ಪ್ರಧಾನ ಮಂತ್ರಿಯವರ ಕಛೇರಿ

ಸ್ಪಿಕ್ ಮೆಕೆ ಅಂತಾರಾಷ್ಟ್ರೀಯ ಸಮಾವೇಶವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ 130 ಕೋಟಿ ಜನರು ಒಗ್ಗೂಡಿದರೆ ಅದೇ ಸಂಗೀತವಾಗುತ್ತದೆ: ಪ್ರಧಾನಮಂತ್ರಿ ಸಂಗೀತ ದೇಶದ ಸಾಮೂಹಿಕ ಸಾಮರ್ಥ್ಯ ಅಥವಾ ಶಕ್ತಿಯ ಮೂಲ ಎಂದ ಪ್ರಧಾನಮಂತ್ರಿ

Posted On: 01 JUN 2020 7:46PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸ್ಪಿಕ್ ಮೆಕೆ ಅಂತಾರಾಷ್ಟ್ರೀಯ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.

ಪ್ರಧಾನಮಂತ್ರಿ ಅವರು, ಇಂತಹ ಸಂಕಷ್ಟದ ಸಮಯದಲ್ಲೂ ಸಂಗೀತಗಾರರ ಸ್ಫೂರ್ತಿ ಎದೆಗುಂದದೆ ಮುಂದುವರಿದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಒತ್ತಡಕ್ಕೆ ಒಳಗಾಗಿರುವ ಯುವಕರನ್ನು ಅದರಿಂದ ಹೊರಬರುವಂತೆ ಮಾಡುವುದಕ್ಕೆ ಹೆಚ್ಚಿನ ಗಮನಹರಿಸುವುದು ಸಮಾವೇಶದ ಧ್ಯೇಯವಾಗಿದೆ ಎಂದರು.

ಯುದ್ಧ ಮತ್ತು ಬಿಕ್ಕಟ್ಟಿನ ಸಮಯಗಳಲ್ಲಿ ಸಂಗೀತ ಹೇಗೆ ಐತಿಹಾಸಿಕವಾಗಿ ಸ್ಫೂರ್ತಿದಾಯಕ ಪಾತ್ರ ಮತ್ತು ಸಂಘಟನಾತ್ಮಕ ಪಾತ್ರವನ್ನು ವಹಿಸುತ್ತದೆ ಎಂದು ಅವರು ನೆನಪಿಸಿಕೊಂಡರು.

ಪ್ರಧಾನಮಂತ್ರಿ ಅವರು, ಕವಿಗಳು, ಸಂಗೀತಗಾರರು ಮತ್ತು ಕಲಾವಿದರು ಸದಾ ಹಾಡುಗಳನ್ನು ಬರೆಯುತ್ತಾರೆ ಮತ್ತು ಇಂತಹ ಸಂಕಷ್ಟದ ಸಮಯದಲ್ಲಿ ಜನರನ್ನು ತಲುಪಲು ಆ ಹಾಡುಗಳಿಗೆ ಸಂಗೀತ ತುಂಬುತ್ತಾರೆ ಎಂದು ಹೇಳಿದರು.

ಅಗೋಚರ ಶತೃವಿನ ವಿರುದ್ಧ ಇಡೀ ವಿಶ್ವ ಹೋರಾಡುತ್ತಿರುವ ಇಂತಹ ಸಂಕಷ್ಟದ ಸಮಯದಲ್ಲಿ ಸಂಗೀತಗಾರರು, ಗೀತರಚನಾಕಾರರು ಮತ್ತು ಕಲಾವಿದರು ಹಾಡುಗಳನ್ನು ಬರೆಯುತ್ತಿದ್ದಾರೆ ಮತ್ತು ಆ ಹಾಡುಗಳನ್ನು ಹಾಡಿ ಜನರ ವಿಶ್ವಾಸವನ್ನು ಹೆಚ್ಚಿಸುತ್ತಿದ್ದಾರೆ ಎಂದರು.

ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ಹೇಗೆ ದೇಶದ 130 ಕೋಟಿ ಜನರು ಒಗ್ಗೂಡಿ ಚಪ್ಪಾಳೆ ತಟ್ಟಿ, ಗಂಟೆಗಳನ್ನು ಬಾರಿಸಿ, ಶಂಖ ಮೊಳಗಿಸಿ ಇಡೀ ವಿಶ್ವಕ್ಕೆ ಚೈತನ್ಯ ತುಂಬಿದರು ಎಂದು ಪ್ರಧಾನಮಂತ್ರಿ ಅವರು ಸ್ಮರಿಸಿದರು.

ದೇಶದ 130 ಕೋಟಿ ಜನರು ಒಂದೇ ಭಾವನೆ ಮತ್ತು ಅನುಭೂತಿಯೊಂದಿಗೆ ಒಗ್ಗೂಡಿದರೆ ಅದೇ ಸಂಗೀತವಾಗುತ್ತದೆ ಎಂದು ಅವರು ಹೇಳಿದರು.

ಸಂಗೀತಕ್ಕೆ ಶಿಸ್ತು ಮತ್ತು ಸಂಯಮ ಅತ್ಯಂತ ಅಗತ್ಯ. ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕೆ ಪ್ರತಿಯೊಬ್ಬ ನಾಗರಿಕರಲ್ಲೂ ಅದೇ ರೀತಿಯ ಸಾಮರಸ್ಯ, ಸಂಯಮ ಮತ್ತು ಶಿಸ್ತು ಅಗತ್ಯವಿದೆ ಎಂದು ಅವರು ಹೇಳಿದರು.

ಈ ವರ್ಷದ ಸ್ಪಿಕ್ ಮೆಕೆ ಸಮಾವೇಶದಲ್ಲಿ ಪ್ರಕೃತಿ ನಡಿಗೆ, ಪಾರಂಪರಿಕ ನಡಿಗೆ, ಸಾಹಿತ್ಯ, ಸಮಗ್ರ ಆಹಾರ ಮತ್ತು ಯೋಗ ಹಾಗೂ ನಾದಯೋಗ ಹೊಸ ಅಂಶಗಳನ್ನು ಸೇರಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಾದ ಯೋಗ ಕುರಿತು ವಿಸ್ತೃತವಾಗಿ ವಿವರಿಸಿದ ಪ್ರಧಾನಮಂತ್ರಿ ಅವರು, ಭಾರತದಲ್ಲಿ ನಾದ ಎನ್ನುವುದು ಸಂಗೀತಕ್ಕೆ ಮೂಲವಾಗಿದೆ ಮತ್ತು ಅದು ಸ್ವಯಂ ಶಕ್ತಿಯ ಮೂಲ ಸಲೆಯಾಗಿದೆ.

ಯೋಗ ಮತ್ತು ಸಂಗೀತದ ಮೂಲಕ ಅಂತಃಶಕ್ತಿಯನ್ನು ನಿಯಂತ್ರಿಸಿದರೆ, ನಾದ ಆರೋಹಣ ತಲುಪುತ್ತದೆ ಅಥವಾ ಬ್ರಹ್ಮನಾದವನ್ನು ತಲುಪುತ್ತದೆ

ಇದೇ ಕಾರಣದಿಂದಾಗಿ ಸಂಗೀತ ಮತ್ತು ಯೋಗ ಎರಡಕ್ಕೂ ಧ್ಯಾನ ಮತ್ತು ಪ್ರೇರಣೆ ನೀಡುವ ಶಕ್ತಿ ಹೊಂದಿವೆ ಮತ್ತು ಎರಡು ಶಕ್ತಿಯ ಮೂಲಗಳು ಎಂದು ಪ್ರಧಾನಮಂತ್ರಿ ಹೇಳಿದರು.

ಪ್ರಧಾನಮಂತ್ರಿ ಅವರು, ಸಂಗೀತ ಕೇವಲ ಸಂತೋಷಕ್ಕೆ ಮೂಲವಲ್ಲ. ಅದು ಸೇವೆಯ ವಿಧಾನ ಮತ್ತು ತಪಸ್ಸಿನ ಒಂದು ಪದ್ಧತಿ ಎಂದರು.

ನಮ್ಮ ದೇಶದಲ್ಲಿ ಮನುಕುಲಕ್ಕೆ ಸೇವೆ ಸಲ್ಲಿಸಲು ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟ ಹಲವು ಶ್ರೇಷ್ಠ ಸಂಗೀತಗಾರರು ಇದ್ದಾರೆ ಎಂದು ಅವರು ಹೇಳಿದರು.

ಇಂದಿನ ದಿನಮಾನದಲ್ಲಿ ಪುರಾತನ ಕಲೆ ಮತ್ತು ಸಂಗೀತವನ್ನು ತಂತ್ರಜ್ಞಾನದೊಂದಿಗೆ ಸಂಯೋಜಿಸುವುದಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂದು ಪ್ರಧಾನಮಂತ್ರಿ ಹೇಳಿದರು.

ರಾಜ್ಯಗಳು ಮತ್ತು ಭಾಷೆಗಳ ಗಡಿಗಳನ್ನು ಮೀರಿ ಸಂಗೀತ ‘ಏಕ ಭಾರತ್ ಶ್ರೇಷ್ಠ ಭಾರತ್’ ಎಂಬ ಚಿಂತನೆಯನ್ನು ಹಿಂದೆಂದಿಗಿಂತಲೂ ಹೆಚ್ಚಿನ ಬಲವರ್ಧನೆಗೊಳಿಸಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಜನರು ತಮ್ಮ ಸೃಜನಶೀಲತೆಯಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ನಾನಾ ಸಂದೇಶಗಳನ್ನು ನೀಡುತ್ತಿದ್ದಾರೆ. ಆ ಮೂಲಕ ಕೊರೊನಾ ವಿರುದ್ಧ ದೇಶ ನಡೆಸುತ್ತಿರುವ ಅಭಿಯಾನಕ್ಕೆ ಶಕ್ತಿ ತುಂಬುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಮಾವೇಶ ಕೊರೊನಾ ಸೋಂಕಿನ ವಿರುದ್ಧ ನಾವು ನಡೆಸುತ್ತಿರುವ ಹೋರಾಟಕ್ಕೆ ಹೊಸ ಆಯಾಮ ನೀಡಲಿದೆ ಎಂದು ಪ್ರಧಾನಮಂತ್ರಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

***


(Release ID: 1628891) Visitor Counter : 278