ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಅಂತಾರಾಷ್ಟ್ರೀಯ ದಾದಿಯರ ದಿನ ಆಚರಣೆ
Posted On:
12 MAY 2020 3:13PM by PIB Bengaluru
ಅಂತಾರಾಷ್ಟ್ರೀಯ ದಾದಿಯರ ದಿನ ಆಚರಣೆ
ಶುಶ್ರೂಷಕಿಯರು ಮತ್ತು ಇತರೆ ಆರೋಗ್ಯ ಕಾರ್ಯಕರ್ತರಿಲ್ಲದೆ ನಾವು ಸಾಂಕ್ರಾಮಿಕಗಳ ವಿರುದ್ಧ ಗೆಲುವು ಸಾಧಿಸಲು ಸಾಧ್ಯವಿಲ್ಲ:
ಡಾ. ಹರ್ಷವರ್ಧನ್
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು, ಇಂದು ಅಂತಾರಾಷ್ಟ್ರೀಯ ದಾದಿಯರ ದಿನ ಮತ್ತು ಫ್ಲೋರೆನ್ಸ್ ನೈಟಿಂಗೇಲ್ ಅವರ 200ನೇ ಜನ್ಮದಿನ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಹಿಸಿದ್ದರು. ಈ ವರ್ಷ, ವಿಶ್ವ ಆರೋಗ್ಯ ಸಂಸ್ಥೆ – ಡಬ್ಲ್ಯೂಎಚ್ಒ, ‘ನರ್ಸ್ ಗಳ ಮತ್ತು ಸೂಲಗಿತ್ತಿ(ಮಿಡ್ ವೈವ್ ) ಗಳ ವರ್ಷ’ ಎಂದು ಘೋಷಿಸಿರುವುದರಿಂದ ಅತ್ಯಂತ ಮಹತ್ವದ್ದಾಗಿದೆ. ಈ ಕಾರ್ಯಕ್ರಮದಲ್ಲಿ ಆನ್ ಲೈನ್ ಮೂಲಕ ಲಕ್ಷಾಂತರ ನರ್ಸ್ ಗಳು ಭಾಗಿಯಾಗಿದ್ದರು.
ನರ್ಸಿಂಗ್ ವೃತ್ತಿಪರರ ನಿಸ್ವಾರ್ಥ ಸೇವೆ ಮತ್ತು ಪರಿಶ್ರಮವನ್ನು ಶ್ಲಾಘಿಸಿದ ಡಾ. ಹರ್ಷವರ್ಧನ್ ಅವರು, ನಮ್ಮ ಆರೋಗ್ಯ ವಿತರಣಾ ವ್ಯವಸ್ಥೆಯ ಪ್ರಮುಖ ಆಧಾರಸ್ಥಂಭಗಳು ಎಂದು ಹೇಳಿದರು. “ಅವರ ವೃತ್ತಿಯ ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಯಾವುದೇ ರೀತಿಯಲ್ಲೂ ಬೆಲೆ ಕಟ್ಟಲಾಗದು, ಅದೇ ರೀತಿ ಅವರ ಬದ್ಧತೆಯೂ ಕೂಡ. ನಿಮ್ಮೆಲ್ಲಾ ಒಳ್ಳೆಯತನ, ಬದ್ಧತೆ ಮತ್ತು ಮೃದು ಸ್ಪರ್ಶಿ ಆರೈಕೆಗೆ ಧನ್ಯವಾದಗಳು, ನೀವು ಸದಾ ಎಂತಹುದೇ ಪರಿಸ್ಥಿತಿ ಇದ್ದರೂ, ತಲೆಕೆಡಿಸಿಕೊಳ್ಳದೆ ರೋಗಿಗಳು ಮೊದಲು ಎಂದು ಶ್ರಮಿಸುತ್ತೀರಿ” ಎಂದರು. ಅಲ್ಲದೆ ಪ್ರಸಕ್ತ ಸಾಂಕ್ರಾಮಿಕ ಬಿಕ್ಕಟ್ಟಿನ ಸಮಯದಲ್ಲಿ ನಿರಂತರವಾಗಿ ಮತ್ತು ಅವಿರತವಾಗಿ ದುಡಿಯುತ್ತಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು. “ನರ್ಸ್ ಗಳು ಮತ್ತು ಇತರೆ ಆರೋಗ್ಯ ಕಾರ್ಯಕರ್ತರಿಲ್ಲದೆ ನಾವು ಯಾವುದೇ ಸಾಂಕ್ರಾಮಿಕ ರೋಗಗಳ ವಿರುದ್ಧ ಗೆಲುವು ಸಾಧಿಸಲಾಗದು ಹಾಗೂ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆ ಅಥವಾ ಸಾಮೂಹಿಕ ಆರೋಗ್ಯ ರಕ್ಷಣೆ ಒದಗಿಸಲಾಗದು” ಎಂದು ಹೇಳಿದರು.
ಡಾ. ಹರ್ಷವರ್ಧನ್ ಅವರು, ಕೋವಿಡ್ ಸಂಕಷ್ಟದ ಈ ದೊಡ್ಡ ಸವಾಲಿನ ದಿನಗಳನ್ನು ಎದುರಿಸಲು ನರ್ಸ್ ಗಳು ತೋರುತ್ತಿರುವ ಸಾಮರ್ಥ್ಯವನ್ನು ಶ್ಲಾಘಿಸಿದರು. ಅವರು “ಇಂದು ನನಗೆ ಪುಣೆಯ ಸ್ಟಾಫ್ ನರ್ಸ್ ಆಗಿದ್ದ ಶ್ರೀಮತಿ ಜ್ಯೋತಿ ವಿಠಲ್ ರಕ್ಷಾ, ಪುಣೆಯ ಅಸಿಸ್ಟೆಂಟ್ ಮ್ಯಾಟ್ರಾನ್ ಅನಿತಾ ಗೋವಿಂದರಾವ್ ರಾಥೋಡ್ ಮತ್ತು ಇತ್ತೀಚೆಗೆ ನಮ್ಮನ್ನಗಲಿದ ಝಿಲ್ ಮಿಲ್ ನ ಇಎಸ್ಐ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ಮಾರ್ಗರೇಟ್ ಅವರಂತಹ ದಿಟ್ಟ ಹೃದಯಗಳು ನೆನಪಾಗುತ್ತವೆ. ಈ ಎಲ್ಲ ಕುಟುಂಬದವರಿಗೆ ನನ್ನ ಸಾಂತ್ವಾನಗಳು. ನಾನು ಅವರ ಕುಟುಂಬದೊಂದಿಗೆ ನಿಲ್ಲುತ್ತಾ, ರೋಗದ ವಿರುದ್ಧ ನಾವು ಹೋರಾಟವನ್ನು ಮುಂದುವರಿಸುತ್ತೇವೆ. ನೈತಿಕವಾಗಿ ಕುಗ್ಗದೆ, ಅಗತ್ಯ ಶಿಷ್ಟಾಚಾರಗಳನ್ನು ಪಾಲನೆ ಮಾಡುವ ಮೂಲಕ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮುಂಜಾಗ್ರತಾ ಕ್ರಮಗಳು ಮತ್ತು ತರಬೇತಿಗಳನ್ನು ನೀಡಲಾಗುವುದು” ಎಂದು ಹೇಳಿದರು.
ಡಾ. ಹರ್ಷವರ್ಧನ್ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸರ್ಕಾರ ಕೋವಿಡ್-19 ವಿರುದ್ಧ ಅತ್ಯಂತ ದೃಢ ಬದ್ಧತೆಯಿಂದ ಹೋರಾಟ ನಡೆಸುತ್ತಿದೆ ಎಂದರು. ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರ ರಕ್ಷಣೆಗೆ ಮತ್ತು ಆರೋಗ್ಯ ಕಾರ್ಯಕರ್ತರ ಮೇಲಾಗುತ್ತಿದ್ದ ಹಿಂಸಾಚಾರ ಹಾಗೂ ದೌರ್ಜನ್ಯಗಳನ್ನು ಹತ್ತಿಕ್ಕಲು ಸರ್ಕಾರ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿದೆ ಎಂದರು. ಸುಗ್ರೀವಾಜ್ಞೆಯಲ್ಲಿ ಅಂತಹ ದೌರ್ಜನ್ಯ ಎಸಗಿದರೆ, ಅದು ಜಾಮೀನುರಹಿತ ಅಪರಾಧವಾಗಲಿದೆ ಮತ್ತು ಗಾಯಗೊಂಡ ಆರೋಗ್ಯ ರಕ್ಷಣಾ ಸಿಬ್ಬಂದಿಗೆ ಪರಿಹಾರ ನೀಡಲಾಗುವುದು ಹಾಗೂ ಆರೋಗ್ಯ ರಕ್ಷಣಾ ಸೇವಾ ಸಿಬ್ಬಂದಿಯ ಆಸ್ತಿಗೆ ನಷ್ಟವಾದರೆ ಅದಕ್ಕೂ ಪರಿಹಾರವನ್ನು ನೀಡಲಾಗುವುದು. ಕೃತ್ಯಗಳನ್ನು ಎಸಗುವವರು ಅಥವಾ ಪ್ರಚೋದಿಸುವವರಿಗೆ ಕನಿಷ್ಠ ಮೂರು ತಿಂಗಳಿಂದ ಐದು ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಮತ್ತು 50,000 ರೂ. ನಿಂದ 2,00,000 ರೂ.ವರೆಗೆ ದಂಡ ವಿಧಿಸಲಾಗುವುದು. ಒಂದು ವೇಳೆ ಗಂಭೀರವಾಗಿ ಗಾಯಗೊಳಿಸಿದರೆ ಅಂತಹ ಸಂದರ್ಭಗಳಲ್ಲಿ ಆರು ತಿಂಗಳಿಂದ ಏಳು ವರ್ಷಗಳವರೆಗೆ ಶಿಕ್ಷೆ ಮತ್ತು 1,00,000 ರೂ.ನಿಂದ 5,00,000 ರೂ.ವರೆಗೆ ದಂಡ ವಿಧಿಸಲಾಗುವುದು. ಅಲ್ಲದೆ ತಪ್ಪಿತಸ್ಥರು ಸಂತ್ರಸ್ತರಿಗೆ ಪರಿಹಾರ ನೀಡಬೇಕಾಗುತ್ತದೆ ಮತ್ತು ಆಸ್ತಿಗೆ ಹಾನಿಯಾದರೆ ಮಾರುಕಟ್ಟೆ ಮೌಲ್ಯದ ಎರಡು ಪಟ್ಟು ನಷ್ಟವನ್ನು ಭರಿಸಿಕೊಡಬೇಕಾಗುತ್ತದೆ. ಅಲ್ಲದೆ ಹೆಚ್ಚುವರಿಯಾಗಿ “ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್: ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಆರೋಗ್ಯ ರಕ್ಷಣಾ ಕಾರ್ಯಕರ್ತರಿಗೆ ವಿಮಾ ಯೋಜನೆ” ಜಾರಿಗೊಳಿಸಲಾಗಿದ್ದು, ಅದರಡಿ 50 ಲಕ್ಷ ರೂ.ಗಳವರೆಗೆ ವಿಮಾ ವ್ಯಾಪ್ತಿ ಹೊಂದಿದ್ದು, ಇದು 90 ದಿನಗಳ ವರೆಗೆ ಒಟ್ಟು ಸುಮಾರು 22.12 ಲಕ್ಷ ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು, ಸಮುದಾಯ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಕೋವಿಡ್-19 ರೋಗಿಗಳ ಚಿಕಿತ್ಸೆ, ಆರೈಕೆ ಮತ್ತು ನೇರ ಸಂಪರ್ಕದಲ್ಲಿರುವವರಿಗೆ ವಿಮೆಯನ್ನು ಒದಗಿಸಲಾಗಿದೆ. ಇದರಲ್ಲಿ ಕೋವಿಡ್-19 ಸಂಪರ್ಕದಿಂದಾಗಿ ಆಕಸ್ಮಿಕವಾಗಿ ಸಾವನ್ನಪ್ಪುವ ಘಟನೆಯೂ ಸೇರಿದೆ.
ಇಂದಿನ ಸನ್ನಿವೇಶದಲ್ಲಿ ನರ್ಸ್ ಗಳು, ರೋಗದ ಕುರಿತು ಎಲ್ಲಾ ಶಿಷ್ಟಾಚಾರಗಳು, ಮಾಹಿತಿಗಳನ್ನು ತಾವೇ ಜನರಿಗೆ ತಿಳಿಯಪಡಿಸಬೇಕು ಮತ್ತು ಆ ಮೂಲಕ ಅವರುಗಳು ಮಾತ್ರ ರಕ್ಷಣೆ ಮಾಡಿಕೊಳ್ಳುವುದಲ್ಲದೇ, ಇತರೆ ಎಲ್ಲರಿಗೂ ಅತ್ಯುತ್ತಮ ಸಲಹೆಗಳನ್ನು ನೀಡುವ ಅಗತ್ಯತೆ ಇದೆ ಎಂದು ಹೇಳಿದರು. ಭಾರತೀಯ ನರ್ಸಿಂಗ್ ಮಂಡಳಿ ಮತ್ತು ಏಮ್ಸ್ ದೆಹಲಿ ಮತ್ತಿತರ ಸಂಸ್ಥೆಗಳು ಆಯೋಜಿಸುವ ವೆಬಿನಾರ್ ಗಳ ಸಂಪೂರ್ಣ ಪ್ರಯೋಜನಗಳನ್ನು ನರ್ಸ್ ಗಳು ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ಶ್ರೀಮತಿ ಪ್ರೀತಿ ಸುಡಾನ್, ವಿಶೇಷ ಕಾರ್ಯದರ್ಶಿ ಶ್ರೀ ಅರುಣ್ ಸಿಂಘಾಲ್, ಜಂಟಿ ಕಾರ್ಯದರ್ಶಿ ಶ್ರೀ ನಿಪುನ್ ವಿನಾಯಕ್, ನವದೆಹಲಿಯ ಭಾರತೀಯ ನರ್ಸಿಂಗ್ ಮಂಡಳಿ ಅಧ್ಯಕ್ಷ ಶ್ರೀ ಟಿ. ದಿಲೀಪ್ ಕುಮಾರ್, ನವದೆಹಲಿಯ ಅಖಿಲ ಭಾರತ ಸರ್ಕಾರಿ ನರ್ಸ್ ಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜಿ.ಕೆ. ಖುರಾನಾ, ಭಾರತೀಯ ತರಬೇತಿ ಹೊಂದಿದ ನರ್ಸ್ ಗಳ ಒಕ್ಕೂಟದ ಉತ್ತರ ವಲಯ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಅನ್ನಿ ಕುಮಾರ್, ಎಎನ್ಎಂ ಎಲ್ಎಚ್ ವಿಗಳ ಅಖಿಲ ಭಾರತ ಒಕ್ಕೂಟದ ಎಎನ್ಎಂ ಶ್ರೀಮತಿ ಗೀತಾರಾಣಿ, ಭಾರತೀಯ ಮಿಡ್ ವೈವ್ ಗಳ ಸೊಸೈಟಿಯ ದೆಹಲಿ ಘಟಕದ ಅಧ್ಯಕ್ಷೆ ಶ್ರೀಮತಿ ಥೆರೆಸಾ ಹಲ್ದಾನಿ, ನವದೆಹಲಿಯ ಭಾರತೀಯ ನರ್ಸಿಂಗ್ ಮಂಡಳಿ ಕಾರ್ಯದರ್ಶಿ, ಲೆಫ್ಟಿನೆಂಟ್ ಕರ್ನಲ್ ಸರಬ್ ಜೀತ್ ಕೌರ್, ನರ್ಸಿಂಗ್ ಒಕ್ಕೂಟಗಳು ಹಾಗೂ ಸಂಸ್ಥೆಗಳ ಇತರೆ ಅಧಿಕಾರಿಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.
***
(Release ID: 1623377)
Visitor Counter : 240
Read this release in:
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Tamil
,
Telugu
,
Malayalam