ರಕ್ಷಣಾ ಸಚಿವಾಲಯ

ಕೊರೊನಾ ಯೋಧರಿಗೆ ವಂದಿಸಿದ ಭಾರತ

Posted On: 02 MAY 2020 6:09PM by PIB Bengaluru

ಕೊರೊನಾ ಯೋಧರಿಗೆ ವಂದಿಸಿದ ಭಾರತ

 

ಕೊವಿಡ್ ಯೋಧರ ಸಹಾಯದೊಂದಿಗೆ ಭಾರತ, ಕೊರೊನಾ ವೈರಸ್ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತಿದೆ. ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಮಟ್ಟದಲ್ಲಿ ಜನರು ಮತ್ತು ಸರಕುಗಳು ಎರಡನ್ನೂ ಸಾಗಿಸುವ ಮೂಲಕ ಐಎಎಫ್, ಕೊರೊನಾ ತಡೆಗಟ್ಟುವ ರಾಷ್ಟ್ರದ ಪ್ರಯತ್ನಕ್ಕೆ ತನ್ನ ಕೊಡುಗೆಯನ್ನು ನೀಡುತ್ತಿದೆ. ವೈದ್ಯರು, ಪ್ಯಾರಾ-ಮೆಡಿಕ್ ಗಳು ಮತ್ತು ಕೊವಿಡ್ ಪರೀಕ್ಷೆಗಾಗಿ ಪ್ರಯೋಗಾಲಯಗಳನ್ನು ಸ್ಥಾಪಿಸುವ ಉಪಕರಣಗಳೂ ಸೇರಿದಂತೆ, 600 ಟನ್ ಗಳಿಗೂ ಹೆಚ್ಚು ವೈದ್ಯಕೀಯ ಸಾಮಗ್ರಿಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ವಿಮಾನದ ಮೂಲಕ ಸಾಗಿಸಲಾಗಿದೆ. ಕೊರೊನಾ ವಿರುದ್ಧದ ಹೋರಾಟವನ್ನು ಐಎಎಫ್ ಸಿಬ್ಬಂದಿ ಮುಂದುವರೆಸಿದ್ದಾರೆ. ಭಾರತದ ಎಲ್ಲ ಕೊರೊನಾ ಯೋಧರಿಗೆ ಕೃತಜ್ಞತೆ ಸಲ್ಲಿಸಲು, ಐಎಎಫ್ ತನ್ನ ಸಹ ಸಂಸ್ಥೆಗಳ ನೆರವಿನಿಂದ, ಭಾರತದ ಈ ವೀರ ಯೋಧರಿಗೆ ವಿಶಿಷ್ಠ ರೀತಿಯಲ್ಲಿ ಗೌರವ ಸಲ್ಲಿಸಲು ಯೋಜಿಸುತ್ತಿದೆ. ಕೊರೊನಾ ವೈರಸ್ ಬಿಕ್ಕಟ್ಟಿನ ಈ ಸಮಯದಲ್ಲಿ ದಣಿವರಿಯದೇ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಕೊವಿಡ್ ಯೋಧರಿಗೆ ವಿಮಾನ ಹಾರಾಟದ ಮೂಲಕ ಭಾರತೀಯ ವಾಯುಪಡೆ ಗೌರವ ಸಲ್ಲಿಸಲು ಯೋಜಿಸಿದೆ.

ಮೇ 03, 2020 ರಂದು, ಭಾರತೀಯ ವಾಯುಪಡೆ, ದೆಹಲಿ ಮತ್ತು ಎನ್ ಸಿ ಆರ್ ಪ್ರದೇಶಗಳಲ್ಲಿ ಹಲವಾರು ವಿಮಾನಗಳಿಂದ ಹಾರಟ ನಡೆಸುವ ಯೋಜನೆ ಹೊಂದಿದೆ. ಈ ಹಾರಾಟ ಚಟುವಟಿಕೆ ಐಎಎಫ್ ನ ತರಬೇತಿಯನ್ನೂ ಒಳಗೊಂಡಿದ್ದು ಕೊವಿಡ್-19 ಕ್ಕೆ ಸಂಬಂಧಿಸಿದ ಸರಕುಗಳನ್ನು ಸಾಗಿಸುವ ಸಾಗಾಣೆ ವಿಮಾನಗಳನ್ನು ಮತ್ತು ಹೆಲಿಕಾಪ್ಟರ್ ಗಳನ್ನೂ ಒಳಗೊಂಡಿದೆ.

ದೆಹಲಿಯಲ್ಲಿ ಕೊರೊನಾ ಯೋಧರಿಗೆ ವೈಮಾನಿಕ ಗೌರವ ಸಲ್ಲಿಸುವ ಕಾರ್ಯಕ್ರಮ ಬೆಳಗ್ಗೆ 10:00 ರಿಂದ 10:30 ರವರೆಗೆ ಆಯೋಜಿಸಲಾಗಿದೆ. ಸುಖೋಯ್-30 ಎಮ್ ಕೆ ಐ, ಮಿಗ್-29 ಮತ್ತು ಜಾಗ್ವಾರ್ ಯುದ್ಧ ವಿಮಾನಗಳು ರಾಜ್ ಪಥ್ ಮೇಲೆ ಹಾರಾಟ ನಡೆಸಲಿವೆ ನಂತರ ದೆಹಲಿಯನ್ನು ಪರಿಭ್ರಮಿಸಲಿವೆ. ದೆಹಲಿ ನಿವಾಸಿಗಳು ತಮ್ಮ ಮನೆಗಳ ಮಹಡಿಯ ಮೇಲಿಂದ ಇದನ್ನು ವೀಕ್ಷಿಸಬಹುದಾಗಿದೆ. ಇದರ ಜೊತೆಗೆ, ಸಿ-130 ಸಾರಿಗೆ ವಿಮಾನವೂ ಸಹ,  ಯುದ್ಧ ವಿಮಾನಗಳಂತೆಯೇ, ದೆಹಲಿ ಮತ್ತು ಎನ್ ಸಿ ಆರ್ ಪ್ರದೇಶಗಳಲ್ಲಿ ಪರಿಭ್ರಮಿಸಲಿದೆ. ವಾಯುಮಾರ್ಗದ ಸುರಕ್ಷತಾ ಕ್ರಮಗಳನ್ನು ಅದರಲ್ಲೂ ವಿಶೇಷವಾಗಿ ಹಕ್ಕಿಗಳ ಹಾರಾಟವನ್ನು ಗಮನದಲ್ಲಿಟ್ಟುಕೊಂಡು ವಿಮಾನವು ಅಂದಾಜು 500 ರಿಂದ 1000 ಮೀಟರ್ ಗಳ ಎತ್ತರದಲ್ಲಿ ಹಾರಾಟ ನಡೆಸಲಿವೆ.

ಇದರ ಜೊತೆಗೆ, ಹೆಲಿಕಾಪ್ಟರ್ ಗಳು, ಪೊಲೀಸ್ ಯುದ್ಧ ಸ್ಮಾರಕದ ಮೇಲೆ 09:00 ಗಂಟೆಯ ನಂತರ ಕೊವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ದೆಹಲಿಯ ಆಸ್ಪತ್ರೆಗಳ ಮೇಲೆ 10:00 ಗಂಟೆಯಿಂದ 10:30 ರ ನಡುವೆ ಹೂವಿನ ಸುರಿಮಳೆಯ ಯೋಜನೆಯನ್ನು ಹೊಂದಿದ್ದಾರೆ. ಎಐಐಎಂಎಸ್, ದೀನ ದಯಾಳ್ ಉಪಾಧ್ಯಾಯ ಆಸ್ಪತ್ರೆ, ಜಿಟಿಬಿ ಆಸ್ಪತ್ರೆ, ಲೋಕನಾಯಕ್ ಆಸ್ಪತ್ರೆ, ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ, ಸಫ್ದರ್ ಜಂಗ್ ಆಸ್ಪತ್ರೆ, ಶ್ರೀ ಗಂಗಾ ರಾಮ್ ಆಸ್ಪತ್ರೆ, ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆ, ಮ್ಯಾಕ್ಸ್ ಸಕೇತ್, ರೋಹಿಣಿ ಆಸ್ಪತ್ರೆ, ಅಪೊಲೋ ಇಂದ್ರಪ್ರಸ್ಥ ಆಸ್ಪತ್ರೆ ಮತ್ತು ಸೇನಾ ಆಸ್ಪತ್ರೆ ಸಂಶೋಧನೆ ಮತ್ತು ರೆಫೆರಲ್ ಆಸ್ಪತ್ರೆಗಳ ಪಟ್ಟಿಯಲ್ಲಿ ಒಳಗೊಂಡಿವೆ.

***



(Release ID: 1620757) Visitor Counter : 173