ಪ್ರಧಾನ ಮಂತ್ರಿಯವರ ಕಛೇರಿ
ಕಲ್ಲಿದ್ದಲು ಗಣಿಗಳ ವಾಣಿಜ್ಯ ಗಣಿಗಾರಿಕೆ ಹರಾಜಿನ ವರ್ಚುವಲ್ ಚಾಲನೆಯಲ್ಲಿ ಪ್ರಧಾನ ಮಂತ್ರಿಯವರ ಭಾಷಣ
Posted On:
18 JUN 2020 1:15PM by PIB Bengaluru
ಕಲ್ಲಿದ್ದಲು ಗಣಿಗಳ ವಾಣಿಜ್ಯ ಗಣಿಗಾರಿಕೆ ಹರಾಜಿನ ವರ್ಚುವಲ್ ಚಾಲನೆಯಲ್ಲಿ ಪ್ರಧಾನ ಮಂತ್ರಿಯವರ ಭಾಷಣ
ನಮಸ್ಕಾರ,
ದೇಶ ಮತ್ತು ಪ್ರಪಂಚದಾದ್ಯಂತದಿಂದ ಭಾಗವಹಿಸುತ್ತಿರುವ ಎಲ್ಲರಿಗೂ ನಾನು ಸ್ವಾಗತ ಕೋರುತ್ತೇನೆ. ಇಂತಹ ಸವಾಲಿನ ಕಾಲದಲ್ಲಿ ಇಂತಹದ್ದೊಂದು ಕಾರ್ಯಕ್ರಮದ ಆಯೋಜನೆ ಮತ್ತು ನಿಮ್ಮ ಭಾಗವಹಿಸುವಿಕೆಯು ಹೊಸ ಭರವಸೆಯನ್ನು ಹುಟ್ಟುಹಾಕುತ್ತದೆ ಮತ್ತು ಒಂದು ಪ್ರಮುಖ ಸಂದೇಶವನ್ನು ನೀಡುತ್ತದೆ.
ಭಾರತವು ಕೊರೊನಾವೈರಸ್ ವಿರುದ್ಧ ಹೋರಾಡುವುದಲ್ಲದೆ, ಯುದ್ಧವನ್ನು ಗೆದ್ದು ಮುಂದೆ ಸಾಗಲಿದೆ. ಭಾರತವು ಬಿಕ್ಕಟ್ಟಿನ ಬಗ್ಗೆ ಅಳುತ್ತಾ ಕೂರುವುದಿಲ್ಲ. ಅದು ಎಷ್ಟೇ ದೊಡ್ಡ ಬಿಕ್ಕಟ್ಟು ಇರಲಿ, ಅದನ್ನು ಅವಕಾಶವನ್ನಾಗಿ ಬದಲಿಸಲು ಭಾರತ ನಿರ್ಧರಿಸಿದೆ. ಈ ಕೊರೊನಾವೈರಸ್ ಬಿಕ್ಕಟ್ಟು ಭಾರತಕ್ಕೆ ಆತ್ಮನಿರ್ಭರ, ಅಂದರೆ ಸ್ವಾವಲಂಬಿಯ ಪಾಠಗಳನ್ನು ಕಲಿಸಿದೆ.
ಆತ್ಮನಿರ್ಭರ ಭಾರತ್ಎಂದರೆ ಭಾರತವು ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಲಿದೆ. ಆತ್ಮನಿರ್ಭರ ಭಾರತ್ ಎಂದರೆ ಭಾರತವು ಆಮದಿಗಾಗಿ ಖರ್ಚು ಮಾಡಿದ ಲಕ್ಷಾಂತರ ಕೋಟಿ ರೂಪಾಯಿಗಳ ವಿದೇಶಿ ವಿನಿಮಯವನ್ನು ಉಳಿಸುತ್ತದೆ. ಆತ್ಮನಿರ್ಭರ ಭಾರತ ಎಂದರೆ ಭಾರತವು ಆಮದು ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ, ಅದು ನಿರಂತರವಾಗಿ ದೇಶೀಯವಾಗಿ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುತ್ತದೆ. ಆತ್ಮನಿರ್ಭರ ಎಂದರೆ ನಾವು ಈಗ ಆಮದು ಮಾಡಿಕೊಳ್ಳುತ್ತಿರುವ ಸರಕುಗಳ ದೊಡ್ಡ ರಫ್ತುದಾರರಾಗುತ್ತೇವೆ.
ಸ್ನೇಹಿತರೇ, ಇದನ್ನು ಸಾಧಿಸಲು, ನಾವು ನಿರ್ದಿಷ್ಟ ವಲಯದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಪ್ರತಿಯೊಂದು ವಲಯ, ಪ್ರತಿಯೊಂದು ಉತ್ಪನ್ನ ಮತ್ತು ಪ್ರತಿಯೊಂದು ಸೇವೆಯನ್ನು ಗಣನೆಗೆ ತೆಗೆದುಕೊಂಡು ಸಮಗ್ರವಾಗಿ ಕೆಲಸ ಮಾಡಬೇಕು. ಇಂದಿನ ಕಾರ್ಯಕ್ರಮವು ಅದೇ ಆಲೋಚನೆಯ ನಿಟ್ಟಿನಲ್ಲಿ ಒಂದು ಅಭಿವ್ಯಕ್ತಿ ಮತ್ತು ದೃಢವಾದ ಹೆಜ್ಜೆಯಾಗಿದೆ.
ಇಂದು, ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಪ್ರಮುಖ ಹೆಜ್ಜೆ ಇಡಲಾಗುತ್ತಿದೆ. ಈ ಕಾರ್ಯಕ್ರಮವು ಕೇವಲ ಒಂದು ವಲಯಕ್ಕೆ ಅಂದರೆ ಕಲ್ಲಿದ್ದಲು ಗಣಿಗಾರಿಕೆ ವಲಯಕ್ಕೆ ಸಂಬಂಧಿಸಿದ ಸುಧಾರಣೆಗಳ ಅನುಷ್ಠಾನವನ್ನು ಮಾತ್ರ ಸೂಚಿಸುವುದಿಲ್ಲ, ಬದಲಿಗೆ 130 ಕೋಟಿ ಆಕಾಂಕ್ಷೆಗಳನ್ನು ಸಾಕಾರಗೊಳಿಸುವ ಬದ್ಧತೆಯನ್ನು ಪ್ರತಿನಿಧಿಸುತ್ತದೆ.
ಇದು ನಮ್ಮ ಯುವಜನರಿಗೆ ಲಕ್ಷಾಂತರ ಉದ್ಯೋಗಾವಕಾಶಗಳ ಆರಂಭವನ್ನು ಸೂಚಿಸುತ್ತದೆ.
ಸ್ನೇಹಿತರೇ,
ಸ್ವಾವಲಂಬಿ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುವ ಸಲುವಾಗಿ ಕಳೆದ ತಿಂಗಳು ಆತ್ಮನಿರ್ಭರ ಭಾರತ ಅಭಿಯಾನವನ್ನು ಘೋಷಿಸಿದಾಗ, ಇದು ಸರ್ಕಾರದ ಸಾಮಾನ್ಯ ಪ್ರಕ್ರಿಯೆ ಎಂದು ಅನೇಕರು ಭಾವಿಸಿದ್ದರು.
ಆದರೆ ಘೋಷಣೆಯಾದ ಒಂದು ತಿಂಗಳಲ್ಲಿ, ಕೃಷಿ, ಎಂಎಸ್ಎಂಇ, ಈಗ ಕಲ್ಲಿದ್ದಲು ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ಪ್ರತಿಯೊಂದು ಸುಧಾರಣೆಯನ್ನೂ ವಾಸ್ತವದಲ್ಲಿ ಜಾರಿಗೆ ತರಲಾಗಿದೆ.
ಈ ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸುವ ಭಾರತದ ಗಂಭೀರತೆ ಮತ್ತು ಬದ್ಧತೆಯನ್ನು ಇದು ತೋರಿಸುತ್ತದೆ. ನಾವು ಇಂದು ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯ ಹರಾಜನ್ನು ಪ್ರಾರಂಭಿಸುತ್ತಿರುವುದು ಮಾತ್ರವಲ್ಲದೆ, ಕಲ್ಲಿದ್ದಲು ಕ್ಷೇತ್ರವನ್ನು ದಶಕಗಳ ಲಾಕ್ಡೌನ್ನಿಂದ ಮುಕ್ತಗೊಳಿಸುತ್ತಿದ್ದೇವೆ.
ಕಲ್ಲಿದ್ದಲು ಕ್ಷೇತ್ರದ ಲಾಕ್ಡೌನ್ನ ಪರಿಣಾಮ ಏನು? ಅದು ನನಗಿಂತ ಚೆನ್ನಾಗಿ ನಿಮಗೆ ಗೊತ್ತು.
ಒಮ್ಮೆ ಆಲೋಚಿಸಿ ನೋಡಿ. ವಿಶ್ವದ ನಾಲ್ಕನೇ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪವನ್ನು ಹೊಂದಿರುವ ರಾಷ್ಟ್ರ; ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕ; ಆ ರಾಷ್ಟ್ರವು ಕಲ್ಲಿದ್ದಲು ರಫ್ತುದಾರನಲ್ಲ, ಆದರೆ ವಿಶ್ವದ ಎರಡನೇ ಅತಿದೊಡ್ಡ ಕಲ್ಲಿದ್ದಲು ಆಮದುದಾರ!
ಪ್ರಶ್ನೆ ಏನೆಂದರೆ, ನಾವು ವಿಶ್ವದ ಅತಿದೊಡ್ಡ ಉತ್ಪಾದಕರಲ್ಲಿ ಒಬ್ಬರಾಗಿರುವಾಗ, ನಾವೇಕೆ ದೊಡ್ಡ ರಫ್ತುದಾರರಾಗಲು ಸಾಧ್ಯವಿಲ್ಲ?
ಈ ಪ್ರಶ್ನೆಯು ಯಾವಾಗಲೂ ನನ್ನ, ನಿಮ್ಮ ಮತ್ತು ಕೋಟ್ಯಂತರ ಭಾರತೀಯರ ಮನಸ್ಸಿನಲ್ಲಿ ಬೆಳೆಯುತ್ತದೆ.
ಸ್ನೇಹಿತರೇ, ಇದು ದಶಕಗಳಿಂದ ಇರುವ ನಮ್ಮ ಪರಿಸ್ಥಿತಿ. ದೇಶದ ಕಲ್ಲಿದ್ದಲು ವಲಯವು ಸ್ವಂತಕ್ಕೆ ಮತ್ತು ಸ್ವಂತಕ್ಕಲ್ಲದ ಜಾಲರಿಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ಇದನ್ನು ಸ್ಪರ್ಧೆಯ ಹೊರಗೆ ಇಡಲಾಗಿತ್ತು; ಪಾರದರ್ಶಕತೆ ಒಂದು ಪ್ರಮುಖ ಸಮಸ್ಯೆಯಾಗಿತ್ತು. ನ್ಯಾಯಯುತ ಹರಾಜಿನ ಪ್ರಕ್ರಿಯೆಯ ಬಗ್ಗೆ ಬಿಡಿ, ಕಲ್ಲಿದ್ದಲು ಗಣಿಗಳ ಹಂಚಿಕೆಯ ದೊಡ್ಡ ಹಗರಣಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ಕಾರಣಕ್ಕಾಗಿ, ಕಲ್ಲಿದ್ದಲು ವಲಯಕ್ಕೆ ಹೂಡಿಕೆಯ ಕೊರತೆ ಇತ್ತು ಮತ್ತು ಅದರ ದಕ್ಷತೆಯೂ ಪ್ರಶ್ನಾರ್ಹವಾಗಿತ್ತು. ಕಲ್ಲಿದ್ದಲನ್ನು ಒಂದು ರಾಜ್ಯದಲ್ಲಿ ಹೊರತೆಗೆದು ಮತ್ತೊಂದು ರಾಜ್ಯಕ್ಕೆ ಕಳುಹಿಸಲಾಗುವುದು, ನೂರಾರು ಕಿಲೋಮೀಟರ್ ದೂರಕ್ಕೆ ಮತ್ತು ಕಲ್ಲಿದ್ದಲು ತೆಗೆದ ರಾಜ್ಯವು ಕಲ್ಲಿದ್ದಲಿಗಾಗಿ ಕಾಯಬೇಕು. ಇದು ಸಾಕಷ್ಟು ಗೊಂದಲಮಯವಾಗಿತ್ತು.
ಸ್ನೇಹಿತರೇ, ಈ ಪರಿಸ್ಥಿತಿಯನ್ನು ಬದಲಾಯಿಸಲು 2014 ರ ನಂತರ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಾವು ಯಾರೂ ಯೋಚಿಸದ ಕಲ್ಲಿದ್ದಲು ಲಿಂಕೇಜ್ ಅನ್ನು ಜಾರಿಗೆ ತಂದಿದ್ದೇವೆ. ಇಂತಹ ಕ್ರಮಗಳು ಕಲ್ಲಿದ್ದಲು ಕ್ಷೇತ್ರಕ್ಕೆ ಉತ್ತೇಜನವನ್ನು ನೀಡಿತು. ದಶಕಗಳಿಂದ ಯೋಚಿಸುತ್ತಿದ್ದ ಹಲವಾರು ಸುಧಾರಣೆಗಳನ್ನು ಇತ್ತೀಚೆಗೆ ನಾವು ತಂದಿದ್ದೇವೆ, ಅದು. ಈಗ, ಸ್ಪರ್ಧೆ, ಬಂಡವಾಳ, ಭಾಗವಹಿಸುವಿಕೆ ಮತ್ತು ತಂತ್ರಜ್ಞಾನಕ್ಕಾಗಿ ಕಲ್ಲಿದ್ದಲು ಮತ್ತು ಗಣಿಗಾರಿಕೆ ಕ್ಷೇತ್ರಗಳನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಭಾರತ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಖಾಸಗಿ ಗಣಿಗಾರಿಕೆ ಕ್ಷೇತ್ರದಲ್ಲಿ ಹೊಸಬರು ಹಣಕಾಸಿನ ಸಮಸ್ಯೆಯನ್ನು ಎದುರಿಸದಂತೆ ನೋಡಿಕೊಳ್ಳಲಾಗಿದೆ.
ಸ್ನೇಹಿತರೇ, ಬಲಿಷ್ಠವಾದ ಗಣಿಗಾರಿಕೆ ಮತ್ತು ಖನಿಜ ವಲಯವಿಲ್ಲದೆ ಸ್ವಾವಲಂಬನೆ ಸಾಧ್ಯವಿಲ್ಲ; ಏಕೆಂದರೆ ಖನಿಜಗಳು ಮತ್ತು ಗಣಿಗಾರಿಕೆ ನಮ್ಮ ಆರ್ಥಿಕತೆಯ ಪ್ರಮುಖ ಆಧಾರ ಸ್ತಂಭಗಳಾಗಿವೆ.
ಈ ಸುಧಾರಣೆಗಳ ನಂತರ, ಈಗ ಕಲ್ಲಿದ್ದಲು ಉತ್ಪಾದನೆ ಮತ್ತು ಸಂಪೂರ್ಣ ಕಲ್ಲಿದ್ದಲು ವಲಯವು ಸ್ವಾವಲಂಬಿಯಾಗಲಿದೆ. ಈಗ ಕಲ್ಲಿದ್ದಲು ಮಾರುಕಟ್ಟೆ ಮುಕ್ತವಾಗಿದೆ; ಆದ್ದರಿಂದ, ಯಾವುದೇ ವಲಯವು ಅವುಗಳ ಅವಶ್ಯಕತೆಗಳಿಗೆ ಅನುಗುಣವಾಗಿ ಖರೀದಿಸಬಹುದು.
ಸ್ನೇಹಿತರೇ, ಈ ಸುಧಾರಣೆಗಳು ಕಲ್ಲಿದ್ದಲು ಕ್ಷೇತ್ರಕ್ಕೆ ಮಾತ್ರವಲ್ಲದೆ ಇತರ ಕ್ಷೇತ್ರಗಳಿಗೂ ಪ್ರಯೋಜನವನ್ನು ನೀಡುತ್ತವೆ. ನಾವು ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸಿದಾಗ, ವಿದ್ಯುತ್ ಉತ್ಪಾದನೆಯಲ್ಲಿ ಹೆಚ್ಚಳದೊಂದಿಗೆ ಉಕ್ಕು, ಅಲ್ಯೂಮಿನಿಯಂ, ರಸಗೊಬ್ಬರಗಳು ಮತ್ತು ಸಿಮೆಂಟ್ ಕ್ಷೇತ್ರಗಳಲ್ಲಿನ ಉತ್ಪಾದನೆ ಮತ್ತು ಸಂಸ್ಕರಣೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಅದೃಷ್ಟವಶಾತ್, ಭಾರತದಲ್ಲಿ, ಕಲ್ಲಿದ್ದಲು, ಕಬ್ಬಿಣ, ಬಾಕ್ಸೈಟ್ ಮತ್ತು ಇತರ ಖನಿಜಗಳ ನಿಕ್ಷೇಪಗಳು ಒಂದಕ್ಕೊಂದು ಸಮೀಪದಲ್ಲಿವೆ. ಆದ್ದರಿಂದ, ಖನಿಜ ಕ್ಷೇತ್ರದಲ್ಲಿ ತಂದ ಸುಧಾರಣೆಗಳು ಕಲ್ಲಿದ್ದಲು ಗಣಿಗಾರಿಕೆ ಸುಧಾರಣೆಗಳಿಂದ ಬಲವನ್ನು ಪಡೆದಿವೆ.
ಸ್ನೇಹಿತರೇ,
ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಗಾಗಿ ಇಂದು ಹರಾಜಿನ ಪ್ರಾರಂಭವು ಪಾಲುದಾರರಿಗೆ ಗೆಲುವಿನ ಸನ್ನಿವೇಶವಾಗಿದೆ. ಕೈಗಾರಿಕೆಗಳು, ನೀವು, ನಿಮ್ಮ ವ್ಯವಹಾರಗಳು, ಹೂಡಿಕೆಗಳು ಹೊಸ ಸಂಪನ್ಮೂಲಗಳು ಮತ್ತು ಮಾರುಕಟ್ಟೆಗಳನ್ನು ಪಡೆಯುತ್ತವೆ. ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಆದಾಯ ಸಿಗಲಿದೆ ಮತ್ತು ದೇಶದ ಜನರಿಗೆ ಬೃಹತ್ ಉದ್ಯೋಗ ಸಿಗಲಿದೆ. ಇದರರ್ಥ, ಪ್ರತಿ ವಲಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಸ್ನೇಹಿತರೇ,
ಕಲ್ಲಿದ್ದಲು ಸುಧಾರಣೆಗಳನ್ನು ಜಾರಿಗೆ ತರುವಾಗ, ಪರಿಸರವನ್ನು ಸಂರಕ್ಷಿಸುವ ಭಾರತದ ಬದ್ಧತೆಯು ದುರ್ಬಲಗೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲಾಗಿದೆ. ಕಲ್ಲಿದ್ದಲಿನಿಂದ ಅನಿಲವನ್ನು ತಯಾರಿಸಲು ಇತ್ತೀಚಿನ ತಂತ್ರಜ್ಞಾನವನ್ನು ಪರಿಚಯಿಸಬಹುದು. ಮತ್ತು ಕಲ್ಲಿದ್ದಲು ಅನಿಲೀಕರಣದಂತಹ ಕ್ರಮಗಳೊಂದಿಗೆ ಪರಿಸರವನ್ನು ರಕ್ಷಿಸಲಾಗುವುದು. ಕಲ್ಲಿದ್ದಲು ಅನಿಲವನ್ನು ಸಾರಿಗೆ ಮತ್ತು ಅಡುಗೆಯಲ್ಲಿ ಬಳಸಲಾಗುವುದು ಮತ್ತು ಇದು ಯೂರಿಯಾ ಮತ್ತು ಉಕ್ಕು ಉತ್ಪಾದನಾ ಕೈಗಾರಿಕೆಗಳನ್ನು ಉತ್ತೇಜಿಸುತ್ತದೆ. 2030 ರ ಹೊತ್ತಿಗೆ ಸುಮಾರು 100 ಮಿಲಿಯನ್ ಟನ್ ಕಲ್ಲಿದ್ದಲನ್ನು ಅನಿಲೀಕರಣಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಉದ್ದೇಶಕ್ಕಾಗಿ ನಾಲ್ಕು ಯೋಜನೆಗಳನ್ನು ಗುರುತಿಸಲಾಗಿದೆ ಮತ್ತು ಈ ಪ್ರಕ್ರಿಯೆಯಲ್ಲಿ ಸುಮಾರು 20 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುವುದು.
ಸ್ನೇಹಿತರೇ,
ಈ ಕಲ್ಲಿದ್ದಲು ಕ್ಷೇತ್ರದ ಸುಧಾರಣೆಗಳು ಪೂರ್ವ ಮತ್ತು ಮಧ್ಯ ಭಾರತವನ್ನು, ನಮ್ಮ ಬುಡಕಟ್ಟು ಪ್ರದೇಶವನ್ನು ಅಭಿವೃದ್ಧಿಯ ಆಧಾರ ಸ್ತಂಭಗಳನ್ನಾಗಿ ಮಾಡಲು ಒಂದು ದೊಡ್ಡ ಮಾಧ್ಯಮವಾಗಿದೆ. ನಮ್ಮ ದೇಶದಲ್ಲಿ ಕಲ್ಲಿದ್ದಲು, ಖನಿಜಗಳು ಇರುವ ಪ್ರದೇಶಗಳು ಅಪೇಕ್ಷಿತ ಮಟ್ಟದ ಪ್ರಗತಿ ಮತ್ತು ಸಮೃದ್ಧಿಯನ್ನು ಕಾಣಲು ಸಾಧ್ಯವಾಗಲಿಲ್ಲ. ಇದು ಬಹುತೇಕ ಮಹತ್ವಾಕಾಂಕ್ಷಿ ಜಿಲ್ಲೆಗಳನ್ನು ಹೊಂದಿರುವ ದೇಶದ ಭಾಗವಾಗಿದೆ. ಈ ಜಿಲ್ಲೆಗಳ ಜನರು ಅಭಿವೃದ್ಧಿಯ ಆಕಾಂಕ್ಷಿಗಳಾಗಿದ್ದಾರೆ, ಆದರೆ ಅಭಿವೃದ್ಧಿಯ ದೃಷ್ಟಿಯಿಂದ ಹಿಂದುಳಿದಿದ್ದಾರೆ.
ದೇಶದ 16 ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಕಲ್ಲಿದ್ದಲು ಇದೆ ಎಂಬುದು ನಿಮಗೆ ಗೊತ್ತಿರಲಿ; ಆದರೆ ಈ ಪ್ರದೇಶಗಳ ಜನರಿಗೆ ಇದರ ಸಾಕಷ್ಟು ಪ್ರಯೋಜನ ಸಿಕ್ಕಿಲ್ಲ. ಈ ಸ್ಥಳಗಳಿಂದ ನಮ್ಮ ಸ್ನೇಹಿತರು ಉದ್ಯೋಗಕ್ಕಾಗಿ ದೂರದ ನಗರಗಳಿಗೆ ವಲಸೆ ಹೋಗಬೇಕಾಗುತ್ತದೆ.
ವಾಣಿಜ್ಯ ಗಣಿಗಾರಿಕೆಯ ಬಗ್ಗೆ ಕೈಗೊಂಡ ಕ್ರಮಗಳು ಪೂರ್ವ ಮತ್ತು ಮಧ್ಯ ಭಾರತದ ಬೃಹತ್ ಜನಸಂಖ್ಯೆಗೆ ತಮ್ಮ ಮನೆಗಳ ಬಳಿ ಉದ್ಯೋಗವನ್ನು ಒದಗಿಸಲು ಮತ್ತು ಅಂತಹ ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗುತ್ತವೆ.
ಈ ಕಲ್ಲಿದ್ದಲು ಘಟಕಗಳ ಹರಾಜು ಇಂದು ಈ ವಲಯದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಅಷ್ಟೇ ಅಲ್ಲ, ಕಲ್ಲಿದ್ದಲು ಹೊರತೆಗೆಯಲು ಹಾಗೂ ಸಾಗಿಸಲು ಬೇಕಾದ ಮೂಲಸೌಕರ್ಯಗಳು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ಅಂತಹ ಮೂಲಸೌಕರ್ಯಗಳನ್ನು ಸೃಷ್ಟಿಸಲು 50 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ನಿರ್ಧಾರವನ್ನು ಇತ್ತೀಚೆಗೆ ಸರ್ಕಾರ ತೆಗೆದುಕೊಂಡಿದೆ.
ಸ್ನೇಹಿತರೇ ,ಕಲ್ಲಿದ್ದಲು ಕ್ಷೇತ್ರದಲ್ಲಿ ಸುಧಾರಣೆಗಳು ಮತ್ತು ಹೂಡಿಕೆಯು ಜನರ ಜೀವನವನ್ನು ವಿಶೇಷವಾಗಿ ನಮ್ಮ ಬಡ ಮತ್ತು ಬುಡಕಟ್ಟು ಸಹೋದರ-ಸಹೋದರಿಯರ ಜೀವನವನ್ನು ಸುಗಮಗೊಳಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಕಲ್ಲಿದ್ದಲು ಉತ್ಪಾದನೆಯ ಮೂಲಕ ಬರುವ ಹೆಚ್ಚುವರಿ ಆದಾಯವನ್ನು ಅಲ್ಲಿನ ಸಾರ್ವಜನಿಕ ಕಲ್ಯಾಣ ಯೋಜನೆಗಳಿಗೆ ಬಳಸಲಾಗುತ್ತದೆ. ರಾಜ್ಯಗಳು ಜಿಲ್ಲಾ ಖನಿಜ ನಿಧಿಯಿಂದ ಸಹಾಯ ಪಡೆಯುವುದನ್ನು ಮುಂದುವರಿಸಲಿವೆ. ಕಲ್ಲಿದ್ದಲು ಗಣಿಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಗತ್ಯ ಸೌಲಭ್ಯಗಳ ಅಭಿವೃದ್ಧಿಗೆ ಈ ನಿಧಿಯ ಪ್ರಮುಖ ಭಾಗವನ್ನು ಬಳಸಿಕೊಳ್ಳಲಾಗುತ್ತಿದೆ. ಖನಿಜ ಸಮೃದ್ಧ ಪ್ರದೇಶಗಳ ಜನರನ್ನು ಶ್ರೀಮಂತರನ್ನಾಗಿ ಮಾಡುವ ಉದ್ದೇಶವನ್ನು ನಾವು ಹೊಂದಿದ್ದೇವೆ. ಇಂದು ತೆಗೆದುಕೊಳ್ಳುತ್ತಿರುವ ಕ್ರಮಗಳು ಈ ಉದ್ದೇಶಕ್ಕೆ ಹೆಚ್ಚು ಸಹಾಯ ಮಾಡುತ್ತದೆ.
ಸ್ನೇಹಿತರೇ, ಆರ್ಥಿಕ ಚಟುವಟಿಕೆ ವೇಗವಾಗಿ ಸಾಮಾನ್ಯ ಸ್ಥಿತಿಗೆ ಬರುತ್ತಿರುವ ಸಮಯದಲ್ಲಿ ಈ ಹರಾಜು ನಡೆಯುತ್ತಿದೆ. ಬಳಕೆ ಮತ್ತು ಬೇಡಿಕೆಯು ಕೋವಿಡ್ -19 ಕ್ಕಿಂತ ಮುಂಚಿನ ಮಟ್ಟವನ್ನು ವೇಗವಾಗಿ ತಲುಪುತ್ತಿದೆ. ಹೊಸ ಆರಂಭಕ್ಕೆ ಇದಕ್ಕಿಂತ ಉತ್ತಮ ಕಾಲ ಬರಲು ಸಾಧ್ಯವಿಲ್ಲ.
ವಿದ್ಯುತ್ ಬಳಕೆಯ ಬೇಡಿಕೆ ಇರಲಿ ಅಥವಾ ಪೆಟ್ರೋಲಿಯಂ ಉತ್ಪನ್ನಗಳಿಗೆ ಬೇಡಿಕೆಯಿರಲಿ; ಮೇ ಕೊನೆಯ ವಾರ ಮತ್ತು ಜೂನ್ ಮೊದಲ ವಾರದಲ್ಲಿ ಏರಿಕೆ ಕಂಡುಬಂದಿದೆ. ಏಪ್ರಿಲ್ಗೆ ಹೋಲಿಸಿದರೆ ಇ ವೇ ಬಿಲ್ಗಳಲ್ಲಿ ಸುಮಾರು ಶೇ.200 ರಷ್ಟು ಹೆಚ್ಚಳ ಕಂಡುಬಂದಿದೆ. ಜೂನ್ ತಿಂಗಳಲ್ಲಿ ಟೋಲ್ ಸಂಗ್ರಹವು ಈಗಾಗಲೇ ಫೆಬ್ರವರಿ ಮಟ್ಟದ ಶೇ. 70ಕ್ಕೆ ತಲುಪಿದೆ. ಏಪ್ರಿಲ್ ಗೆ ಹೋಲಿಸಿದರೆ ರೈಲ್ವೆ ಸರಕು ಸಾಗಣೆ ಮೇ ತಿಂಗಳಲ್ಲಿ ಶೇ.26 ರಷ್ಟು ಹೆಚ್ಚಾಗಿದೆ. ಒಟ್ಟು ಡಿಜಿಟಲ್ ಚಿಲ್ಲರೆ ವಹಿವಾಟು ಪ್ರಮಾಣ ಮತ್ತು ಮೌಲ್ಯ ಎರಡರಲ್ಲೂ ಏರಿಕೆಯಾಗುತ್ತಿದೆ.
ಸ್ನೇಹಿತರೇ, ಗ್ರಾಮೀಣ ಆರ್ಥಿಕತೆಯೂ ಸಹ ಏರಿಕೆಯತ್ತ ಸಾಗಿದೆ. ಈ ವರ್ಷ ಖಾರಿಫ್ನ ಬೆಳೆ ವಿಸ್ತೀರ್ಣ ಕಳೆದ ವರ್ಷಕ್ಕಿಂತ ಶೇ.13 ರಷ್ಟು ಹೆಚ್ಚಾಗಿದೆ. ಈ ವರ್ಷ ಗೋಧಿ ಉತ್ಪಾದನೆ ಮತ್ತು ಸಂಗ್ರಹವೂ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.11 ರಷ್ಟು ಹೆಚ್ಚಿನ ಗೋಧಿಯನ್ನು ಇಲ್ಲಿಯವರೆಗೆ ಖರೀದಿಸಲಾಗಿದೆ. ಇದರರ್ಥ ಹೆಚ್ಚಿನ ಹಣ ರೈತರ ಜೇಬಿಗೆ ಹೋಗಿದೆ. ಈ ಎಲ್ಲಾ ಸೂಚಕಗಳು ಭಾರತದ ಆರ್ಥಿಕತೆಯು ಪುಟಿದೇಳಲು ಮತ್ತು ಮುಂದೆ ಸಾಗಲು ಸಿದ್ಧವಾಗಿದೆ ಎಂಬುದನ್ನು ಸೂಚಿಸುತ್ತವೆ.
ಸ್ನೇಹಿತರೇ, ಭಾರತವು ದೊಡ್ಡ ಬಿಕ್ಕಟ್ಟುಗಳಿಂದ ಹೊರಬಂದಿದೆ ಮತ್ತು ಇದರಿಂದಲೂ ಹೊರಬರುತ್ತದೆ. ನಾವು ಭಾರತೀಯರು ಲಕ್ಷಾಂತರ ಗ್ರಾಹಕರಾಗಿದ್ದರೆ, ನಾವ ಲಕ್ಷಾಂತರ ಉತ್ಪಾದಕರು ಸಹ ಆಗಿದ್ದೇವೆ. ಭಾರತದ ಯಶಸ್ಸು ಮತ್ತು ಬೆಳವಣಿಗೆ ನಿಶ್ಚಿತ; ನಾವು ಸ್ವಾವಲಂಬಿ ಆಗಬಹುದು.
ನೆನಪಿಡಿ, ಕೆಲವು ವಾರಗಳ ಹಿಂದೆ ನಾವು ಎನ್ -95 ಮುಖಗವಸುಗಳು, ಕೊರೊನಾ ಪರೀಕ್ಷಾ ಕಿಟ್ಗಳು, ಪಿಪಿಇ ಮತ್ತು ವೆಂಟಿಲೇಟರ್ಗಳಲ್ಲಿ ಹೆಚ್ಚಿನವುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಈಗ ಭಾರತವು ‘ಮೇಕ್ ಇನ್ ಇಂಡಿಯಾ’ ಮೂಲಕ ತನ್ನ ಬೇಡಿಕೆಯನ್ನು ಈಡೇರಿಸುತ್ತಿದೆ. ಶೀಘ್ರದಲ್ಲೇ ನಾವು ವೈದ್ಯಕೀಯ ಉತ್ಪನ್ನಗಳ ಪ್ರಮುಖ ರಫ್ತುದಾರರಾಗುತ್ತೇವೆ. ನಿಮ್ಮ ನಂಬಿಕೆ ಮತ್ತು ಸ್ಥೈರ್ಯವನ್ನು ನೀವು ಉಳಿಸಿಕೊಳ್ಳಬೇಕು, ನಾವು ಅದನ್ನು ಸಾಧಿಸಬಹುದು. ನಾವು ಖಂಡಿತವಾಗಿಯೂ ಆತ್ಮನಿರ್ಭರ ಭಾರತ ಆಗಬಹುದು!
ನಾವು ಸ್ವಾವಲಂಬಿ ಭಾರತ ನಿರ್ಮಿಸಬಹುದು.
130 ಕೋಟಿ ಭಾರತೀಯರು ಪ್ರಾರಂಭಿಸಿರುವ ಸ್ವಾವಲಂಬಿ ಭಾರತದ ಪ್ರಯಾಣದಲ್ಲಿ ನೀವೆಲ್ಲರೂ ಪ್ರಮುಖ ಪಾಲುದಾರರು. ಭಾರತವನ್ನು ಮುಂದೆ ಸಾಗುವಂತೆ ಮಾಡೋಣ, ಭಾರತವನ್ನು ಆತ್ಮನಿರ್ಭರವಾಗಿಸೋಣ!
ಕಲ್ಲಿದ್ದಲು ಕ್ಷೇತ್ರದಲ್ಲಿನ ಈ ಮಹತ್ವದ ಆರಂಭಕ್ಕೆ ಮತ್ತೊಮ್ಮೆ ನಿಮ್ಮೆಲ್ಲರಿಗೂ ತುಂಬು ಅಭಿನಂದನೆಗಳು.
ಏನನ್ನಾದರೂ ಮಾಡುವ ಮೂಲಕ ಇತಿಹಾಸವನ್ನು ಬದಲಾಯಿಸುವ ಅವಕಾಶಗಳು ಜೀವನದಲ್ಲಿ ಬಹಳ ಕಡಿಮೆ ಸಂದರ್ಭಗಳಲ್ಲಿ ಬರುತ್ತವೆ. ಇಂದು, ಕೈಗಾರಿಕಾ ಜಗತ್ತು ಮತ್ತು ಭಾರತದ ಸೇವಾ ವಲಯವು ಜನರನ್ನು ಗುಣಪಡಿಸಲು ಇತಿಹಾಸವನ್ನು ಬದಲಾಯಿಸುವ ಅವಕಾಶವನ್ನು ಪಡೆದುಕೊಂಡಿದೆ. ಈ ಅವಕಾಶವನ್ನು ನಾವು ಕಳೆದುಕೊಳ್ಳಬಾರದು. ಬನ್ನಿ, ಭಾರತವನ್ನು ಮುನ್ನಡೆಸಿ ಸ್ವಾವಲಂಬಿ ದೇಶವನ್ನಾಗಿ ಮಾಡೋಣ.
ಸ್ನೇಹಿತರೇ, ಇಂದು ನಿಮ್ಮೊಂದಿಗೆ ಇರಲು ನನಗೆ ಅವಕಾಶ ಸಿಕ್ಕಿದೆ. ಇದು ಕಲ್ಲಿದ್ದಲಿನ ವಿಷಯವಾಗಿದ್ದರೂ, ನಾವು ವಜ್ರಗಳ ಕನಸು ಕಾಣಬೇಕು. ಕಲ್ಲಿದ್ದಲು ಕ್ಷೇತ್ರದಲ್ಲಿ ಈ ಮಹತ್ವದ ಆರಂಭಕ್ಕಾಗಿ ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು. ಈ ಲಾಕ್ಡೌನ್ ಅವಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಕ್ಕಾಗಿ ಮತ್ತು ಇಡೀ ಇಲಾಖೆಯ ಎಲ್ಲಾ ಸೂಕ್ಷ್ಮ ವ್ಯತ್ಯಾಸಗಳನ್ನು ಅಧ್ಯಯನ ಮಾಡಿದ ನನ್ನ ಸಂಪುಟ ಸಹೋದ್ಯೋಗಿ ಪ್ರಹ್ಲಾದ್ ಜೋಶಿ ಮತ್ತು ಅವರ ಇಡೀ ತಂಡವನ್ನು ನಾನು ವಿಶೇಷವಾಗಿ ಅಭಿನಂದಿಸುತ್ತೇನೆ. ರಾಷ್ಟ್ರಕ್ಕೆ ಸಹಾಯ ಮಾಡುವ ಹೊಸ ಮಾರ್ಗಗಳನ್ನು ಕಂಡುಹಿಡಿದು ಉತ್ತಮ ನಾಯಕತ್ವವನ್ನು ಒದಗಿಸಿದ್ದಕ್ಕಾಗಿ ಪ್ರಹ್ಲಾದ್ ಜೋಷಿ, ಅವರ ಕಾರ್ಯದರ್ಶಿ ಮತ್ತು ಅವರ ತಂಡವನ್ನು ನಾನು ಅಭಿನಂದಿಸುತ್ತೇನೆ.
ನೀವು ಇದೊಂದು ಸಣ್ಣ ಕಾರ್ಯಕ್ರಮ ಎಂದು ಯೋಚಿಸುತ್ತಿರಬಹುದು. ಆದರೆ ನಾನು ಹಾಗೆ ಯೋಚಿಸುವುದಿಲ್ಲ. ಪ್ರಹ್ಲಾದ್ ಜೋಷಿಯವರೇ, ನೀವು ಇಂದು ಸ್ವಾವಲಂಬಿ ಭಾರತಕ್ಕೆ ಬಲವಾದ ಅಡಿಪಾಯ ಹಾಕುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ನಿಮಗೆ ಮತ್ತು ನಿಮ್ಮ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.
ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಇಂದು ಇಲ್ಲಿರುವ ಉದ್ಯಮದ ನನ್ನ ಸ್ನೇಹಿತರಿಗೆ ಮತ್ತೊಮ್ಮೆ ಭರವಸೆ ನೀಡುತ್ತೇನೆ. ದೇಶದ ಹಿತಕ್ಕಾಗಿ ನೀವು ಎರಡು ಹೆಜ್ಜೆ ಹಾಕಿದರೆ, ನಾನು ನಿಮ್ಮೊಂದಿಗೆ ನಾಲ್ಕು ಹೆಜ್ಜೆ ನಡೆಯಲು ಸಿದ್ಧನಿದ್ದೇನೆ. ಬನ್ನಿ, ಈ ಅವಕಾಶವನ್ನು ನಾವು ಕಳೆದುಕೊಳ್ಳಬಾರದು.
ನಿಮ್ಮೆಲ್ಲರಿಗೂ ಮತ್ತೊಮ್ಮೆ ಶುಭಾಶಯಗಳು. ಧನ್ಯವಾದಗಳು.
***
(Release ID: 1632566)
Visitor Counter : 254
Read this release in:
English
,
Urdu
,
Marathi
,
Hindi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam