PIB Headquarters
ಕೋವಿಡ್-19: ಪಿ ಐ ಬಿ ದೈನಿಕ ವರದಿ
Posted On:
04 JUN 2020 6:27PM by PIB Bengaluru
ಕೋವಿಡ್-19: ಪಿ ಐ ಬಿ ದೈನಿಕ ವರದಿ


(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು
ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೋವಿಡ್ -19 ಅಪ್ ಡೇಟ್
ಕಳೆದ 24 ಗಂಟೆಗಳಲ್ಲಿ , ಒಟ್ಟು 3,804 ಕೋವಿಡ್ -19 ರೋಗಿಗಳು ಚೇತರಿಸಿಕೊಂಡಿದ್ದಾರೆ.ಇದರಿಂದ ಇದುವರೆಗೆ 1,04,107 ರೋಗಿಗಳು ಕೋವಿಡ್ -19 ರಿಂದ ಗುಣಮುಖರಾಗಿದ್ದಾರೆ. ಕೋವಿಡ್ ರೋಗಿಗಳಲ್ಲಿ ಗುಣಮುಖ ದರ (ಚೇತರಿಕೆ ದರ ) 47.99%. ಪ್ರಸ್ತುತ 1,06,737 ಆಕ್ಟಿವ್ ಕೋವಿಡ್ -19 ಪ್ರಕರಣಗಳಿವೆ. ಮತ್ತು ಇವು ವೈದ್ಯಕೀಯ ನಿಗಾದಲ್ಲಿವೆ. ಸೋಂಕು ಇರುವ ವ್ಯಕ್ತಿಗಳಲ್ಲಿ ನೊವೆಲ್ ಕೊರೊನಾ ವೈರಸ್ ಪತ್ತೆಯ ಪರೀಕ್ಷಾ ಸಾಮರ್ಥ್ಯವನ್ನು ಐ.ಸಿ.ಎಂ.ಆರ್. ಮತ್ತೆ ಹೆಚ್ಚಿಸಿದೆ. ಸರಕಾರದ ಪ್ರಯೋಗಾಲಯಗಳ ಸಂಖ್ಯೆಯನ್ನು 498 ಕ್ಕೇರಿಸಲಾಗಿದೆ ಮತ್ತು ಖಾಸಗಿ ಪ್ರಯೋಗಾಲಯಗಳ ಸಂಖ್ಯೆಯನ್ನು 212 ಕ್ಕೇರಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 1,39,485 ಸ್ಯಾಂಪಲ್ ಗಳನ್ನು ಪರೀಕ್ಷಿಸಲಾಗಿದೆ. ಇದರಿಂದ ಇದುವರೆಗೆ ಪರೀಕ್ಷಿಸಲಾದ ಒಟ್ಟು ಸ್ಯಾಂಪಲ್ ಗಳ ಸಂಖ್ಯೆ 42,42,718 ಕ್ಕೇರಿದೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸುರಕ್ಷಿತ ಇ.ಎನ್.ಟಿ. ಚಿಕಿತ್ಸಾ ಪದ್ದತಿಗಳಿಗಾಗಿ ಸಚಿವಾಲಯವು ಮಾರ್ಗದರ್ಶಿಗಳನ್ನು ಹೊರಡಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1629347
ಕೋವಿಡ್ -19 ಕ್ಕಾಗಿ ಸಿದ್ದತಾ ಸ್ಥಿತಿ, ನಿರ್ವಹಣೆ ಕುರಿತಂತೆ ದಿಲ್ಲಿಯ ಲೆಫ್ಟಿನೆಂಟ್ ರಾಜ್ಯಪಾಲರು ಮತ್ತು ಆರೋಗ್ಯ ಸಚಿವರ ಜೊತೆ ಡಾ. ಹರ್ಷ ವರ್ಧನ್ ಪರಾಮರ್ಶೆ
“ದಿಲ್ಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತು ಅದರಿಂದಾಗುವ ಸಾವುಗಳ ಸಂಖ್ಯೆ ಹೆಚ್ಚುತ್ತಿದ್ದಂತೆ , ಕಣ್ಗಾವಲಿನ ಜೊತೆ ಪರೀಕ್ಷೆಗಳನ್ನು ಹೆಚ್ಚಿಸಬೇಕಾದ , ಸಂಪರ್ಕಗಳನ್ನು ಪತ್ತೆ ಹಚ್ಚಬೇಕಾದ ಮತ್ತು ಕಠಿಣ ನಿಯಂತ್ರಣ ಹಾಗು ಪರಿಧಿ ನಿಯಂತ್ರಣ ಚಟುವಟಿಕೆಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ” . ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷ ವರ್ಧನ್ ಅವರು ಕೋವಿಡ್ -19 ನಿಯಂತ್ರಣ ಮತ್ತು ಪ್ರಸರಣ ತಡೆಗೆ ಸಿದ್ದತಾ ಸ್ಥಿತಿಯನ್ನು ಪರಾಮರ್ಶಿಸಲು ವೀಡಿಯೋ ಕಾನ್ಫರೆನ್ಸ್ (ವಿ.ಸಿ.) ಮೂಲಕ ನಡೆಸಿದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಹೇಳಿದ ಮಾತುಗಳಿವು. ಪರೀಕ್ಷೆಗಳನ್ನು ಹೆಚ್ಚಿಸಬೇಕಾದ ಮತ್ತು ಆರೋಗ್ಯ ಮೂಲ ಸೌಕರ್ಯಗಳನ್ನು ಹೆಚ್ಚಿಸುವ ಜೊತೆಗೆ ಕೋವಿಡ್ -19 ನ್ನು ಉತ್ತಮ ಕ್ಲಿನಿಕಲ್ ನಿರ್ವಹಣೆಯೊಂದಿಗೆ ನಿಭಾಯಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದ ಸಚಿವರು, ಸಮರ್ಪಕ ಪ್ರಕರಣಗಳ ನಿಭಾವಣೆಗೆ ಮತ್ತು ಮೃತ್ಯು ಪ್ರಮಾಣ ಇಳಿಕೆಗೆ ಇದು ಅಗತ್ಯ ಎಂದರು. ಪ್ರಸ್ತುತ ಪ್ರಕರಣಗಳ ಸಂಖ್ಯೆ ಏರುತ್ತಿರುವುದರಿಂದ ಮತ್ತು ಆಸ್ಪತ್ರೆಗೆ ದಾಖಲಿಸಿಕೊಳ್ಳುವಲ್ಲಿ ಅನಗತ್ಯ ವಿಳಂಬ ತಡೆಗೆ ಹಾಸಿಗೆ ಲಭ್ಯತೆಯ ಸಂಖ್ಯೆಯನ್ನು ತ್ವರಿತವಾಗಿ ಹೆಚ್ಚಿಸಬೇಕು ಎಂದರು.
ವಿವರಗಳಿಗೆ: https://pib.gov.in/PressReleseDetail.aspx?PRID=1629348
ಭಾರತ –ಆಸ್ಟ್ರೇಲಿಯಾ ವರ್ಚುವಲ್ ಶೃಂಗದಲ್ಲಿ ಪ್ರಧಾನ ಮಂತ್ರಿ ಅವರ ಆರಂಭಿಕ ಮಾತುಗಳು
ವಿವರಗಳಿಗೆ : https://pib.gov.in/PressReleseDetail.aspx?PRID=1629296
ಪ್ರಧಾನ ಮಂತ್ರಿ ಮತ್ತು ಮೊಜಾಂಬಿಕ್ ಅಧ್ಯಕ್ಷ ಗೌರವಾನ್ವಿತ ಫಿಲಿಪೆ ಜಸಿಂಟೋ ನ್ಯೂಸಿ ನಡುವೆ ದೂರವಾಣಿ ಸಂಭಾಷಣೆ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೊಜಾಂಬಿಕ್ ಅಧ್ಯಕ್ಷ ಗೌರವಾನ್ವಿತ ಫಿಲಿಪೆ ಜಸಿಂಟೋ ನ್ಯೂಸಿ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು. ಕೋವಿಡ್ -19 ಜಾಗತಿಕ ಸಾಂಕ್ರಾಮಿಕವು ಉಭಯ ದೇಶಗಳಲ್ಲಿ ಉಂಟು ಮಾಡಿರುವ ಸವಾಲುಗಳ ಬಗ್ಗೆ ಇಬ್ಬರು ನಾಯಕರೂ ಚರ್ಚಿಸಿದರು. ಪ್ರಧಾನ ಮಂತ್ರಿ ಅವರು ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಮೊಜಾಂಬಿಕ್ ಪ್ರಯತ್ನಗಳಿಗೆ ಬೆಂಬಲ ನೀಡುವ ಭಾರತದ ಇಚ್ಚೆಯ ಬಗ್ಗೆ ತಿಳಿಸಿದರು. ಅವಶ್ಯಕ ಔಷದಿ ಮತ್ತು ಸಲಕರಣೆಗಳನ್ನು ಒದಗಿಸುವ ಬಗ್ಗೆಯೂ ತಿಳಿಸಿದರು. ಅಧ್ಯಕ್ಷ ನ್ಯೂಸಿ ಅವರು ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ಮತ್ತು ಔಷಧಿ ಪೂರೈಕೆಯಲ್ಲಿ ಉಭಯ ದೇಶಗಳ ನಡುವಿನ ನಿಕಟ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿವರಗಳಿಗೆ : https://pib.gov.in/PressReleseDetail.aspx?PRID=1629116
ಭಾರತದ ರಾಷ್ಟ್ರಪತಿಗಳಿಗೆ ಜಾರ್ಜಿಯಾ ಅಧ್ಯಕ್ಷರಿಂದ ದೂರವಾಣಿ ಕರೆ
ಭಾರತದ ರಾಷ್ಟ್ರಪತಿಗಳಾದ ಶ್ರೀ ರಾಮ್ ನಾಥ್ ಕೋವಿಂದ್ ಅವರಿಂದು ಜಾರ್ಜಿಯಾ ಅಧ್ಯಕ್ಷರಾದ ಶ್ರೀಮತಿ ಸಾಲೋಮ್ ಜೌರಾಬಿಚ್ವಿಲಿ ಅವರ ಜೊತೆ ದೂರವಾಣಿ ಸಂಭಾಷಣೆ ನಡೆಸಿದರು. ಇಬ್ಬರು ನಾಯಕರೂ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಿದರು. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಪರಿಣಾಮವಾಗಿ ಜಗತ್ತು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮತ್ತು ಅದರಿಂದ ಜಗತ್ತಿನಾದ್ಯಂತ ಉಂಟಾಗಿರುವ ಅಲ್ಲೋಲಕಲ್ಲೋಲದ ಬಗ್ಗೆಯೂ ಮಾತುಕತೆಯಲ್ಲಿ ಪ್ರಸ್ತಾಪವಾಯಿತು. ಕೋವಿಡ್ -19 ನಿಯಂತ್ರಿಸುವಲ್ಲಿ ಜಾರ್ಜಿಯಾದ ರಾಷ್ಟ್ರೀಯ ಪ್ರಯತ್ನಗಳು ಗಮನಾರ್ಹವಾದವು ಎಂದು ರಾಷ್ಟ್ರಪತಿಗಳು ಹೇಳಿದರು . ಕೋವಿಡ್ -19 ಹರಡುವಿಕೆಯನ್ನು ನಿರ್ಬಂಧಿಸಲು ಭಾರತವು ಕೈಗೊಂಡ ಕಠಿಣ ಕ್ರಮಗಳ ಬಗ್ಗೆ ಜಾರ್ಜಿಯಾ ಅಧ್ಯಕ್ಷರಿಗೆ ರಾಷ್ಟ್ರಪತಿಗಳು ವಿವರಿಸಿದರು. ಭಾರತದಲ್ಲಿ ನಾವು ವ್ಯಾಪಕ ವ್ಯಾಪ್ತಿಯಲ್ಲಿ ಯಶಸ್ವಿಯಾಗಿದ್ದೇವೆ ಎಂದವರು ತಿಳಿಸಿದರು. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ವಿರುದ್ದ ಅಂತಾರಾಷ್ಟ್ರೀಯ ಪ್ರಯತ್ನಗಳನ್ನು ಒಗ್ಗೂಡಿಸುವಲ್ಲಿ ಭಾರತವು ಮುಂಚೂಣಿ ಪಾತ್ರವನ್ನು ವಹಿಸಿದೆ. ಮತ್ತು ಸುಮಾರು 150 ದೇಶಗಳಿಗೆ ವೈದ್ಯಕೀಯ ಪೂರೈಕೆಗಳನ್ನು ಮಾಡಿದೆ.
