ಗೃಹ ವ್ಯವಹಾರಗಳ ಸಚಿವಾಲಯ

2020ರ ಮೇ. 31ರವರೆಗೆ ಲಾಕ್ ಡೌನ್ ವಿಸ್ತರಣೆ

Posted On: 17 MAY 2020 8:13PM by PIB Bengaluru

2020 ಮೇ. 31ರವರೆಗೆ ಲಾಕ್ ಡೌನ್ ವಿಸ್ತರಣೆ

ನಾನಾ ವಲಯಗಳು ಮತ್ತು ವಲಯಗಳಲ್ಲಿ ಚಟುವಟಿಕೆಗಳಿಗೆ ಅವಕಾಶ ನೀಡುವ ಬಗ್ಗೆ ರಾಜ್ಯಗಳು ನಿರ್ಧರಿಸಬೇಕು: ದೇಶಾದ್ಯಂತ ಕೆಲವು ಚಟುವಟಿಕೆಗಳ ನಿರ್ಬಂಧ ಮುಂದುವರಿಕೆ

ಕೋವಿಡ್-19 ಕುರಿತಂತೆ ದೇಶಾದ್ಯಂತ ರಾಷ್ಟ್ರೀಯ ನಿರ್ದೇಶನಗಳ ಜಾರಿ ಮುಂದುವರಿಕೆ

ರಾತ್ರಿ ವೇಳೆ ಕರ್ಫ್ಯೂ ಯಥಾಸ್ಥಿತಿ ಮುಂದುವರಿಕೆ

 

2020 ಮಾರ್ಚ್ 24ರಿಂದ ಜಾರಿಯಲ್ಲಿರುವ ಲಾಕ್ ಡೌನ್ ಕ್ರಮಗಳಿಂದಾಗಿ ಕೋವಿಡ್-19 ಹರಡುವುದನ್ನು ಗಣನೀಯವಾಗಿ ನಿಯಂತ್ರಿಸಲು ಸಹಾಯಕವಾಗಿದೆ. ಆದ್ದರಿಂದ ಲಾಕ್ ಡೌನ್ ಅವಧಿಯನ್ನು ಮತ್ತೆ 2020 ಮೇ 31 ವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ. ಭಾರತ ಸರ್ಕಾರದ (ಜಿಒಐ), ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ) ಇಂದು ಸಂಬಂಧ ವಿಪತ್ತು ನಿರ್ವಹಣಾ (ಡಿಎಂ) ಕಾಯ್ದೆ 2005 ಅಡಿ ಆದೇಶವನ್ನು ಹೊರಡಿಸಿದೆ. ಹೊಸ ಮಾರ್ಗಸೂಚಿಯ ಪ್ರಮುಖಾಂಶಗಳು ಕೆಳಗಿನಂತಿವೆ:

ನಾನಾ ವಲಯಗಳ ಬಗ್ಗೆ ರಾಜ್ಯಗಳೇ ನಿರ್ಧಾರ

ಹೊಸ ಮಾರ್ಗಸೂಚಿ ಅನ್ವಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು(ಯುಟಿ) ಇದೀಗ ಆರೋಗ್ಯ ಸಚಿವಾಲಯ ಹಂಚಿಕೊಂಡಿರುವ ಮಾನದಂಡಗಳನ್ನು ಪರಿಗಣಿಸಿ ಕೆಂಪು, ಹಸಿರು ಮತ್ತು ಕಿತ್ತಳೆ ವಲಯಗಳನ್ನು ರೂಪಿಸುವ ಬಗ್ಗೆ ನಿರ್ಧರಿಸಬಹುದು. ವಲಯಗಳು ಜಿಲ್ಲೆಗಳಾಗಿರಬಹುದು ಅಥವಾ ಮಹಾನಗರ ಪಾಲಿಕೆಗಳಾಗಿರಬಹುದು, ಮುನಿಸಿಪಲ್ ಪ್ರದೇಶವಾಗಿರಬಹುದು ಅಥವಾ ಉಪ ವಿಭಾಗಗಳು ಅಥವಾ ಸಣ್ಣ ಆಡಳಿತಾತ್ಮಕ ಘಟಕಗಳು ಆಗಿರಬಹುದು ಅವುಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೇ ನಿರ್ಧರಿಸಬಹುದು.

