ಗೃಹ ವ್ಯವಹಾರಗಳ ಸಚಿವಾಲಯ

ಕೋವಿಡ್-19  ಹರಡುವಿಕೆಗೆ ಪರಿಣಾಮಕಾರಿ ನಿಯಂತ್ರಣ ಮತ್ತು ಹೋರಾಟಕ್ಕೆ ರಾಜ್ಯ ಸರ್ಕಾರಗಳ  ಪ್ರಯತ್ನ ಮತ್ತು ಸ್ಥಿತಿಗತಿ ಮೌಲ್ಯಮಾಪನಕ್ಕೆ ಕೇಂದ್ರ ಸರ್ಕಾರದಿಂದ ಆರು ಅಂತರ ಸಚಿವಾಲಯಗಳ ತಂಡಗಳ ರಚನೆ

Posted On: 20 APR 2020 1:47PM by PIB Bengaluru

ಕೋವಿಡ್-19  ಹರಡುವಿಕೆಗೆ ಪರಿಣಾಮಕಾರಿ ನಿಯಂತ್ರಣ ಮತ್ತು ಹೋರಾಟಕ್ಕೆ ರಾಜ್ಯ ಸರ್ಕಾರಗಳ  ಪ್ರಯತ್ನ ಮತ್ತು ಸ್ಥಿತಿಗತಿ ಮೌಲ್ಯಮಾಪನಕ್ಕೆ ಕೇಂದ್ರ ಸರ್ಕಾರದಿಂದ ಆರು ಅಂತರ ಸಚಿವಾಲಯಗಳ ತಂಡಗಳ ರಚನೆ

 

ಕೇಂದ್ರ ಸರ್ಕಾರ ಆರು ಅಂತರ ಸಚಿವಾಲಯಗಳ ಕೇಂದ್ರೀಯ ತಂಡ(ಐಎಂಸಿಟಿಎಸ್)ಗಳನ್ನು ರಚಿಸಿದೆ. ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರಕ್ಕೆ ತಲಾ ಎರಡು, ಮಧ್ಯಪ್ರದೇಶ ಮತ್ತು ರಾಜಸ್ಥಾನಕ್ಕೆ ತಲಾ ಒಂದು ತಂಡಗಳನ್ನು ರಚಿಸಲಾಗಿದ್ದು, ಅವುಗಳು ಪರಿಸ್ಥಿತಿಯನ್ನು ವಾಸ್ತವದಲ್ಲಿ ಮೌಲ್ಯಮಾಪನ ಮಾಡಿ, ಸಾರ್ವಜನಿಕ ಹಿತದೃಷ್ಟಿಯಿಂದ ರಾಜ್ಯ ಸರ್ಕಾರಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡುವುದಲ್ಲದೆ, ಕೇಂದ್ರ ಸರ್ಕಾರಕ್ಕೆ ಆ ಸಮಸ್ಯೆಗಳ ಪರಿಹಾರ ಕುರಿತು ವರದಿಗಳನ್ನು ಸಲ್ಲಿಸಲಿದೆ. ಪರಿಸ್ಥಿತಿ ಗಂಭೀರವಾಗಿರುವ ಸ್ಥಳಗಳಲ್ಲಿ ಇಂದೋರ್(ಎಂಪಿ), ಮುಂಬೈ ಮತ್ತು ಪುಣೆ(ಮಹಾರಾಷ್ಟ್ರ), ಜೈಪುರ್(ರಾಜಸ್ಥಾನ) ಮತ್ತು ಪಶ್ಚಿಮ ಬಂಗಾಳದ ಕೋಲ್ಕತ್ತಾ, ಹೌರಾ, ಮೇದಿನಿಪುರ್ ಪೂರ್ವ, 24 ಪರಗಣ ಉತ್ತರ, ಡಾರ್ಜಲಿಂಗ್, ಕಲಿಂಪೋಂಗ್ ಮತ್ತು ಜಲ್ ಪಾಯಿಗುರಿ. ಐಎಂಸಿಟಿಎಸ್ ಗಳು ನಿಯಮಾನುಸಾರ ಲಾಕ್ ಡೌನ್ ಕ್ರಮಗಳ ಅನುಷ್ಠಾನದ ಕುರಿತು ಬರುವ ದೂರುಗಳ ಬಗ್ಗೆ ಗಂಭೀರ ಗಮನಹರಿಸಲಿದೆ ಮತ್ತು ಅತ್ಯವಶ್ಯಕ ವಸ್ತುಗಳ ಪೂರೈಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಆರೋಗ್ಯ ಮೂಲಸೌಕರ್ಯ ಸಿದ್ಧತೆ, ಆರೋಗ್ಯ ವೃತ್ತಿಪರರ ಸುರಕ್ಷತೆ ಮತ್ತು ಪರಿಹಾರ ಶಿಬಿರಗಳಲ್ಲಿರುವ ಬಡಜನರು ಹಾಗೂ ಕಾರ್ಮಿಕರ ಸ್ಥಿತಿಗತಿ ಬಗ್ಗೆ ಪರಿಶೀಲಿಸಲಿದೆ.

ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ಯಾವುದೇ ನಿರ್ಬಂಧದ ಕ್ರಮಗಳಿಲ್ಲದೆ ಲಾಕ್ ಡೌನ್ ನಿಯಮಗಳ ಉಲ್ಲಂಘನೆಗೆ ಅವಕಾಶ ನೀಡಿದರೆ ಅಥವಾ ಹೆಚ್ಚಿನ ಸೋಂಕಿರುವ ಪ್ರದೇಶಗಳಲ್ಲಿ ಅಥವಾ ಕ್ಲಸ್ಟರ್ ಗಳಲ್ಲಿ ನಿಯಮ ಉಲ್ಲಂಘನೆಗೆ ಅವಕಾಶ ನೀಡಿದರೆ ಅದು ಗಂಭೀರ ಆರೋಗ್ಯ ಸಮಸ್ಯೆಯನ್ನು ಒಡ್ಡುತ್ತದೆ ಮತ್ತು ಆ ಜಿಲ್ಲೆಗಳ ಜನಸಂಖ್ಯೆಯ ಜೊತೆಗೆ ದೇಶದ ಇತರ ಭಾಗದ ಜನರಿಗೂ ತೊಂದರೆಯಾಗುತ್ತದೆ. ಪ್ರಮುಖ ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ಇಂತಹ ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸಿ, ಪರಿಸ್ಥಿತಿಯನ್ನು ವಿಶ್ಲೇಷಿಸಿ, ಕೇಂದ್ರ ಸರ್ಕಾರ ಈ ಪ್ರದೇಶಗಳಲ್ಲಿ ಪರಿಸ್ಥಿತಿಯ ಬಗ್ಗೆ ಗಂಭೀರ ಗಮನಹರಿಸಲು ಮತ್ತು ನಿಯಂತ್ರಣಕ್ಕೆ ತಜ್ಞರನ್ನು ಬಳಸಿಕೊಳ್ಳಲು ಈ ಕ್ರಮಗಳನ್ನು ಕೈಗೊಂಡಿದೆ.

ಕೇಂದ್ರ ಸರ್ಕಾರ ವಿಪತ್ತು ನಿರ್ವಹಣಾ ಕಾಯ್ದೆ–2005ರ ಸಕ್ಷನ್ 35(1), 35(2)(), 35(2)(ಮತ್ತು 35(2)(ಅಡಿ ಲಭ್ಯವಿರುವ ಅಧಿಕಾರವನ್ನು ಚಲಾಯಿಸಿ,ಈ ಸಮಿತಿಗಳನ್ನು ರಚಿಸಿದೆ. ಲಾಕ್ ಡೌನ್ ಆದೇಶ ಕ್ರಮಗಳು ಮತ್ತು ಸಮಗ್ರ ಪರಿಷ್ಕೃತ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪುನರುಚ್ಚರಿಸಲಾಗಿದೆ ಮತ್ತು ಇತರೆ ಕ್ರಮಗಳಿಗೆ ಒತ್ತು ನೀಡುವಂತೆ ಸೂಚಿಸಲಾಗಿದೆ. ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆ-2005ರ ಅಡಿ ಹೊರಡಿಸಲಾಗಿರುವ ಮಾರ್ಗಸೂಚಿಗಳನ್ನು ದುರ್ಬಲಗೊಳಿಸದೆ ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆದೇಶಿಸಲಾಗಿದೆ.

ಗೌರವಾನ್ವಿತ ಸುಪ್ರೀಂಕೋರ್ಟ್ ದಿನಾಂಕ 31.03,2020ರಂದು ರಿಟ್ ಅರ್ಜಿ(ಸಿವಿಲ್) ಸಂಖ್ಯೆ

468 / 2020ರಲ್ಲಿ ಈ ರೀತಿ ಅಭಿಪ್ರಾಯಪಟ್ಟಿರುವುದನ್ನು ನೆನಪಿಸಿ ಕೊಳ್ಳಬಹುದು. “ರಾಜ್ಯ ಸರ್ಕಾರಗಳು, ಸಾರ್ವಜನಿಕ ಪ್ರಾಧಿಕಾರಗಳು ಮತ್ತು ದೇಶದ ನಾಗರಿಕರು… ಇತ್ಯಾದಿ ಭಾರತ ಸರ್ಕಾರದ ಆದೇಶ ಮತ್ತು ನಿರ್ದೇಶನಗಳನ್ನು ಸಾವರ್ಜನಿಕ ಹಿತದೃಷ್ಟಿಯಿಂದ ಅಕ್ಷರಶಃ ಪಾಲಿಸುತ್ತೇವೆ ಎಂದು ನಾವು ವಿಶ್ವಾಸ ಹೊಂದಿದ್ದೇವೆ ಮತ್ತು ನಿರೀಕ್ಷಿಸುತ್ತೇವೆ” ಎಂದು ಹೇಳಿತ್ತು. ಈ ಅಭಿಪ್ರಾಯವನ್ನು ಸರ್ವೋನ್ನತ ನ್ಯಾಯಾಲಯದ ನಿರ್ದೇಶನ ಎಂದು ಪರಿಗಣಿಸಿ, ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಿಸಲಾಗಿದೆ.

ಮೇಲೆ ತಿಳಿಸಿದ ಐಎಂಸಿಟಿಎಸ್ ಗಳು ವಿಪತ್ತು ನಿರ್ವಹಣಾ ಕಾಯ್ದೆ-2005ರ ಅಡಿಯಲ್ಲಿ ಹೊರಡಿಸಲಾಗಿರುವ ಲಾಕ್ ಡೌನ್ ಕ್ರಮಗಳ ಅನುಷ್ಠಾನ ಮತ್ತು ಪಾಲನೆಯ ಮೌಲ್ಯಮಾಪನಕ್ಕೆ ಹೆಚ್ಚಿನ ಗಮನ ಮತ್ತು ಒತ್ತು ನೀಡಲಿವೆ. ಸಮಿತಿಗಳು ಅತ್ಯವಶ್ಯಕ ವಸ್ತುಗಳ ಪೂರೈಕೆ, ಜನರು ಮನೆಯಿಂದ ಹೊರಗಡೆ ಸಂಚರಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಆರೋಗ್ಯ ಮೂಲಸೌಕರ್ಯ ಸಿದ್ಧತೆ, ಆಸ್ಪತ್ರೆ ಸೌಕರ್ಯ ಮತ್ತು ಜಿಲ್ಲೆಗಳಲ್ಲಿ ಮಾದರಿ ಅಂಕಿ-ಅಂಶಗಳು, ಆರೋಗ್ಯ ವೃತ್ತಿಪರರ ರಕ್ಷಣೆ, ಪರೀಕ್ಷಾ ಕಿಟ್, ಪಿಪಿಇ, ಮಾಸ್ಕ್ ಮತ್ತು ಇತರೆ ಸುರಕ್ಷತಾ ಉಪಕರಣಗಳ ಲಭ್ಯತೆ ಮತ್ತು ಪರಿಹಾರ ಶಿಬಿರಗಳಲ್ಲಿ ಕಾರ್ಮಿಕರು ಮತ್ತು ಬಡವರ ಸ್ಥಿತಿಗತಿ ಬಗ್ಗೆ ಪರಿಶೀಲಿಸಲಿವೆ.

ಈ ಐಎಂಸಿಟಿಎಸ್ ಗಳು  ಸದ್ಯದಲ್ಲೇ ತಮ್ಮ ಭೇಟಿಗಳನ್ನು ಆರಂಭಿಸಲಿವೆ.

                                                        ***



(Release ID: 1616478) Visitor Counter : 260