ಪ್ರಧಾನ ಮಂತ್ರಿಯವರ ಕಛೇರಿ
ಕೋಲ್ಕತ್ತಾ, ಮುಂಬೈ ಮತ್ತು ನೋಯ್ಡಾಗಳಲ್ಲಿನ ಉನ್ನತ ಗುಣಮಟ್ಟದ ಸಮಗ್ರ ಕೋವಿಡ್ ಪರೀಕ್ಷಾ ಕೇಂದ್ರಕ್ಕೆ ಪ್ರಧಾನಿ ಚಾಲನೆ
Posted On:
27 JUL 2020 5:56PM by PIB Bengaluru
ಹಾಲಿ ದೇಶಾದ್ಯಂತ ಪ್ರತಿ ದಿನ 5 ಲಕ್ಷಕ್ಕೂ ಅಧಿಕ ಸೋಂಕು ಪತ್ತೆ ಪರೀಕ್ಷೆ;
ಮುಂದಿನ ವಾರಗಳಲ್ಲಿ ಪರೀಕ್ಷಾ ಸಾಮರ್ಥ್ಯ 10 ಲಕ್ಷಕ್ಕೆ ಹೆಚ್ಚಿಸುವ ಪ್ರಯತ್ನಗಳು ಪ್ರಗತಿಯಲ್ಲಿ; ಪ್ರಧಾನಮಂತ್ರಿ
ಭಾರತದಲ್ಲಿ ಪ್ರಸ್ತುತ 11,000ಕ್ಕೂ ಅಧಿಕ ಕೋವಿಡ್ ಸೌಕರ್ಯಗಳು ಮತ್ತು 11 ಲಕ್ಷಕ್ಕೂ ಅಧಿಕ ಐಸೋಲೇಷನ್ ಹಾಸಿಗೆಗಳು: ಪ್ರಧಾನಮಂತ್ರಿ
ಗ್ರಾಮಗಳಲ್ಲಿ ಈಗಾಗಲೇ ಇರುವ ಆರೋಗ್ಯ ಮೂಲಸೌಕರ್ಯದ ವೃದ್ಧಿ ಜೊತೆಗೆ ಹೊಸ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕೆಂದ ಪ್ರಧಾನಿ
ಈ ಪರೀಕ್ಷಾ ಸೌಕರ್ಯಗಳ ಸ್ಥಾಪನೆಗೆ ಪ್ರಧಾನಿ ಅವರಿಗೆ ಧನ್ಯವಾದ ಹೇಳಿದ ಮುಖ್ಯಮಂತ್ರಿಗಳು; ಕಠಿಣ ಸಂದರ್ಭಗಳಲ್ಲಿ ದಿಟ್ಟ ನಾಯಕತ್ವ ಪ್ರದರ್ಶಿಸಿದ್ದಕ್ಕಾಗಿ ಮೆಚ್ಚುಗೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮೂರು ಉನ್ನತ ಗುಣಮಟ್ಟದ ಸಮಗ್ರ ಕೋವಿಡ್ ಪರೀಕ್ಷಾ ಕೇಂದ್ರಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಈ ಪರೀಕ್ಷಾ ಕೇಂದ್ರಗಳು ಕೋಲ್ಕತ್ತಾ, ಮುಂಬೈ ಮತ್ತು ನೋಯ್ಡಾದಲ್ಲಿನ ರಾಷ್ಟ್ರೀಯ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಗಳಲ್ಲಿ ಕಾರ್ಯ ನಿರ್ವಹಿಸಲಿವೆ.
ಈ ಮೂರು ಅತ್ಯಾಧುನಿಕ ಪರೀಕ್ಷಾ ಸೌಕರ್ಯಗಳಿಂದ ಮೂರು ನಗರಗಳಲ್ಲೂ ಪ್ರತಿ ದಿನ ಪರೀಕ್ಷಾ ಸಾಮರ್ಥ್ಯ ಬಹುತೇಕ 10,000 ಅಧಿಕವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಹೆಚ್ಚಿನ ಸಂಖ್ಯೆಗಳ ಪರೀಕ್ಷೆಯಿಂದ ತ್ವರಿತ ಪತ್ತೆ ಮತ್ತು ಚಿಕಿತ್ಸೆಗೆ ನೆರವಾಗಲಿದೆ. ಆ ಮೂಲಕ ಸೋಂಕು ಹರಡುವುದನ್ನು ತಪ್ಪಿಸಲು ಸಹಕಾರಿಯಾಗಲಿದೆ ಎಂದರು. ಈ ಪ್ರಯೋಗಾಲಯಗಳು ಕೇವಲ ಕೋವಿಡ್ ಗೆ ಸೀಮಿತವಾಗಿಲ್ಲ. ಮುಂದಿನ ದಿನಗಳಲ್ಲಿ ಹೆಪಟಿಟಿಸ್ ಬಿ ಮತ್ತು ಸಿ, ಎಚ್ಐವಿ, ಡೆಂಘಿ ಮತ್ತು ಇತರ ಕಾಯಿಲೆಗಳ ಪರೀಕ್ಷೆಗಳನ್ನೂ ಸಹ ಮಾಡಬಹುದಾಗಿದೆ.
ಸಕಾಲಿಕ ನಿರ್ಧಾರಗಳು
ಸರ್ಕಾರ ಕೈಗೊಂಡ ಸಕಾಲಿಕ ನಿರ್ಧಾರಗಳ ಪರಿಣಾಮ ಕೋವಿಡ್-19ನಿಂದ ಆಗಿರುವ ಸಾವುಗಳ ಪ್ರಮಾಣ ಇತರೆ ದೇಶಗಳಿಗೆ ಹೋಲಿಸಿದರೆ ಕಡಿಮೆ ಇದೆ ಮತ್ತು ಭಾರತ ಉತ್ತಮ ಸ್ಥಿತಿಯಲ್ಲಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಅಲ್ಲದೆ ಗುಣಮುಖರಾಗುತ್ತಿರುವವರ ಪ್ರಮಾಣವೂ ಇತರೆ ರಾಷ್ಟ್ರಗಳಿಗಿಂತ ಹೆಚ್ಚಿದ್ದು, ಅದು ಪ್ರತಿ ದಿನ ಸುಧಾರಿಸತೊಡಗಿದೆ. ಈವರೆಗೆ ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ ಸುಮಾರು 10 ಲಕ್ಷದ ಸನಿಹದಲ್ಲಿದೆ.
ಕೊರೊನಾಗೆ ನಿರ್ದಿಷ್ಟ ಆರೋಗ್ಯ ಮೂಲಸೌಕರ್ಯ
ನಿರ್ದಿಷ್ಟವಾಗಿ ಕೊರೊನಾಗೆ ಸಂಬಂಧಿಸಿದಂತೆ ಆರೋಗ್ಯ ಮೂಲಸೌಕರ್ಯವನ್ನು ದೇಶಾದ್ಯಂತ ಅತ್ಯಂತ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಪಡಿಸಲಾಗಿದ ಎಂದು ಪ್ರಧಾನಮಂತ್ರಿ ಹೇಳಿದರು. ಕೋವಿಡ್ ವಿರುದ್ಧ ಹೋರಾಟ ಆರಂಭವಾದ ಕೂಡಲೇ ಕೇಂದ್ರ ಸರ್ಕಾರ 15,000 ಕೋಟಿ ರೂ.ಗಳ ಪ್ಯಾಕೇಜ್ ಪ್ರಕಟಿಸಿತ್ತು ಎಂದು ಪ್ರಧಾನಿ ಉಲ್ಲೇಖಿಸಿದರು. ದೇಶದಲ್ಲಿ ಸದ್ಯ 11,000ಕ್ಕೂ ಅಧಿಕ ಕೋವಿಡ್ ಸೌಕರ್ಯಗಳಿದ್ದು, 11 ಲಕ್ಷಕ್ಕೂ ಅಧಿಕ ಐಸೋಲೇಷನ್ ಹಾಸಿಗೆಗಳಿವೆ.
ಜನವರಿ ತಿಂಗಳಲ್ಲಿ ದೇಶದಲ್ಲಿ ಒಂದೇ ಒಂದು ಕೋವಿಡ್ ಪರೀಕ್ಷಾ ಕೇಂದ್ರವಿತ್ತು. ಈಗ ಬಹುತೇಕ 1300 ಅಂತಹ ಪ್ರಯೋಗಾಲಯಗಳಿವೆ. ಪ್ರಸ್ತುತ ದೇಶದಲ್ಲಿ ಪ್ರತಿ ದಿನ 5 ಲಕ್ಷಕ್ಕೂ ಅಧಿಕ ಕೋವಿಡ್ ಸೋಂಕಿನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಮತ್ತು ಮುಂದಿನ ವಾರಗಳಲ್ಲಿ ಆ ಸಾಮರ್ಥ್ಯವನ್ನು 10 ಲಕ್ಷಕ್ಕೆ ಹೆಚ್ಚಿಸಲು ಎಲ್ಲ ಪ್ರಯತ್ನಗಳು ನಡೆದಿವೆ ಎಂದರು.
ದೇಶ ಇದೀಗ ಎರಡನೇ ಅತಿ ದೊಡ್ಡ ಪಿಪಿಇ ಕಿಟ್ ಉತ್ಪಾದಕ ರಾಷ್ಟ್ರವಾಗಿದೆ ಎಂದು ಅವರು ಉಲ್ಲೇಖಿಸಿದರು. ದೇಶದಲ್ಲಿ ಆರು ತಿಂಗಳ ಹಿಂದೆ ಒಂದೇ ಒಂದು ಪಿಪಿಇ ಕಿಟ್ ಕೂಡ ಉತ್ಪಾದನೆಯಾಗುತ್ತಿರಲಿಲ್ಲ. ಇದೀಗ 1200ಕ್ಕೂ ಅಧಿಕ ಉತ್ಪಾದಕರು ಇದ್ದು, ಅವರು ಪ್ರತಿ ದಿನ 5 ಲಕ್ಷಕ್ಕೂ ಅಧಿಕ ಕಿಟ್ ಗಳನ್ನು ಉತ್ಪಾದಿಸುತ್ತಿದ್ದಾರೆ. ಆ ಮಟ್ಟಿಗೆ ದೇಶ ಪ್ರಗತಿ ಸಾಧಿಸಿದೆ ಎಂದು ಹೇಳಿದರು. ದೇಶ ಎನ್-95 ಮಾಸ್ಕ್ ಗಳ ಆಮದಿನ ಮೇಲೆ ಅವಲಂಬಿತವಾಗಿತ್ತು. ಇದೀಗ ದೇಶದಲ್ಲಿ ಪ್ರತಿ ದಿನ 3 ಲಕ್ಷಕ್ಕೂ ಅಧಿಕ ಎನ್-95 ಮಾಸ್ಕ್ ಗಳನ್ನು ಉತ್ಪಾದಿಸಲಾಗುತ್ತಿದೆ. ವಾರ್ಷಿಕ ವೆಂಟಿಲೇಟರ್ ಉತ್ಪಾದನಾ ಸಾಮರ್ಥ್ಯ 3 ಲಕ್ಷ ದಾಟಿದೆ. ಅಲ್ಲದೆ ವೈದ್ಯಕೀಯ ಆಕ್ಸಿಜನ್ ಸಿಲಿಂಡರ್ ಗಳ ಉತ್ಪಾದನೆಯಲ್ಲೂ ಮಹತ್ವದ ಹೆಚ್ಚಳವಾಗಿದೆ ಎಂದು ಅವರು ಹೇಳಿದರು. ಇದರಿಂದಾಗಿ ಜೀವಗಳನ್ನು ಉಳಿಸಲು ಸಹಾಯವಾಗಿರುವುದೇ ಅಲ್ಲದೆ ಭಾರತ, ಆಮದಿನಿಂದ ರಫ್ತು ರಾಷ್ಟ್ರವಾಗಿ ಪರಿವರ್ತನೆಯಾಗಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳ ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿ ಅವರು, ಗ್ರಾಮಗಳಲ್ಲಿ ಹಾಲಿ ಇರುವ ಆರೋಗ್ಯ ಮೂಲಸೌಕರ್ಯ ವೃದ್ಧಿ ಜೊತೆಗೆ ಹೊಸ ಆರೋಗ್ಯ ಮೂಲಸೌಕರ್ಯವನ್ನೂ ಸಹ ಅಭಿವೃದ್ಧಿಗೊಳಿಸಬೇಕಿದೆ ಎಂದು ಹೇಳಿದರು.
ಮಾನವ ಸಂಪನ್ಮೂಲ ವೃದ್ಧಿ
ದೇಶದಲ್ಲಿ ಭೌತಿಕ ಮೂಲಸೌಕರ್ಯ ಅಭಿವೃದ್ಧಿಗೊಳಿಸುವುದಷ್ಟೇ ಅಲ್ಲದೆ, ದೇಶದಲ್ಲಿ ಅತ್ಯಂತ ಕ್ಷಿಪ್ರ ರೀತಿಯಲ್ಲಿ ಅರೆ ವೈದ್ಯಕೀಯ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಮಾನವ ಸಂಪನ್ಮೂಲವನ್ನು ಒಟ್ಟುಗೂಡಿಸಲಾಗಿದ್ದು, ಅವರು ಸಾಂಕ್ರಾಮಿಕ ಹರಡುವುದನ್ನು ನಿಯಂತ್ರಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಹೊಸ ಮತ್ತು ನಿವೃತ್ತ ಆರೋಗ್ಯ ವೃತ್ತಿಪರರನ್ನು ಬಳಸಿಕೊಂಡು ನಿರಂತರವಾಗಿ ಕಾರ್ಯೋನ್ಮುಖವಾಗಬೇಕು ಎಂದ ಅವರು, ನಮ್ಮ ಕೊರೊನಾ ಯೋಧರ ರಕ್ಷಣೆಗಾಗಿ ನಾವು ಆರೋಗ್ಯ ವ್ಯವಸ್ಥೆಯನ್ನುಇನ್ನಷ್ಟು ಸುಧಾರಿಸಬೇಕಾಗಿದೆ ಎಂದರು.
ಹಬ್ಬಗಳ ಸಂದರ್ಭದಲ್ಲಿ ಸುರಕ್ಷತೆ
ಕೋವಿಡ್ ವೈರಾಣು ನಿಯಂತ್ರಿಸುವ ಉದ್ದೇಶದಿಂದ ಮುಂಬರುವ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಜನರು ಅತ್ಯಂತ ಜಾಗರೂಕರಾಗಿರಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ನೆರವು ಬಡಕುಟುಂಬಗಳಿಗೆ ತಲುಪಬೇಕು ಎಂದು ಪ್ರತಿಪಾದಿಸಿದರು. ಕೊರೊನಾ ಸೋಂಕಿಗೆ ಲಸಿಕೆ ಅಭಿವೃದ್ಧಿಯಾಗುವವರೆಗೆ ಎರಡು ಗಜ ಅಂತರ, ಮಾಸ್ಕ್ ಧರಿಸುವುದು ಮತ್ತು ಕೈಶುಚಿತ್ವ ಕಾಪಾಡಿ ಕೊಳ್ಳುವುದನ್ನು ಪಾಲಿಸುವ ಮೂಲಕ ಜನರು ತಮ್ಮನ್ನು ತಾವು ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂದರು.
ಕೇಂದ್ರ ಸಚಿವ ಡಾ. ಹರ್ಷವರ್ಧನ್ ಅವರು, ಕೋವಿಡ್ ಪರೀಕ್ಷೆ ಪ್ರಯೋಗಾಲಯಗಳು ಇದೀಗ ದೇಶಾದ್ಯಂತ ಎಲ್ಲ ಕಡೆ ಲಭ್ಯವಿವೆ ಎಂದರು. ಅಲ್ಲದೆ ಅವರು ಕೇಂದ್ರ ಸಚಿವರು ಮತ್ತು ದೆಹಲಿ ಮುಖ್ಯಮಂತ್ರಿಗಳ ಜೊತೆ ಸೇರಿ ರಾಜಧಾನಿಯಲ್ಲಿ ಸೋಂಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಮಾತನಾಡಿದರು.
ಮುಖ್ಯಮಂತ್ರಿಗಳ ಮಾತು
ಮುಖ್ಯಮಂತ್ರಿಗಳು ಈ ಪರೀಕ್ಷಾ ಸೌಕರ್ಯಗಳನ್ನು ಆರಂಭಿಸಿದ್ದಕ್ಕಾಗಿ ಪ್ರಧಾನಮಂತ್ರಿಗಳಿಗೆ ಧನ್ಯವಾದಗಳನ್ನು ಹೇಳಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ಉದ್ಧವ್ ಠಾಕ್ರೆ, ಕಠಿಣ ಸಂದರ್ಭಗಳಲ್ಲಿ ಪ್ರಧಾನಮಂತ್ರಿಯವರು ದಿಟ್ಟ ನಾಯಕತ್ವ ತೋರಿದರು ಎಂದು ಪ್ರಶಂಸಿಸಿದರು. ಅವರು ಮುಂಬೈನಲ್ಲಿ ಕೈಗೊಂಡಿರುವ “ಸೋಂಕಿನ ಬೆನ್ನತ್ತಿ” ಅಭಿಯಾನದ ಬಗ್ಗೆ ಮಾತನಾಡಿದರು ಮತ್ತು ಶಾಶ್ವತ ಸೋಂಕು ಆಸ್ಪತ್ರೆಗಳನ್ನು ಸ್ಥಾಪಿಸುವ ಕುರಿತಂತೆ ಚರ್ಚೆ ನಡೆಸಿದರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯಗಳ ಬಗೆಗೆ ಪ್ರಧಾನಮಂತ್ರಿ ಅವರು ತೋರುತ್ತಿರುವ ಸಹಕಾರದ ವರ್ತನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಸೋಂಕು ಪತ್ತೆ ಕಾರ್ಯಗಳು, ಟೆಲಿ ಮೆಡಿಸನ್ ಬಳಕೆ ಮತ್ತು ರಾಜ್ಯದಲ್ಲಿ ಹಾಲಿ ಇರುವ ಪ್ರಯೋಗಾಲಯಗಳಲ್ಲಿ ಸೌಕರ್ಯಗಳನ್ನು ಹೆಚ್ಚಿಸುವ ಅಗತ್ಯತೆಗಳ ಕುರಿತಂತೆ ಮಾತನಾಡಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಸೋಂಕಿನ ವಿರುದ್ಧ ನಡೆಸುತ್ತಿರುವ ಸಮರದಲ್ಲಿ ಪ್ರಧಾನಮಂತ್ರಿ ಅವರ ಅವಿರತ ಪ್ರಯತ್ನಗಳಿಗಾಗಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಇಂದು ಚಾಲನೆ ನೀಡಲಾಗಿರುವ ಪ್ರಯೋಗಾಲಯಗಳಿಂದ ಪರೀಕ್ಷಾ ಅವಧಿ ಗಣನೀಯವಾಗಿ ತಗ್ಗಲಿದೆ ಎಂದರು. ಅವರು ರಾಜ್ಯದಲ್ಲಿ ಪರೀಕ್ಷಾ ಸಾಮರ್ಥ್ಯವೃದ್ಧಿ ಮತ್ತು ಪ್ರತಿ ದಿನ ಆಂಟಿಜನ್ ಪರೀಕ್ಷೆಗಳ ಸಂಖ್ಯೆ ಹೆಚ್ಚಳದ ಯೋಜನೆಯನ್ನು ಉಲ್ಲೇಖಿಸಿದರು.
ಹಿನ್ನೆಲೆ
ಈ ಮೂರು ಉನ್ನತ ಗುಣಮಟ್ಟದ ಸಮಗ್ರ ಪರೀಕ್ಷಾ ಸೌಕರ್ಯಗಳನ್ನು ನೋಯ್ಡಾದಲ್ಲಿರುವ ಐಸಿಎಂಆರ್ ನ- ಕ್ಯಾನ್ಸರ್ ನಿಯಂತ್ರಣ ಮತ್ತು ಸಂಶೋಧನಾ ರಾಷ್ಟ್ರೀಯ ಕೇಂದ್ರ, ಮುಂಬೈನ ಐಸಿಎಂಆರ್ ನ- ರಾಷ್ಟ್ರೀಯ ಸಂತಾನೋತ್ಪತ್ತಿ ಆರೋಗ್ಯ ಕುರಿತ ಸಂಶೋಧನಾ ಕೇಂದ್ರ ಮತ್ತು ಕೊಲ್ಕತ್ತಾದ ಐಸಿಎಂಆರ್ ನ –ರಾಷ್ಟ್ರೀಯ ಕಾಲರಾ ಮತ್ತು ಇತರೆ ಕರುಳಿನ ರೋಗಗಳ ಕೇಂದ್ರಗಳಲ್ಲಿ ಸ್ಥಾಪಿಸಲಾಗಿದ್ದು, ಅವುಗಳಲ್ಲಿ ಪ್ರತಿದಿನ ಸುಮಾರು 10 ಸಾವಿರ ಮಾದರಿಗಳನ್ನು ಪರೀಕ್ಷೆ ಮಾಡಬಹುದಾಗಿದೆ. ಈ ಪ್ರಯೋಗಾಲಯಗಳು ಪರೀಕ್ಷೆಯ ಸಮಯವನ್ನು ತಗ್ಗಿಸುವುದಲ್ಲದೆ, ಲ್ಯಾಬ್ ಸಿಬ್ಬಂದಿ ಕ್ಲಿನಿಕ್ ಸಾಮಗ್ರಿಗಳ ಮೂಲಕ ಸೋಂಕಿಗೆ ಒಳಗಾಗುವುದು ತಪ್ಪಿಸಲಿದೆ. ಈ ಲ್ಯಾಬ್ ಗಳಲ್ಲಿ ಕೋವಿಡ್ ಮಾತ್ರವಲ್ಲದೆ, ಇತರೆ ಸಾಂಕ್ರಾಮಿಕ ರೋಗಗಳಾದ ಹೆಪಟಿಟಿಸ್ ಬಿ ಮತ್ತು ಸಿ, ಎಚ್ ಐವಿ, ಮೈಕೋಬ್ಯಾಕ್ಟೀರಿಯಂ ಕ್ಷಯರೋಗ, ಸೈಟೋಮೆಗ್ಲೋವೈರಸ್, ಕ್ಲಾಮೈಡಿಯಾ, ನೈಸೀರಿಯಾ ಡೆಂಘಿ ಮತ್ತಿತರವುಗಳ ಪರೀಕ್ಷೆಗಳನ್ನೂ ಸಹ ಮಾಡಬಹುದಾಗಿದೆ.
***
(Release ID: 1641784)
Visitor Counter : 297
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam