ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಕುರಿತ 15ನೇ ಜಿಒಎಂ ಸಭೆ

Posted On: 15 MAY 2020 3:29PM by PIB Bengaluru

ಕೋವಿಡ್-19 ಕುರಿತ 15ನೇ ಜಿಒಎಂ ಸಭೆ; ಪ್ರಸಕ್ತ ಸ್ಥಿತಿಗತಿ, ಸಿದ್ಧತೆ ಮತ್ತು ಕೋವಿಡ್-19 ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಪರಿಶೀಲನೆ
ಸಾವುಗಳ ನಿರ್ವಹಣೆ ಮತ್ತು ಹೆಚ್ಚಿರುವ ಸೋಂಕಿರುವ ಪ್ರದೇಶಗಳತ್ತ ಗಮನಹರಿಸಲು ಡಾ. ಹರ್ಷವರ್ಧನ್ ಪ್ರತಿಪಾದನೆ

 

ಕೋವಿಡ್-19 ಕುರಿತಂತೆ ರಚಿಸಲಾಗಿರುವ ಉನ್ನತ ಮಟ್ಟದ ಸಚಿವರ ಸಮಿತಿ (ಜಿಒಎಂ) 15ನೇ ಸಭೆ ನಿರ್ಮಾಣ ಭವನದಲ್ಲಿಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಾಗರಿಕ ವಿಮಾನಯಾನ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ, ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್, ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ, ರಾಸಾಯನಿಕ ರಸಗೊಬ್ಬರ ಮತ್ತು ಬಂದರು ಖಾತೆ ರಾಜ್ಯ ಸಚಿವ ಶ್ರೀ ಮನ್ಸೂಖ್ ಲಾಲ್ ಮಾಂಡವೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ ಮತ್ತು ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಶ್ರೀ ಬಿಪಿನ್ ರಾವತ್ ಮತ್ತಿತರರು ಪಾಲ್ಗೊಂಡಿದ್ದರು.

ದೇಶಾದ್ಯಂತ ಹಾಗೂ ಜಾಗತಿಕವಾಗಿ ಕೋವಿಡ್-19 ಪ್ರಕರಣಗಳ ಸದ್ಯದ ಸ್ಥಿತಿಗತಿ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು. ವಿಶ್ವವ್ಯಾಪಿ ಒಟ್ಟು ಕೋವಿಡ್-19 ಪ್ರಕರಣಗಳು 42,48,389 ಇದ್ದು, 2,94,046 ಸಾವುಗಳು ಸಂಭವಿಸಿವೆ. ಸಾವಿನ ಪ್ರಮಾಣ ಶೇ. 6.92ರಷ್ಟಿದೆ. ಆದರೆ ಭಾರತದಲ್ಲಿ ಒಟ್ಟು ಕೋವಿಡ್-19 ಪಾಸಿಟಿವ್ ಪ್ರಕರಣಗಳ 81,970 ಇದ್ದು, 2,649 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಪ್ರಮಾಣ ಶೇ.3.23%.ರಷ್ಟಿದೆ. ಈವರೆಗೆ ಒಟ್ಟು 27,920 ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಿಂದೀಚೆಗೆ 1,685 ಮಂದಿ ಗುಣಮುಖರಾಗಿದ್ದು, ಇದರೊಂದಿಗೆ ಒಟ್ಟು ಗುಣಮುಖರಾದವರ ಪ್ರಮಾಣ ಶೇ. 34.06. ಲಾಕ್ ಡೌನ್ ಪರಿಣಾಮದಿಂದಾಗಿ ಸೋಂಕಿನ ಪ್ರಮಾಣ ದುಪ್ಪಟ್ಟಾಗುವ ಪ್ರಮಾಣ ಸುಧಾರಿಸಿದ್ದು, ಲಾಕ್ ಡೌನ್ ಗೂ ಮುನ್ನ 3.4 ದಿನ ಇದ್ದದ್ದು, ಈಗ ಕಳೆದ ವಾರ 12.9 ದಿನಕ್ಕೆ ಸುಧಾರಿಸಿದೆ. ಮರಣ ಪ್ರಮಾಣ, ಲಾಕ್ ಡೌನ್ ಗೂ ಮುನ್ನ ಶೇ.3.2ರಷ್ಟಿತ್ತು. ಕಳೆದ ವಾರ ಪ್ರಮಾಣ ಶೇ.2.1ಕ್ಕೆ ಇಳಿದಿದೆ.

ಸಚಿವರ ಸಮಿತಿ(ಜಿಒಎಂ) ಕೋವಿಡ್-19 ನಾನಾ ಆಯಾಮಗಳ ನಿರ್ವಹಣೆ ಮತ್ತು ನಿಯಂತ್ರಣ ಕಾರ್ಯತಂತ್ರದ ಕುರಿತು ಸುದೀರ್ಘ ಚರ್ಚೆ ನಡೆಸಿತು. ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಚರ್ಚಿಸಿತು. 30 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಭಾರತದ ಶೇ.79ರಷ್ಟು ಪ್ರಕರಣಗಳು ಇವೆ ಎಂದು ಸಮಿತಿಗೆ ಮಾಹಿತಿ ನೀಡಲಾಯಿತು. ಹೆಚ್ಚಿನ ಸಂಖ್ಯೆಯ ಸೋಂಕಿತ ಪ್ರಕರಣಗಳು ಮತ್ತು ಹೆಚ್ಚಿನ ಸಂಖ್ಯೆಯ ಸಾವುಗಳು ಸಂಭವಿಸುತ್ತಿರುವ ರಾಜ್ಯಗಳಲ್ಲಿ ಕೋವಿಡ್-19 ನಿರ್ವಹಣಾ ಕಾರ್ಯತಂತ್ರ ರೂಪಿಸಲು ರಾಜ್ಯಗಳು ಹೆಚ್ಚಿನ ಗಮನಹರಿಸಬೇಕು ಎಂದು ಚರ್ಚಿಸಲಾಯಿತು. ಅಲ್ಲದೆ, ಚಿಕಿತ್ಸೆ ಮತ್ತು ಪ್ರಕರಣದ ಸಾವು ನಿರ್ವಹಣೆಗಳ ಕುರಿತಂತೆ ಸಕಾಲದಲ್ಲಿ ಸೋಂಕು ಪತ್ತೆ ಮತ್ತು ಸಂಪರ್ಕ ಪತ್ತೆ ಹಚ್ಚಿ ಮುಂದುವರಿಯುವುದು ಅತ್ಯುತ್ತಮ ವಿಧಾನವಾಗಿದೆ ಎಂದು ಹೇಳಲಾಯಿತು. ವಲಸೆ ಕಾರ್ಮಿಕರು ಮತ್ತು ವಿದೇಶಗಳಿಂದ ವಾಪಸ್ಸಾಗುತ್ತಿರುವವರಿಂದಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎದುರಾಗಿರುವ ಸವಾಲುಗಳ ಬಗ್ಗೆಯೂ ಜಿಒಎಂನಲ್ಲಿ ಚರ್ಚಿಸಲಾಯಿತು.

ಭಾರತ ಸರ್ಕಾರ ನಿರ್ಬಂಧಿತ ವಲಯಗಳ ನಿರ್ವಹಣೆ ಕುರಿತಂತೆ ನೀಡಿರುವ ಶಿಫಾರಸ್ಸುಗಳ ಕುರಿತು ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿತು ಮತ್ತು ಅಲ್ಲದೆ, ಅವುಗಳ ಮಾನದಂಡ, ಮೂಲ ಕಾರಣ ಹಾಗೂ ಕ್ರಮ ಕೈಗೊಂಡಿರುವ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಪರಿಣಾಮಕಾರಿ ರೀತಿಯಲ್ಲಿ ಕೋವಿಡ್-19 ನಿರ್ವಹಣೆ ಮಾಡುತ್ತಿರುವ ಅಂಶಗಳನ್ನು ಹಂಚಿಕೊಳ್ಳಬೇಕು.

ದೇಶದಲ್ಲಿ ವೈದ್ಯಕೀಯ ಮೂಲಸೌಕರ್ಯ ವೃದ್ಧಿಯಾಗುತ್ತಿರುವ ಬಗ್ಗೆ ಜಿಒಎಂ ಮಾಹಿತಿ ಒದಗಿಸಲಾಯಿತು. ಅಲ್ಲದೆ ಇಂದು 8,694 ಸೌಕರ್ಯಗಳಲ್ಲಿ ಅದರಲ್ಲಿ 919 ನಿಗದಿತ ಕೋವಿಡ್ ಆಸ್ಪತ್ರೆಗಳು 2,036 ಕೋವಿಡ್ ಆರೋಗ್ಯ ಕೇಂದ್ರಗಳು ಮತ್ತು 5,739 ಕೋವಿಡ್ ಆರೈಕೆ ಕೇಂದ್ರಗಳು ಸೇರಿ ಒಟ್ಟು 2,77,429 ಹಾಸಿಗೆಗಳು ತೀವ್ರ ಹಾಗೂ ಗಂಭೀರ ಪ್ರಕರಣಗಳಿಗಾಗಿ ಲಭ್ಯವಿವೆ. ಜೊತೆಗೆ 29,701 ಐಸಿಯು ಹಾಸಿಗೆಗಳು ಹಾಗೂ 5,15,250 ಐಸೋಲೇಶನ್ ಹಾಸಿಗೆಗಳು ಕೂಡ ಲಭ್ಯವಿವೆ. ಅಲ್ಲದೆ ಈವರೆಗೆ ದೇಶದಲ್ಲಿ ಕೋವಿಡ್-19 ಎದುರಿಸಲು 18,855 ವೆಂಟಿಲೇಟರ್ ಗಳು ಲಭ್ಯವಿದೆ. ಕೇಂದ್ರ ಸರ್ಕಾರ 84.22 ಲಕ್ಷ ಎನ್-95 ಮಾಸ್ಕ್ ಗಳನ್ನು ಮತ್ತು 47.98 ಲಕ್ಷ ವೈಯಕ್ತಿಕ ರಕ್ಷಣಾ ಉಪಕರಣ(ಪಿಪಿಇ) ಕಿಟ್ ಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರದ ಸಂಸ್ಥೆಗಳಿಗೆ ನೀಡಿದೆ. ದೇಶದಲ್ಲಿ ಪ್ರತಿ ದಿನ ಸುಮಾರು 3 ಲಕ್ಷ ಪಿಪಿಇಗಳ ಉತ್ಪಾದನಾ ಸಾಮರ್ಥ್ಯವಿದೆ ಮತ್ತು ಪ್ರತಿ ದಿನ 3 ಲಕ್ಷ ಎನ್-95 ಮಾಸ್ಕ್ ಉತ್ಪಾದಿಸಲಾಗುತ್ತಿದೆ, ಇದು ಮುಂದಿನ ದಿನಗಳಲ್ಲಿ ದೇಶಕ್ಕೆ ಅಗತ್ಯವಿರುವ ಬೇಡಿಕೆಯನ್ನು ಪೂರೈಸಲು ಸಾಕಾಗುತ್ತದೆ ಎಂದು ಹೇಳಲಾಗಿದೆ. ಅಲ್ಲದೆ ದೇಶೀಯವಾಗಿಯೇ ವೆಂಟಿಲೇಟರ್ ಗಳ ಉತ್ಪಾದನೆ ಆರಂಭವಾಗಿದ್ದು, ಖರೀದಿಗೆ ಬೇಡಿಕೆಗಳನ್ನು ಸಲ್ಲಿಸಲಾಗಿದೆ.

ಐಸಿಎಂಆರ್ ಡಿಜಿ ಡಾ. ಬಲರಾಮ್ ಭಾರ್ಗವ, ದೇಶದಲ್ಲಿ ಪರೀಕ್ಷಾ ಸಾಮರ್ಥ್ಯ ಪ್ರತಿ ದಿನ 1,00,000ಕ್ಕೆ ಹೆಚ್ಚಳವಾಗಿದೆ. 509 ಸರ್ಕಾರಿ ಮತ್ತು ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಸುಮಾರು 20 ಲಕ್ಷ ಸಮಗ್ರ ಪರೀಕ್ಷೆಗಳನ್ನು ದೇಶಾದ್ಯಂತ ಈವರೆಗೆ ನಡೆಸಲಾಗಿದೆ. ಆಧುನಿಕ ಯಂತ್ರಗಳನ್ನು ಪರೀಕ್ಷೆ ಕಾರ್ಯ ಚುರುಕುಗೊಳಿಸಲು ಖರೀದಿಸಲಾಗಿದೆ ಮತ್ತು ಕೆಲವು ಯಂತ್ರಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಅಲ್ಲದೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ(ಎನ್ ಸಿಡಿಸಿ)ದಲ್ಲಿ ಕೊಬಾಸ್ 6800 ಯಂತ್ರ ಸಜ್ಜುಗೊಂಡಿದೆ.ಅತ್ಯಾಧುನಿಕ ಉನ್ನತ ಗುಣಮಟ್ಟದ ಯಂತ್ರ ರಿಯಲ್ ಟೈಮ್ ಪಿಸಿಆರ್ ಕೋವಿಡ್-19 ಪರೀಕ್ಷೆಯನ್ನು ನಡೆಸಲಿದೆ. ಅದರ ಸೇವೆ ಈಗಾಗಲೇ ರಾಷ್ಟ್ರಕ್ಕೆ ಲಭ್ಯವಾಗುತ್ತಿದೆ. ಕೊಬಾಸ್ 6800 ಗುಣಮಟ್ಟದ ಮತ್ತು ಭಾರೀ ಪ್ರಮಾಣದ ಅಂದರೆ 24 ಗಂಟೆಗೆ 1200 ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಲಭ್ಯವಿರುವ ಪರೀಕ್ಷಾ ಕಿಟ್ ಗಳು ಸಾಕಷ್ಟು ಲಭ್ಯವಿದ್ದು, ಅವುಗಳನ್ನು ಐಸಿಎಂಆರ್ 15 ಡಿಪೋಗಳ ಮೂಲಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಾಗುತ್ತಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ, ನಾಗರಿಕ ವಿಮಾನಯಾನ ಸಚಿವಾಲಯದ ಸಹಕಾರದಿಂದ ನಾನಾ ದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಪ್ರಜೆಗಳನ್ನು ವಿಮಾನಗಳ ಮೂಲಕ ವಾಪಸ್ ಕರೆತರಲು ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಒಎಂಗೆ ಮಾಹಿತಿ ನೀಡಲಾಯಿತು. ಮೊದಲನೇ ಹಂತದಲ್ಲಿ ಸುಮಾರು 12,000 ಭಾರತೀಯರನ್ನು ಈಗಾಗಲೇ ವಾಪಸ್ ಕರೆತಂದು ಅವರುಗಳನ್ನು ಆಯಾ ರಾಜ್ಯಗಳಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಅವರುಗಳನ್ನು ಕರೆತರುವಾಗ ಅಗತ್ಯ ತಪಾಸಣೆ ಕಾರ್ಯ ಕೈಗೊಳ್ಳಲಾಗಿದ್ದು, ರಾಜ್ಯಗಳಲ್ಲಿ ಈಗಾಗಲೇ ಹೊರಡಿಸಿರುವ ಮಾರ್ಗಸೂಚಿಗಳ ಜೊತೆ ಪಾವತಿ ಸಾಂಸ್ಥಿಕ ಕ್ವಾರಂಟೈನ್ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.

ಶ್ರೀಮತಿ ಪ್ರೀತಿ ಸೂದನ್, ಕಾರ್ಯದರ್ಶಿ(ಎಚ್ಎಫ್ ಡಬ್ಲ್ಯೂ), ಶ್ರೀ ರಾಜೇಶ್ ಭೂಷಣ್, ಒಎಸ್ ಡಿ/ಕಾರ್ಯದರ್ಶಿ(ಎಚ್ಎಫ್ ಡಬ್ಲ್ಯೂ), ಶ್ರೀ ಪ್ರದೀಪ್ ಸಿಂಗ್ ಖರೋಲಾ, ಕಾರ್ಯದರ್ಶಿ (ನಾಗರಿಕ ವಿಮಾನಯಾನ), ಶ್ರೀ ಅನೂಪ್ ವಾಧ್ವಾನ್, ಕಾರ್ಯದರ್ಶಿ(ವಾಣಿಜ್ಯ), ಪ್ರೊ. ಬಲರಾಂ ಭಾರ್ಗವ, ಡಿಜಿ-ಐಸಿಎಂಆರ್, ಶ್ರೀ ಆನಂದ ಸ್ವರೂಪ್, ಡಿಜಿ, ಐಟಿಬಿಪಿ, ಶ್ರೀ ದಮ್ಮು ರವಿ, ಹೆಚ್ಚುವರಿ ಕಾರ್ಯದರ್ಶಿ(ಎಂಇಎ), ಶ್ರೀ ಅನಿಲ್ ಮಲಿಕ್, ಹೆಚ್ಚುವರಿ ಕಾರ್ಯದರ್ಶಿ(ಎಂಎಚ್ಎ), ಡಾ. ಸಿ.ಎಸ್. ಮೊಹಪಾತ್ರ, ಹೆಚ್ಚುವರಿ ಕಾರ್ಯದರ್ಶಿ(ಆರ್ಥಿಕ ವ್ಯವಹಾರ), ಶ್ರೀ ಲವ ಅಗರ್ ವಾಲ್, ಜಂಟಿ ಕಾರ್ಯದರ್ಶಿ(ಎಂಒಎಚ್ಎಫ್ ಡಬ್ಲ್ಯೂ) ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಅಧಿಕಾರಿಗಳು, ಮತ್ತಿತರರು ಪಾಲ್ಗೊಂಡಿದ್ದರು.

ಕೋವಿಡ್-19 ಕುರಿತ ಎಲ್ಲ ಅಧಿಕೃತ ಮತ್ತು ತಾಜಾ ಮಾಹಿತಿಗೆ, ತಾಂತ್ರಿಕ ವಿಷಯಗಳಿಗೆ, ಮಾರ್ಗಸೂಚಿಗಳಿಗೆ ಮತ್ತು ಸಲಹಾ ಸೂಚಿಗಳಿಗೆ, ನಿರಂತರವಾಗಿ ಇಲ್ಲಿ ಭೇಟಿ ನೀಡಬಹುದು. https://www.mohfw.gov.in/.

ಕೋವಿಡ್-19 ಕುರಿತ ತಾಂತ್ರಿಕ ಸಂಬಂಧಿ ಪ್ರಶ್ನೆಗಳನ್ನು -ಮೇಲ್ ಮಾಡಬಹುದು. technicalquery.covid19[at]gov[dot]in ಮತ್ತು ಇತರೆ ಪ್ರಶ್ನೆಗಳನ್ನು ncov2019[at]gov[dot]in ಇಲ್ಲಿಗೆ ಕಳುಹಿಸಬಹುದು ಮತ್ತು ಟ್ವೀಟ್ ಮೂಲಕ ಕೇಳಲು @CovidIndiaSeva.

ಕೋವಿಡ್-19 ಕುರಿತಂತೆ ಯಾವುದೇ ದೂರುಗಳಿದ್ದರೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಾಯವಾಣಿ ಸಂಖ್ಯೆ +91-11-23978046 ಅಥವಾ 1075 (ಉಚಿತ ಕರೆಗೆ). ಕೋವಿಡ್-19 ಕುರಿತಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಾಯವಾಣಿ ಸಂಖ್ಯೆ ಇಲ್ಲಿ ಲಭ್ಯ. https://www.mohfw.gov.in/pdf/coronvavirushelplinenumber.pdf .

***



(Release ID: 1624240) Visitor Counter : 182