ಪ್ರಧಾನ ಮಂತ್ರಿಯವರ ಕಛೇರಿ
750 ಮೆಗಾವ್ಯಾಟ್ ಸಾಮರ್ಥ್ಯದ ರೇವಾ ಸೌರಶಕ್ತಿ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿ
Posted On:
09 JUL 2020 4:11PM by PIB Bengaluru
750 ಮೆಗಾವ್ಯಾಟ್ ಸಾಮರ್ಥ್ಯದ ರೇವಾ ಸೌರಶಕ್ತಿ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿ
ರೇವಾ ಯೋಜನೆಯಿಂದ ಪ್ರತಿವರ್ಷ ಅಂದಾಜು 15ಲಕ್ಷ ಟನ್ CO2 ಗೆ ಸಮನಾದ ಇಂಗಾಲ ಹೊರಸೂಸುವಿಕೆ ತಗ್ಗಲಿದೆ
2022ರ ವೇಳೆಗೆ ನವೀಕರಿಸಬಹುದಾದ ಇಂಧನ ಸ್ಥಾಪಿತ ಸಾಮರ್ಥ್ಯವನ್ನು
175 ಗಿಗಾ ವ್ಯಾಟ್ ಗೆ ಹೆಚ್ಚಿಸುವ ಭಾರತದ ಗುರಿ ಸಾಧನೆಗೆ ಈ ಯೋಜನೆ ನಿದರ್ಶನ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020ರ ಜುಲೈ 10ರಂದು ಮಧ್ಯಪ್ರದೇಶದ ರೇವಾದಲ್ಲಿ ಸ್ಥಾಪಿಸಿರುವ 750 ಮೆಗಾವ್ಯಾಟ್ ಸಾಮರ್ಥ್ಯದ ಸೌರವಿದ್ಯುತ್ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಈ ಯೋಜನೆ 250 ಮೆಗಾವ್ಯಾಟ್ ಸಾಮರ್ಥ್ಯದ ಮೂರು ಸೌರಶಕ್ತಿ ಘಟಕಗಳನ್ನು ಹೊಂದಿದ್ದು, ಪ್ರತಿಯೊಂದು ಘಟಕವೂ ಸುಮಾರು 500 ಹೆಕ್ಟೇರ್ ಪ್ರದೇಶದಲ್ಲಿ ಸೌರಪಾರ್ಕ್ ನೊಳಗೆ ತಲೆಎತ್ತಿವೆ. (ಒಟ್ಟು ಪ್ರದೇಶ 1500 ಹೆಕ್ಟೇರ್). ಈ ಸೌರ ಘಟಕವನ್ನು ರೇವಾ ಆಲ್ಟ್ರಾ ಮೆಗಾ ಸೋಲಾರ್ ಲಿಮಿಟೆಡ್ (ಆರ್ ಯುಎಂಎಸ್ಎಲ್), ಮಧ್ಯಪ್ರದೇಶ ಉರ್ಜಾ ವಿಕಾಸ ನಿಗಮ ನಿಯಮಿತ(ಎಂಪಿಯುವಿಎನ್) ಮತ್ತು ಕೇಂದ್ರದ ಸಾರ್ವಜನಿಕ ಉದ್ದಿಮೆಗಳ ಅಧೀನಕ್ಕೆ ಒಳಪಟ್ಟಿರುವ ಭಾರತೀಯ ಸೌರ ಇಂಧನ ನಿಗಮ (ಎಸ್ಇಸಿಐ) ಜಂಟಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದೆ. ಕೇಂದ್ರ ಸರ್ಕಾರ, ಸೌರ ಪಾರ್ಕ್ ಅಭಿವೃದ್ಧಿಗೆ ಆರ್ ಯುಎಂಎಸ್ಎಲ್ ಗೆ 138 ಕೋಟಿ ರೂ. ಆರ್ಥಿಕ ನೆರವು ನೀಡಿದೆ. ಪಾರ್ಕ್ ಅಭಿವೃದ್ಧಿ ಹೊಂದಿದ ನಂತರ ಆರ್ ಯುಎಂಎಸ್ಎಲ್ ರಿವರ್ಸ್ ಹರಾಜು ಪ್ರಕ್ರಿಯೆ ಮೂಲಕ ಸೌರಪಾರ್ಕ್ ಒಳಗಡೆ ತಲಾ 250 ಮೆಗಾವ್ಯಾಟ್ ಸಾಮರ್ಥ್ಯದ ಮೂರು ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಮಹೀಂದ್ರಾ ರಿನಿವಬಲ್ಸ್ ಪ್ರೈವೇಟ್ ಲಿಮಿಟೆಡ್, ಎಸಿಎಂಇ ಜೈಪುರ್ ಸೋಲಾರ್ ಪವರ್ ಪ್ರೈವೇಟ್ ಲಿಮಿಟೆಡ್ ಮತ್ತು ಅರಿನ್ಸುನ್ ಕ್ಲೀನ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳನ್ನು ಆಯ್ಕೆ ಮಾಡಿದೆ. ರೇವಾ ಸೌರ ವಿದ್ಯುತ್ ಘಟಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಉತ್ತಮ ಸಮನ್ವಯ ಇದ್ದರೆ ಅತ್ಯುತ್ತಮ ಸಾಧನೆ ಮಾಡಬಹುದು ಎಂಬುದಕ್ಕೆ ಉದಾಹರಣೆಯಾಗಿದೆ.