ವಿವರಗಳಿಗೆ : https://pib.gov.in/PressReleseDetail.aspx?PRID=1629120
ಆರ್.ಪಿ.ಎಫ್. ಅಧಿಕಾರಿಯ ಕರ್ತವ್ಯದ ಕರೆ ಮತ್ತು ಸ್ಪೂರ್ತಿ ಎಲ್ಲರ ಹೃದಯ ಗೆದ್ದಿದೆ
ರೈಲ್ವೇ ಸಚಿವರಾದ ಶ್ರೀ ಪೀಯುಶ್ ಗೋಯಲ್ ಅವರು ಆರ್.ಪಿ.ಎಫ್. ಕಾನ್ಸ್ಟೇಬಲ್ ಶ್ರೀ ಇಂದರ್ ಸಿಂಗ್ ಯಾದವ್ ಅವರು ಮಾಡಿರುವ ಅತ್ಯುತ್ತಮ ಕಾರ್ಯವನ್ನು ಕೊಂಡಾಡಿದ್ದಾರೆ. ಮತ್ತು ಅವರಿಗೆ ನಗದು ಬಹುಮಾನವನ್ನು ಪ್ರಕಟಿಸಿದ್ದಾರೆ. ಶ್ರೀ ಯಾದವ್ ಅವರು ಬೆಳಗಾವಿಯಿಂದ ಗೋರಖ್ ಪುರಕ್ಕೆ ಶ್ರಮಿಕ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ಶರೀಫ್ ಹಾಶ್ಮಿವರ ನಾಲ್ಕು ತಿಂಗಳ ಹಸುಳೆಗೆ ಹಾಲು ನೀಡಲು ರೈಲಿನ ಹಿಂದೆ ಓಡಿ ಕರ್ತವ್ಯದಲ್ಲಿ ವಿಶೇಷ ಕಾಳಜಿ ತೋರಿದ್ದರು. ಆಕೆಯ ಮಗು ಹಾಲಿಗಾಗಿ ಅಳುತ್ತಿತ್ತು, ಈ ಹಿಂದಿನ ಯಾವ ನಿಲ್ದಾಣದಲ್ಲೂ ಆಕೆಗೆ ಹಾಲು ಸಿಕ್ಕಿರಲಿಲ್ಲ. ಮತ್ತು ಆಕೆ ಭೋಪಾಲಿನಲ್ಲಿ ಕಾನ್ಸ್ಟೇಬಲ್ ಶ್ರೀ ಯಾದವ್ ಅವರ ನೆರವು ಕೋರಿದ್ದರು. ಶ್ರೀ ಇಂದರ್ ಸಿಂಗ್ ಯಾದವ್ ಅವರು ತಕ್ಷಣವೇ ಭೋಪಾಲ್ ನಿಲ್ದಾಣದಿಂದ ಹೊರಗೆ ಓಡಿ, ನಿಲ್ದಾಣದಿಂದ ಹೊರಗೆ ಇರುವ ಅಂಗಡಿಯಿಂದ ಪ್ಯಾಕೆಟ್ ಹಾಲು ತಂದಿದ್ದರು. ಆದರೆ ಅದಾಗಲೇ ರೈಲು ಚಲನೆ ಆರಂಭಿಸಿತ್ತು. ಯಾದವ್ ಅವರು ರೈಲಿನ ಹಿಂದೆ ಓಡಿ ಆ ಬೋಗಿಯಲ್ಲಿದ್ದ ಮಹಿಳೆಗೆ ಹಾಲು ನೀಡಿ ತನ್ನ ಮಾನವೀಯತೆ ಮತ್ತು ಧೈರ್ಯ ತೋರಿದ್ದರು.
ವಿವರಗಳಿಗೆ: https://pib.gov.in/PressReleseDetail.aspx?PRID=1629340
ಎಲ್ಲಾ ಯು.ಎಲ್.ಬಿ. ಗಳು ಮತ್ತು ಸ್ಮಾರ್ಟ್ ಸಿಟಿಗಳಲ್ಲಿ ಪದವೀಧರರಿಗಾಗಿ ಅವಕಾಶಗಳನ್ನು ಒದಗಿಸಲು ನಗರ ಕಲಿಕೆ ಪ್ರಶಿಕ್ಷಣ ಕಾರ್ಯಕ್ರಮ ’ಟುಲಿಪ್’ ಆರಂಭ
ಮಾನವ ಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಪೋಖ್ರಿಯಾಲ್ ’ನಿಶಾಂಕ್” , ವಸತಿ ಮತ್ತು ನಗರ ವ್ಯವಹಾರಗಳ ಸಹಾಯಕ (ಉಸ್ತುವಾರಿ) ಸಚಿವರಾದ ಶ್ರೀ ಹರ್ದೀಪ್ ಎಸ್. ಪುರಿ ಮತ್ತು ತಾಂತ್ರಿಕ ಶಿಕ್ಷಣಕ್ಕಾಗಿರುವ ಅಖಿಲ ಭಾರತ ಮಂಡಳಿಗಳು ಜಂಟಿಯಾಗಿ “ನಗರ ಕಲಿಕಾ ಪ್ರಶಿಕ್ಷಣ ಕಾರ್ಯಕ್ರಮ” (ಟುಲಿಪ್) ದ ಆನ್ ಲೈನ್ ಪೋರ್ಟಲನ್ನು ಕಾರ್ಯಾರಂಭ ಮಾಡಿದ್ದು, ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮತ್ತು ದೇಶಾದ್ಯಂತ ಸ್ಮಾರ್ಟ್ ಸಿಟಿಗಳಲ್ಲಿ ಪದವೀಧರರಿಗೆ ಪ್ರಶಿಕ್ಷಣ (ಇಂಟರ್ನ್ ಶಿಪ್ ) ಅವಕಾಶಗಳನ್ನು ಒದಗಿಸುವ ಕಾರ್ಯಕ್ರಮ ಇದಾಗಿದೆ. ನಗರ ವಲಯಗಳಲ್ಲಿ ಅನುಭವ ಕಲಿಕಾ ಅವಕಾಶಗಳನ್ನು ಹೊಸ ಪದವೀಧರರಿಗೆ ಒದಗಿಸುವುದು ಟುಲಿಪ್ ಕಾರ್ಯಕ್ರಮದ ಉದ್ದೇಶ. ಕೋವಿಡ್ ಬಿಕ್ಕಟ್ಟನ್ನ್ನು ನಿಭಾಯಿಸುವಲ್ಲಿ ಸ್ಮಾರ್ಟ್ ಸಿಟಿಗಳು ತಂತ್ರಜ್ಞಾನ ಅನುಸರಣೆಯಲ್ಲಿ ಮುಂಚೂಣಿಯಲ್ಲಿವೆ , ಇವುಗಳಲ್ಲಿ 47 ಸ್ಮಾರ್ಟ್ ಸಿಟಿಗಳು ಅವುಗಳ ಸ್ಮಾರ್ಟ್ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳನ್ನು ಬಿಕ್ಕಟ್ಟು ನಿಭಾಯಿಸುವ ವಾರ್ ರೂಂ ಗಳಾಗಿ ಪರಿವರ್ತಿಸಿವೆ ಮತ್ತು 34 ನಗರಗಳು ಅವುಗಳನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಲಿಸುವ ಹಾದಿಯಲ್ಲಿವೆ.