ಕೆಂಪು ಮತ್ತು ಕಿತ್ತಳೆ ವಲಯಗಳ ಒಳಗೆ, ಆರೋಗ್ಯ ಸಚಿವಾಲಯದ ಮಾರ್ಗಸೂಚಿಯನ್ನು ಪರಿಗಣಿಸಿದ ನಂತರ ನಿರ್ಬಂಧಿತ ಮತ್ತು ಬಫರ್ ವಲಯಗಳನ್ನು ಸ್ಥಳೀಯ ಅಧಿಕಾರಿಗಳು ಗುರುತಿಸಬೇಕು.

ನಿರ್ಬಂಧಿತ ವಲಯಗಳೊಳಗೆ ಕೇವಲ ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶವಿದೆ. ಕಠಿಣ ಮಾನದಂಡ ನಿಯಂತ್ರಣಗಳನ್ನು ಕಾಯ್ದುಕೊಳ್ಳಬೇಕು, ವೈದ್ಯಕೀಯ ತುರ್ತುಗಳನ್ನು ಹೊರತುಪಡಿಸಿ ಮತ್ತು ಅತ್ಯವಶ್ಯಕ ಸೇವೆ ಮತ್ತು ಸರಕುಗಳನ್ನು ಹೊರತುಪಡಿಸಿ, ವ್ಯಕ್ತಿಗಳ ಚಲನವಲನಕ್ಕೆ ಅವಕಾಶವಿರುವುದಿಲ್ಲ. ಪ್ರತಿ ನಿರ್ಬಂಧಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಬಫರ್ ವಲಯಗಳಲ್ಲಿ ಎಲ್ಲಿ ಹೊಸ ಪ್ರಕರಣಗಳು ಕಂಡುಬರುವ ಸಾಧ್ಯತೆ ಇದೆಯೋ ಅಂತಹ ಬಫರ್ ವಲಯಗಳಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಾಗುತ್ತದೆ.

ದೇಶಾದ್ಯಂತ ನಿಷೇಧಿಸಲಾಗಿರುವ ಚಟುವಟಿಕೆಗಳು

ದೇಶಾದ್ಯಂತ ಸೀಮಿತ ಸಂಖ್ಯೆಯ ಚಟುವಟಿಕೆಗಳಿಗೆ ವಿಧಿಸಿರುವ ನಿಷೇಧ ಮುಂದುವರಿಯಲಿದೆ. ಅವುಗಳಲ್ಲಿ ಕೆಳಗಿನವು ಸೇರಿವೆ.

  • ಎಲ್ಲ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಹಾರಾಟ: ದೇಶೀಯ ವೈದ್ಯಕೀಯ ತುರ್ತು ಅಗತ್ಯತೆಗಳನ್ನು, ದೇಶೀಯ ಏರ್ ಆಂಬುಲೆನ್ಸ್ ಮತ್ತು ಭದ್ರತಾ ಉದ್ದೇಶಗಳಿಗೆ ಅಥವಾ ಎಂಎಚ್ಎ ಅನುಮತಿ ನೀಡಲಾಗಿರುವ ಉದ್ದೇಶಗಳಿಗೆ ಹೊರತುಪಡಿಸಿ.
  • ಮೆಟ್ರೋ ರೈಲು ಸೇವೆಗಳು.
  • ಶಾಲಾ, ಕಾಲೇಜು, ಶೈಕ್ಷಣಿಕ ಮತ್ತು ತರಬೇತಿ/ಕೋಚಿಂಗ್ ಕೇಂದ್ರಗಳನ್ನು ನಡೆಸುವುದು.
  • ಹೊಟೇಲ್, ರೆಸ್ಟೋರೆಂಟ್ ಮತ್ತು ಇತರ ಆತಿಥ್ಯ ಸೇವೆಗಳು. ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ಡಿಪೋಗಳಲ್ಲಿನ ಕ್ಯಾಂಟೀನ್ ಗಳನ್ನು ಹೊರತುಪಡಿಸಿ.
  • ಹೆಚ್ಚಿನ ಸಂಖ್ಯೆಯ ಜನ ಸೇರುವ ಸ್ಥಳಗಳಾದ ಸಿನಿಮಾ ಮಂದಿರ, ಶಾಪಿಂಗ್ ಮಾಲ್, ಜಿಮ್ ಮತ್ತು ಮನರಂಜನಾ ಪಾರ್ಕ್ ಗಳು ಇತ್ಯಾದಿ.
  • ಸಾಮಾಜಿಕ, ರಾಜಕೀಯ, ಧಾರ್ಮಿಕ ಮತ್ತು ಇತರೆ ಸಭೆ ಸಮಾರಂಭಗಳು ಹಾಗೂ ದೊಡ್ಡ ಪ್ರಮಾಣದಲ್ಲಿ ಜನ ಸೇರುವ ಕಾರ್ಯಕ್ರಮಗಳು ಮತ್ತು ಸಾರ್ವಜನಿಕರು ಪೂಜಿಸುವ ಸ್ಥಳಗಳು/ಧಾರ್ಮಿಕ ಸ್ಥಳಗಳು.

ಆದರೆ ಆನ್ ಲೈನ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಲಿಯಲು ಅವಕಾಶ ನೀಡಲಾಗಿದೆ ಮತ್ತು ಅದನ್ನು ಪ್ರೋತ್ಸಾಹಿಸಲಾಗುವುದು. ರೆಸ್ಟೋರೆಂಟ್ ಗಳಿಗೆ ಆಹಾರ ಉತ್ಪನ್ನಗಳನ್ನು ಮನೆಗಳಿಗೆ ಪೂರೈಸಲು ಅಡುಗೆ ಕೋಣೆಗಳನ್ನು ಬಳಸಲು ಅವಕಾಶವಿದೆ.

ಕ್ರೀಡಾ ಚಟುವಟಿಕೆಗಳ ಆರಂಭ

ಕ್ರೀಡಾಂಗಣಗಳು ಮತ್ತು ಸ್ಟೇಡಿಯಂಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಆದರೆ ಕ್ರೀಡಾ ಸಂಕೀರ್ಣಗಳಿಗೆ ವೀಕ್ಷಕರಿಗೆ ಪ್ರವೇಶವಿಲ್ಲ.

ನಿರ್ಬಂಧಗಳೊಂದಿಗೆ ಅನುಮತಿ ನೀಡಲಾಗಿರುವ ಚಟುವಟಿಕೆಗಳು

ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ ಈಗಾಗಲೇ ಹಲವು ಬಗೆಯ ಸಾರಿಗೆ ವಿಧಾನಗಳ ಬಳಕೆಗೆ ಅವಕಾಶ ನೀಡಲಾಗಿದೆ. ಎಂಎಚ್ಎ ತನ್ನ ಆದೇಶ ದಿನಾಂಕ 11.05.2020ರಂದು ರೈಲುಗಳ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಅಲ್ಲದೆ ಭಾರತದಿಂದ ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸಲು, ವಿದೇಶಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ಪ್ರಜೆಗಳನ್ನು ವಾಪಸ್ ಕರೆತರಲು, ಭಾರತೀಯ ನಾವಿಕರ ಆಗಮನ ಮತ್ತು ನಿರ್ಗಮನ ಹಾಗೂ ಅಂತರ ರಾಜ್ಯ ಮತ್ತು ಸಂಕಷ್ಟದಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಬಸ್ ಮತ್ತು ರೈಲುಗಳ ಮೂಲಕ ಅಂತರ ರಾಜ್ಯ ಸಂಚಾರಕ್ಕೆ ನೀಡಿರುವ ಅವಕಾಶವನ್ನು ಮುಂದುವರಿಸಲಾಗುವುದು.

ಅಂತರ ರಾಜ್ಯ ವಾಹನ ಮತ್ತು ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಸಂಬಂಧಿಸಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪರಸ್ಪರ ಒಪ್ಪಿರಬೇಕು. ವಾಹನಗಳು ಮತ್ತು ಬಸ್ ಗಳ ಅಂತರ ರಾಜ್ಯ ಸಂಚಾರದ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೇ ನಿರ್ಧಾರ ಕೈಗೊಳ್ಳಬೇಕು.

ಕೋವಿಡ್-19 ನಿಯಂತ್ರಣ ಕುರಿತಂತೆ ರಾಷ್ಟ್ರೀಯ ನಿರ್ದೇಶನಗಳು

ಮಾರ್ಗಸೂಚಿಗಳಲ್ಲಿ ಕೋವಿಡ್-19 ನಿಯಂತ್ರಣ ಕುರಿತ ರಾಷ್ಟ್ರೀಯ ನಿರ್ದೇಶನಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು, ಅವು ಎಲ್ಲ ಸಾರ್ವಜನಿಕ ಸ್ಥಳಗಳು ಮತ್ತು ದುಡಿಯುವ ಸ್ಥಳಗಳಿಗೆ ಅನ್ವಯವಾಗುತ್ತವೆ.

ಮಾರ್ಗಸೂಚಿಗಳನ್ವಯ ಮುಖಗವಸು ಧರಿಸುವುದು ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ಆಯಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಯಲ್ಲಿರುವ ನಿಯಮ ಅಥವಾ ಕಾನೂನು ಮತ್ತು ನಿಬಂಧನೆಗಳನ್ವಯ ದಂಡ ವಿಧಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಾರಿಗೆ ವ್ಯವಸ್ಥೆಯಲ್ಲಿ ಸಾಮಾಜಿಕ ಅಂತರ ನಿಯಮವನ್ನು ಪಾಲನೆ ಮಾಡಬೇಕು. ಮದುವೆ ಮತ್ತಿತರ ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚು ಅತಿಥಿಗಳಿಗೆ ಅವಕಾಶವಿಲ್ಲ. ಅಂತ್ಯಕ್ರಿಯೆ/ಅಂತ್ಯಸಂಸ್ಕಾರಗಳಿಗೆ ಗರಿಷ್ಠ ಸಂಖ್ಯೆ 20 ವ್ಯಕ್ತಿಗಳಿಗೆ ಮಿತಿಗೊಳಿಸಲಾಗಿದೆ. ಸಾರ್ಜನಿಕ ಸ್ಥಳಗಳಲ್ಲಿ ಮದ್ಯಪಾನ, ಪಾನ್, ಗುಟ್ಕಾ ಮತ್ತು ತಂಬಾಕು ಇತ್ಯಾದಿಗಳನ್ನು ಸೇವಿಸುವಂತಿಲ್ಲ.

ರಾಷ್ಟ್ರೀಯ ನಿರ್ದೇಶನಗಳನ್ವಯ ದುಡಿಯುವ ಸ್ಥಳಗಳಲ್ಲಿ ಹೆಚ್ಚುವರಿ ಅಗತ್ಯತೆಗಳನ್ನು ಪಾಲಿಸಬೇಕಾಗುತ್ತದೆ. ಮನೆಗಳಿಂದಲೇ ಕೆಲಸ ಮಾಡುವ ಪದ್ಧತಿ(ಡಬ್ಲ್ಯೂಎಫ್ಎಚ್)ಅನ್ನು ಸಾಧ್ಯವಾದಷ್ಟು ಪಾಲನೆ ಮಾಡಬೇಕು. ಉಳಿದ ಎಲ್ಲಾ ಕಚೇರಿಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಪಾಳಿಗಳಲ್ಲಿ ಕೆಲಸಗಳನ್ನು ನಿರ್ವಹಿಸುವುದನ್ನು ಅಳವಡಿಸಿಕೊಳ್ಳಬೇಕು. ಕಚೇರಿಗಳ ಪ್ರವೇಶ ಮತ್ತು ನಿರ್ಗಮನ ದ್ವಾರದಲ್ಲಿ ಸ್ಯಾನಿಟೈಸರ್, ಹ್ಯಾಂಡ್ ವಾಶ್ ಹಾಗೂ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆಗಳು ಇರಬೇಕು. ಎಲ್ಲಾ ದುಡಿಯುವ ಸ್ಥಳಗಳು ಮತ್ತು ಇತರೆ ಸೂಕ್ಷ್ಮ ಪ್ರದೇಶಗಳಲ್ಲಿ ನಿರಂತರವಾಗಿ ಸ್ಯಾನಿಟೈಸ್ ಮಾಡಬೇಕು. ದುಡಿಯುವ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ ಮತ್ತು ಖಾತ್ರಿಪಡಿಸಬೇಕು. ಉದ್ಯೋಗಿಗಳ ನಡುವೆ ಅಗತ್ಯ ಅಂತರ ಇರಬೇಕು. ಪಾಳಿಗಳ ನಡುವೆ ಅಂತರ ಇರಬೇಕು. ಸಿಬ್ಬಂದಿಯ ಭೋಜನಾ ವಿರಾಮವನ್ನು ವಿಭಜಿಸಬೇಕು. ಇತ್ಯಾದಿ ಕ್ರಮಗಳನ್ನು ಕೈಗೊಳ್ಳಬೇಕು.

ಮಳಿಗೆಗಳು ಮತ್ತು ಮಾರುಕಟ್ಟೆಗಳು ಕುರಿತಂತೆ ನಿಬಂಧನೆಗಳು

ಸ್ಥಳೀಯ ಪ್ರಾಧಿಕಾರಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಮಳಿಗೆಗಳು ಮತ್ತು ಮಾರುಕಟ್ಟೆಗಳು ನಿಗದಿತ ಸಮಯದಲ್ಲಿ ಕಾರ್ಯ ನಿರ್ವಹಿಸುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಎಲ್ಲ ಮಳಿಗೆಗಳಲ್ಲಿ, ಗ್ರಾಹಕರ ನಡುವೆ ಆರು ಅಡಿ ಅಂತರ(2 ಗಜ ಅಂತರ) ಇರಬೇಕು ಮತ್ತು ಏಕಕಾಲಕ್ಕೆ 5ಕ್ಕಿಂತ ಹೆಚ್ಚಿನ ವ್ಯಕ್ತಿಗಳಿಗೆ ಅವಕಾಶವಿರುವುದಿಲ್ಲ.

ರಾತ್ರಿ ಕರ್ಫ್ಯೂ

ಸಾರ್ವಜನಿಕರ ಸಂಚಾರಕ್ಕೆ ಸಂಬಂಧಿಸಿದಂತೆ ರಾತ್ರಿ ಕರ್ಫ್ಯೂ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಎಲ್ಲ ಅನಗತ್ಯ ಚಟುವಟಿಕೆಗಳಿಗೆ ರಾತ್ರಿ 7 ರಿಂದ ಬೆಳಗ್ಗೆ 7 ವರೆಗೆ ನಿರ್ಬಂಧವಿರಲಿದೆ.

ಸೂಕ್ಷ್ಮ ವ್ಯಕ್ತಿಗಳ ರಕ್ಷಣೆ

ಸೂಕ್ಷ್ಮ ವ್ಯಕ್ತಿಗಳು ಅಂದರೆ 65 ವರ್ಷ ಮೇಲ್ಪಟ್ಟ ವ್ಯಕ್ತಿಗಳು, ಅನಾರೋಗ್ಯ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲೇ ಇರಬೇಕು. ಅವರು ಆರೋಗ್ಯ ಉದ್ದೇಶ ಮತ್ತು ಅಗತ್ಯತೆಗಳನ್ನು ಹೊರತುಪಡಿಸಿ ಹೊರಗೆ ಬರಬಾರದು.

ನಿಷೇಧಿಸಿದ ಅಥವಾ ನಿರ್ಬಂಧಿಸಿದ ಸೀಮಿತ ಸಂಖ್ಯೆಯ ಚಟುವಟಿಕೆಗಳನ್ನು ಹೊರತುಪಡಿಸಿ, ಇತರೆ ಎಲ್ಲಾ ಚಟುವಟಿಕೆಗಳಿಗೆ ಅವಕಾಶ

ಮಾರ್ಗಸೂಚಿಯಲ್ಲಿ ವಿಶೇಷವಾಗಿ ನಿಷೇಧಿಸಲಾದ ಚಟುವಟಿಕೆಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು. ಆದರೆ ನಿರ್ಬಂಧಿತ ವಲಯಗಳಲ್ಲಿ ಮೊದಲೇ ಉಲ್ಲೇಖಿಸಿರುವಂತೆ ಕೇವಲ ಅವಶ್ಯಕ ಚಟುವಟಿಕೆಗಳಿಗೆ ಮಾತ್ರ ಅವಕಾಶವಿದೆ.

ಹಲವು ವಲಯಗಳೊಳಗೆ ಚಟುವಟಿಕೆಗಳ ಕುರಿತು ರಾಜ್ಯಗಳಿಂದಲೇ ನಿರ್ಧಾರ

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಾವು ಪರಿಸ್ಥಿತಿಯ ಮೌಲ್ಯಮಾಪನ ಆಧರಿಸಿ, ನಾನಾ ವಲಯಗಳಲ್ಲಿ ಹಲವು ಚಟುವಟಿಕೆಗಳನ್ನು ನಿರ್ಬಂಧಿಸಬಹುದು ಅಥವಾ ಅಗತ್ಯಕ್ಕೆ ತಕ್ಕಂತೆ ಕೆಲವು ನಿರ್ಬಂಧಗಳನ್ನು ಹೇರಲೂಬಹುದು.