ರೇವಾ ಸೌರ ವಿದ್ಯುತ್ ಘಟಕ, ಗ್ರಿಡ್ ಸಮಾನತೆ ಅಂತರವನ್ನು ತೊಡೆದುಹಾಕಿರುವ ದೇಶದ ಮೊದಲ ಸೌರ ವಿದ್ಯುತ್ ಘಟಕವಾಗಿದೆ. 2017ರ ಆರಂಭದಲ್ಲಿ ಪ್ರತಿ ಯುನಿಟ್ ಸೌರ ವಿದ್ಯುತ್ ಗೆ 4.50 ರೂ.ಇತ್ತು. ರೇವಾ ವಿದ್ಯುತ್ ಘಟಕ ಐತಿಹಾಸಿಕ ಫಲಿತಾಂಶಗಳನ್ನು ಪಡೆದ ಕಾರಣ ಆ ದರಕ್ಕೆ ಹೋಲಿಸಿದರೆ, ಸೌರಶಕ್ತಿ ದರ ಪ್ರತಿ ಯುನಿಟ್ ಗೆ ಮೊದಲ ವರ್ಷ 2.97 ರೂ. ತಗುಲಲಿದ್ದು, 15 ವರ್ಷಗಳ ವರೆಗೆ ಪ್ರತಿ ಯುನಿಟ್ ಗೆ 0.05 ರೂ. ಏರಿಕೆಯೊಂದಿಗೆ 25 ವರ್ಷಗಳ ಅವಧಿಗೆ ಪ್ರತಿ ಯುನಿಟ್ ಗೆ 3.30 ರೂ.ಗೆ ಬಂದು ನಿಲ್ಲಲಿದೆ. ಈ ಯೋಜನೆ ಪ್ರತಿ ವರ್ಷ ಅಂದಾಜು 15 ಲಕ್ಷ ಟನ್ ಸಿಒ2 (ಕಾರ್ಬನ್ ಡೈಆಕ್ಸೈಡ್ )ಗೆ ಸಮನಾದ ಇಂಗಾಲ ಹೊರಹಾಕುವುದನ್ನು ತಪ್ಪಿಸುತ್ತದೆ.
ಹೊಸ ಆವಿಷ್ಕಾರಗಳು ಮತ್ತು ಆಧುನಿಕ ಸ್ಥಿತ್ಯಂತರಗಳನ್ನು ಹೊಂದಿರುವ ಈ ರೇವಾ ಯೋಜನೆ ಭಾರತ ಹಾಗೂ ವಿದೇಶಗಳಲ್ಲೇ ಅತ್ಯುತ್ತಮವಾದುದು ಎಂಬ ಹೆಗ್ಗಳಿಕೆ ಗಳಿಸಿದೆ. ಇದರಲ್ಲಿ ಅಳವಡಿಸಿಕೊಂಡಿರುವ ವಿದ್ಯುತ್ ಉತ್ಪಾದಕರಿಗೆ ನೀಡುವ ಪಾವತಿ ಭದ್ರತಾ ವ್ಯವಸ್ಥೆ ಎಲ್ಲ ರಾಜ್ಯಗಳಿಗೆ ಮಾದರಿ ಎಂದು ಎಂಎನ್ಆರ್ ಇ ಶಿಫಾರಸ್ಸು ಮಾಡಿದೆ. ಅಲ್ಲದೆ ಇದು ಆವಿಷ್ಕಾರ ಮತ್ತು ಜೇಷ್ಠತೆಗಾಗಿ ವಿಶ್ವ ಬ್ಯಾಂಕ್ ಗ್ರೂಪ್ ನ ಅಧ್ಯಕ್ಷರ ಪ್ರಶಸ್ತಿಯನ್ನು ಸ್ವೀಕರಿಸಿದೆ ಮತ್ತು ಈ ಯೋಜನೆ, ಪ್ರಧಾನಮಂತ್ರಿಗಳ “ಆವಿಷ್ಕಾರಗಳು ಮತ್ತು ಹೊಸ ಆರಂಭಗಳು ಕೃತಿ”ಯಲ್ಲಿ ಸೇರ್ಪಡೆಯಾಗಿದೆ. ಅಲ್ಲದೆ ರಾಜ್ಯದ ಹೊರಗೆ ಸ್ಥಾಪಿಸಿದ ಸಾಂಸ್ಥಿಕ ಗ್ರಾಹಕರಿಗೆ ವಿದ್ಯುತ್ ಪೂರೈಸಲು ಸ್ಥಾಪಿಸಿದ ಮೊದಲ ನವೀಕರಿಸಬಹುದಾದ ಇಂಧನ ಯೋಜನೆ ಎಂದು ಪರಿಗಣಿಸಲಾಗಿದ್ದು, ಇದರ ಒಟ್ಟು ವಿದ್ಯುತ್ ನಲ್ಲಿ ಶೇ.24ರಷ್ಟನ್ನು ದೆಹಲಿ ಮೆಟ್ರೋ ಯೋಜನೆಗೆ ಮತ್ತು ಉಳಿದ ಶೇ.76ರಷ್ಟನ್ನು ಮಧ್ಯಪ್ರದೇಶ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪೂರೈಸಲಾಗುವುದು.
ಸೌರಶಕ್ತಿಯ ಸ್ಥಾಪಿತ ಸಾಮರ್ಥ್ಯವನ್ನು 100 ಗಿಗಾವ್ಯಾಟ್ ಗೆ ಹೆಚ್ಚಿಸುವುದು ಸೇರಿದಂತೆ 2022ರ ವೇಳೆಗೆ 175 ಗಿಗಾವ್ಯಾಟ್ ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದುವ ಗುರಿ ಸಾಧನೆಯ ಭಾರತದ ಬದ್ಧತೆಗೆ ರೇವಾ ಯೋಜನೆ ಅತ್ಯುತ್ತಮ ನಿದರ್ಶನವಾಗಿದೆ.
***
(Release ID: 1637641)
Visitor Counter : 425
Read this release in:
Tamil
,
Telugu
,
Malayalam
,
Assamese
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia