ರೈಲ್ವೇ ಸಚಿವಾಲಯ
ಸರಕು ಸಾಗಾಣೆ ಪರಿವರ್ತನೆಗೆ ಸಾಗಾಣೆ ಉದ್ಯಮದ ಮುಖ್ಯಸ್ಥರೊಂದಿಗೆ ರೈಲ್ವೆ ಸಚಿವರ ನಿರಂತರ ಸಭೆ
Posted On:
01 MAY 2020 5:20PM by PIB Bengaluru
ಸರಕು ಸಾಗಾಣೆ ಪರಿವರ್ತನೆಗೆ ಸಾಗಾಣೆ ಉದ್ಯಮದ ಮುಖ್ಯಸ್ಥರೊಂದಿಗೆ ರೈಲ್ವೆ ಸಚಿವರ ನಿರಂತರ ಸಭೆ
ಸಾಗಾಣೆ ವೆಚ್ಚ ತಗ್ಗಿಸಲು ವಿನೂತನ ಲಾಭದಾಯಕ ಪರಿಹಾರಗಳು; ಶ್ರೀ ಪಿಯೂಶ್ ಗೋಯಲ್
ಕೇಂದ್ರ ರೈಲ್ವೆ ಸಚಿವ ಶ್ರೀ ಪಿಯೂಶ್ ಗೋಯಲ್ ಅವರು, ಸಾಗಾಣೆ ಉದ್ಯಮದ ಪ್ರಮುಖ ಪಾಲುದಾರರು ಮತ್ತು ಸಂಬಂಧಿಸಿದವರ ಜೊತೆ ಇಂದು ಸಭೆ ನಡೆಸಿ, ಭಾರತೀಯ ರೈಲ್ವೆಯ ಸರಕು ಸಾಗಾಣೆಯನ್ನು ಪರಿವರ್ತಿಸುವ ನಿಟ್ಟಿನಲ್ಲಿ ಹೊಸ ಮಾರ್ಗೋಪಾಯಗಳ ಕುರಿತಂತೆ ಗಂಭೀರ ಚರ್ಚೆ ನಡೆಸಿದರು. ಈ ಸಭೆ ಸುಮಾರು 3 ಗಂಟೆಗಳ ಕಾಲ ನಡೆದು, ಸರಕು ಸಾಗಾಣೆಯನ್ನು ಇನ್ನಷ್ಟು ಪರಿಣಾಮಕಾರಿ ಮತ್ತು ಲಾಭದಾಯಕವನ್ನಾಗಿ ಮಾಡುವ ನಿಟ್ಟಿನಲ್ಲಿ ಸಂಭಾವ್ಯ ನೀತಿ ನಿರೂಪಣೆಗಳ ಕುರಿತು ಉದ್ಯಮ ಹಲವು ಸಲಹೆಗಳನ್ನು ನೀಡಿತು.
ಕೋವಿಡ್ ಬಿಕ್ಕಟ್ಟು ಸಂದರ್ಭದಲ್ಲಿ ರೈಲ್ವೆ ವಹಿಸುತ್ತಿರುವ ಅತ್ಯಂತ ಪ್ರಮುಖ ಪಾತ್ರವನ್ನು ಪ್ರಸ್ತಾಪಿಸಿ ಮಾತನಾಡಿದ ಸಚಿವರು, ಈ ಸಮಯದಲ್ಲಿ ರೈಲ್ವೆ, ಕೋವಿಡ್ ಬಿಕ್ಕಟ್ಟು ಎದುರಿಸಲು ಅತ್ಯಂತ ಕಾಳಜಿ ಮತ್ತು ಅನುಕಂಪದಿಂದ ಕಾರ್ಯ ನಿರ್ವಹಿಸುತ್ತಿದೆ. ರೈಲ್ವೆ ದೇಶಾದ್ಯಂತ ಅಗತ್ಯ ಸರಕು ಸಾಮಗ್ರಿಗಳನ್ನು ಸಾಗಿಸುವ ಮೂಲಕ ದೇಶದ ಜೀವನಾಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ಅಷ್ಟೆ ಅಲ್ಲದೆ “ಈ ಸಂದರ್ಭವನ್ನು ಬಳಸಿಕೊಂಡು ನಾವು ಬಹುದಿನಗಳಿಂದ ಬಾಕಿ ಇದ್ದ ಪ್ರಮುಖ ರೈಲು ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ಕಾಮಗಾರಿ, ಬಾಕಿ ಉಳಿದಿದ್ದ ನಿರ್ವಹಣಾ ಕಾಮಗಾರಿಗಳನ್ನು, ಹಳೆಯ ಸೇತುವೆಗಳ ದುರಸ್ಥಿ ಮತ್ತು ತೆರವು ಗೊಳಿಸುವುದು ಹಾಗೂ ಹಾಲಿ ಇರುವ ಮೂಲಸೌಕರ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ” ಎಂದು ಶ್ರೀ ಪಿಯೂಶ್ ಗೋಯಲ್ ಹೇಳಿದರು.
ಅದೇ ರೀತಿ ನಮ್ಮ ಸರಕು ಮತ್ತು ವಾಣಿಜ್ಯ ಸಾಗಾಣೆಯಲ್ಲಿ ಲಭ್ಯವಿರುವ ಭಾರೀ ಅವಕಾಶಗಳನ್ನು ಗುರುತಿಸಲಾಗಿದೆ ಮತ್ತು ಮುಂದಿನ ದಿನಗಳಲ್ಲಿ ನಮ್ಮ ಸೇವೆಗಳನ್ನು ಸುಧಾರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ರೈಲ್ವೆ ಸಚಿವರು ಬಲವಾಗಿ ಪ್ರತಿಪಾದಿಸಿದರು.
ಸಭೆಯಲ್ಲಿ ರೈಲ್ವೆ ಮಂಡಳಿಯ ಅಧ್ಯಕ್ಷರು ಹಾಗೂ ಸಾಗಾಣೆ ಉದ್ಯಮದ ಪ್ರಮುಖ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು ಮತ್ತು ಕಾಲಮಿತಿಯಲ್ಲಿ ವಿತರಣಾ ಪದ್ಧತಿ, ಪಾಲುದಾರರಿಗೆ ಕೆಲವೊಂದು ಬಗೆಯ ವಿಮಾ ಕಾರ್ಯತಂತ್ರ, ಸರಕು ಸಾಗಾಣೆ ದರವನ್ನು ಏಕರೂಪಗೊಳಿಸುವುದು ಹಾಗೂ ಸಾಗಾಣೆ ದರವನ್ನು ಇನ್ನೂ ಹೆಚ್ಚು ಕೈಗೆಟಕುವಂತೆ ಮಾಡುವುದು. ಹಂತಹಂತವಾಗಿ ಬಂದರು ಮತ್ತು ಟರ್ಮಿನಲ್ ಗಳಲ್ಲಿ ಸರಕು ತುಂಬುವುದು/ಇಳಿಸುವ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಸುಧಾರಣೆಗಳನ್ನು ತರುವ ಕುರಿತು ಹಲವು ಸಕಾರಾತ್ಮಕ ಸಲಹೆಗಳು ವ್ಯಕ್ತವಾದವು.
ಉದ್ಯಮದ ಸಲಹೆಗಳನ್ನು ಸ್ವಾಗತಿಸಿದ ರೈಲ್ವೆ ಸಚಿವರು, ವಿನೂತನ ಅಥವಾ ನಾವಿನ್ಯ ಪರಿಹಾರಗಳು ಅತ್ಯಗತ್ಯವಾಗಿದೆ. ಅವುಗಳು ಸಾಗಾಣೆ ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಲಾಭದಾಯಕವಾಗಿರಬೇಕು ಎಂದರು. “ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಿಲುಗಡೆ ರಹಿತ ರೈಲುಗಳ ಸಂಚಾರ ಅಗತ್ಯವಿದೆ, ಸಿಗ್ನಲ್ ವ್ಯವಸ್ಥೆ ಉತ್ತಮಪಡಿಸಬೇಕು. ಸರಕು ಸಾಗಾಣೆ ರೈಲುಗಳಿಗೆ ಉತ್ತಮ ವೇಳಾಪಟ್ಟಿ ಮತ್ತು ಉತ್ತಮ ಹಣಕಾಸು ಆಯ್ಕೆಗಳು, ಸರಕು ಸಾಗಾಣೆ ರೈಲುಗಳ ಕಾರ್ಯ ನಿರ್ವಹಣೆಯಲ್ಲಿ ಪರಿವರ್ತನೆ ಮತ್ತು ಒಟ್ಟು ಸರಕು ಸಾಗಾಣೆಯನ್ನು 2.5 ಬಿಲಿಯನ್ ಟನ್ ತಲುಪುವ ಗುರಿ ಸಾಧನೆ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಶ್ರೀ ಪಿಯೂಶ್ ಗೋಯಲ್ ಹೇಳಿದರು.
***
(Release ID: 1620393)
Visitor Counter : 167
Read this release in:
English
,
Urdu
,
Marathi
,
Hindi
,
Assamese
,
Punjabi
,
Gujarati
,
Odia
,
Tamil
,
Telugu
,
Malayalam