ಗೃಹ ವ್ಯವಹಾರಗಳ ಸಚಿವಾಲಯ
ಕೋವಿಡ್-19 ವಿರುದ್ಧ ಹೋರಾಟಕ್ಕೆ 2020ರ ಜೂನ್ 1 ರಿಂದ ಜಾರಿಗೆ ಬರಲಿರುವ ಹೊಸ ಮಾರ್ಗಸೂಚಿಗಳು
Posted On:
30 MAY 2020 7:47PM by PIB Bengaluru
ಕೋವಿಡ್-19 ವಿರುದ್ಧ ಹೋರಾಟಕ್ಕೆ 2020ರ ಜೂನ್ 1 ರಿಂದ ಜಾರಿಗೆ ಬರಲಿರುವ ಹೊಸ ಮಾರ್ಗಸೂಚಿಗಳು
ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಆಧರಿಸಿ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಗುರುತಿಸಿರುವ ನಿರ್ಬಂಧಿತ ವಲಯಗಳಲ್ಲಿ ಲಾಕ್ ಡೌನ್ ನಿಯಮ ಕಟ್ಟುನಿಟ್ಟು ಜಾರಿ
ನಿರ್ಬಂಧಿತ ಪ್ರದೇಶಗಳನ್ನು ಹೊರತುಪಡಿಸಿ, ಉಳಿದೆಡೆ ಹಂತಹಂತವಾಗಿ ಎಲ್ಲ ಚಟುವಟಿಕೆಗಳಿಗೆ ಅವಕಾಶ
ಒಂದನೇ ಅನ್ ಲಾಕ್ ನಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಒತ್ತು, ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆಯ ವರೆಗೆ ಅನಗತ್ಯ ಚಟುವಟಿಕೆಗಳಿಗೆ, ಸಾರ್ವಜನಿಕ ಸಂಚಾರಕ್ಕೆ ರಾತ್ರಿ ಕರ್ಫ್ಯೂ ಜಾರಿ ಮುಂದುವರಿಕೆ
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ) ಇಂದು ಕೋವಿಡ್-19 ವಿರುದ್ಧ ಹೋರಾಟದ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಮತ್ತು ನಿರ್ಬಂಧಿತ ವಲಯಗಳನ್ನು ಹೊರತುಪಡಿಸಿ, ಉಳಿದ ಪ್ರದೇಶಗಳಲ್ಲಿ ಹಂತ ಹಂತವಾಗಿ ಮುಕ್ತಗೊಳಿಸಲಾಗುವುದು. ಹೊಸ ಮಾರ್ಗಸೂಚಿ 2020ರ ಜೂನ್ 1 ರಿಂದ ಜಾರಿಗೆ ಬರಲಿದ್ದು, ಅವು 2020ರ ಜೂನ್ 30ರವರೆಗೆ ಜಾರಿಯಲ್ಲಿರುತ್ತವೆ. ಪ್ರಸಕ್ತ ಹಂತದ ಅನ್ ಲಾಕ್ ಒಂದರಲ್ಲಿ, ಆರ್ಥಿಕ ಚಟುವಟಿಕೆಗಳಿಗೆ ಒತ್ತು ನೀಡಲಾಗುವುದು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ವ್ಯಾಪಕ ಸಮಾಲೋಚನೆ ನಂತರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
2020ರ ಮಾರ್ಚ್ 24ರಿಂದ ದೇಶಾದ್ಯಂತ ಕಟ್ಟುನಿಟ್ಟಿನ ಲಾಕ್ ಡೌನ್ ಅನ್ನು ಜಾರಿಗೊಳಿಸಲಾಯಿತು. ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳನ್ನು ನಿಷೇಧಿಸಲಾಗಿತ್ತು. ಕ್ರಮೇಣ ಕೋವಿಡ್-19 ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಲಾಕ್ ಡೌನ್ ನಿಯಮಾವಳಿಗಳನ್ನು ಹಂತ ಹಂತವಾಗಿ ಸಡಿಲಗೊಳಿಸಲಾಯಿತು.