ವಿವರಗಳಿಗಾಗಿ: https://pib.gov.in/PressReleseDetail.aspx?PRID=1629314
ಜಮ್ಮು ಮತ್ತು ಕಾಶ್ಮೀರ ಮುನ್ಸಿಪಲ್ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಕೋವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಡಾ. ಜಿತೇಂದ್ರ ಸಿಂಗ್ ಚರ್ಚೆ
ಕೋವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಮುನ್ಸಿಪಲ್ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಚರ್ಚೆ ನಡೆಸಿದರು. ತಮ್ಮ ಪ್ರಾರಂಭಿಕ ಮಾತುಗಳಲ್ಲಿ , ಡಾ. ಜಿತೇಂದ್ರ ಸಿಂಗ್ ಅವರು ಕೋವಿಡ್ ಜಾಗತಿಕ ಸಾಂಕ್ರಾಮಿಕದ ಮೊದಲೆರಡು ಹಂತಗಳಲ್ಲಿ ದೇಶದ ವಿವಿಧೆಡೆ ಸಿಲುಕಿ ಹಾಕಿಕೊಂಡಿದ್ದ ಜನರಿಗೆ ಅವಶ್ಯಕ ವಸ್ತುಗಳನ್ನು ಪೂರೈಸುವುದಕ್ಕೇ ಆದ್ಯ ಗಮನ ನೀಡಲಾಗಿತ್ತು. ಮತ್ತು ಬಳಿಕದ ಹಂತಗಳಲ್ಲಿ ದೇಶದ ವಿವಿಧ ಕಡೆಗಳಿಂದ ಮನೆಗೆ ಮರಳುವ ಜನರಿಗೆ ಮುಕ್ತ ಸಂಚಾರದ ಅವಕಾಶವನ್ನು ಒದಗಿಸುವುದೇ ಮುಖ್ಯ ಜವಾಬ್ದಾರಿಯಾಯಿತು. ಆದಾಗ್ಯೂ ಈಗ ಚಾಲ್ತಿಯಲ್ಲಿರುವ ಹಂತದಲ್ಲಿ ಎರಡು ವಿಷಯಗಳ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ, ಅದೆಂದರೆ ನಿಯಂತ್ರಣ ಮತ್ತು ಜಾಗೃತಿ. ಮತ್ತು ಈ ಎರಡು ಉದ್ದೇಶಗಳ ಈಡೇರಿಕೆಗಾಗಿ , ಸ್ಥಳೀಯಾಡಳಿತ ಸಂಸ್ಥೆಗಳು, ಅವುಗಳ ಪ್ರತಿನಿಧಿಗಳು ಹಾಗು ನಾಗರಿಕ ಸಮಾಜದ ಪಾತ್ರಗಳು ಅಸಾಮಾನ್ಯ ಪ್ರಾಮುಖ್ಯವನ್ನು ಹೊಂದಿವೆ ಎಂದು ಹೇಳಿದರು.
ವಿವರಗಳಿಗಾಗಿ: https://pib.gov.in/PressReleseDetail.aspx?PRID=1629190
ಕೋವಿಡ್ 19 ಕ್ಕಾಗಿ ಎನ್.ಸಿ.ವಿ.ಟಿ.ಸಿ.ಯಿಂದ ಅತಿಥೇಯ ನಿರ್ದೇಶಿತ ವೈರಲ್ ನಿರೋಧಕ (ಆಂಟಿ ವೈರಲ್ ) ಅಭಿವೃದ್ದಿ
ಹರ್ಯಾಣಾದ ಹಿಸಾರ್ ನಲ್ಲಿರುವ ಐ.ಸಿ.ಎ.ಆರ್-ಎನ್.ಆರ್.ಸಿ ಯ ಪಶುವೈದ್ಯಕೀಯ ಮಾದರಿಯ ಕಲ್ಚರ್ಸ್ ಗಳ ರಾಷ್ಟ್ರೀಯ ಕೇಂದ್ರದ (ಎನ್.ಸಿ.ವಿ.ಟಿ.ಸಿ.) ಅಧ್ಯಯನಕ್ಕೆ ವಿಜ್ಞಾನ ಮತ್ತು ಇಂಜಿನಿಯರಿಂಗ್ ಸಂಶೋಧನಾ ಮಂಡಳಿ (ಎಸ್.ಇ.ಆರ್.ಬಿ.) ಅನುಮೋದನೆ ನೀಡಿದೆ. ಇದರಲ್ಲಿ 94 ಸಣ್ಣ ಅಣು ರಾಸಾಯನಿಕ ಬೆಳವಣಿಗೆ ನಿಯಂತ್ರಕಗಳ (ಪ್ರತಿರೋಧಕಗಳ ) ಸಂಗ್ರಹಾಲಯವನ್ನು ಕೊರೊನಾ ವೈರಸ್ಸಿನ ಆಂಟಿ ವೈರಸ್ ಗಾಗಿ ಶೋಧಿಸಲಾಗುತ್ತದೆ.
ವಿವರಗಳಿಗಾಗಿ: https://pib.gov.in/PressReleseDetail.aspx?PRID=1629275
ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ
- ಕೇರಳ: ಪಾಲಕ್ಕಾಡ್ ಜಿಲ್ಲೆಯಲ್ಲಿ ಮತ್ತೊಬ್ಬರು ಕೋವಿಡ್ -19 ಕ್ಕೆ ಬಲಿಯಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 12 ಕ್ಕೇರಿದೆ. ಚೆನ್ನೈಯಿಂದ ಮರಳಿ ಬಂದ ಬಳಿಕ ಕ್ವಾರಂಟೈನ್ ನಲ್ಲಿದ್ದ 73 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಈ ನಡುವೆ ಸೋಮವಾರದಿಂದ ಧಾರ್ಮಿಕ ಕೇಂದ್ರಗಳನ್ನು ತೆರೆಯುವ ಬಗ್ಗೆ ಮುಖ್ಯಮಂತ್ರಿಗಳು ಧಾರ್ಮಿಕ ನಾಯಕರ ಜೊತೆ ದಿನವಿಡೀ ಮಾತುಕತೆ ನಡೆಸುತ್ತಿದ್ದಾರೆ. ವಿದೇಶೀ ವ್ಯವಹಾರಗಳ ಸಹಾಯಕ ಸಚಿವರಾದ ವಿ. ಮುರಳೀಧರನ್ ರಾಜ್ಯಕ್ಕೆ 24 ಅಂತಾರಾಷ್ಟ್ರೀಯ ವಿಮಾನಗಳ ಬಗ್ಗೆ ಕೇಂದ್ರ ಸರಕಾರವು ತಿಳಿಸಿದ್ದರೂ 12 ವಿಮಾನಗಳಿಗೆ ಮಾತ್ರವೇ ಅನುಮತಿ ದೊರೆತಿದೆ ಎಂದಿದ್ದಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ಇರುವ ಪರಿಸ್ಥಿತಿಯನ್ನು ಕೇರಳವು ಗಮನಕ್ಕೆ ತೆಗೆದುಕೊಳ್ಳಬೇಕೇ ಹೊರತು ಅಲ್ಲಿಂದ ವಾಪಸಾಗುವವರಿಗೆ ಯಾವುದೇ ವರ್ಗ ವಿಭಾಗಗಳನ್ನು ಹೇರಬಾರದು ಎಂದಿದ್ದಾರೆ. ಸುಪ್ರಿಂ ಕೋರ್ಟಿಗೆ ಸಲ್ಲಿಸಿದ ವರದಿಯಲ್ಲಿ ಕೇರಳವು ಲಾಕ್ ಡೌನ್ ಅವಧಿಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಕಂಪೆನಿಗಳಲ್ಲಿ ವೇತನ ಕಡಿತ ಮಾಡಲು ಮತ್ತು ಕೆಲಸಗಾರರನ್ನು ತೆಗೆದು ಹಾಕಲು ಕೈಗೊಂಡಿರುವ ಕ್ರಮಗಳು ಕೋವಿಡ್ ಪ್ರತಿರೋಧಿಸುವಲ್ಲಿ ಅವರ ಮಾನಸಿಕ ಸ್ಥೈರ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತವೆ ಎಂದು ಹೇಳಿದೆ. ರಾಜ್ಯದಲ್ಲಿ ನಿನ್ನೆ 82 ಹೊಸ ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ. ಈಗ ಅಲ್ಲಿ 832 ಆಕ್ಟಿವ್ ಪ್ರಕರಣಗಳಿದ್ದು, ಒಟ್ಟು ಸಂಖ್ಯೆ 1,494 ಕ್ಕೇರಿದೆ.
- ತಮಿಳುನಾಡು: ಪುದುಚೇರಿಯಲ್ಲಿ ವರದಿಯಾದ 9 ಹೊಸ ಕೋವಿಡ್ -19 ಪ್ರಕರಣಗಳಲ್ಲಿ ಆರು ಮಂದಿ ಜೆ.ಐ.ಪಿ.ಎಂ.ಇ.ಆರ್. ಭದ್ರತಾ ಸಿಬ್ಬಂದಿಗಳು ಇದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು ಆಕ್ಟಿವ್ ಪ್ರಕರಣಗಳ ಸಂಖ್ಯೆ 63. ಕೋವಿಡ್ ನಿಯಂತ್ರಣ ಕ್ರಮಗಳ ಮೇಲೆ ಗಮನ ಕೇಂದ್ರೀಕರಿಸಲು ತಮಿಳುನಾಡು ಮುಖ್ಯ ಕಾರ್ಯದರ್ಶಿಗಳಿಗೆ ಮೂರು ತಿಂಗಳ ಸೇವಾವಧಿ ವಿಸ್ತರಣೆ ನೀಡಲಾಗಿದೆ. ಮುಖ್ಯಕಾರ್ಯದರ್ಶಿಗಳು ಕರೆದ ಸಭೆಯಲ್ಲಿ ಧಾರ್ಮಿಕ ನಾಯಕರು ಜೂನ್ 8 ರಿಂದ ಆರಾಧನಾ ಸ್ಥಳಗಳನ್ನು ತ್ರೆಯುವ ಬಗ್ಗೆ ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕೇಂದ್ರ ಸರಕಾರವು ಆರಾಧನಾ ಸ್ಥಳಗಳನ್ನು ಜೂನ್ 8 ರಿಂದ ತೆರೆಯಲು ಅವಕಾಶ ಒದಗಿಸಿದೆ. ನಿನ್ನೆ ದಾಖಲೆ ಸಂಖ್ಯೆಯಲ್ಲಿ ಅಂದರೆ 1286 ಪ್ರಕರಣಗಳು ವರದಿಯಾಗುವುದರೊಂದಿಗೆ ತಮಿಳುನಾಡಿನ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 25,000 ದ ಗಡಿ ದಾಟಿತು. ಚೆನ್ನೈಯಲ್ಲಿ ಒಂದೇ ದಿನದಲ್ಲಿ ಇದೇ ಮೊದಲ ಬಾರಿಗೆ 1000 ಕ್ಕೂ ಅಧಿಕ ಕೋವಿಡ್ -19 ಪ್ರಕರಣಗಳು ವರದಿಯಾದವು. ಚೆನ್ನೈಯಿಂದ 1012 ಪ್ರಕರಣಗಳು ಸೇರಿದಂತೆ ಒಟ್ಟು ಪ್ರಕರಣಗಳ ಸಂಖ್ಯೆ 25872. ಆಕ್ಟಿವ್ ಪ್ರಕರಣಗಳ ಸಂಖ್ಯೆ 11345. ಸಾವುಗಳು: 208, ಬಿಡುಗಡೆಯಾದವರು -14,316, ಚೆನ್ನೈಯಲ್ಲಿ ಆಕ್ಟಿವ್ ಪ್ರಕರಣಗಳು 8405
- ಕರ್ನಾಟಕ: ಮುಖ್ಯಮಂತ್ರಿಗಳು ಬೇಡಿಕೆ ಈಡೇರಿಕೆ ಬಗ್ಗೆ ಪರಿಶೀಲಿಸಲು ಒಪ್ಪಿಕೊಂಡ ಬಳಿಕ ಆರೋಗ್ಯ ಇಲಾಖೆಯ ಗುತ್ತಿಗೆ ಸಿಬ್ಬಂದಿಗಳು ಮುಷ್ಕರವನ್ನು ಹಿಂಪಡೆದುಕೊಂಡಿದ್ದಾರೆ. ಖಾಸಗಿ ಆಸ್ಪತ್ರೆಗಳ ಸಂಘಟನೆಗಳು ಕೋವಿಡ್ -19 ಚಿಕಿತ್ಸೆಗೆ ಸಾಮಾನ್ಯ ವಾರ್ಡಿನಲ್ಲಾದರೆ ದಿನಕ್ಕೆ ಸುಮಾರು 10,000 ರೂ. ಮತ್ತು ವಿಶೇಷ ವಾರ್ಡಿಗಾದರೆ ವೆಂಟಿಲೇಟರ್ ಸೌಲಭ್ಯ ಮತ್ತು ಐ.ಸಿ.ಯು . ನೊಂದಿಗೆ ದಿನಕ್ಕೆ 20,000 ರೂ. ಗಳ ದರಪಟ್ಟಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿವೆ. ಮುಖ್ಯಮಂತ್ರಿಗಳು ಗೃಹ ಇಲಾಖೆಯ ಜೊತೆ ಪರಾಮರ್ಶಾ ಸಭೆ ನಡೆಸಿದ್ದು, ಈಗಿನ ಸ್ಥಿತಿಯಲ್ಲಿ ಪೊಲೀಸರ ಕಾರ್ಯಗಳನ್ನು ಶ್ಲಾಘಿಸಿದ್ದಾರೆ. ಬುಧವಾರದಂದು ಕರ್ನಾಟಕದ ಒಟ್ಟು ಕೋವಿಡ್ -19 ರೋಗಿಗಳ ಸಂಖ್ಯೆ 4,000 ದಾಟಿದೆ. ಒಂದೇ ದಿನದಲ್ಲಿ 267 ಕೋವಿಡ್ -19 ಪ್ರಕರಣಗಳು ಪತ್ತೆಯಾಗಿವೆ. ಓರ್ವರು ಮೃತಪಟ್ಟಿದ್ದಾರೆ. ಇದುವರೆಗೆ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 4063, ಆಕ್ಟಿವ್ ಪ್ರಕರಣಗಳು: 2494, ಸಾವುಗಳು: 53. ಗುಣಮುಖರಾದವರು : 1514
- ಆಂಧ್ರ ಪ್ರದೇಶ: ಮುಖ್ಯಮಂತ್ರಿಗಳು ವೈ.ಎಸ್.ಆರ್. ವಾಹನಮಿತ್ರ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಒಟ್ಟು 2,62,493 ಅಟೋ ಮತ್ತು ಟ್ಯಾಕ್ಸಿ ಮಾಲಕ ಫಲಾನುಭವಿಗಳಿಗೆ ತಲಾ 10,000 ರೂಪಾಯಿಗಳನ್ನು ಅವರು ವಿತರಿಸಿದರು. ಪೂರ್ವ ಗೋದಾವರಿ ಜಿಲ್ಲೆಯ ಪೆದ್ದ ಪುಡಿ ಮಂಡಲ್ ನ ಗೊಲ್ಲಲ ಮಾಮಿದಡ ಗ್ರಾಮದಲ್ಲಿ 116 ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, . ಇವು ಕಾಕಿನಾಡದಲ್ಲಿಯ ಒಬ್ಬ ವ್ಯಕ್ತಿಯಿಂದ ಹರಡಿರುವಂತಹವು ಎಂದು ಹೇಳಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 9986 ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕ 98 ಹೊಸ ಪ್ರಕರಣಗಳು ವರದಿಯಾಗಿವೆ ಮತ್ತು 29 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ, ಹಾಗು ಮೂರು ಮಂದಿ ಸಾವಿಗೀಡಾಗಿದ್ದಾರೆ. ಒಟ್ಟು ಪ್ರಕರಣಗಳು :3377, ಆಕ್ಟಿವ್ : 1033. ಗುಣಮುಖರಾದವರು ;2273, ಸಾವುಗಳು : 71.
- ತೆಲಂಗಾಣ: ತೆಲಂಗಾಣ ಜ್ಯೂನಿಯರ್ ವೈದ್ಯರ ಸಂಘಟನೆಯು (ಟಿ-ಜುಡಾ) ಒಸ್ಮಾನಿಯಾ ವೈದ್ಯಕೀಯ ಕಾಲೇಜಿಗೆ ಸಂಲಗ್ನಗೊಂಡ ಆಸ್ಪತ್ರೆಗಳ 32 ವೈದ್ಯರು ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ ಎಂದು ಹೇಳಿದೆ. ನೇಕಾರರು ಮತ್ತು ಕರಕುಶಲ ಕರ್ಮಿಗಳು ತಮ್ಮ ಆವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಹೆಣಗಾಡುತ್ತಿದ್ದು, ಸರಕಾರವು ಅವರ ರಕ್ಷಣೆಗೆ ಬರಬೇಕು ಮತ್ತು ’ಕೊರೊನಾ ಪರಿಹಾರ ನಿಧಿ’ ಸ್ಥಾಪಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಜೂನ್ 3 ರವರೆಗೆ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 3020. ಇಂದಿನವರೆಗೆ 448 ಮಂದಿ ವಲಸೆಗಾರರು ,ಮತ್ತು ವಿದೇಶಗಳಿಂದ ಮರಳಿದವರು ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ.
- ಮಹಾರಾಷ್ಟ್ರ: 2,560 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆ 74,860 ಕ್ಕೇರಿದೆ. ಇದರಲ್ಲಿ 39,935 ಆಕ್ಟಿವ್ ಪ್ರಕರಣಗಳು. ಹಾಟ್ ಸ್ಪಾಟ್ ಮುಂಬಯಿಯಲ್ಲಿಯೇ 1,276 ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದ ನಗರದಲ್ಲಿ ಒಟ್ತು ಪ್ರಕರಣಗಳ ಸಂಖ್ಯೆ 43,492 ಕ್ಕೇರಿದೆ. ಬುಧವಾರದಂದು ವರದಿಯಾದ 122 ಸಾವುಗಳ ಪೈಕಿ 49 ಸಾವುಗಳು ಮುಂಬಯಿಯವು. ಮಹಾರಾಷ್ಟ್ರ ಮತ್ತು ಮುಂಬಯಿಯಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಬೃಹನ್ಮುಂಬಯಿ ಮಹಾನಗರ ಪಾಲಿಕೆ ಆಯುಕ್ತರಾದ ಇಕ್ಬಾಲ್ ಸಿಂಗ್ ಚಾಹಲ್ ಅವರು ನಿಸರ್ಗ ಚಂಡಮಾರುತದ ಕಾರಣಕ್ಕಾಗಿ ತಾತ್ಕಾಲಿಕವಾಗಿ ಸ್ಥಳಾಂತರಿಸಲ್ಪಟ್ಟಿರುವ ನಾಗರಿಕರನ್ನು ಮನೆಗಳಿಗೆ ಕಳುಹಿಸುವುದಕ್ಕೆ ಮೊದಲು ಕೋವಿಡ್ -19 ಕ್ಕಾಗಿ ತಪಾಸಣೆ ನಡೆಸಿ ಎರಡು ದಿನಗಳ ಕಾಲ ನಿಗಾದಲ್ಲಿಡುವಂತೆ ಸೂಚಿಸಿದ್ದಾರೆ. ಬಿ.ಎಂ.ಸಿ.ಯು ಕೆಳಮಟ್ಟದಲ್ಲಿ ವಾಸಿಸುವ ಜನರನ್ನು ಮತ್ತು ಕರಾವಳಿ ತೀರದಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಿ ಹತ್ತಿರದ ಶಾಲೆಗಳಲ್ಲಿ ಇರಿಸಿದೆ.
- ಗುಜರಾತ್: 485 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ರಾಜ್ಯದ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 18,100 ಕ್ಕೇರಿದೆ, ಇದರಲ್ಲಿ ಆಕ್ಟಿವ್ ಪ್ರಕರಣಗಳ ಸಂಖ್ಯೆ 4766. ಹೊಸ ಪ್ರಕರಣಗಳಲ್ಲಿ 290 ಪ್ರಕರಣಗಳು ಅಹ್ಮದಾಬಾದ್ ಪ್ರದೇಶವೊಂದರಿಂದಲೇ ವರದಿಯಾಗಿವೆ. ಬುಧವಾರದಂದು ಮತ್ತೆ 30 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಮೃತರ ಒಟ್ಟು ಸಂಖ್ಯೆ 1,122 ಕ್ಕೇರಿದೆ.
- ಮಧ್ಯಪ್ರದೇಶ: ಕೋವಿಡ್ -19 ಸೋಂಕಿನ 168 ಹೊಸ ಪ್ರಕರಣಗಳು ವರದಿಯಾಗಿವೆ, ರಾಜ್ಯದಲ್ಲಿ ಕೊರೊನಾ ಸೋಂಕಿನ ಒಟ್ಟು ಪ್ರಕರಣಗಳ ಸಂಖ್ಯೆ 8,588 ಕ್ಕೇರಿದೆ. ಇದುವರೆಗೆ 371 ಮಂದಿ ಮೃತಪಟ್ಟಿದ್ದಾರೆ, ಕಳೆದ 24 ಗಂಟೆಗಳಲ್ಲಿ 224 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ನರೋತ್ತಮ ಮಿಶ್ರಾ ಅವರು ಪರಿಸ್ಥಿತಿಯ ಪರಾಮರ್ಶೆ ನಡೆಸಿದರಲ್ಲದೆ , ಇಂದೋರ್, ಉಜ್ಜೈನಿ, ಮತ್ತು ಭೋಪಾಲ್ ಗಳಲ್ಲಿ ಕೋವಿಡ್ -19 ಪ್ರಕರಣಗಳನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿದರು. . ಈ ಮೂರು ನಗರಗಳಲ್ಲಿ ಗರಿಷ್ಟ ಸಂಖ್ಯೆಯಲ್ಲಿ ಕೊರೊನಾವೈರಸ್ ಪ್ರಕರಣಗಳು ಕಂಡುಬಂದಿವೆ.
- ರಾಜಸ್ಥಾನ: ಇಂದು 68 ಹೊಸ ಕೋವಿಡ್ -19 ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದರಿಂದ ರಾಜ್ಯದ ಕೋವಿಡ್ -19 ಪಾಸಿಟಿವ್ ಪ್ರಕರಣಗಳ ಸಂಖ್ಯೆ 9,720 ಕ್ಕೇರಿದೆ , ಇವರಲ್ಲಿ ಇದುವರೆಗೆ 6,819 ಮಂದಿ ಗುಣಮುಖರಾಗಿದ್ದಾರೆ. ಹೊಸ ಪ್ರಕರಣಗಳಲ್ಲಿ ಹೆಚ್ಚಿನವು ಭಾರತ್ಪುರ ಜಿಲ್ಲೆಯಿಂದ ವರದಿಯಾಗಿವೆ. ಅದರ ಬಳಿಕ ಜೈಪುರ, ಜೋಧಪುರ ಮತ್ತು ಚುರು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ.
- ಛತ್ತೀಸ್ ಗಢ: ಬುಧವಾರ ರಾತ್ರಿಯವರೆಗೆ 86 ಹೊಸ ಕೋವಿಡ್ -19 ಸೋಂಕಿನ ಪ್ರಕರಣಗಳು ವರದಿಯಾಗಿವೆ. ರಾಜ್ಯದ ಒಟ್ಟು ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 668 ಕ್ಕೇರಿದೆ. ರಾಜ್ಯದಲ್ಲೀಗ 489 ಆಕ್ಟಿವ್ ಪ್ರಕರಣಗಳಿವೆ. ಬುಧವಾರದಂದು ರಾತ್ರಿ ಮುಂಗೇಲಿ, ಬಿಮೆತಾರ, ಬಲೋಡ್ ಮತ್ತು ಬಿಲಾಸ್ಪುರಗಳ ವಿವಿಧ ಆಸ್ಪತ್ರೆಗಳಿಂದ 19 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 40 ಮಂದಿ ರೋಗಿಗಳು ಬುಧವಾರದಂದು ಬೆಳಿಗ್ಗೆ ಬಿಡುಗಡೆಯಾಗಿದ್ದಾರೆ.
