ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಹೊಸ ಮಾಹಿತಿ

Posted On: 03 MAY 2020 4:19PM by PIB Bengaluru

ಕೋವಿಡ್-19 ಹೊಸ ಮಾಹಿತಿ

 

ಶ್ರೇಣೀಕೃತ, ಹತೋಟಿಯಲ್ಲಿಡುವ ಮತ್ತು ಸಕ್ರಿಯ ವಿಧಾನದ ಮೂಲಕ, ಕೋವಿಡ್-19 ತಡೆಗಟ್ಟುವಿಕೆಗೆ, ಮತ್ತು ನಿರ್ವಹಣೆಗಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಭಾರತ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಕೋವಿಡ್-19 ನಿರ್ವಹಣೆಯ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷ್ ವರ್ಧನ್ ಇಂದು ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದರು. ಭೇಟಿಯ ಸಮಯದಲ್ಲಿ ಕೇಂದ್ರ ಸಚಿವರು ನಿರ್ದೇಶಕರ ಕಚೇರಿ, ತುರ್ತು ಚಿಕಿತ್ಸಾ ಘಟಕ , ಹೊರ ರೋಗಿಗಳ ವಿಭಾಗ, ಮಾದರಿ ಕೇಂದ್ರ, ಕೋವಿಡ್ ಬ್ಲಾಕ್- ನೆಲ ಮತ್ತು ಮೊದಲ ಮಹಡಿಯಲ್ಲಿನ ನಿರ್ಣಾಯಕ ಪ್ರದೇಶಗಳು, ಕೆಂಪು ವಲಯ ಪ್ರದೇಶ ಮತ್ತು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮೀಸಲಾದ ವಸ್ತ್ರ ಬದಲಾವಣೆಯ ಸ್ಥಳಕ್ಕೆ ಭೇಟಿ ನೀಡಿದರು.

ವಿಶೇಷ ಕೋವಿಡ್-19 ಸೌಲಭ್ಯವಿರುವ ಆಂಕೊಲಾಜಿ ಕಟ್ಟಡದಲ್ಲಿ ತಮ್ಮನ್ನು ಸೋಂಕುನಿವಾರಕಗೊಳಿಸಲು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ವಿಶೇಷ ಸ್ನಾನ, ವಸ್ತ್ರ ಬದಲಾವಣೆ ಮತ್ತು ತುಂತುರು ಸೌಲಭ್ಯವನ್ನು ಒದಗಿಸಲಾಗಿದೆ ಎನ್ನುವುದನ್ನು ಡಾ.ಹರ್ಷ್ ವರ್ಧನ್ ಗಮನಿಸಿ ತೃಪ್ತಿ ಹೊಂದಿದರು. ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಆಸ್ಪತ್ರೆಯ ಆಡಳಿತವು ತನ್ನ ಮುಂಚೂಣಿಯ ಆರೋಗ್ಯ ಸಿಬ್ಬಂದಿಯೊಂದಿಗೆ ದಿನಕ್ಕೆ ಎರಡು ಬಾರಿ ನಿಯಮಿತವಾಗಿ ಮಾತನಾಡುವ ಕಾರ್ಯವನ್ನು ಅವರು ಶ್ಲಾಘಿಸಿದರು.

ಡಾ.ಹರ್ಷ್ ವರ್ಧನ್ ಅವರು ಲಾಕ್ಡೌನ್ 3.0 (17 ಮೇ 2020ರವರೆಗೆ) ವಿಸ್ತೃತ ಅವಧಿಯ ಉದ್ಧೇಶವನ್ನು ಅರಿತು ಅನುಸರಿಸಬೇಕು ಮತ್ತು ಕೋವಿಡ್-19 ಪ್ರಸರಣ ಸರಪಳಿಯನ್ನು ತುಂಡರಿಸಲು ಇದು ಪರಿಣಾಮಕಾರಿಯಾದ ತಂತ್ರವೆಂದು ಪರಿಗಣಿಸಬೇಕು ಎಂದು ಕೋರಿದರು. ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರನ್ನು ಬಹಿಷ್ಕರಿಸಬಾರದು ಮತ್ತು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಜಯಗಳಿಸಿದ ರೋಗಿಗಳನ್ನು ಕಳಂಕಿತರಂತೆ ನೋಡಬಾರದು ಎಂದು ಅವರು ಜನರನ್ನು ಕೋರಿದರು.

ಈವರೆಗೆ ಒಟ್ಟು 10,632 ಜನರನ್ನು ಗುಣಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 682 ರೋಗಿಗಳು ಗುಣಮುಖರಾಗಿದ್ದಾರೆ. ಇದರಿಂದ ನಮ್ಮ ದೇಶದ ಒಟ್ಟು ಚೇತರಿಕೆಯ ಪ್ರಮಾಣವು 26.59% ಆಗಿದೆ. ದೃಢಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 39,980 ಆಗಿದೆ. ನಿನ್ನೆಯಿಂದ, ಭಾರತದಲ್ಲಿ ಕೋವಿಡ್-19 ದೃಢಪಡಿಸಿದ ಪ್ರಕರಣಗಳ ಸಂಖ್ಯೆಯಲ್ಲಿ 2644 ಹೆಚ್ಚಳ ಕಂಡುಬಂದಿದೆ.

ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in

ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ. : +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***


(Release ID: 1620727) Visitor Counter : 286