ರೈಲ್ವೇ ಸಚಿವಾಲಯ

ಭಾರತೀಯ ರೈಲ್ವೆಯಿಂದ ಕ್ರಮೇಣವಾಗಿ ಆಯ್ದ ಪ್ರಯಾಣಿಕ ಸೇವೆಗಳ ಕಾರ್ಯಾರಂಭ

Posted On: 10 MAY 2020 8:26PM by PIB Bengaluru

ಭಾರತೀಯ ರೈಲ್ವೆಯಿಂದ ಕ್ರಮೇಣವಾಗಿ ಆಯ್ದ ಪ್ರಯಾಣಿಕ ಸೇವೆಗಳ ಕಾರ್ಯಾರಂಭ

 

ಭಾರತೀಯ ರೈಲ್ವೆ ಆರಂಭಿಕವಾಗಿ 15 ಜೋಡಿ ರೈಲು (30 ಮರು ಪ್ರಯಾಣ)ಗಳೊಂದಿಗೆ ಕ್ರಮೇಣ ಪ್ರಯಾಣಿಕರ ರೈಲುಗಳ ಸಂಚಾರವನ್ನು 2020 ಮೇ 12ರಿಂದ ಆರಂಭಿಸಲು ಯೋಜಿಸಿದೆ. ರೈಲುಗಳು ನವದೆಹಲಿ ರೈಲು ನಿಲ್ದಾಣದಿಂದ ವಿಶೇಷ ರೈಲು ಸೇವೆಯಾಗಿ ಸಂಚರಿಸಲಿದ್ದು, ದಿಬ್ರೂಗಢ, ಅಗರ್ತಲಾ, ಹೌರಾ, ಪಾಟ್ನಾ, ಬಿಲಾಸ್ ಪುರ, ರಾಂಚಿ, ಭುವನೇಶ್ವರ, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡಗಾವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಮತ್ತು ಜಮ್ಮು ತವಿಯನ್ನು ಸಂಪರ್ಕಿಸಲಿದೆ.

20 ಸಾವಿರ ಕೋಚ್ ಗಳನ್ನು ಕೋವಿಡ್ -19 ಆರೈಕೆ ಕೇಂದ್ರಗಳಿಗಾಗಿ ಮೀಸಲಿಟ್ಟಿರುವ ಮತ್ತು ಉಳಿದಲ್ಲೇ ಉಳಿದಿರುವ ವಲಸೆ ಕಾರ್ಮಿಕರಿಗಾಗಿ ಪ್ರತಿ ನಿತ್ಯ 300 ಶ್ರಮಿಕ ವಿಶೇಷ ರೈಲು ಓಡಿಸುತ್ತಿರುವ ಭಾರತೀಯ ರೈಲ್ವೆ ಆನಂತರ ಬೋಗಿಗಳ ಲಭ್ಯತೆಯನ್ನು ನೋಡಿಕೊಂಡು ಇನ್ನೂ ಹೆಚ್ಚಿನ ವಿಶೇಷ ರೈಲು ಸೇವೆಯನ್ನು ಹೊಸ ಮಾರ್ಗಗಳಲ್ಲಿ ಆರಂಭಿಸಲಿದೆ.

ರೈಲುಗಳ ರಿಸರ್ವೇಷನ್ ಬುಕಿಂಗ್ ಮೇ 11 ಸಂಜೆ 4 ಗಂಟೆಯಿಂದ ಆರಂಭವಾಗಲಿದ್ದು, ಅದು ಐಆರ್.ಸಿಟಿಸಿ ಅಂತರ್ಜಾಲ ತಾಣ (https://www.irctc.co.in/) ದಲ್ಲಿ ಮಾತ್ರವೇ ಲಭ್ಯವಾಗಲಿದೆ. ರೈಲು ನಿಲ್ದಾಣಗಳಲ್ಲಿನ ಟಿಕೆಟ್ ಬುಕ್ಕಿಂಗ್ ಕೌಂಟರ್ ಗಳು ಮುಚ್ಚಿರುತ್ತವೆ ಮತ್ತು ಪ್ಲಾಟ್ ಫಾರಂ ಟಿಕೆಟ್ ಸೇರಿದಂತೆ ಯಾವುದೇ ಟಿಕೆಟ್ ಅನ್ನು ಕೌಂಟರ್ ನಲ್ಲಿ ನೀಡಲಾಗುವುದಿಲ್ಲ. ಅರ್ಹ ದೃಢೀಕೃತ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರವೇ ರೈಲು ನಿಲ್ದಾಣ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಎಲ್ಲ ಪ್ರಯಾಣಿಕರಿಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ ಮತ್ತು ಹೊರಡುವ ವೇಳೆ ತಪಾಸಣೆ ಮಾಡಲಾಗುತ್ತದೆ, ಕೇವಲ ರೋಗ ಲಕ್ಷಣಗಳು ಇಲ್ಲದ ಪ್ರಯಾಣಿಕರಿಗೆ ಮಾತ್ರವೇ ರೈಲು ಹತ್ತಲು ಅವಕಾಶ ನೀಡಲಾಗುತ್ತದೆ. ರೈಲುಗಳ ವೇಳಾಪಟ್ಟಿ ಸೇರಿದಂತೆ ಇತರ ವಿವರಗಳನ್ನು ನಂತರ ಪ್ರತ್ಯೇಕವಾಗಿ ಪ್ರಕಟಿಸಲಾಗುತ್ತದೆ.

***


(Release ID: 1622868) Visitor Counter : 306