ಆರೋಗ್ಯ ಸೇತು ಬಳಕೆ

ಭಾರತ ಸರ್ಕಾರ ಅಭಿವೃದ್ಧಿಪಡಿಸಿರುವ ಅತ್ಯಂತ ಶಕ್ತಿಶಾಲಿ ಉಪಕರಣ ಆರೋಗ್ಯ ಸೇತು ಮೊಬೈಲ್ ಅಪ್ಲಕೇಶನ್, ಕೋವಿಡ್-19 ಸೋಂಕಿತ ವ್ಯಕ್ತಿಗಳ ಗುರುತನ್ನು ತ್ವರಿತವಾಗಿ ಪತ್ತೆಹಚ್ಚಲು ನೆರವಾಗುತ್ತದೆ ಅಥವಾ ಸೋಂಕಿನ ಅಪಾಯದ ಬಗ್ಗೆಯೂ ಮುನ್ನೆಚ್ಚರಿಕೆ ನೀಡುತ್ತದೆ. ಹಾಗಾಗಿ ಅದು ವ್ಯಕ್ತಿಗಳಿಗೆ ಮತ್ತು ಸಮುದಾಯಗಳಿಗೆ ರಕ್ಷಾ ಕವಚವಾಗಿ ಕಾರ್ಯ ನಿರ್ವಹಿಸುತ್ತಿದೆ. ದುಡಿಯುವ ಸ್ಥಳಗಳಲ್ಲಿ ಮತ್ತು ಕಚೇರಿಗಳಲ್ಲಿ ಸುರಕ್ಷತೆಯನ್ನು ಖಾತ್ರಿಪಡಿಸುವ ಹಿನ್ನೆಲೆಯಲ್ಲಿ ಉದ್ಯೋಗದಾತರು ಎಲ್ಲ ಉದ್ಯೋಗಿಗಳು ತಮ್ಮ ಮೊಬೈಲ್ ಫೋನ್ ಗಳಲ್ಲಿ ಅಪ್ಲಿಕೇಶನ್ ಅಳವಡಿಸಿಕೊಂಡಿರುವುದನ್ನು ಖಾತ್ರಿಪಡಿಸಬೇಕು.

ಜಿಲ್ಲಾಡಳಿತಗಳು ಎಲ್ಲ ಸಾರ್ವಜನಿಕರಿಗೆ ತಮ್ಮ ಸೂಕ್ತ ಮೊಬೈಲ್ ಫೋನ್ ಗಳಲ್ಲಿ ಆರೋಗ್ಯ ಸೇತು ಆಪ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಲು ಮತ್ತು ಮೂಲಕ ಆಪ್ ನಲ್ಲಿ ತಮ್ಮ ಆರೋಗ್ಯ ಸ್ಥಿತಿಗತಿ ಅಪ್ ಡೇಟ್ ಮಾಡುವಂತೆ ಸೂಚನೆ ನೀಡಬೇಕು. ಇದರಿಂದಾಗಿ ಹೆಚ್ಚಿನ ಅಪಾಯ ಎದುರಿಸಲಿರುವ ಸಾರ್ವಜನಿಕರಿಗೆ ಸಕಾಲದಲ್ಲಿ ವೈದ್ಯಕೀಯ ಗಮನ ಹರಿಸಲು ನೆರವಾಗುತ್ತದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಲಾಕ್ ಡೌನ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಮುಂದುವರಿಸಬೇಕು ಮತ್ತು ಯಾವುದೇ ಕಾರಣಕ್ಕೂ ವಿಪತ್ತು ನಿರ್ವಹಣಾ ಕಾಯ್ದೆ 2005 ಅಡಿಯಲ್ಲಿ ಹೊರಡಿಸಲಾಗಿರುವ ಮಾರ್ಗಸೂಚಿಗಳನ್ನು ದುರ್ಬಲಗೊಳಿಸಬಾರದು.

ಲಾಕ್ ಡೌನ್ ವಿಸ್ತರಣಾ ಆದೇಶ ಮತ್ತು ಪರಿಷ್ಕೃತ ರಾಷ್ಟ್ರೀಯ ಮಾರ್ಗಸೂಚಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

***

 


(Release ID: 1624801) Visitor Counter : 395