- ಗೋವಾ: ಇಂದು ರಾಜ್ಯದಲ್ಲಿ ಒಂದೇ ಬಾರಿಗೆ 47 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಇದರಿಂದ ರಾಜ್ಯದಲ್ಲಿ ಒಟ್ಟು ಕೋವಿಡ್ -19 ಪಾಸಿಟಿವ್ ಪ್ರಕರಣಗಳ ಸಂಖ್ಯೆ 126 ಕ್ಕೇರಿದೆ. ಇದರಲ್ಲಿ 69 ಆಕ್ಟಿವ್ ಪ್ರಕರಣಗಳಾಗಿವೆ. ಈ ಹೊಸ ರೋಗಿಗಳಲ್ಲಿ ಹೆಚ್ಚಿನವರು (ಅವರಲ್ಲಿ 42) ವಾಸ್ಕೋದ ಮಂಗೋರ್ ಗಿರಿ ಪ್ರದೇಶದವರು. 5 ಮಂದಿ ರೋಗಿಗಳು ಕೊರೊನಾ ಪೀಡಿತ ಪ್ರದೇಶಗಳಲ್ಲಿ ಸಂಚಾರ ಮಾಡಿದ ಇತಿಹಾಸ ಹೊಂದಿದ್ದಾರೆ.
- ಅರುಣಾಚಲ ಪ್ರದೇಶ: ವಿವಿಧೆಡೆಗಳಲ್ಲಿ ಸಿಲುಕಿ ಹಾಕಿಕೊಂಡಿದ್ದ ಅರುಣಾಚಲ ಪ್ರದೇಶದ 9500 ಜನರು ರಾಜ್ಯಕ್ಕೆ ಮರಳಿದ್ದಾರೆ. ಮತ್ತು ವಿವಿಧ ರಾಜ್ಯಗಳಿಗೆ ಸೇರಿದ ಸುಮಾರು 2000 ಜನರು ಅರುಣಾಚಲ ಪ್ರದೇಶದಿಂದ ಅವರ ರಾಜ್ಯಗಳಿಗೆ ಪ್ರಯಾಣ ಬೆಳೆಸಿದ್ದಾರೆ.
- ಅಸ್ಸಾಂ: ಎರಡು ಬಾರಿ ಕೋವಿಡ್ -19 ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಬಳಿಕ 29 ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಒಟ್ಟು ಬಿಡುಗಡೆ ಮಾಡಲಾದ ರೋಗಿಗಳ ಸಂಖ್ಯೆ 442 ಮತ್ತು ಆಕ್ಟಿವ್ ರೋಗಿಗಳ ಸಂಖ್ಯೆ 1428
- ಮಣಿಪುರ: ಮಣಿಪುರದಲ್ಲಿ ಮತ್ತೆ 13 ಮಂದಿ ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 121 ಕ್ಕೇರಿದೆ. ನಿನ್ನೆ ಕೋವಿಡ್ -19 ಪತ್ತೆಯಾದ ರೋಗಿಗಳಲ್ಲಿ ಯಾವುದೇ ಪ್ರಯಾಣದ ಇತಿಹಾಸ ಇಲ್ಲದ ದಾದಿಯೊಬ್ಬರು ಸೇರಿದ್ದಾರೆ ಮತ್ತು ಇತರರು ರಾಜ್ಯಕ್ಕೆ ಮರಳಿ ಬಂದವರಾಗಿದ್ದಾರೆ.
- ಮಿಜೋರಾಂ: ಮಿಜೋರಾಂನಲ್ಲಿ ಶಾಲೆಗಳ ಆರಂಭಕ್ಕೆ 2020ರ ಜುಲೈ 15 ರ ತಾತ್ಕಾಲಿಕ ದಿನಾಂಕವನ್ನು ರಾಜ್ಯ ಶಿಕ್ಶಣ ಸಚಿವರು ನಿಗದಿ ಮಾಡಿದ್ದಾರೆ.
- ನಾಗಾಲ್ಯಾಂಡ್: ಕೊಹಿಮಾದ ನಾಗಾ ಆಸ್ಪತ್ರೆ ಪ್ರಾಧಿಕಾರವು (ಎನ್.ಎಚ್.ಎ.ಕೆ.) ಕೋವಿಡ್ -19 ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ ನಾಲ್ವರು ಕೋವಿಡ್ -19 ರೋಗಿಗಳಾಗಿ ಸೇರ್ಪಡೆಯಾಗಿದ್ದಾರೆ. ನಾಗಾಲ್ಯಾಂಡಿನಲ್ಲಿ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಶೈಕ್ಷಣಿಕ ಉಪಕ್ರಮದ ಅಂಗವಾಗಿ ಶಾಲಾ ಶಿಕ್ಷಣ ಇಲಾಖೆಯು ಹೈಸ್ಕೂಲು ಮತ್ತು ಹೈಯರ್ ಸೆಕೆಂಡರಿ ವಿಭಾಗಗಳಿಗೆ ನಡೆಸಿದ ಆನ್ ಲೈನ್ ಮೌಲ್ಯಮಾಪನ ಪರೀಕ್ಷೆಯಲ್ಲಿ 20,000 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
- ತ್ರಿಪುರಾ: ಟಿ.ಐ.ಡಿ.ಸಿ. ಮತ್ತು ಪಶ್ಚಿಮ ತ್ರಿಪುರಾ ಜಿಲ್ಲಾ ಆಡಳಿತಗಳು ತ್ರಿಪುರಾದ ಹಪಾನಿಯಾ ವಸ್ತುಪ್ರದರ್ಶನ ಸಭಾಂಗಣದಲ್ಲಿ ಆಂದೋಲನ ಮಾದರಿಯಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ಸ್ಥಾಪನೆ ಮಾಡಿವೆ. ಇಲ್ಲಿ 400 ಹಾಸಿಗೆಗಳ ಸಾಮರ್ಥ್ಯವಿದ್ದು, 5 ಮಂದಿಯನ್ನು ಈಗಾಗಲೇ ವರ್ಗಾಯಿಸಲಾಗಿದೆ.
ಪಿ ಐ ಬಿ ವಾಸ್ತವ ಪರಿಶೀಲನೆ



***
(Release ID: 1629543)
Visitor Counter : 373
Read this release in:
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam