PIB Headquarters
ಕೋವಿಡ್-19: ಪಿ ಐ ಬಿ ದೈನಿಕ ವರದಿ
Posted On:
09 MAY 2020 6:26PM by PIB Bengaluru
ಕೋವಿಡ್-19: ಪಿ ಐ ಬಿ ದೈನಿಕ ವರದಿ
(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)
ಈಶಾನ್ಯ ರಾಜ್ಯಗಳಲ್ಲಿ ಕೋವಿಡ್-19 ನಿರ್ವಹಣೆಯ ಸಿದ್ಧತೆ ಮತ್ತು ನಿಗ್ರಹ ಕ್ರಮಗಳನ್ನು ಪರಿಶೀಲಿಸಿದ ಡಾ. ಹರ್ಷವರ್ಧನ್
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರು ಇಂದು ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ ಮತ್ತು ಸಿಕ್ಕಿಂನಲ್ಲಿ ಕೋವಿಡ್-19 ಸಾಂಕ್ರಾಮಿಕದ ನಿಯಂತ್ರಣ ಮತ್ತು ನಿರ್ವಹಣೆಗಾಗಿ ತೆಗೆದುಕೊಳ್ಳಲಾಗುವ ಕ್ರಮಗಳನ್ನು ಪರಿಶೀಲಿಸಲು ಸಭೆ ನಡೆಸಿದರು. ದೇಶದಲ್ಲಿ ಕೋವಿಡ್-19 ಅನ್ನು ಎದುರಿಸುವಲ್ಲಿ ಎಲ್ಲಾ ರಾಜ್ಯಗಳ ಸಮರ್ಪಣೆಯನ್ನು ಶ್ಲಾಘಿಸಿದ ಅವರು, “ಹೆಚ್ಚಿನ ಈಶಾನ್ಯ ರಾಜ್ಯಗಳು ಹಸಿರು ವಲಯಗಳಲ್ಲಿರುವುದನ್ನು ನೋಡಲು ತುಂಬಾ ಉತ್ತೇಜನಕಾರಿಯಾಗಿದೆ ಮತ್ತು ಇದೊಂದು ದೊಡ್ಡ ಸಮಾಧಾನದ ವಿಷಯ. ಇಂದಿನವರೆಗೆ, ಅಸ್ಸಾಂ ಮತ್ತು ತ್ರಿಪುರಗಳಲ್ಲಿ ಮಾತ್ರ ಸಕ್ರಿಯ ಕೋವಿಡ್-19 ಪ್ರಕರಣಗಳಿವೆ; ಇತರ ರಾಜ್ಯಗಳು ಹಸಿರು ವಲಯದಲ್ಲಿವೆ." ಎಂದರು. ಈಶಾನ್ಯದಲ್ಲಿ ಕೋವಿಡ್-19 ನಿರ್ವಹಣೆಯ ಸಕಾರಾತ್ಮಕ ಸ್ಥಿತಿಯನ್ನು ಕಾಪಾಡಿಕೊಳ್ಳಲು, ಮರಳಿ ಬಂದಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ವಿದೇಶದಿಂದ ಹಿಂದಿರುಗುವವರನ್ನು ನಿಗದಿಪಡಿಸಿದ ಮಾರ್ಗಸೂಚಿಗಳು ಮತ್ತು ಶಿಷ್ಟಾಚಾರದ ಪ್ರಕಾರ ಪರೀಕ್ಷಿಸಬೇಕು ಮತ್ತು ಖಾತರಿಪಡಿಸಬೇಕು ಎಂದು ಡಾ.ಹರ್ಷವರ್ಧನ್ ರಾಜ್ಯಗಳಿಗೆ ಸಲಹೆ ನೀಡಿದರು.
2020 ರ ಮೇ 9 ರ ವೇಳೆಗೆ ದೇಶದಲ್ಲಿ ಒಟ್ಟು 59,662 ಪ್ರಕರಣಗಳು ವರದಿಯಾಗಿವೆ, ಇದರಲ್ಲಿ 17,847 ಜನರನ್ನು ಗುಣಪಡಿಸಲಾಗಿದೆ ಮತ್ತು 1,981 ಸಾವುಗಳು ಸಂಭವಿಸಿವೆ ಎಂದು ಡಾ.ಹರ್ಷವರ್ಧನ್ ಹೇಳಿದರು. ಕಳೆದ 24 ಗಂಟೆಗಳಲ್ಲಿ, 3,320 ಹೊಸ ದೃಢಪಟ್ಟ ಪ್ರಕರಣಗಳನ್ನು ವರದಿಯಾಗಿದ್ದು, 1307 ರೋಗಿಗಳು ಗುಣಮುಖರಾಗಿದ್ದಾರೆ. ಸಾವಿನ ಪ್ರಮಾಣ ಶೇ.3.3 ರಷ್ಟಿದ್ದು, ಚೇತರಿಕೆಯ ಪ್ರಮಾಣ ಶೇ.29.9 ಎಂದು ಅವರು ಹೇಳಿದರು. ನಿನ್ನೆಯವರೆಗೆ ಐಸಿಯುನಲ್ಲಿ ಶೇ.2.41 ಸಕ್ರಿಯ ಕೋವಿಡ್-19 ರೋಗಿಗಳು, ವೆಂಟಿಲೇಟರ್ಗಳಲ್ಲಿ ಶೇ.0.38 ಮತ್ತು ಆಮ್ಲಜನಕದ ಬೆಂಬಲದ ಮೇಲೆ ಶೇ.1.88% ರೋಗಿಗಳಿದ್ದಾರೆ ಎಂದು ಅವರು ಹೇಳಿದರು. “ದೇಶದಲ್ಲಿ ಪರೀಕ್ಷಾ ಸಾಮರ್ಥ್ಯ ಹೆಚ್ಚಾಗಿದೆ ಮತ್ತು 332 ಸರ್ಕಾರಿ ಪ್ರಯೋಗಾಲಯಗಳು ಮತ್ತು 121 ಖಾಸಗಿ ಪ್ರಯೋಗಾಲಯಗಳಲ್ಲಿ ದಿನಕ್ಕೆ 95,000 ಪರೀಕ್ಷೆಗಳನ್ನು ಮಾಡಲಾಗುತ್ತಿದ್ದು, ಒಟ್ಟಾರೆಯಾಗಿ, ಇದುವರೆಗೆ 15,25,631 ಕೋವಿಡ್-19 ಪರೀಕ್ಷೆಗಳನ್ನು ಮಾಡಲಾಗಿದೆ. ” ಎಂದು ಸಚಿವರು ತಿಳಿಸಿದರು.
ವಿವರಗಳಿಗೆ: https://pib.gov.in/PressReleseDetail.aspx?PRID=1622545
ತಮಿಳುನಾಡು, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಕೋವಿಡ್-19 ನಿರ್ವಹಣೆಗೆ ಕೈಗೊಂಡ ಸಿದ್ಧತೆ ಮತ್ತು ನಿಗ್ರಹ ಕ್ರಮಗಳನ್ನು ಪರಿಶೀಲಿಸಿದ ಡಾ. ಹರ್ಷವರ್ಧನ್
“ಕೋವಿಡ್-19 ಸಾಂಕ್ರಾಮಿಕವನ್ನು ಎದುರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ಕೇಂದ್ರ ಮತ್ತು ರಾಜ್ಯಗಳ ಒಟ್ಟಾರೆ ಪ್ರಯತ್ನದಿಂದ ಹೆಚ್ಚಾಗುತ್ತಿರುವ ಕೋವಿಡ್ ಮೀಸಲು ಆಸ್ಪತ್ರೆಗಳು, ಐಸೋಲೇಷನ್ ಮತ್ತು ICU ಹಾಸಿಗೆಗಳಯ ಮತ್ತು ಕ್ವಾರಂಟೈನ್ ಅನ್ನು ಗುರುತಿಸಿ, ಅಭಿವೃದ್ಧಿಪಡಿಸಲಾಗಿರುವುದರಿಂದ ನಾವು ಯಾವುದೇ ಸಂಭವನೀಯತೆಯನ್ನು ಎದುರಿಸಲು ಉತ್ತಮವಾಗಿ ಸಿದ್ಧವಾಗಿದ್ದೇವೆ. ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು/ ಕೇಂದ್ರ ಸಂಸ್ಥೆಗಳಿಗೆ ಸಾಕಷ್ಟು ಸಂಖ್ಯೆಯ ಮುಖಗವಸುಗಳು ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳು, ವೆಂಟಿಲೇಟರ್ ಇತ್ಯಾದಿಗಳನ್ನು ಒದಗಿಸುವ ಮೂಲಕ ಕೇಂದ್ರವು ಸಹಕರಿಸುತ್ತಿದೆ ಎಂದು ಡಾ. ಹರ್ಷವರ್ಧನ್ ಹೇಳಿದರು.
ವಿವರಗಳಿಗೆ: https://pib.gov.in/PressReleseDetail.aspx?PRID=1622343
ಶ್ರೀ ಅಮಿತ್ ಶಾ ಅವರಿಂದ ಎಲ್ಲಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಮಹಾ ನಿರ್ದೇಶಕರ ಪರಿಶೀಲನಾ ಸಭೆ
ಕೋವಿಡ್-19 ನಿರ್ವಹಣೆಯ ಈ ಕಠಿಣ ಪರಿಸ್ಥಿತಿಯಲ್ಲಿ ಸಿಎಪಿಎಫ್ಗಳ ಕಾರ್ಯವನ್ನು ಕೇಂದ್ರ ಗೃಹ ಸಚಿವರು ಶ್ಲಾಘಿಸಿದರು. ಕೋವಿಡ್-19 ನಿಗ್ರಹದ ಬಗ್ಗೆ ಮೋದಿ ಸರ್ಕಾರ ಕಾಳಜಿ ವಹಿಸುತ್ತಿಲ್ಲ. ಎಲ್ಲಾ ಸಿಎಪಿಎಫ್ಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಶ್ರೀ ಶಾ ಹೇಳಿದರು. ಸಭೆಯಲ್ಲಿ, ಪ್ರತಿ ಸಿಎಪಿಎಫ್ಗಳು ರೋಗವನ್ನು ತಡೆಗಟ್ಟುವ ಸಲುವಾಗಿ ಕೈಗೊಂಡ ನವೀನ ಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು. ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಬಗ್ಗೆ ಜಾಗೃತಿ ಮತ್ತು ತರಬೇತಿಯನ್ನು ನೀಡುವುದು; ಮೆಸ್ನಲ್ಲಿನ ವ್ಯವಸ್ಥೆಗಳನ್ನು ಬದಲಾಯಿಸುವುದು ಮತ್ತು ಬ್ಯಾರಕ್ಗಳಲ್ಲಿ ಉಳಿಯುವ ಸೌಲಭ್ಯಗಳು; ಆಯುಷ್ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮತ್ತು ಭದ್ರತಾ ಸಿಬ್ಬಂದಿಯ ವಯಸ್ಸು ಮತ್ತು ಅವರ ಆರೋಗ್ಯ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ಸಿಬ್ಬಂದಿ ನಿರ್ವಹಣೆಯನ್ನು ಖಾತರಿಪಡಿಸುವುದು ಮುಂತಾದ ಸಲಹೆಗಳನ್ನು ಚರ್ಚಿಸಲಾಯಿತು.
ವಿವರಗಳಿಗೆ: https://pib.gov.in/PressReleseDetail.aspx?PRID=1622405
ಇಟಲಿ ಪ್ರಧಾನಿ ಶ್ರೀ ಗೈಸೆಪೆ ಕಾಂಟೆ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಟಲಿ ಪ್ರಧಾನಿ ಶ್ರೀ ಗೈಸೆಪೆ ಕಾಂಟೆ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಇಟಲಿಯಲ್ಲಿ ಆಗಿರುವ ಪ್ರಾಣಹಾನಿಯ ಬಗ್ಗೆ ಪ್ರಧಾನಿಯವರು ಸಂತಾಪ ಸೂಚಿಸಿದರು. ಸಾಂಕ್ರಾಮಿಕ ರೋಗದಿಂದ ಉಂಟಾಗುವ ಆರೋಗ್ಯ ಮತ್ತು ಆರ್ಥಿಕ ಪರಿಣಾಮವನ್ನು ತಮ್ಮದೇ ದೇಶಗಳಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಪರಿಹರಿಸಲು ಅಗತ್ಯವಾದ ಕ್ರಮಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಇಟಲಿಗೆ ಅಗತ್ಯ ಔಷಧಿಗಳು ಮತ್ತು ಇತರ ವಸ್ತುಗಳನ್ನು ಒದಗಿಸುವಲ್ಲಿ ಭಾರತದ ಅನಿಯಂತ್ರಿತ ಬೆಂಬಲದ ಭರವಸೆಯನ್ನು ಪ್ರಧಾನಿಯವರು ಶ್ರೀ ಕಾಂಟೆಗೆ ನೀಡಿದರು.
ವಿವರಗಳಿಗೆ: https://pib.gov.in/PressReleseDetail.aspx?PRID=1622470
ಲಾಕ್ ಡೌನ್ ನಿಂದಾಗಿ ಉದ್ಯಮ ಮತ್ತು ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ತಗ್ಗಿಸಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ
ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉದ್ಭವಿಸಿರುವವ ಪರಿಸ್ಥಿತಿಯನ್ನು ಚರ್ಚಿಸಲು ಮತ್ತು ಕಾರ್ಮಿಕರ ಮೇಲೆ ಮತ್ತು ಆರ್ಥಿಕತೆಯ ಮೇಲೆ ಅದರ ಪ್ರಭಾವವನ್ನು ಕಡಿಮೆ ಮಾಡಲು ಕಾರ್ಯತಂತ್ರಗಳು ಮತ್ತು ನೀತಿ ಉಪಕ್ರಮಗಳನ್ನು ರೂಪಿಸಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಸಾಮಾಜಿಕ ಪಾಲುದಾರರೊಂದಿಗೆ ಮಾತುಕತೆ ನಡೆಸಿದೆ. ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ (ಸ್ವತಂತ್ರ) ಶ್ರೀ ಸಂತೋಷ್ ಕುಮಾರ್ ಗಂಗ್ವಾರ್ ಅವರು ುದ್ಯಮಿಗಳ ಸಂಘಟನೆಗಳೊಂದಿಗೆ ವೆಬಿನಾರ್ ನಡೆಸಿದರು. ತಮ್ಮ ಸಚಿವಾಲಯವು ಉದ್ಯಮದ ಅವಶ್ಯಕತೆಗಳ ಬಗ್ಗೆ ಸಹಾನುಭೂತಿ ಹೊಂದಿದೆ ಮತ್ತು ಉದ್ಯಮದ ಪುನಶ್ಚೇತನ ಮತ್ತು ಆರ್ಥಿಕತೆಯನ್ನು ಪುನಃ ತೆರೆಯಲು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಪ್ರಯತ್ನಿಸುತ್ತದೆ ಎಂದು ಅವರು ಹೇಳಿದರು. ಕೈಗಾರಿಕೆ, ವಿಶೇಷವಾಗಿ ಎಂಎಸ್ಎಂಇ ವಲಯವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಇತರ ಸಂಬಂಧಿತ ಸಚಿವಾಲಯಗಳನ್ನು ಸಂಪರ್ಕಿಸುತ್ತಿದೆ ಎಂದು ಅವರು ಹೇಳಿದರು.
ವಿವರಗಳಿಗೆ: https://pib.gov.in/PressReleseDetail.aspx?PRID=1622329
ಕೆಲವು ಉದ್ದಿಮೆಗಳ ನೋಂದಣಿ, ಅನುಮೋದನೆ ಮತ್ತಿತರ ಹೊಸ ಪ್ರಕ್ರಿಯೆಗಳ ಅವಧಿಯನ್ನು 2020 ರ ಅಕ್ಟೋಬರ್ 1ರವರೆಗೆ ಮುಂದೂಡಲಾಗಿದೆ
ಮಾನವೀಯ ಹಾಗೂ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ, ಸಿಬಿಡಿಟಿಯು ಕೆಲವು ಉದ್ದಿಮೆಗಳಿಗೆ ಅನುಮೋದನೆ/ನೋಂದಣಿ ಮತ್ತು ಅಧಿಸೂಚನೆಗಳ ಕುರಿತಂತೆ ಹೊಸ ಪ್ರಕ್ರಿಯೆಯನ್ನು 2020ರ ಅಕ್ಟೋಬರ್ 1 ರವರೆಗೆ ಮುಂದೂಡಿದೆ. ಅದರ ಅನುಸಾರ, ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ ಅಡಿಯಲ್ಲಿ 10 (23ಸಿ), 12 ಎಎ, 35 ಮತ್ತು 80 ಜಿ ಅಡಿಯಲ್ಲಿ ಅನಮೋದಿತ ುದ್ದಿಮೆಗಳ ನೋಂದಣಿ ಮತ್ತು ಅಧಿಸೂಚನೆಗಳನ್ನು 2020ರ ಅಕ್ಟೋಬರ್ 1 ರೊಳಗೆ ಅಂದರೆ ಮೂರು ತಿಂಗಳಲ್ಲಿ ಮಾಹಿತಿ ನೀಡುವ ಅಗತ್ಯವಿತ್ತು. ಆ ಅವಧಿಯನ್ನು 2020ರ ಡಿಸೆಂಬರ್ 31ರ ವರೆಗೆ ಮುಂದೂಡಲಾಗಿದೆ. ಅಲ್ಲದೆ ಹೊಸ ಉದ್ದಿಮೆಗಳಿಗೆ ಅನುಮೋದನೆ/ನೋಂದಣಿ ಮತ್ತು ಅಧಿಸೂಚನೆ ಹೊರಡಿಸುವ ಪ್ರಕ್ರಿಯೆಯಲ್ಲಿ ತಿದ್ದುಪಡಿ ಮಾಡಿ, ಅವುಗಳಿಗೂ ಸಹ 2020ರ ಅಕ್ಟೋಬರ್ 1 ಅನ್ವಯವಾಗುವಂತೆ ಮಾಡಲಾಗಿದೆ.
ವಿವರಗಳಿಗೆ: https://pib.gov.in/PressReleseDetail.aspx?PRID=1622485
ಆದಾಯ ತೆರಿಗೆ ಕಾಯ್ದೆ, 1961 ರ ಅಡಿಯಲ್ಲಿ ವಾಸ್ತವ್ಯಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ
ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 6 ರಲ್ಲಿ ವ್ಯಕ್ತಿಯ ನಿವಾಸಕ್ಕೆ ಸಂಬಂಧಿಸಿದಂತೆ ಕೆಲವು ನಿಬಂಧನೆಗಳಿವೆ. ಒಬ್ಬ ವ್ಯಕ್ತಿಯು ಭಾರತದಲ್ಲಿ ವಾಸಿಸುತ್ತಿದ್ದಾನೆಯೇ ಅಥವಾ ಅನಿವಾಸಿಯೇ ಅಥವಾ ಸಾಮಾನ್ಯ ನಿವಾಸಿಯಲ್ಲವೇ, ವ್ಯಕ್ತಿಯು ಒಂದು ವರ್ಷದಲ್ಲಿ ಭಾರತದಲ್ಲಿ ಇರುವ ಅವಧಿಯನ್ನು ಅವಲಂಬಿಸಿರುತ್ತದೆ. ಭಾರತದಲ್ಲಿ ಅನಿವಾಸಿ ಅಥವಾ ಸಾಮಾನ್ಯ ನಿವಾಸಿಯಲ್ಲಸ ಸ್ಥಿತಿಯನ್ನು ಕಾಪಾಡಿಕೊಳ್ಳುವ ಉದ್ದೆಶದ, ಒಂದು ನಿರ್ದಿಷ್ಟ ಅವಧಿಗೆ ಹಿಂದಿನ 2019-20ರ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಮತ್ತು ಹಿಂದಿನ ವರ್ಷದ ಅಂತ್ಯಕ್ಕೂ ಮೊದಲು ಭಾರತವನ್ನು ತೊರೆಯಲು ಉದ್ದೇಶಿಸಿದ್ದ ಹಲವಾರು ವ್ಯಕ್ತಿಗಳಿಂದ ಮನವಿಗಳನ್ನು ಸ್ವೀಕರಿಸಲಾಗಿದೆ. ಆದರೆ ಕೋವಿಡ್-19 ಸಾಂಕ್ರಾಮಿಕದ ಕಾರಣ ಲಾಕ್ಡೌನ್ ಘೋಷಣೆ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಸ್ಥಗಿತದಿಂದಾಗಿ, ಅವರು ಭಾರತದಲ್ಲೇ ಹೆಚ್ಚಿನ ಅವಧಿಗೆ ತಮ್ಮ ವಾಸ್ತವ್ಯವನ್ನು ಮಾಡಬೇಕಾಗಿದೆ. ಇದರಿಂದ ಯಾವುದೇ ಉದ್ದೇಶವಿಲ್ಲದೆ ಅವರು ಅನೈಚ್ಚಿಕವಾಗಿ ಭಾರತೀಯ ನಿವಾಸಿಗಳಾಗಬಹುದು ಎಂದು ಕಳವಳ ವ್ಯಕ್ತಪಡಿಸಲಾಗಿದೆ. ಅಂತಹ ಸಂದರ್ಭಗಳಲ್ಲಿ ಅವರ ಸಮಸ್ಯೆಗಳನ್ನು ತಪ್ಪಿಸುವ ಸಲುವಾಗಿ, ಸಿಬಿಡಿಟಿ ಈಗ ಈ ನಿಟ್ಟಿನಲ್ಲಿ ಸ್ಪಷ್ಟೀಕರಣವನ್ನು ನೀಡಿದೆ.
ವಿವರಗಳಿಗೆ: https://pib.gov.in/PressReleseDetail.aspx?PRID=1622487
ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ಸಮಾಜದ ಎಲ್ಲರಂತೆ ಸಮಾನ ಕೊಡುಗೆ ನೀಡುತ್ತಿವೆ: ಶ್ರೀ ಮುಖ್ತಾರ್ ಅಬ್ಬಾಸ್ ನಖ್ವಿ
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ತರಬೇತಿ ಪಡೆದ 1500 ಕ್ಕೂ ಹೆಚ್ಚು ಆರೋಗ್ಯ ಸಹಾಯಕರು ಕೊರೊನಾ ರೋಗಿಗಳ ಚಿಕಿತ್ಸೆ ಮತ್ತು ಯೋಗಕ್ಷೇಮಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಶ್ರೀ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ದೇಶಾದ್ಯಂತದ ವಿವಿಧ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ಸಹಾಯ ಮಾಡುವ ಈ ಆರೋಗ್ಯ ರಕ್ಷಣಾ ಸಹಾಯಕರಲ್ಲಿ ಶೇ.50 ರಷ್ಟು ಬಾಲಕಿಯರು ಸೇರಿದ್ದಾರೆ ಎಂದು ಶ್ರೀ ನಖ್ವಿ ಹೇಳಿದರು. ವಿವಿಧ ಧಾರ್ಮಿಕ, ಸಾಮಾಜಿಕ ಮತ್ತು ಶಿಕ್ಷಣ ಸಂಸ್ಥೆಗಳ ಬೆಂಬಲದೊಂದಿಗೆ ದೇಶಾದ್ಯಂತ ವಿವಿಧ ವಕ್ಫ್ ಮಂಡಳಿಗಳು 51 ಕೋಟಿ ರೂ.ಗಳನ್ನು ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ಕೊರೊನಾ ಪರಿಹಾರ ನಿಧಿಗೆ ನೀಡಿವೆ ಎಂದು ಶ್ರೀ ನಖ್ವಿ ಹೇಳಿದರು.
ವಿವರಗಳಿಗೆ: https://pib.gov.in/PressReleseDetail.aspx?PRID=1622489
ದೇಶಾದ್ಯಂತ ಅಗತ್ಯ ಮತ್ತು ವೈದ್ಯಕೀಯ ಸಾಮಗ್ರಿಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು 490 ಲೈಫ್ಲೈನ್ ಉಡಾನ್ ವಿಮಾನಗಳು ಇದುವರೆಗೆ ಕಾರ್ಯನಿರ್ವಹಿಸಿವೆ
ಏರ್ ಇಂಡಿಯಾ, ಅಲೈಯನ್ಸ್ ಏರ್, ಐಎಎಫ್ ಮತ್ತು ಖಾಸಗಿ ವಾಹಕಗಳು ಲೈಫ್ಲೈನ್ ಉಡಾನ್ ಅಡಿಯಲ್ಲಿ 490 ವಿಮಾನಗಳನ್ನು ನಿರ್ವಹಿಸಿವೆ. 2020 ರ ಮೇ 8 ರಂದು ಸಾಗಿಸಲಾದ ಸರಕು 6.32 ಟನ್ ಆಗಿದ್ದು, ಒಟ್ಟು 848.42 ಟನ್ಗಳಷ್ಟು ಸರಕುಗಳನ್ನು ಸಾಗಿಸಲಾಗಿದೆ. ಅಲೈಯನ್ಸ್ ಏರ್ 2020 ರ ಮೇ 8 ರಂದು 2 ವಿಮಾನಗಳ ಹಾರಾಟ ನಡೆಸಿತು ಮತ್ತು ಐಎಎಫ್ 8 ವಿಮಾನಗಳ ಕಾರ್ಯಾಚರಣೆ ನಡೆಸಿತು. ಇಲ್ಲಿಯವರೆಗೆ ಲೈಫ್ಲೈನ್ ಉಡಾನ್ ವಿಮಾನಗಳು 4,73,609 ಕಿ.ಮೀ.ಗಿಂತ ಹೆಚ್ಚು ವೈಮಾನಿಕ ದೂರವನ್ನು ಕ್ರಮಿಸಿವೆ. ಕೋವಿಡ್-19 ವಿರುದ್ಧ ಭಾರತದ ಯುದ್ಧವನ್ನು ಬೆಂಬಲಿಸಲು ಅಗತ್ಯ ವೈದ್ಯಕೀಯ ಸರಕುಗಳನ್ನು ದೂರ ಪ್ರದೇಶಗಳಿಗೆ ಸಾಗಿಸಲು 'ಲೈಫ್ಲೈನ್ ಉಡಾನ್' ವಿಮಾನಗಳನ್ನು ನಾಗರಿಕ ವಿಮಾನಯಾನ ಸಚಿವಾಲಯ ನಿರ್ವಹಿಸುತ್ತಿದೆ. ಪವನ್ ಹನ್ಸ್ ಲಿಮಿಟೆಡ್ ಸೇರಿದಂತೆ ಹೆಲಿಕಾಪ್ಟರ್ ಸೇವೆಗಳು ಜಮ್ಮು ಮತ್ತು ಕಾಶ್ಮೀರ, ಲಡಾಖ್, ದ್ವೀಪಗಳು ಮತ್ತು ಈಶಾನ್ಯ ಪ್ರದೇಶದಲ್ಲಿ ನಿರ್ಣಾಯಕ ವೈದ್ಯಕೀಯ ಸರಕು ಮತ್ತು ರೋಗಿಗಳನ್ನು ಸಾಗಿಸುತ್ತಿವೆ. ಮೇ 8, 2020 ರವರೆಗೆ ಪವನ್ ಹನ್ಸ್ 8,001 ಕಿ.ಮೀ.ದೂರ ಕ್ರಮಿಸಿ 2.32 ಟನ್ ಸರಕುಗಳನ್ನು ಸಾಗಿಸಿದೆ.
ವಿವರಗಳಿಗೆ: https://pib.gov.in/PressReleseDetail.aspx?PRID=1622529
ಕೋವಿಡ್-19 ಸಾಂಕ್ರಾಮಿಕದಿಂದಾಗಿ ಆರ್ಸಿಎಫ್ ಎದುರಿಸುತ್ತಿರುವ ಸವಾಲುಗಳ ಹೊರತಾಗಿಯೂ, ಎನ್ಪಿಕೆ ರಸಗೊಬ್ಬರಗಳ ಮಾರಾಟದಲ್ಲಿ ಶೇ 35 ರಷ್ಟು ಹೆಚ್ಚಳವಾಗಿದೆ
ವಿವರಗಳಿಗೆ: https://pib.gov.in/PressReleseDetail.aspx?PRID=1622589
ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ
- ಅರುಣಾಚಲ ಪ್ರದೇಶ: ಕೋವಿಡ್ 19 ಹರಡುವುದನ್ನು ತಡೆಗಟ್ಟುವ ಸಲುವಾಗಿ ರೋಗಲಕ್ಷಣವಿಲ್ಲದ ವ್ಯಕ್ತಿಗಳು ಸೇರಿದಂತೆ ರಾಜ್ಯಕ್ಕೆ ಪ್ರವೇಶಿಸುವ ಪ್ರತಿಯೊಬ್ಬ ವ್ಯಕ್ತಿಗೂ ಕಡ್ಡಾಯ ಪರೀಕ್ಷೆ ಮಾಡುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.
- ಮಣಿಪುರ: ಕೋಲ್ಕತ್ತಾದ ಐದು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಮಣಿಪುರದ 22 ದಾದಿಯರು ರಾಜ್ಯವನ್ನು ತಲುಪಿದ್ದು, ಅವರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ.
- ಮೇಘಾಲಯ: ಮೇಘಾಲಯದ ಶಿಲ್ಲಾಂಗ್ನಲ್ಲಿ ಇನ್ನೊಬ್ಬ ವ್ಯಕ್ತಿಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಅವರು ಹಿಂದಿನ ರೋಗಿಯ ಅದೇ ಮನೆಯಲ್ಲಿ ಕೆಲಸ ಮಾಡುದ್ದಿದ್ದರು, ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿದೆ. ವ್ಯಕ್ತಿ ಆರೋಗ್ಯವಾಗಿದ್ದಾರೆ ಮತ್ತು ಯಾವುದೇ ರೋಗಲಕ್ಷಣಗಳು ಕಾಣಿಸುತ್ತಿರಲಿಲ್ಲ ಎಂದು ಮೇಘಾಲಯ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
- ಮಿಜೋರಾಂ: ಮಿಜೋರಾಂ ರಾಜ್ಯವು ಕೋವಿಡ್ -19 ಮುಕ್ತವಾಗಿದ್ದಕ್ಕಾಗಿ ಮತ್ತು ಶಿಶು ಮರಣ ಪ್ರಮಾಣ (ಐಎಂಆರ್) ನಲ್ಲಿ 10 ಅಂಕಗಳ ಕುಸಿತವಾಗಿರುವುದಕ್ಕಾಗಿ ಅಲ್ಲಿನ ಆರೋಗ್ಯ ಸಚಿವರಿಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅಭಿನಂದಿಸಿದ್ದಾರೆ.
- ನಾಗಾಲ್ಯಾಂಡ್: ಕೋವಿಡ್ ಅಲ್ಲದ ಗಂಭೀರ ಕಾಯಿಲೆ ಕುರಿತಂತೆ ರೋಗಿಯ ಅರ್ಜಿಯಲ್ಲಿ ಉಲ್ಲೇಖಿತ ಆಸ್ಪತ್ರೆಯ ಪ್ರಮಾಣಪತ್ರ ಲಗತ್ತಿಸಿದ್ದಲ್ಲಿ ಮಾತ್ರವೇ ರಾಜ್ಯದ ಹೊರಗಿನ ರೋಗಿಗಳಿಗೆ ಅನುಮತಿಸಲಾಗುವುದು ಎಂದು ಸರ್ಕಾರ ಹೇಳಿದೆ. ನಾಗಾಲ್ಯಾಂಡ್ ಯೋಜನಾ ಸಚಿವರು ರಾಜ್ಯದ ಹೊರಗೆ ಸಿಲುಕಿರುವ 33 ಜನರು ಇ-ಪಾಸ್ ಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಮತ್ತು ಇನ್ನೂ 7,015 ಜನರು ಹಿಂದಿರುಗಲು ವ್ಯವಸ್ಥೆ ಮಾಡುವಂತೆ ಸರ್ಕಾರವನ್ನು ಕೋರಿದ್ದಾರೆ.
- ಸಿಕ್ಕಿಂ: ಕೊರೊನಾ ವೈರಸ್ ಸ್ಫೋಟದ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕತೆಯ ಪುನರುಜ್ಜೀವನದ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಯವರು ರಾಜ್ಯಪಾಲ ಶ್ರೀ ಗಂಗಾ ಪ್ರಸಾದ್ ಅವರನ್ನು ಭೇಟಿಯಾಗಿದ್ದರು; ಕಠಿಣ ಕ್ರಮಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದರು.
- ತ್ರಿಪುರ: ಇತರ 11 ರಾಜ್ಯಗಳಲ್ಲಿ ಸಿಲುಕಿರುವ 17,000 ತ್ರಿಪುರಾ ಜನರು ರಾಜ್ಯಕ್ಕೆ ಮರಳಲು ಆನ್ ಲೈನ್ ಪೋರ್ಟಲ್ ಮೂಲಕ ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ ತ್ರಿಪುರದಿಂದ 33,000 ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ವಾಪಸ್ ಕಳುಹಿಸಲಾಗುವುದು.
- ಮಹಾರಾಷ್ಟ್ರ: ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ 19,063 ಪ್ರಕರಣಗಳಿವೆ, 1,089 ಜನರಲ್ಲಿ ಸೋಂಕು ದೃಢಪಟ್ಟಿದೆ. ವೈರಸ್ ನಿಂದಾಗಿ ಕಳೆದ 24 ಗಂಟೆಗಳಲ್ಲಿ 37 ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ ಒಟ್ಟು ಸಾವಿನ ಸಂಖ್ಯೆ 731 ಕ್ಕೆ ತಲುಪಿದೆ. ಮುಂಬೈ ಕಳೆದ 24 ಗಂಟೆಗಳಲ್ಲಿ 748 ಹೊಸ ಕರೋನ ವೈರಸ್ ಪ್ರಕರಣಗಳು ವರದಿಯಾಗಿವೆ. ನಗರದ ಒಟ್ಟು ಪ್ರಕರಣಗಳ ಸಂಖ್ಯೆ 11,967 ಕ್ಕೆ ಏರಿದೆ. ಮಹಾರಾಷ್ಟ್ರದಾದ್ಯಂತ, 714 ಪೊಲೀಸ್ ಸಿಬ್ಬಂದಿಯಲ್ಲಿ ಸಹ ಸೋಂಕು ದೃಢಪಟ್ಟಿದೆ.
- ಗುಜರಾತ್: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಅವರು ಇಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿಯಾಗಿ ಕೋವಿಡ್ -19 ಚಿಕಿತ್ಸಾ ಶಿಷ್ಟಾಚಾರ ಕುರಿತು ಸಲಹೆ ನೀಡಿದರು. ಏತನ್ಮಧ್ಯೆ, ಗುಜರಾತ್ ನಲ್ಲಿ ಇನ್ನೂ 24 ಸಾವು ಸಂಭವಿಸಿದೆ, ಒಟ್ಟಾರೆ ಸಾವಿನ ಸಂಖ್ಯೆ 449 ಕ್ಕೆ ತಲುಪಿದೆ, ಒಟ್ಟು ಕೋವಿಡ್ 19 ಸೋಂಕು ದೃಢಪಟ್ಟ ಪ್ರಕರಣಗಳು 7,403 ಆಗಿದ್ದು, ಮಹಾರಾಷ್ಟ್ರದ ನಂತರ ದೇಶದಲ್ಲಿ ಎರಡನೇ ಅತಿ ಹೆಚ್ಚು ಸೋಂಕಿತರ ರಾಜ್ಯವಾಗಿದೆ.
- ರಾಜಸ್ಥಾನ: ರಾಜಸ್ಥಾನದಲ್ಲಿ 57 ಹೊಸ ಕರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು 3,636 ಪ್ರಕರಣಗಳು ವರದಿಯಾದಂತಾಗಿದೆ. ಈ ದಿನಾಂಕದವರೆಗೆ ಸೋಂಕಿತರ ಪೈಕಿ 1,916 ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು 101 ಮಂದಿ ಸಾವಿಗೀಡಾಗಿದ್ದಾರೆ.
- ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಇಂದು ಬೆಳಗ್ಗೆ 8:00 ರ ವೇಳೆಗೆ 89 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ವರದಿಯಾದ ಪ್ರಕರಣಗಳು 3,341 ಕ್ಕೆ ಏರಿಕೆಯಾಗಿದೆ. ಈವರೆಗೆ ಸೋಂಕಿತರ ಪೈಕಿ 1,349 ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು 200 ಮಂದಿ ಸಾವಿಗೀದ್ದಾರೆ. ಮೂರು ದಿನಗಳ ಕಾಲದಲ್ಲಿ, ಮಧ್ಯಪ್ರದೇಶದಲ್ಲಿ ಹೊಸ ಸೋಂಕಿನ ಪ್ರಕರಣಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಚೇತರಿಸಿಕೊಂಡವರೇ ಹೆಚ್ಚಾಗಿದ್ದಾರೆ.
- ಛತ್ತೀಸಗಢ: ಕೋವಿಡ್ 19 ಸಾಂಕ್ರಾಮಿಕ ರೋಗದ ನಂತರದ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಮುಖ್ಯಮಂತ್ರಿ ಶ್ರೀ ಭೂಪೇಶ್ ಭಾಗೆಲ್ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು 30,000 ಕೋಟಿ ರೂ.ಪ್ಯಾಕೇಜ್ ಗೆ ಬೇಡಿಕೆ ಇಟ್ಟಿದ್ದಾರೆ. 60 ಸೋಂಕಿನ ಪ್ರಕರಣಗಳು ವರದಿಯಾಗಿವೆ ಮತ್ತು ಯಾವುದೇ ಸಾವು ಸಂಭವಿಸಿಲ್ಲ. ಛತ್ತೀಸ್ ಗಢ ಭಾರತದಲ್ಲಿ ಕಡಿಮೆ ಕೋವಿಡ್ ಬಾಧಿತ ರಾಜ್ಯಗಳಲ್ಲಿ ಒಂದಾಗಿದೆ.
- ಕೇರಳ: ಕೆಂಪು ವಲಯ ಪ್ರದೇಶಗಳನ್ನು ಹೊರತುಪಡಿಸಿ ಇತರ ರಾಜ್ಯಗಳಿಂದ ಹಿಂದಿರುಗಿದ ಜನರಿಗೆ ಕೇರಳ ಸರ್ಕಾರ ಪಾಸ್ ನೀಡುವುದನ್ನು ಪುನರಾರಂಭಿಸಿದೆ. ಪಾಸ್ ಗಳಿಲ್ಲದ ಅನೇಕ ಕೇರಳಿಗರು ರಾಜ್ಯದ ಗಡಿ ಜಿಲ್ಲೆಗಳ ಚೆಕ್ ಪೋಸ್ಟ್ ಗಳಲ್ಲಿ ಸಿಲುಕಿಕೊಂಡಿದ್ದಾರೆ. ತಮಿಳುನಾಡಿನ ತಿರುವಳ್ಳೂರಿನ ಕೆಂಪು ವಲಯ ಜಿಲ್ಲೆಯಿಂದ ಮರಳಿದ ಮತ್ತು ಕ್ವಾರಂಟೈನ್ ತಪ್ಪಿಸುತ್ತಿರುವ 34 ವಿದ್ಯಾರ್ಥಿಗಳನ್ನು ಗುರುತಿಸಲು ಕೊಟ್ಟಾಯಂ ಜಿಲ್ಲಾಡಳಿತ ಕ್ರಮಗಳನ್ನು ಪ್ರಾರಂಭಿಸಿದೆ. ಮಸ್ಕಟ್, ಕುವೈತ್ ಮತ್ತು ದೋಹಾದಿಂದ ಇನ್ನೂ ಮೂರು ವಿಮಾನಗಳು ವಂದೇ ಭಾರತ್ ಮಿಷನ್ ಮೂಲಕ ಇಂದು ರಾತ್ರಿ ಕೊಚ್ಚಿಗೆ ಬರಲಿವೆ. ಕೋವಿಡ್ -19 ರ ಒಂದು ಪ್ರಕರಣ ಮಾತ್ರ ನಿನ್ನೆ ವರದಿಯಾಗಿದೆ. 10 ಮಂದಿ ಚೇತರಿಸಿಕೊಂಡಿದ್ದಾರೆ. ಕೇವಲ 16 ರೋಗಿಗಳು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.
- ತಮಿಳುನಾಡು: ಮದ್ಯವನ್ನು ಅಂಗಡಿಯಲ್ಲಿ ಮಾರುವುದನ್ನು ತಡೆಹಿಡಿದ ಹೈಕೋರ್ಟ್ ಆದೇಶದ ವಿರುದ್ಧ ರಾಜ್ಯವು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ವಿದ್ಯುತ್ ಕಾಯ್ದೆಗೆ ತಿದ್ದುಪಡಿ ಸ್ಥಗಿತಗೊಳಿಸುವಂತೆ ಪ್ರಧಾನಿ ಮೋದಿಯವರನ್ನು ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ. 359 ಪ್ರಯಾಣಿಕರನ್ನು ಹೊತ್ತು ದುಬೈನಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಎರಡು ಏರ್ ಇಂಡಿಯಾ ವಿಮಾನಗಳು ಇಂದು ಮುಂಜಾನೆ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದವು. 168 ಪ್ರಯಾಣಿಕರೊಂದಿಗೆ ಮಲೇಷ್ಯಾದಿಂದ ಮತ್ತೊಂದು ವಿಮಾನ ಇಂದು ತಿರುಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದೆ. ನಿನ್ನೆ ತನಕ ಒಟ್ಟು ಕೋವಿಡ್ ಪ್ರಕರಣಗಳು: 6009, ಸಕ್ರಿಯ ಪ್ರಕರಣಗಳು: 4361, ಸಾವು: 40, ಬಿಡುಗಡೆ: 1605. ಇದುವರೆಗೂ 1589 ಪ್ರಕರಣಗಳು ಕೊಯೆಂಬೆಡು ಮಾರುಕಟ್ಟೆಗೆ ಸಂಬಂಧಿಸಿದ್ದಾಗಿವೆ.
- ಕರ್ನಾಟಕ: ಇಂದು ರಾಜ್ಯದಲ್ಲಿ 36 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ; ಬೆಂಗಳೂರು 12, ಉತ್ತರ ಕನ್ನಡ 7, ದಾವಣಗೆರೆ 6, ಚಿತ್ರದುರ್ಗ, ಬೀದರ್ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ ಮೂರು ಮತ್ತು ತುಮಕೂರು ಮತ್ತು ವಿಜಯಪುರದಲ್ಲಿ ತಲಾ ಒಂದು. ಈವರೆಗೆ ಒಟ್ಟು ಸೋಂಕಿತ ಪ್ರಕರಣಗಳು 789. ಇಲ್ಲಿಯವರೆಗೆ 30 ಜನರು ಮೃತಪಟ್ಟಿದ್ದಾರೆ ಮತ್ತು 379 ಜನರು ಗುಣವಾಗಿ ಬಿಡುಗಡೆ ಹೊಂದಿದ್ದಾರೆ.
- ಆಂಧ್ರಪ್ರದೇಶ: ರಾಜ್ಯ ಅಕ್ರಮ ಮದ್ಯ ಮತ್ತು ಮರಳು ಕಳ್ಳ ಸಾಗಣೆಯನ್ನು ತಡೆಯಲು ವಿಶೇಷ ಜಾರಿ ಶಾಖೆಯನ್ನು ಸ್ಥಾಪಿಸುತ್ತಿದೆ. ಮದ್ಯದಂಗಡಿಗಳ ಸಂಖ್ಯೆಯನ್ನು 3500 ರಿಂದ 2,934 ಕ್ಕೆ ಸೀಮಿತಗೊಳಿಸುವ ಆದೇಶ ಹೊರಡಿಸಲಾಗಿದೆ. 43 ಕೋವಿಡ್ ಸೋಂಕು ದೃಢಪಟ್ಟ ಪ್ರಕರಣಗಳು ವರದಿಯಾಗಿದೆ, 45 ಜನರನ್ನು ಬಿಡುಗಡೆ ಮಾಡಲಾಗಿದೆ ಮತ್ತು ಕಳೆದ 24 ಗಂಟೆಗಳಲ್ಲಿ 8388 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಒಟ್ಟು ಪ್ರಕರಣಗಳು 1930 ಕ್ಕೆ ಏರಿವೆ. ಸಕ್ರಿಯ ಪ್ರಕರಣಗಳು: 999, ಗುಣಮುಖ: 887, ಸಾವು: 44. ಸೋಂಕಿತ ಪ್ರಕರಣಗಳಲ್ಲಿ ಪ್ರಮುಖವಾಗಿರುವ ಜಿಲ್ಲೆಗಳು: ಕರ್ನೂಲ್ (553), ಗುಂಟೂರು (376), ಕೃಷ್ಣ (338), ಅನಂತಪುರ (102).
- ತೆಲಂಗಾಣ: ಕೋವಿಡ್ 19 ರೋಗಿಗಳ ಮೇಲೆ ಪ್ಲಾಸ್ಮಾ ಥೆರಪಿ ಪ್ರಯೋಗಗಳನ್ನು ನಡೆಸಲು ಇಸಿಐ ಆಸ್ಪತ್ರೆ ಮತ್ತು ಗಾಂಧಿ ಆಸ್ಪತ್ರೆಗೆ ಆರು ತಿಂಗಳ ಕಾಲ ಐಸಿಎಂಆರ್ ಅನುಮತಿ ನೀಡಿದೆ. ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುವ ಜನರಿಗೆ ರಾಜ್ಯವು 1,000 ರೂ.ಗಳ ದಂಡ ವಿಧಿಸಲು ಪ್ರಾರಂಭಿಸಿದೆ. ಗಚಿಬೌಲಿಯ ನಿರ್ಮಾಣ ಸ್ಥಳದಲ್ಲಿ ವಲಸೆ ಕಾರ್ಮಿಕರ ಗುಂಪು ಪ್ರತಿಭಟನೆ ನಡೆಸಿ ಅವರನ್ನು ತಮ್ಮ ಊರುಗಳಿಗೆ ಕಳುಹಿಸಬೇಕೆಂದು ಒತ್ತಾಯಿಸಿದೆ. ಇಲ್ಲಿಯವರೆಗೆ ಒಟ್ಟು ಸೋಂಕಿನ ಪ್ರಕರಣಗಳು 1132; ಸಕ್ರಿಯ ಪ್ರಕರಣಗಳು: 376, ಸಾವು: 29, ಬಿಡುಗಡೆ: 727.
- ಚಂಡೀಗಢ: ಸಿಲುಕಿರುವ ಕಾರ್ಮಿಕರ ತವರು ರಾಜ್ಯಗಳೊಂದಿಗೆ ಸಂಪರ್ಕ ಮಾಡಿ, ಕಾರ್ಮಿಕರು ಮತ್ತು ಇತರ ವ್ಯಕ್ತಿಗಳನ್ನು ಅವರ ತವರು ರಾಜ್ಯಕ್ಕೆ ಕಳುಹಿಸಲು ವ್ಯವಸ್ಥೆ ಮಾಡುವಂತೆ ಕೇಂದ್ರಾಡಳಿತ ಪ್ರದೇಶ ಚಂಡೀಗಢದ ಆಡಳಿತಾಧಿಕಾರಿಯವರು, ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದ್ದಾರೆ. ಹೀಗೆ ತಮ್ಮ ರಾಜ್ಯಕ್ಕೆ ಹೋಗಲು ಬಯಸುವ ವ್ಯಕ್ತಿಗಳಿಗೆ ಅಗತ್ಯ ವೈದ್ಯಕೀಯ ತಪಾಸಣೆಯ ನಂತರ ಕಳುಹಿಸಲಾಗುತ್ತದೆ. ಸುಮಾರು 5,000 ಜನರು, ಹೆಚ್ಚಾಗಿ ಎನ್.ಆರ್.ಐಗಳು ಮತ್ತು ಚಂಡೀಗಢದ ನಿವಾಸಿಗಳು ವಿದೇಶದಿಂದ ವಿಮಾನದ ಮೂಲಕ ಹಿಂದಿರುಗುವ ನಿರೀಕ್ಷೆಯಿದೆ.
- ಪಂಜಾಬ್: ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಪಂಜಾಬ್ ಸರ್ಕಾರವು ಆಹಾರ ಮತ್ತು ಇತರ ಅಗತ್ಯ ಗೃಹೋಪಯೋಗಿ ವಸ್ತುಗಳ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಮತ್ತು ಖಾತರಿಪಡಿಸುವ ಸಲಹೆಯನ್ನು ನೀಡಿದೆ. ಸಾಮಾನ್ಯ ಸಲಹೆಯಲ್ಲಿ, ಅಂಗಡಿ ಮಾಲೀಕರು, ವಿತರಣಾ ಸಿಬ್ಬಂದಿ ಮತ್ತು ಗ್ರಾಹಕರು ಎಲ್ಲಾ ಸಮಯದಲ್ಲೂ ಬಟ್ಟೆಯ ಮಾಸ್ಕ್ ಧರಿಸಬೇಕೆಂದು ಪಂಜಾಬ್ ಸರ್ಕಾರ ನಿರ್ದೇಶಿಸಿದೆ. ದಿನಸಿ ಖರೀದಿ ಅಥವಾ ಆದೇಶದ ಪಡೆಯುವಾಗ ಸ್ವಲ್ಪ ಸಮಯವೇ ಆದರೂ ಮಾಸ್ಕ್ ಧರಿಸಬೇಕು. ಪಂಜಾಬ್ ಸರ್ಕಾರವು ಗ್ರಾಹಕರು/ ಬಳಕೆದಾರರಿಗೆ ನೀಡಿರುವ ನಿರ್ದಿಷ್ಟ ಸಲಹೆಯಲ್ಲಿ, ಅಗತ್ಯ ವಸ್ತುಗಳನ್ನು ಖರೀದಿಸಲು ಹೊರಡುವಾಗ ಬಟ್ಟೆಯ ಚೀಲಗಳನ್ನು ಒಯ್ಯುವಂತೆ ಸೂಚಿಸಿದೆ. ಬಟ್ಟೆಯ ಚೀಲವನ್ನು ಬಳಸಿದ ತಕ್ಷಣ ಸೋಪ್ ಮತ್ತು ನೀರಿನಿಂದ ಚೆನ್ನಾಗಿ ತೊಳೆಯಬೇಕು ಎಂದೂ ಹೇಳಿದೆ.
- ಹರಿಯಾಣ: ಹರಿಯಾಣ ಸರ್ಕಾರವು ತನ್ನ ಬದ್ಧತೆಯ ಪ್ರಕಾರ, ರಾಜ್ಯಕ್ಕೆ ಮರಳಲು ಉತ್ಸುಕರಾಗಿರುವ ವಲಸೆ ಕಾರ್ಮಿಕರನ್ನು ಮುಂದಿನ 7 ದಿನಗಳಲ್ಲಿ 5,000 ಬಸ್ಸುಗಳು ಮತ್ತು 100 ರೈಲುಗಳ ಮೂಲಕ ಉಚಿತವಾಗಿ ತಮ್ಮ ರಾಜ್ಯಗಳಿಗೆ ಕಳುಹಿಸಲಿದೆ. ಸಾರಿಗೆಯ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಪ್ರಸ್ತುತ ಸನ್ನಿವೇಶದಲ್ಲಿ, ಲಾಕ್ ಡೌನ್ ಸಮಯದಲ್ಲಿ ಪ್ರತಿ ವಲಸೆ ಕಾರ್ಮಿಕರಿಗೆ ಆಹಾರ ಮತ್ತು ಆಶ್ರಯಕ್ಕಾಗಿ ಸೂಕ್ತವಾದ ವ್ಯವಸ್ಥೆಗಳು ಇರಬೇಕು ಮತ್ತು ಯಾವುದೇ ವಲಸೆ ಕಾರ್ಮಿಕರು ತಾವು ಮನೆಯಿಂದ ಮೈಲಿ ದೂರದಲ್ಲಿದ್ದೇವೆ ಎಂದು ಭಾವಿಸಬಾರದು ಎಂದು ಜಿಲ್ಲಾಡಳಿತ ಸೇರಿದಂತೆ ಇಡೀ ಸರ್ಕಾರಿ ಯಂತ್ರಕ್ಕೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.
ಪಿ ಐ ಬಿ ವಾಸ್ತವ ಪರೀಶೀಲನೆ
***
(Release ID: 1622531)
Visitor Counter : 400
Read this release in:
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Tamil
,
Telugu
,
Malayalam