ಪ್ರಧಾನ ಮಂತ್ರಿಯವರ ಕಛೇರಿ
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಪ್ರಗತಿ ಪರಿಶೀಲನೆ ನಡೆಸಿದ ಪ್ರಧಾನ ಮಂತ್ರಿ
Posted On:
04 JUL 2020 6:14PM by PIB Bengaluru
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಪ್ರಗತಿ ಪರಿಶೀಲನೆ ನಡೆಸಿದ ಪ್ರಧಾನ ಮಂತ್ರಿ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದಲ್ಲಿ ಕೃಷಿ ಸಂಶೋಧನೆ, ವಿಸ್ತರಣೆ, ಮತ್ತು ಶಿಕ್ಷಣದ ಪ್ರಗತಿಯನ್ನು ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲಿಸಿದರು. ಕೃಷಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರು, ಕೃಷಿ ಸಹಾಯಕ ಸಚಿವರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು. ಪ್ರಧಾನಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳು, ಕೃಷಿ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಹಾಗು ಮೀನುಗಾರಿಕೆ ಇಲಾಖೆಗಳ ಕಾರ್ಯದರ್ಶಿಗಳು ಹಾಜರಿದ್ದರು.
ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮಹಾ ನಿರ್ದೇಶಕ ಮತ್ತು ಕೃಷಿ ಸಂಶೋಧನೆ ಹಾಗು ವಿಸ್ತರಣಾ ಇಲಾಖೆಯ ಕಾರ್ಯದರ್ಶಿ ಡಾ. ತ್ರಿಲೋಚನ ಮಹಾಪಾತ್ರ ಅವರು ವಿವಿಧ ಸವಾಲುಗಳನ್ನು ಎದುರಿಸಲು ಸಿದ್ದತಾ ಸ್ಥಿತಿ, ಆದ್ಯತೆಗಳು ಮತ್ತು ಸಾಧನೆಯ ಬಗ್ಗೆ ಮಾಹಿತಿ ನೀಡಿದರು. 2014 ರಿಂದೀಚೆಗೆ ಐ.ಸಿ.ಎ.ಆರ್. ನ ವಿವಿಧ ಕೇಂದ್ರಗಳ ಸಂಶೋಧನೆಗಳನ್ನು ಆಧರಿಸಿ ಹೊಸ ತಳಿಯ ಕ್ಷೇತ್ರೀಯ ಬೆಳೆಗಳನ್ನು ( 1434) ತೋಟಗಾರಿಕಾ ಬೆಳೆಗಳನ್ನು (462) ಮತ್ತು ವಾತಾವರಣ ವೈಪರಿತ್ಯಗಳನ್ನು ತಡೆದುಕೊಳ್ಳುವ ತಳಿಗಳನ್ನು (1121) ಅಭಿವೃದ್ದಿಪಡಿಸಿರುವುದಾಗಿ ಹೇಳಿದರು. ಬಹುವಿಧದ ಒತ್ತಡಗಳನ್ನು ತಡೆದುಕೊಳ್ಳಬಲ್ಲ ತಳಿಗಳನ್ನು ಅಭಿವೃದ್ದಿಪಡಿಸಲು ಮಾಲಿಕ್ಯುಲಾರ್ ಬ್ರೀಡಿಂಗ್ (ಅಣುಗಳ ಮೂಲಕ ತಳಿ ಉತ್ಪಾದನೆ) ತಂತ್ರಜ್ಞಾನವನ್ನು ಅನುಸರಿಸಲಾಗಿದೆ. ಗೋಧಿಯ ಎಚ್.ಡಿ. 3226 ಮತ್ತು ಟೊಮ್ಯಾಟೋದ ಆರ್ಕಬೆಡ್ ಗಳು ಅನುಕ್ರಮವಾಗಿ ಏಳು ರೀತಿಯ ಖಾಯಿಲೆಗಳನ್ನು ಮತ್ತು ನಾಲ್ಕು ಖಾಯಿಲೆಗಳನ್ನು ತಡೆಯಬಲ್ಲವು.
ವಾಣಿಜ್ಯಿಕವಾಗಿ ಸಂಸ್ಕರಣದ ತಳಿಗಳಿಗಾಗಿ ಆರ್ಕ್ ವಿಸೆಸ್, ಆರ್ಕ್ ಅಲೇಶಾ ಮತ್ತು ಆರ್ಕ್ ಯೋಜಿ ತಳಿಗಳನ್ನು ಅಬಿವೃದ್ದಿಪಡಿಸಲಾಗಿದೆ. ನಿರ್ದಿಷ್ಟ ಕೃಷಿ-ವಾತಾವರಣ ವಲಯಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತಳಿಗಳನ್ನು ಅಭಿವೃದ್ದಿಪಡಿಸುತ್ತಿರುವ ಬಗ್ಗೆ ಪ್ರಧಾನ ಮಂತ್ರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ , ರೈತರಿಗೆ ಉತ್ತಮ ಪ್ರತಿಫಲ ಖಾತ್ರಿಪಡಿಸಲು ಇನ್ನಷ್ಟು ತಳಿಗಳ ಅಭಿವೃದ್ದಿಯ ಅಗತ್ಯವನ್ನು ಪ್ರತಿಪಾದಿಸಿದರು.
ಉತ್ತರ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ನೀಡುವ ಕರಣ್-4 ಕಬ್ಬು ತಳಿಯು ಸಾಂಪ್ರದಾಯಿಕ ತಳಿಗಳನ್ನು ಸ್ಥಳಾಂತರಿಸಿದೆ. ಕಬ್ಬಿನಿಂದ ಹೆಚ್ಚಿನ ಪ್ರಮಾಣದಲ್ಲಿ ಬಯೋ ಎಥೆನಾಲ್ ಪಡೆಯುವ ಬಗ್ಗೆ ಮತ್ತು ಇತರ ಬೆಳೆಗಳಿಂದ ಅದನ್ನು ಪಡೆಯುವ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನಗಳ ಬಗ್ಗೆ ಪ್ರಧಾನ ಮಂತ್ರಿಯವರು ಪ್ರಮುಖವಾಗಿ ಉಲ್ಲೇಖಿಸಿದರು.
“ನ್ಯೂನ ಪೋಷಣೆ ಮುಕ್ತ ಭಾರತ” ಪ್ರಯತ್ನಕ್ಕೆ ಒತ್ತಾಸೆ ನೀಡುವ ಯತ್ನವಾಗಿ ಕಬ್ಬಿಣ, ಜಿಂಕ್, ಮತ್ತು ಪ್ರೊಟೀನ್ ಅಂಶಗಳು ಹೆಚ್ಚು ಇರುವ 70 ಜೈವಿಕ ಬಲವರ್ಧಿತ ತಳಿಗಳನ್ನು ಅಭಿವೃದ್ದಿಪಡಿಸಲಾಗಿದೆ. ಭಗ್ವಾ ಎಂಬ ದಾಳಿಂಬೆ ತಳಿಯು ಕಬ್ಬಿಣ, ಪೊಟ್ಯಾಶಿಯಂ, ವಿಟಾಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ.
ಪೋಷಣ ತಟ್ಟೆ ಮತ್ತು ನ್ಯೂಟ್ರಿಯಾ ಉದ್ಯಾನಗಳನ್ನು ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಉತ್ತೇಜಿಸಲಾಗುತ್ತಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್ ಗಢಗಳ 76 ಕೃಷಿ ವಿಜ್ಞಾನ ಕೇಂದ್ರಗಳು ಮತ್ತು 450 ಮಾದರಿ ಕೃಷಿ ಕ್ಷೇತ್ರಗಳಲ್ಲಿ ಪೈಲೆಟ್ ಯೋಜನೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಅಂಗನವಾಡಿ ಕೆಲಸಗಾರರು ಮತ್ತು ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ಸಮತೂಕದ ಆಹಾರ ಒದಗಿಸಲು ಪೋಷಕಾಂಶಯುಕ್ತ “ನ್ಯೂಟ್ರಿಯಾ ಉದ್ಯಾನಗಳನ್ನು “ ಬೆಳೆಸುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ. ಪೋಷಣ ತಟ್ಟೆಗಳು ಅನ್ನ, ಸ್ಥಳೀಯ ಬೇಳೆ, ಆಯಾ ಋತುಮಾನದಲ್ಲಿ ಲಭ್ಯವಾಗುವ ಹಣ್ಣುಗಳು, ಹಸಿರು ತರಕಾರಿಗಳು, ಗೆಡ್ಡೆಗಳು ಮತ್ತು ಇತರ ತರಕಾರಿಗಳನ್ನು, ಹಾಲು ಮತ್ತು ಇತರ ಘಟಕಾಂಶಗಳಾದ ಸಕ್ಕರೆ, ಬೆಲ್ಲ, ಮತ್ತು ತೈಲಾಂಶಗಳನ್ನು ಒಳಗೊಂಡಿರುತ್ತದೆ. 2022 ರೊಳಗೆ 100 ನ್ಯೂಟ್ರಿ (ಪೋಷಕಾಂಶ ) ಸ್ಮಾರ್ಟ್ ಗ್ರಾಮಗಳನ್ನು ರೂಪಿಸುವ ಇರಾದೆ ಹೊಂದಲಾಗಿದೆ.
ಗುಚ್ಚ ಮಾದರಿಯಲ್ಲಿ ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ದತಿಯನ್ನು ಅನುಸರಿಸಬೇಕಾದ ಅಗತ್ಯವನ್ನು ಪ್ರಧಾನ ಮಂತ್ರಿ ಅವರು ಒತ್ತಿ ಹೇಳಿದರು. ಐ.ಸಿ.ಎ.ಆರ್. ಭಾರತದ ಭೌಗೋಳಿಕ ಪರಾಮರ್ಶೆಯ ಸಾವಯವ ಕಾರ್ಬನ್ ನಕ್ಷೆಯನ್ನು ಅಭಿವೃದ್ದಿಪಡಿಸಿದೆ ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸಲು 88 ಜೈವಿಕ ನಿಯಂತ್ರಕ ಏಜೆಂಟ್ ಗಳನ್ನು ಹಾಗು 22 ಜೈವಿಕ ಕೀಟನಾಶಕಗಳನ್ನು ಗುರುತಿಸಿದೆ.
ನವೋದ್ಯಮಗಳು ಮತ್ತು ಕೃಷಿ ಉದ್ಯಮಗಳು ಅನ್ವೇಷಣೆಯನ್ನು ಖಾತ್ರಿಪಡಿಸುವಂತೆ ಉತ್ತೇಜಿಸಬೇಕು ಎಂದು ನಿರ್ದೇಶನ ನೀಡಿದ ಪ್ರಧಾನ ಮಂತ್ರಿ ಅವರು, ಕೃಷಿಯಲ್ಲಿ ಮತ್ತು ಅದಕ್ಕೆ ಪೂರಕ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಬಳಕೆಯನ್ನೂ ಉತ್ತೇಜಿಸಬೇಕು ಎಂದರು. ರೈತರಿಗೆ ಬೇಕಾದಾಗ ಮಾಹಿತಿಯನ್ನು ನೀಡಲು ಮಾಹಿತಿ ತಂತ್ರಜ್ಞಾನವನ್ನು ಬಳಸುವ ಆವಶ್ಯಕತೆಯ ಬಗ್ಗೆಯೂ ಪ್ರಧಾನ ಮಂತ್ರಿ ಅವರು ಪ್ರಸ್ತಾಪಿಸಿದರು.
ಗುರುತಿಸಲಾದ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಕೃಷಿ ಕ್ಷೇತ್ರದಲ್ಲಿ ಸಲಕರಣೆಗಳ ವಿನ್ಯಾಸದ ಅವಶ್ಯಕತೆಯನ್ನು ಈಡೇರಿಸುವುದಕ್ಕಾಗಿ ವರ್ಷಕ್ಕೆರಡು ಬಾರಿ ಹ್ಯಾಕಥಾನ್ ಗಳನ್ನು ಆಯೋಜಿಸುವಂತೆಯೂ ಅವರು ನಿರ್ದೇಶನ ನೀಡಿದರು. ಕೃಷಿ ಕ್ಷೇತ್ರದಲ್ಲಿ ಕೃಷಿಯಾಳುಗಳಾಗಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಬಗ್ಗೆ ಅವರು ಉಲ್ಲೇಖಿಸಿದರು.
ಸಿರಿ ಧಾನ್ಯಗಳಾದ ಜೋಳ, ಸೆಜ್ಜೆ, ರಾಗಿ , ಮತ್ತು ಇತರ ಸಿರಿ ಧಾನ್ಯಗಳನ್ನು ಆರೋಗ್ಯಪೂರ್ಣ ಆಹಾರಕ್ಕಾಗಿ ಆಹಾರ ಪದ್ದತಿಯಲ್ಲಿ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವನ್ನು ಕೂಡಾ ಅವರು ಒತ್ತಿ ಹೇಳಿದರು.
ವಾತಾವರಣ ಬದಲಾವಣೆಯಿಂದುಂಟಾಗುವ ಬಿಸಿ ಗಾಳಿಯ ಮಾರುತಗಳು, ಬರ ಪರಿಸ್ಥಿತಿಗಳು, ಶೀತ ಮಾರುತಗಳು, ಭಾರೀ ಮಳೆಯಿಂದುಂಟಾಗುವ ಮುಳುಗಡೆಗಳು ಭಾರೀ ಹಾನಿ, ನಷ್ಟವನ್ನು ಉಂಟು ಮಾಡುತ್ತಿವೆ ಮತ್ತು ಅವು ಕೃಷಿಕರ ಜೀವನೋಪಾಯಕ್ಕೆ ಬೆದರಿಕೆ ತರುತ್ತಿವೆ. ಇಂತಹ ವಾತಾವರಣ ಒತ್ತಡವು ಉಂಟು ಮಾಡುವ ನಷ್ಟದಿಂದ ರೈತರಿಂದ ಕಾಪಾಡಲು ಸಮಗ್ರ ಕೃಷಿ ವ್ಯವಸ್ಥೆಗಳನ್ನು ಅಭಿವೃದ್ದಿ ಮಾಡಲಾಗುತ್ತಿದೆ . ರೈತರು ತಲೆಮಾರುಗಳಿಂದ ಬೆಳೆಸುತ್ತಾ ಬಂದಿರುವ ಸಾಂಪ್ರದಾಯಿಕ ವೈವಿಧ್ಯಮಯ ತಳಿಗಳನ್ನು ಇಂತಹ ಒತ್ತಡ ತಾಳಿಕೆಗಾಗಿ ಮತ್ತು ಇತರ ಅನುಕೂಲಕರ ಗುಣಲಕ್ಷಣಗಳಿಗಾಗಿ ಪರಿಶೀಲಿಸಲಾಗುತ್ತಿದೆ.
ಜಲ ಬಳಕೆ ದಕ್ಷತೆಯನ್ನು ಹೆಚ್ಚಿಸಲು ಜಾಗೃತಿ ಮತ್ತು ಜನರನ್ನು ತಲುಪುವ ವಿಸ್ತರಣಾ ಕಾರ್ಯಕ್ರಮಗಳನ್ನು ನಡೆಸಬೇಕು ಎಂಬ ಆಶಯವನ್ನು ಪ್ರಧಾನ ಮಂತ್ರಿ ವ್ಯಕ್ತಪಡಿಸಿದರು.
ದನಗಳು, ಕುರಿ ಮತ್ತು ಆಡುಗಳ ಹೊಸ ತಳಿಗಳ ಅಭಿವೃದ್ದಿಯಲ್ಲಿ ಐ.ಸಿ.ಎ.ಆರ್. ನ ಕೊಡುಗೆಯನ್ನು ಪರಾಮರ್ಶಿಸಿದ ಪ್ರಧಾನ ಮಂತ್ರಿ ಅವರು ದೇಶೀಯ ನಾಯಿಗಳು ಮತ್ತು ಕುದುರೆಗಳ ತಳಿಗಳ ಮೇಲೆಯೂ ಸಂಶೋಧನೆ ನಡೆಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಕಾಲು ಮತ್ತು ಬಾಯಿ ರೋಗಕ್ಕೆ ಲಸಿಕೆ ನೀಡಿಕೆಯಲ್ಲಿ ಗಮನ ಕೇಂದ್ರಿತ ಆಂದೋಲನ ಮಾದರಿಯ ಧೋರಣೆ ಅನುಸರಿಸುವಂತೆ ಅವರು ನಿರ್ದೇಶನ ನೀಡಿದರು.
ಹುಲ್ಲುಗಳು ಮತ್ತು ಸ್ಥಳೀಯ ಮೇವು ಬೆಳೆಗಳ ಪೌಷ್ಟಿಕ ಮಹತ್ವವನ್ನು ತಿಳಿಯಲು ಅಧ್ಯಯನ ನಡೆಯಬೇಕು ಎಂಬುದನ್ನು ಅವರು ಪ್ರತಿಪಾದಿಸಿದರು. ಸಮುದ್ರ ಕಳೆಗಳು ಮಣ್ಣು ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ ಅಧ್ಯಯನದ ಅಗತ್ಯವನ್ನೂ ಅವರು ಪ್ರಸ್ತಾಪಿಸಿದರು. ಮತ್ತು ನ್ಯುಟ್ರಾಸ್ಯೂಟಿಕಲ್ಸ್ (ಪೋಷಣಖಾದ್ಯಗಳ) ಗಳ ವಾಣಿಜ್ಯಿಕ ಆನ್ವಯಿಕತೆ ಅನ್ವೇಷಣೆಯ ಮಹತ್ವವನ್ನೂ ಅವರು ಉಲ್ಲೇಖಿಸಿದರು.
ಪಂಜಾಬ್ , ಹರ್ಯಾಣಾ, ಮತ್ತು ದಿಲ್ಲಿಗಳಲ್ಲಿ ಭತ್ತದ ಬೆಳೆಯ ಕೊಯಿಲಿನ ಬಳಿಕ ಕೃಷಿ ತ್ಯಾಜ್ಯ ಸುಡುವ ಸಮಸ್ಯೆಯನ್ನು ಪರಿಹರಿಸಲು ಐ.ಸಿ.ಎ.ಆರ್. ಮ್ಯಾಜಿಕ್ ಬೀಜ ಬಿತ್ತನೆ ಸಾಧನವನ್ನು ಪರಿಚಯಿಸಿದೆ. 2016 ಕ್ಕೆ ಹೋಲಿಸಿದರೆ 2019 ರಲ್ಲಿ ಸುಡುವ ಘಟನೆಗಳಲ್ಲಿ 52 % ಇಳಿಕೆಯಾಗಿದೆ.
ಕೃಷಿ ಸಲಕರಣೆಗಳು ಸುಲಭ ಲಭ್ಯವಾಗುವಂತೆ ಮತ್ತು ಕೃಷಿ ಭೂಮಿಯಿಂದ ಮಾರುಕಟ್ಟೆಗೆ ಸಾರಿಗೆ ಸೌಲಭ್ಯವನ್ನು ಖಾತ್ರಿಪಡಿಸುವಂತೆ ಪ್ರಧಾನ ಮಂತ್ರಿ ಅವರು ನಿರ್ದೇಶನ ನೀಡಿದರು. ಈ ನಿಟ್ಟಿನಲ್ಲಿ ಕೃಷಿ ಇಲಾಖೆ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಗಳು ಕಿಸಾನ್ ರಥ್ ಆಪ್ ಜಾರಿಗೆ ತಂದಿವೆ.
ಕೃಷಿ ಶಿಕ್ಷಣ ಮತ್ತು ಸಂಶೋಧನಾ ವ್ಯವಸ್ಥೆಗಳು ಕೃಷಿ ವಾತಾವರಣ ಆವಶ್ಯಕತೆಗಳಿಗೆ ಅನುಗುಣವಾಗಿ , ರೈತರ ಬೇಡಿಕೆಗಳನ್ನು ಈಡೇರಿಸುವಂತೆ ರೂಪಿಸಲ್ಪಬೇಕಾದ ಅಗತ್ಯವನ್ನು ಪ್ರಧಾನ ಮಂತ್ರಿ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಈ ವ್ಯವಸ್ಥೆಗಳು ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟವನ್ನು ಗಳಿಸುವ ನಿಟ್ಟಿನಲ್ಲಿ ಸಿದ್ದಗೊಳ್ಳಬೇಕು ಎಂದೂ ಹೇಳಿದರು.
ಭಾರತೀಯ ಸಮುದಾಯಗಳ ಸಾಂಪ್ರದಾಯಿಕ ಜ್ಞಾನವನ್ನು ತಂತ್ರಜ್ಞಾನದ ಜೊತೆ ಮೇಳೈಸಬೇಕು ಎಂದು ಬಲವಾಗಿ ಪ್ರತಿಪಾದಿಸಿದ ಪ್ರಧಾನ ಮಂತ್ರಿ ಅವರು ಯುವಕರ ಕೌಶಲ್ಯಗಳು ಮತ್ತು ಕೃಷಿ ಪದವೀಧರರ ಕೌಶಲ್ಯಗಳು ಗ್ರಾಮೀಣ ಪ್ರದೇಶಗಳಲ್ಲಿ ಪರಿವರ್ತನೆ ತರುವಂತೆ ಭಾರತೀಯ ಕೃಷಿ ಕ್ಷೇತ್ರವನ್ನು ಬದಲಾಯಿಸುವಂತಹ ಪೂರ್ಣ ಸಾಮರ್ಥ್ಯವನ್ನು ತೋರಬೇಕು ಎಂದೂ ನುಡಿದರು.
***
(Release ID: 1636706)
Visitor Counter : 197
Read this release in:
Punjabi
,
English
,
Urdu
,
Hindi
,
Manipuri
,
Bengali
,
Assamese
,
Gujarati
,
Odia
,
Tamil
,
Telugu
,
Malayalam