ದೇಶವು ಎದುರಿಸುತ್ತಿರುವ ಸವಾಲುಗಳಿಗೆ ಹಲವಾರು ಪರಿಹಾರಗಳನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯನಿರತರಾಗಿದ್ದಾರೆ ಎಂದರು. ಸಮಸ್ಯೆಗಳಿಗೆ ಪರಿಹಾರ ಹುಡುಕುವುದರ ಜೊತೆಗೆ ದತ್ತಾಂಶ, ಡಿಜಿಟಲೀಕರಣ, ಮತ್ತು ಉನ್ನತ ತಂತ್ರಜ್ಞಾನದ ಭವಿಷ್ಯಗಳಿಗೆ ಅನ್ವಯಿಸಿ ಭಾರತದ ಆಶೋತ್ತರಗಳಿಗೆ ಅವರು ಶಕ್ತಿ ತುಂಬುತ್ತಿದ್ದಾರೆ ಎಂದವರು ಪ್ರಶಂಸಿಸಿದರು. ಹೊಸ ಶಿಕ್ಷಣ ನೀತಿಯ ಬಗ್ಗೆ ಪ್ರಸ್ತಾಪಿಸಿದ ಅವರು ಆಲೋಚನೆಗಳು, ಆವಶ್ಯಕತೆಗಳು, ಭರವಸೆಗಳು, ಮತ್ತು 21 ನೇ ಶತಮಾನದ ಯುವಕರ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಅದನ್ನು ರೂಪಿಸಲಾಗಿದೆ ಎಂದರು. ಇದು ಬರೇ ನೀತಿಯ ದಾಖಲೆ ಅಲ್ಲ ಎಂದ ಅವರು ಇದು 130 ಕೋಟಿಗೂ ಅಧಿಕ ಭಾರತೀಯರ ಆಶೋತ್ತರಗಳ ಪ್ರತಿಬಿಂಬ ಎಂದರು. ನೀತಿಯು ಸ್ಥಳೀಯತೆಗೆ ಆದ್ಯತೆ ನೀಡುತ್ತದೆ, ಜಾಗತಿಕ ಸಮಗ್ರತೆಗೂ ಸಮಾನ ಒತ್ತನ್ನು ನೀಡಲಾಗಿದೆ. ಅತ್ಯುನ್ನತ ಜಾಗತಿಕ ಸಂಸ್ಥೆಗಳಿಗೆ ಭಾರತದಲ್ಲಿ ಕ್ಯಾಂಪಸ್ ಗಳನ್ನು ತೆರೆಯುವಂತೆ ಉತ್ತೇಜಿಸಲಾಗುತ್ತದೆ ಎಂದೂ ಪ್ರಧಾನ ಮಂತ್ರಿ ಅವರು ವಿವರಿಸಿದರು. ಇದಕ್ಕೆ ಮುನ್ನ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವರಾದ ಶ್ರೀ ರಮೇಶ್ ಪೋಖ್ರಿಯಾಲ್ ’ನಿಶಾಂಕ್’ ಅವರು ಸ್ಮಾರ್ಟ್ ಇಂಡಿಯಾ ಹ್ಯಾಕಥಾನಿನ (ಸಾಫ್ಟ್ ವೇರ್) -2020 ರ ನಾಲ್ಕನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಯನ್ನು ಉದ್ಘಾಟಿಸಿದರು. ಅವರು ಮಾತನಾಡಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮ್ಮ ದೇಶದ ಡಿಜಿಟಲ್ ಕಂದಕವನ್ನು ಜೋಡಿಸಲು ಡಿಜಿಟಲ್ ಇಂಡಿಯಾ ಚಿಂತನೆಯನ್ನು ಹೊಂದಿದ್ದಾರೆ ಮತ್ತು ಅಭಿವೃದ್ದಿಯನ್ನು ಸಮಗ್ರ ಜನತಾ ಆಂದೋಲನವಾಗಿಸಲು ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿಸುತ್ತಿದ್ದಾರೆ . ಆಡಳಿತವು ಭಾರತದಲ್ಲಿಯ ಪ್ರತಿಯೊಬ್ಬರನ್ನೂ ತಲುಪಬೇಕು ಎಂಬ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದ್ದಾರೆ. ಈಗಿರುವ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಸ್ಥಿತಿಯಲ್ಲಿ ಡಿಜಿಟಲ್ ಭಾರತದ ಪ್ರಯೋಜನಗಳನ್ನು ನಾವೆಲ್ಲರೂ ಕಾಣುತ್ತಿದ್ದೇವೆ ಎಂದು ಹೇಳಿದರು.
ಜೆ.ಎನ್.ಸಿ.ಎ.ಎಸ್.ಆರ್. ವಿಜ್ಞಾನಿಗಳಿಂದ ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ವ್ಯೂಹಾತ್ಮಕ ಸಂಕೀರ್ಣ ಸಂಪನ್ಮೂಲಗಳನ್ನು ಅಂದಾಜಿಸಲು ಮತ್ತು ವ್ಯೂಹಾತ್ಮಕವಾಗಿಸಲು ಹೊಂದಾಣಿಕಾ ಮಾದರಿಯ ಅವಿಷ್ಕಾರ
ದೇಶದಲ್ಲಿಯ ಆರೋಗ್ಯ ರಕ್ಷಣಾ ವಲಯ ಜಾಗತಿಕ ಸಾಂಕ್ರಾಮಿಕದ ಆರಂಭಿಕ ಹಂತದಲ್ಲಿ ಗೊಂದಲದ (ಕ್ಯಾಚ್ -22) ಪರಿಸ್ಥಿತಿಯನ್ನು ಎದುರಿಸುತ್ತಿತ್ತು. ಸೋಂಕಿತರನ್ನು ಗುರುತಿಸಲು ಮತ್ತು ಪ್ರತ್ಯೇಕಿಸಲು ನಿಖರವಾದ ಪರೀಕ್ಷೆಗಳ ಅವಶ್ಯಕತೆ ಇತ್ತು. ಹೊಸ ಪರೀಕ್ಷೆಗಳನ್ನು ತ್ವರಿತವಾಗಿ ಕೈಗೊಳ್ಳಬೇಕಾಗಿತ್ತು. ಸಾಕಷ್ಟು ಮುಂಚಿತವಾಗಿ ಮುಂದಿನ ವಾರಗಳಲ್ಲಿ ಮತ್ತು ತಿಂಗಳಲ್ಲಿ ಬರಬಹುದಾದ ಸೋಂಕುಗಳ ಪ್ರಮಾಣವನ್ನು ಅಂದಾಜು ಮಾಡಬೇಕಾಗಿತ್ತು. ಮತ್ತು ಈ ಅಂಕಿ ಅಂಶಗಳನ್ನು ಆಧರಿಸಿ ದೇಶದ ಪ್ರತೀ ಜಿಲ್ಲೆಯಲ್ಲೂ ಆರೋಗ್ಯ ಶುಶ್ರೂಷಾ ಸಾಮಗ್ರಿಗಳ ಅವಶ್ಯಕತೆಗಳನ್ನು ಅಂದಾಜು ಮಾಡಬೇಕಾಗಿತ್ತು. ಅನಿರ್ದಿಷ್ಟ ಮಾನದಂಡಗಳಿರುವ ಮತ್ತು ಮಾದರಿಗಳಿಗೆ ಮಾಹಿತಿಗಳು ಅತಿರೇಕದಂತಿರುವ ಸ್ಥಿತಿಯಲ್ಲಿ ಮಾದರಿಗಳನ್ನು ಬಳಸುವುದೆಂತು ? , ಎಂಬ ಪ್ರಶ್ನೆ ಉದ್ಭವಿಸಿದಾಗ, ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಯಾದ ಜವಾಹರಲಾಲ್ ನೆಹರೂ ಆಧುನಿಕ ವೈಜ್ಞಾನಿಕ ಸಂಶೋಧನಾ ಕೇಂದ್ರ (ಜೆ.ಎನ್.ಸಿ.ಎ.ಆರ್.) ದ ವಿಜ್ಞಾನಿಗಳು ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್.ಸಿ.) ವಿಜ್ಞಾನಿಗಳು ಈ ಸಮಸ್ಯೆಯನ್ನು ಪರಿಹರಿಸಲು ವ್ಯೂಹಾತ್ಮಕ ಹೊಂದಾಣಿಕಾ ಮಾದರಿಯನ್ನು ಅಭಿವೃದ್ದಿಪಡಿಸಿದರು. ಮತ್ತು ಇದಕ್ಕೆ ಕೋವಿಡ್ -19 ರ ಮೊದಲ ಹಂತ ಒಂದು ಉದಾಹರಣೆ.
ಅಗರಬತ್ತಿ ಉತ್ಪಾದನೆಯಲ್ಲಿ ಭಾರತವನ್ನು ಆತ್ಮ ನಿರ್ಭರ ಮಾಡಲು ಹೊಸ ಯೋಜನೆಗೆ ಶ್ರೀ ನಿತಿನ್ ಗಡ್ಕರಿ ಅನುಮೋದನೆ
ಅಗರಬತ್ತಿ ಉತ್ಪಾದನೆಯಲ್ಲಿ ಭಾರತವನ್ನು ಆತ್ಮನಿರ್ಭರ ಮಾಡುವ ನಿಟ್ಟಿನಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕಾ ಆಯೋಗ (ಕೆ.ವಿ.ಐ.ಸಿ.) ಪ್ರಸ್ತಾಪಿಸಿರುವ ವಿಶಿಷ್ಟ ಉದ್ಯೋಗ ಜನಕ ಕಾರ್ಯಕ್ರಮಕ್ಕೆ ಕೇಂದ್ರ ಎಂ.ಎಸ್.ಎಂ.ಇ. ಸಚಿವರಾದ ಶ್ರೀ ನಿತಿನ್ ಗಡ್ಕರಿ ಅಂಗೀಕಾರ ನೀಡಿದ್ದಾರೆ. “ಖಾದಿ ಅಗರಬತ್ತಿ ಆತ್ಮನಿರ್ಭರ ಮಿಶನ್” ಹೆಸರಿನ ಈ ಕಾರ್ಯಕ್ರಮ ದೇಶದ ವಿವಿಧ ಭಾಗಗಳಲ್ಲಿರುವ ನಿರುದ್ಯೋಗಿಗಳಿಗೆ ಮತ್ತು ವಲಸೆ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದಲ್ಲದೆ , ದೇಶೀಯ ಅಗರಬತ್ತಿಯ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಲಿದೆ. ಕಚ್ಚಾ ಅಗರಬತ್ತಿ ಆಮದಿನ ಮೇಲಿನ ನಿರ್ಬಂಧ ಮತ್ತು ಅದಕ್ಕೆ ಅವಶ್ಯವಾದ ಬಿದಿರು ಕಡ್ಡಿಗಳ ಆಮದಿನ ಮೇಲಣ ಸುಂಕ ಹೆಚ್ಚಳ - ಈ ಎರಡು ಪ್ರಮುಖ ನಿರ್ಧಾರಗಳ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ.
ಇದೇ ಮೊದಲ ಬಾರಿಗೆ ರೈಲ್ವೇ ಸಚಿವಾಲಯದಿಂದ ನಿವೃತ್ತಿ ಹೊಂದುತ್ತಿರುವ 2320 ಅಧಿಕಾರಿಗಳಿಗೆ ವರ್ಚುವಲ್ ಬೀಳ್ಕೊಡುಗೆ ಸಮಾರಂಭ ಆಯೋಜನೆ
ಇದೇ ಮೊದಲ ಬಾರಿಗೆ ಎಂಬಂತೆ , ರೈಲ್ವೇ ಸಚಿವಾಲಯವು 2020 ರ ಜುಲೈ 31 ರಂದು ನಿವೃತ್ತಿಯಾದ ಭಾರತೀಯ ರೈಲ್ವೇ ಅಧಿಕಾರಿಗಳು/ಸಿಬ್ಬಂದಿಗಳಿಗೆ ವರ್ಚುವಲ್ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿತ್ತು. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಏಕ ವೇದಿಕೆಯಡಿಯಲ್ಲಿ ಎಲ್ಲಾ ವಲಯಗಳು/ ವಿಭಾಗಗಳು/ ಉತ್ಪಾದನಾ ಘಟಕಗಳು ಸಂಪರ್ಕಿಸಲ್ಪಟ್ಟಿದ್ದವು. ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಪಿಯೂಷ್ ಗೋಯಲ್ “ ಇದು ಸಂತೋಷದ ಮತ್ತು ದುಃಖದ ದಿನ. ಇದು ಸಂತೋಷದ ಸಂದರ್ಭ ಯಾಕೆಂದರೆ ಈ ಸಿಬ್ಬಂದಿಗಳು ವಿವಿಧ ಕ್ಷೇತ್ರಗಳಲ್ಲಿ, ವಿವಿಧ ಹುದ್ದೆಗಳಲ್ಲಿ ಮತ್ತು ಜವಾಬ್ದಾರಿಗಳಲ್ಲಿ ಧೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ರೈಲ್ವೇಯು ತನ್ನ ಕಾರ್ಯ ವೈಖರಿಯಲ್ಲಿ ಸುಧಾರಣೆಗಳನ್ನು ತೋರಿಸಿದೆ. ಕೋವಿಡ್ ಅವಧಿಯಲ್ಲಿ , ಸರಕು ಸಾಗಾಣಿಕೆ ರೈಲುಗಳು , ಪಾರ್ಸೆಲ್ ರೈಲುಗಳು, ಶ್ರಮಿಕ ವಿಶೇಷ ರೈಲುಗಳು ಓಡಾಟ ನಡೆಸಿವೆ. ಈ ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ರೈಲ್ವೇಯು ದೇಶಕ್ಕೆ ಉತ್ತಮ ಪ್ರಯತ್ನಗಳ ಮೂಲಕ ಉತ್ತಮ ಸೇವೆಯನ್ನು ನೀಡಿದೆ. ರೈಲ್ವೇ ಸಿಬ್ಬಂದಿಗಳು ಕೂಡಾ ಕೊರೋನಾ ವಾರಿಯರ್ಸ್ ಗಳಿಗಿಂತ ಕಡಿಮೆಯವರಲ್ಲ. ನಾನು ಕೋವಿಡ್ ವಿರುದ್ದದ ಹೋರಾಟದಲ್ಲಿ ಉತ್ತಮ ಪ್ರಯತ್ನಗಳನ್ನು ಮಾಡಿದ ಸಿಬ್ಬಂದಿಗಳನ್ನು ಅಭಿನಂದಿಸಲು ಇಚ್ಚಿಸುತ್ತೇನೆ” ಎಂದರು.
ಪಿ ಐ ಬಿ ಕ್ಷೇತ್ರೀಯ ಕಚೇರಿಗಳ ಮಾಹಿತಿ
- ಪಂಜಾಬ್: ಫತೇಹ್ ಆಂದೋಲನದಡಿಯಲ್ಲಿ ಪಂಜಾಬ್ ಸರಕಾರ ಆರಂಭಿಸಿದ ಕೊರೊನಾ ತಡೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಇಲಾಖೆ ವೈದ್ಯಕೀಯ ಕಾಲೇಜುಗಳ, ಜಿಲ್ಲಾಸ್ಪತ್ರೆಗಳ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಸಾಂಪ್ರದಾಯಿಕ ವಿಧಾನಗಳಿಗೆ ಬದಲಾಗಿ ಆಧುನಿಕ ರೀತಿಯಲ್ಲಿ ತರಬೇತಿ ನೀಡುವ ಮೂಲಕ ಕೋವಿಡ್ -19 ರ ವಿರುದ್ದದ ಯುದ್ದವನ್ನು ಮುಂದುವರೆಸಲು ಕ್ರಮಗಳನ್ನು ಕೈಗೊಂಡಿದೆ.
- ಕೇರಳ: ರಾಜ್ಯದಲ್ಲಿಂದು 11 ತಿಂಗಳ ಮಗುವಿನ ಸಹಿತ ಆರು ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. ರಾಜ್ಯದ ರಾಜಧಾನಿಯಲ್ಲಿ ಸಂಪರ್ಕದಿಂದ ಸೋಂಕು ಹರಡುವ ಪ್ರಕರಣಗಳ ಸಂಖ್ಯೆ ಅನಿಯಂತ್ರಿತವಾಗಿ ಏರುತ್ತಿದೆ. ಕರಾವಳಿಯಲ್ಲಿ ಸೋಂಕು ತೀವ್ರವಾಗಿ ಹರಡುತ್ತಿದೆ. ಕಳೆದ 3 ದಿನಗಳಲ್ಲಿ ನಗರದ ಹೃದಯ ಭಾಗದಲ್ಲಿರುವ ಬಡಾವಣೆಗಳಲ್ಲಿ 50 ಕ್ಕೂ ಅಧಿಕ ಮಂದಿಗೆ ಸೋಂಕು ತಗಲಿದೆ. ಪೊಲೀಸ್ ಕೇಂದ್ರ ಕಚೇರಿಯಲ್ಲಿರುವ ಓರ್ವ ಡಿ.ವೈ.ಎಸ್.ಪಿ. ಮತ್ತು ಇತರ ಆರು ಮಂದಿ ಪೊಲೀಸರು ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ಕೊಲ್ಲಂ ಜೈಲಿನ 14 ಮಂದಿಗೆ ಸೋಂಕು ತಗಲಿದೆ. ನಿನ್ನೆ ರಾಜ್ಯದಲ್ಲಿ 1,129 ಹೊಸ ಪ್ರಕರಣಗಳು ದೃಢಪಟ್ಟಿವೆ. ಇವುಗಳಲ್ಲಿ 880 ಪ್ರಕರಣಗಳು ಪರಸ್ಪರ ಸಂಪರ್ಕದಿಂದ ಬಂದಂತಹವು. 58 ಪ್ರಕರಣಗಳಲ್ಲಿ ಸಂಪರ್ಕ ಪತ್ತೆಯಾಗಿಲ್ಲ. ಒಟ್ಟು 10,862 ಸಕ್ರಿಯ ಪ್ರಕರಣಗಳಿವೆ ಮತ್ತು 1.43 ಲಕ್ಷ ಮಂದಿ ವಿವಿಧ ಜಿಲ್ಲೆಗಳಲ್ಲಿ ನಿಗಾದಲ್ಲಿದ್ದಾರೆ.
- ತಮಿಳು ನಾಡು: ಈ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆಗೆ ವೈದ್ಯರು, ನೈರ್ಮಲ್ಯ ಕೆಲಸಗಾರರು, ಅರೆ ವೈದ್ಯಕೀಯ ಸಿಬ್ಬಂದಿಗಳು, ಮತ್ತು ಸ್ವಯಂ ಸೇವಕರು ಸೇರಿದಂತೆ ಕೋವಿಡ್ -19 ಸೋಂಕಿನಿಂದ ಗುಣಮುಖರಾದವರನ್ನು ಮತು ಮುಂಚೂಣಿ ಕಾರ್ಯಕರ್ತರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸುವಂತೆ ಶಾಲಾ ಶಿಕ್ಷಣ ಇಲಾಖೆಯು ಶಾಲೆಗಳಿಗೆ ಶಿಫಾರಸುಗಳನ್ನು ಮಾಡಿದೆ. ಗೃಹ ಕ್ವಾರಂಟೈನಿನಲ್ಲಿದ್ದ ತಮಿಳು ನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಚೆನ್ನೈಯಲ್ಲಿಯ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದರು. ರಾಜ್ಯದ ಒಟ್ಟು ವೈರಸ್ ಪ್ರಕರಣಗಳ ಸಂಖ್ಯೆ 2.5 ಲಕ್ಷ. ಚೆನ್ನೈಯಲ್ಲಿ ಪ್ರಕರಣಗಳ ಸಂಖ್ಯೆ 1 ಲಕ್ಷ ದಾಟಿದೆ. ಶನಿವಾರದಂದು 5,879 ಕ್ಕೂ ಅಧಿಕ ಮಂದಿ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. 7,010 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 99 ಮಂದಿ ಮತ್ತೆ ಮರಣವನ್ನಪ್ಪುವುದರೊಂದಿಗೆ ರಾಜ್ಯದಲ್ಲಿ ಈ ಸೋಂಕಿಗೆ ಬಲಿಯಾದವರ ಸಂಖ್ಯೆ 4,034 ಕ್ಕೇರಿದೆ.
- ಕರ್ನಾಟಕ: ಬೆಂಗಳೂರು ನಗರದಲ್ಲಿ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 20,000 ದಾಟಿದೆ. ಚಿತ್ರದುರ್ಗದಲ್ಲಿ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದ 110 ವರ್ಷದ ಮಹಿಳೆ ಚಿಕಿತ್ಸೆ ಯಶಸ್ವಿಯಾಗಿ ಗುಣಮುಖರಾಗಿದ್ದಾರೆ. ಕೋವಿಡ್ -19 ರೋಗಿಗಳ ವಿಷಯದಲ್ಲಿ ನಿರ್ಲಕ್ಷ ತೋರಲಾಗುತ್ತಿದೆ ಎಂದು ಮಾಜಿ ಕಾಂಗ್ರೆಸ್ ಸಚಿವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ರಾಜ್ಯ ಸರಕಾರದ ವಿರುದ್ದ ಪ್ರಕರಣ ದಾಖಲಿಸಿಕೊಂಡಿದೆ. ನಿನ್ನೆ 5172 ಹೊಸ ಪ್ರಕರಣಗಳು ವರದಿಯಾಗಿವೆ ಮತ್ತು 3860 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.ಹಾಗು 98 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರು ನಗರದ ಪ್ರಕರಣಗಳ ಸಂಖ್ಯೆ 1852. ಒಟ್ಟು ಪ್ರಕರಣಗಳು: 1,29,287; ಸಕ್ರಿಯ ಪ್ರಕರಣಗಳು ; 73,219; ಮರಣ: 2412.
- ಆಂಧ್ರ ಪ್ರದೇಶ: ಆಂಧ್ರ ಪ್ರದೇಶದಲ್ಲಿ ಕೋವಿಡ್ -19 ಪರಿಸ್ಥಿತಿ ಕಳವಳಕಾರಿಯಾಗಿಲ್ಲ ಎಂದು ರಾಜ್ಯ ಆರೋಗ್ಯ ಆಯುಕ್ತರು ಹೇಳಿದ್ದಾರೆ. ಮೂಲ ಸೌಕರ್ಯ ಮತ್ತು ಔಷಧಿಗಳ ಕಾಪು ದಾಸ್ತಾನು ಇರುವುದರಿಂದ ಸಂತ್ರಸ್ತರಾದ ಎಲ್ಲರಿಗೂ ಚಿಕಿತ್ಸೆ ನೀಡಲು ರಾಜ್ಯವು ಪೂರ್ಣವಾಗಿ ಸನ್ನಧವಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ 2,800 ಐ.ಸಿ.ಯು. ಹಾಸಿಗೆಗಳು, 11,353 ಆಮ್ಲಜನಕ ಬೆಂಬಲಿತ ಹಾಸಿಗೆಗಳು, ಮತ್ತು 12,000 ಸಾಮಾನ್ಯ ಹಾಸಿಗೆಗಳು ಲಭ್ಯ ಇವೆ . ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 26,153 ಹಾಸಿಗೆಗಳು ಖಾಲಿಯಾಗುಳಿದಿವೆ ಎಂದೂ ಆರೋಗ್ಯ ಆಯುಕ್ತರು ಹೇಳಿದ್ದಾರೆ. ನಿನ್ನೆ 9276 ಹೊಸ ಪ್ರಕರಣಗಳು ವರದಿಯಾಗಿವೆ, 12,750 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಮತ್ತು 58 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 1,50,209 ; ಸಕ್ರಿಯ ಪ್ರಕರಣಗಳು : 72,188 ; ಮರಣ: 1407
- ತೆಲಂಗಾಣ: ಐ.ಆರ್.ಡಿ.ಎ.ನೀಡಿದ ಎಚ್ಚರಿಕೆ ಹೊರತಾಗಿಯೂ ಹೈದರಾಬಾದಿನಲ್ಲಿಯ ಖಾಸಗಿ ಆಸ್ಪತ್ರೆಗಳು ನಗದಿಗಾಗಿ ಒತ್ತಾಯ ಹೇರುತ್ತಿವೆ. ಕೋವಿಡ್ -19 ರೋಗಿಗಳನ್ನು ಸತಾಯಿಸುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ಹಾಕಲು ರಾಜ್ಯ ಸರಕಾರದ ಸಮಿತಿಯನ್ನು ರಚಿಸಿದೆ. ಸರಕಾರಿ ಸ್ವಾಮ್ಯದ ಗಾಂಧಿ ಆಸ್ಪತ್ರೆಯಲ್ಲಿ ಗಂಭೀರವಾಗಿ ಅಸ್ವಸ್ಥರಾಗಿದ್ದ 5000 ಕೋವಿಡ್ -19 ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿ ಸಂಪೂರ್ಣ ಗುಣಪಡಿಸಲಾಗಿದೆ, ಅವರಲ್ಲಿ ಹಲವಾರು ಮಂದಿ ಇತರ ಖಾಯಿಲೆಗಳಿಂದ ಬಳಲುತ್ತಿದ್ದರು, ಕಳೆದ 24 ಗಂಟೆಗಳಲ್ಲಿ 1891 ಹೊಸ ಪ್ರಕರಣಗಳು ವರದಿಯಾಗಿವೆ ಮತ್ತು 1088 ಮಂದಿ ಗುಣಮುಖರಾಗಿದ್ದಾರೆ, ಹಾಗು 10 ಮಂದಿ ಮೃತಪಟ್ಟಿದ್ದಾರೆ. 1891 ಪ್ರಕರಣಗಳಲ್ಲಿ ಜಿ.ಎಚ್.ಎಂ.ಸಿ.ಯಿಂದ ವರದಿಯಾದ ಪ್ರಕರಣಗಳ ಸಂಖ್ಯೆ 517. ಒಟ್ಟು ಪ್ರಕರಣಗಳು: 66,677; ಸಕ್ರಿಯ ಪ್ರಕರಣಗಳು: 18,547; ಸಾವುಗಳು: 540 ;ಗುಣಮುಖರಾಗಿ ಬಿಡುಗಡೆಯಾದವರು : 47,590 .
- ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಶ್ರೀ ಪೀಮಾ ಖಂಡು ಅವರು ರಾಜ್ಯಪಾಲ ಡಾ. ಬಿ.ಡಿ. ಮಿಶ್ರಾ ಅವರನ್ನು ಭೇಟಿಯಾಗಿ ಅಭಿವೃದ್ದಿ ವಿಷಯಗಳನ್ನು ಮತ್ತು ರಾಜ್ಯದಲ್ಲಿ ಕೋವಿಡ್ -19 ನಿರ್ವಹಣಾ ಸ್ಥಿತಿ ಗತಿಯ ಕುರಿತು ಚರ್ಚಿಸಿದರು.
- ಅಸ್ಸಾಂ: ಅಸ್ಸಾಂನಲ್ಲಿ ಕೋವಿಡ್ -19 ಮೃತ್ಯು ಪ್ರಮಾಣ 0.24 % , ಗುಣಮುಖ ದರ 75 % ಮತ್ತು ಮಿಲಿಯನ್ ಜನಸಂಖ್ಯೆಗೆ ಪರೀಕ್ಷಾ ಪ್ರಮಾಣ 27,554 ಎಂದು ಅಸ್ಸಾಂ ಆರೋಗ್ಯ ಸಚಿವರಾದ ಶ್ರೀ ಹಿಮಂತ್ ಬಿಸ್ವ ಸರ್ಮಾ ಟ್ವೀಟ್ ಮಾಡಿದ್ದಾರೆ.
- ಮಣಿಪುರ: ಮಣಿಪುರ ರಾಜ್ಯವು ಇದುವರೆಗೆ 2756 ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ. ಅಲ್ಲಿ 1051 ಸಕ್ರಿಯ ಪ್ರಕರಣಗಳಿವೆ, ಗುಣಮುಖ ದರ 61%.
- ಮಹಾರಾಷ್ಟ್ರ: ತೆರವು 3.0 ಮಾರ್ಗದರ್ಶಿಗಳ ಅನ್ವಯ ಮಹಾರಾಷ್ಟ್ರದಲ್ಲಿ ಸುಮಾರು ನಾಲ್ಕುವರೆ ತಿಂಗಳ ಬಳಿಕ ಆಗಸ್ಟ್ 5 ರಿಂದ ಮಾಲ್ ಗಳು ತೆರೆಯಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿವೆ. ಒಟ್ಟು 75 ಬೃಹತ್ ಮಾಲ್ ಗಳ ಪೈಕಿ ಅರ್ಧಾಂಶದಷ್ಟು ಮುಂಬಯಿ ಮಹಾನಗರ ವಲಯದಲ್ಲಿವೆ. ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ತೆರೆಯಲು ಅವಕಾಶವಿದ್ದಾಗ್ಯೂ ಗ್ರಾಹಕರ ಪ್ರತಿಕ್ರಿಯೆ ಉತ್ಸಾಹದಾಯಕವಾಗಿರುವ ನಿರೀಕ್ಷೆ ಇಲ್ಲ. ಮಹಾರಾಷ್ಟ್ರವು 1.49 ಲಕ್ಷ ಸಕ್ರಿಯ ಪ್ರಕರಣಗಳನ್ನು ಹೊಂದಿದೆ. ಮತ್ತು ಇಂದಿವರೆಗೆ ಅಲ್ಲಿ 15,316 ಸಾವುಗಳು ಸಂಭವಿಸಿವೆ. ರಾಜ್ಯದಲ್ಲಿ ಶನಿವಾರದಂದು 10,725 ಮಂದಿ ಗುಣಮುಖರಾಗಿದ್ದಾರೆ, ಮತ್ತು 9,761 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ.
- ಗುಜರಾತ್: ಗುಜರಾತಿನಲ್ಲಿ ಒಟ್ಟು ಕೋವಿಡ್ -19 ಗುಣಮುಖ ಪ್ರಕರಣಗಳ ಸಂಖ್ಯೆ 45,000 ದಾಟಿದೆ. ರಾಜ್ಯದಲ್ಲಿ ಶನಿವಾರದಂದು ವಿವಿಧ ಆಸ್ಪತ್ರೆಗಳಿಂದ 875 ಕೋವಿಡ್ -19 ರೋಗಿಗಳು ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 14,327 ಕ್ಕೆ ಇಳಿದಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 1,136 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಸೂರತ್ತಿನಲ್ಲಿ 262 ಮತ್ತು ಅಹ್ಮದಾಬಾದಿನಲ್ಲಿ 146 ಪ್ರಕರಣಗಳು ವರದಿಯಾಗಿವೆ.
- ರಾಜಸ್ಥಾನ: ಇಂದು ಬೆಳಿಗ್ಗೆ 561 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಗರಿಷ್ಟ ಪ್ರಕರಣಗಳು ಕೋಟಾ (100 ಪ್ರಕರಣಗಳು) , ಆ ಬಳಿಕ ಜೈಪುರ (77 ಪ್ರಕರಣಗಳು) ಮತ್ತು ಪಾಲಿ (58 ಪ್ರಕರಣಗಳು) . ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 12,391.
- ಮಧ್ಯ ಪ್ರದೇಶ: ಶನಿವಾರ ಮಧ್ಯ ಪ್ರದೇಶದಲ್ಲಿ 808 ಹೊಸ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ, ಇದರೊಂದಿಗೆ ರಾಜ್ಯದ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 32,614 ಕ್ಕೇರಿದೆ. ಶನಿವಾರದಂದು ಭೋಪಾಲದಿಂದ (156) ಗರಿಷ್ಟ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ. ಆ ಬಳಿಕದ ಸ್ಥಾನಗಳಲ್ಲಿ ಜಬಲ್ಪುರ (125 ಪ್ರಕರಣಗಳು) , ಮತ್ತು ನಂತರ ಇಂದೋರ್ (120 ಪ್ರಕರಣಗಳು) ಗಳಿವೆ. ಶನಿವಾರದಂದು 698 ಮಂದಿ ಗುಣಮುಖರಾಗುವುದರೊಂದಿಗೆ , ಸಕ್ರಿಯ ಪ್ರಕರಣಗಳ ಸಂಖ್ಯೆ 8,769.
- ಗೋವಾ: ಹೊಟೇಲುಗಳಿಗೆ ಕಾರ್ಯಾರಂಭ ಮಾಡಲು ಗೋವಾ ಸರಕಾರ ಅನುಮತಿಸಿದ 25 ದಿನಗಳ ನಂತರವೂ ಬಹುತೇಕ ಹೊಟೇಲುಗಳು ಮರು ಆರಂಭವನ್ನು ಈ ವರ್ಷದ ಅಕ್ಟೋಬರ್ –ನವೆಂಬರ್ ತಿಂಗಳವರೆಗೆ ಮುಂದೂಡಲು ನಿರ್ಧರಿಸಿವೆ. ಕನಿಷ್ಟ ವಾಸ್ತವ್ಯದ ಕರಾರಿನೊಂದಿಗೆ ಕಾರ್ಯಾಚರಿಸುವುದು ’ವ್ಯಾಪಾರೋದ್ಯಮಕ್ಕೆ ಅನುಕೂಲಕರವಲ್ಲ” ಎಂಬ ಅಭಿಪ್ರಾಯವನ್ನು ಬಹುಪಾಲು ಹೊಟೇಲಿಗರು ವ್ಯಕ್ತಪಡಿಸಿದ್ದು, ಅವರು ಸೆಪ್ಟೆಂಬರ್ ತಿಂಗಳವರೆಗೆ ಕಾಯಲು ನಿರ್ಧರಿಸಿದ್ದಾರೆ. ಗೋವಾ 1,705 ಸಕ್ರಿಯ ಪ್ರಕರಣಗಳನ್ನು ಹೊಂದಿದೆ. ಶನಿವಾರದಂದು 280 ಹೊಸ ಪ್ರಕರಣಗಳು ವರದಿಯಾಗಿವೆ.
ವಾಸ್ತವ ಪರಿಶೀಲನೆ
***
(Release ID: 1643141)
|