ಹೊಸ ಮಾರ್ಗಸೂಚಿಯ ಪ್ರಮುಖಾಂಶಗಳು
ನಿರ್ಬಂಧಿತ ವಲಯಗಳಲ್ಲಿ ಲಾಕ್ ಡೌನ್ ನಿಯಮಾವಳಿ ಜಾರಿ ಕಟ್ಟುನಿಟ್ಟಾಗಿ ಮುಂದುವರಿಯಲಿದೆ. ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿ ಅನ್ವಯ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ನಿರ್ಬಂಧಿತ ವಲಯಗಳನ್ನು ಗುರುತಿಸಲಿವೆ. ನಿರ್ಬಂಧಿತ ವಲಯಗಳಲ್ಲಿ ಕಠಿಣ ಮಾನದಂಡ ಕ್ರಮಗಳನ್ನು ಕಾಯ್ದುಕೊಳ್ಳಲಾಗುವುದು ಮತ್ತು ಕೇವಲ ಅವಶ್ಯಕ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗುವುದು.
ನಿರ್ಬಂಧಿತ ವಲಯಗಳನ್ನು ಹೊರತುಪಡಿಸಿ, ಉಳಿದೆಡೆ ಹಂತ ಹಂತವಾಗಿ ಈವರೆಗೆ ನಿಷೇದಿಸಿದ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು. ಆದರೆ ಆ ವೇಳೆ ಆರೋಗ್ಯ ಸಚಿವಾಲಯ ನಿಗದಿಪಡಿಸಿರುವ ನಿರ್ದಿಷ್ಟ ಕಾರ್ಯಾನುಷ್ಠಾನ ನಿಯಮಾವಳಿ (ಎಸ್ಒಪಿ) ಪಾಲನೆ ಕಡ್ಡಾಯವಾಗಿದೆ.
ಒಂದನೇ ಹಂತ (2020ರ ಜೂನ್ 8 ರಿಂದ ತೆರೆಯಲು ಅನುಮತಿ)
- ಧಾರ್ಮಿಕ ಸ್ಥಳಗಳು ಮತ್ತು ಸಾರ್ವಜನಿಕ ಪೂಜಾ ಸ್ಥಳಗಳು.
- ಹೊಟೇಲ್, ರೆಸ್ಟೋರೆಂಟ್ ಮತ್ತು ಇತರ ಆತಿಥ್ಯ ಸೇವೆಗಳು ಮತ್ತು
- ಶಾಪಿಂಗ್ ಮಾಲ್ ಗಳು
ಈ ಮೇಲಿನ ಚಟುವಟಿಕೆಗಳಿಗೆ ಆರೋಗ್ಯ ಸಚಿವಾಲಯ, ಕೇಂದ್ರ ಸಚಿವಾಲಯಗಳು/ಇಲಾಖೆಗಳು ಹಾಗೂ ಭಾಗೀದಾರರ ಜೊತೆ ಸಮಾಲೋಚನೆ ನಡೆಸಿ, ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳುವುದನ್ನು ಖಾತ್ರಿಪಡಿಸಿ, ಕೋವಿಡ್-19 ಹರಡುವುದು ನಿಯಂತ್ರಣಕ್ಕೆ ಎಸ್ಒಪಿಯನ್ನು ಬಿಡುಗಡೆ ಮಾಡಲಿದೆ.
ಎರಡನೇ ಹಂತ
ಶಾಲೆಗಳು, ಕಾಲೇಜುಗಳು, ಶೈಕ್ಷಣಿಕ ಸಂಸ್ಥೆಗಳು/ತರಬೇತಿ/ಬೋಧನಾ ಸಂಸ್ಥೆಗಳು ಇತ್ಯಾದಿಗಳ ಆರಂಭಕ್ಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆ ಸಮಾಲೋಚಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳು ಸಂಸ್ಥೆಗಳ ಮಟ್ಟದಲ್ಲಿ ಪೋಷಕರು ಹಾಗೂ ಇತರ ಸಂಬಂಧಿಸಿದವರೊಂದಿಗೆ ಸಮಾಲೋಚನೆಗಳನ್ನು ನಡೆಸಲು ಸೂಚಿಸಲಾಗಿದೆ. ಅವರುಗಳ ಪ್ರತಿಕ್ರಿಯೆ ಆಧರಿಸಿ 2020ರ ಜುಲೈ ತಿಂಗಳಲ್ಲಿ ಈ ಸಂಸ್ಥೆಗಳ ಪುನಾರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಎಂಒಎಚ್ಎಫ್ ಡಬ್ಲ್ಯೂ ಈ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಎಸ್ಒಪಿಯನ್ನು ಸಿದ್ಧಪಡಿಸಲಿದೆ.
ದೇಶಾದ್ಯಂತ ನಿಷೇಧ ಮುಂದುವರಿಯಲಿರುವ ಕೆಲವು ಸೀಮಿತ ಚಟುವಟಿಕೆಗಳು ಹೀಗಿವೆ
- ಪ್ರಯಾಣಿಕರ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ
- ಮೆಟ್ರೋ ರೈಲುಗಳ ಕಾರ್ಯಾಚರಣೆ
- ಸಿನಿಮಾ ಮಂದಿರ, ಜಿಮ್ನಾಷಿಯಮ್ ಗಳು, ಈಜುಕೊಳಗಳು, ಮನರಂಜನಾ ಪಾರ್ಕ್ ಗಳು, ಥಿಯೇಟರ್, ಬಾರ್ ಮತ್ತು ಆಡಿಟೋರಿಯಂಗಳು ಸಮಾವೇಶ ಸಭಾಂಗಣಗಳು ಮತ್ತು ಇತರ ಸ್ಥಳಗಳು ಹಾಗೂ
- ಸಾಮಾಜಿಕ/ರಾಜಕೀಯ/ಕ್ರೀಡಾ/ಮನರಂಜನಾ/ಶೈಕ್ಷಣಿಕ/ಸಾಂಸ್ಕೃತಿಕ/ಧಾರ್ಮಿಕ ಕಾರ್ಯಕ್ರಮಗಳು ಮತ್ತು ಇತರೆ ದೊಡ್ಡ ಮಟ್ಟದಲ್ಲಿ ಜನ ಸೇರುವ ಸಭೆ-ಸಮಾರಂಭಗಳು.
- ಪರಿಸ್ಥಿತಿಯನ್ನು ಅವಲೋಕಿಸಿ ಮೂರನೇ ಹಂತದಲ್ಲಿ ಈ ಮೇಲಿನ ಚಟುವಟಿಕೆಗಳ ಆರಂಭಕ್ಕೆ ದಿನಾಂಕವನ್ನು ನಿಗದಿಡಪಿಸಲಾಗುವುದು.
ವ್ಯಕ್ತಿಗಳು ಮತ್ತು ಸರಕು ಸಾಗಾಣೆಗೆ ಯಾವುದೇ ನಿರ್ಬಂಧವಿಲ್ಲ
- ವ್ಯಕ್ತಿಗಳು ಮತ್ತು ಸರಕುಗಳ ಅಂತರ್ ರಾಜ್ಯ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ. ಅಂತಹ ಸಂಚಾರಕ್ಕೆ ಯಾವುದೇ ಅನುಮತಿ/ಅನುಮೋದನೆ/ಇ-ಪರ್ಮಿಟ್ ಅಗತ್ಯವಿಲ್ಲ.
- ಆದರೆ ಯಾವುದೇ ರಾಜ್ಯ/ಕೇಂದ್ರಾಡಳಿತ ಪ್ರದೇಶ ಸಾರ್ವಜನಿಕ ಆರೋಗ್ಯ ಕಾರಣಗಳು ಮತ್ತು ಪರಿಸ್ಥಿತಿಯನ್ನು ಅವಲೋಕಿಸಿ ವ್ಯಕ್ತಿಗಳ ಸಂಚಾರವನ್ನು ನಿರ್ಬಂಧಿಸಲು ಉದ್ದೇಶಿಸಿದರೆ ಅಂತಹ ಸಂಚಾರ ನಿಷೇಧದ ಬಗ್ಗೆ ಮತ್ತು ಪಾಲನೆ ಮಾಡಬೇಕಾದ ಸಂಬಂಧಿಸಿದ ನಿಯಮಾವಳಿ ಬಗ್ಗೆ ಮುಂಚಿತವಾಗಿಯೇ ವ್ಯಾಪಕ ಪ್ರಚಾರವನ್ನು ನೀಡಿರಬೇಕು.
ರಾತ್ರಿ ಕರ್ಫ್ಯೂ ಸಾರ್ವಜನಿಕರ ಸಂಚಾರಕ್ಕೆ ಸಂಬಂಧಿಸಿದಂತೆ ಎಲ್ಲ ಅನಗತ್ಯ ಚಟುವಟಿಕೆಗಳಿಗೆ ರಾತ್ರಿ ವೇಳೆ ಕರ್ಫ್ಯೂ ಯಥಾಸ್ಥಿತಿ ಮುಂದುವರಿಯಲಿದೆ. ಆದರೆ ಕರ್ಫ್ಯೂ ಪರಿಷ್ಕೃತ ಸಮಯ ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆ.
ಕೋವಿಡ್-19 ನಿರ್ವಹಣೆ ಸಂಬಂಧ ರಾಷ್ಟ್ರೀಯ ನಿರ್ದೇಶನಗಳ ಪಾಲನೆ ದೇಶಾದ್ಯಂತ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಖಾತ್ರಿಪಡಿಸಬೇಕು.
ನಿರ್ಬಂಧಿತ ವಲಯಗಳ ಹೊರಗಿನ ಚಟುವಟಿಕೆಗಳ ಕುರಿತು ರಾಜ್ಯಗಳು ನಿರ್ಧರಿಸಬಹುದು
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪರಿಸ್ಥಿತಿಯನ್ನು ಪರಾಮರ್ಶಿಸಿದ ಆಧಾರದ ಮೇಲೆ ನಿರ್ಬಂಧಿತ ವಲಯಗಳ ಹೊರಗೆ ಅಗತ್ಯಬಿದ್ದರೆ ಕೆಲವು ಚಟುವಟಿಕೆಗಳನ್ನು ನಿಷೇಧಿಸಬಹುದು ಅಥವಾ ನಿರ್ಬಂಧಗಳನ್ನು ಹೇರಬಹುದು.
ಸೂಕ್ಷ್ಮ ವ್ಯಕ್ತಿಗಳ ರಕ್ಷಣೆ
ಸೂಕ್ಷ್ಮ ವ್ಯಕ್ತಿಗಳು ಅಂದರೆ 65 ವರ್ಷ ಮೇಲ್ಪಟ್ಟ ವ್ಯಕ್ತಿಗಳು, ಅನಾರೋಗ್ಯ ಪೀಡಿತರು, ಗರ್ಭಿಣಿಯರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಇರಬೇಕೆಂದು ಸೂಚಿಸಲಾಗಿದೆ. ಆರೋಗ್ಯ ಉದ್ದೇಶಗಳು ಮತ್ತು ಇತರೆ ಅಗತ್ಯ ಭೇಟಿಗಳನ್ನು ಹೊರತುಪಡಿಸಿ ಅವರು ಮನೆಯಲ್ಲಿಯೇ ಇರುವುದು ಒಳ್ಳೆಯದು.
ಆರೋಗ್ಯ ಸೇತು ಬಳಕೆ
ಭಾರತ ಸರ್ಕಾರದ ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಕೋವಿಡ್-19 ಸೋಂಕಿತ ವ್ಯಕ್ತಿಗಳ ಗುರುತನ್ನು ತ್ವರಿತವಾಗಿ ಪತ್ತೆ ಹಚ್ಚಲು ಅಥವಾ ಸೋಂಕಿನ ಅಪಾಯವನ್ನು ತಿಳಿಸಲು ನೆರವು ನೀಡುವ ಅತ್ಯಂತ ಶಕ್ತಿಶಾಲಿ ಉಪಕರಣವಾಗಿದೆ. ಇದು ಸಾರ್ವಜನಿಕರು ಮತ್ತು ಸಮುದಾಯಕ್ಕೆ ರಕ್ಷಾ ಕವಚವಾಗಿ ಕಾರ್ಯ ನಿರ್ವಹಿಸುತ್ತಿದೆ. ಸುರಕ್ಷತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ನಾನಾ ಪ್ರಾಧಿಕಾರಗಳು ಈ ಮೊಬೈಲ್ ಅಪ್ಲಿಕೇಶನ್ ಬಳಕೆಯನ್ನು ಉತ್ತೇಜಿಸಲು ಸೂಚಿಸಿವೆ.
ಎಂಎಚ್ಎ ಮಾರ್ಗಸೂಚಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
***
(Release ID: 1628058)
Visitor Counter : 406
Read this release in:
Urdu
,
Hindi
,
Assamese
,
English
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam