ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಎಚ್.ಆರ್.ಡಿ. ಸಚಿವಾಲಯದ ಸಲಹೆಯಂತೆ ಎ.ಐ.ಸಿ.ಟಿ.ಇ. ಯಿಂದ ಕಾಲೇಜುಗಳಿಗೆ/ ಸಂಸ್ಥೆಗಳಿಗೆ ವಿದ್ಯಾರ್ಥಿಗಳ ಸುರಕ್ಷೆ ಮತ್ತು ಶೈಕ್ಷಣಿಕ ಕಲ್ಯಾಣ ಖಾತ್ರಿಪಡಿಸಲು ಸೂಚನೆ ರವಾನೆ

Posted On: 16 APR 2020 4:29PM by PIB Bengaluru

ಎಚ್.ಆರ್.ಡಿ. ಸಚಿವಾಲಯದ ಸಲಹೆಯಂತೆ ಎ.ಐ.ಸಿ.ಟಿ.ಇ. ಯಿಂದ ಕಾಲೇಜುಗಳಿಗೆ/ ಸಂಸ್ಥೆಗಳಿಗೆ ವಿದ್ಯಾರ್ಥಿಗಳ ಸುರಕ್ಷೆ ಮತ್ತು ಶೈಕ್ಷಣಿಕ ಕಲ್ಯಾಣ ಖಾತ್ರಿಪಡಿಸಲು ಸೂಚನೆ ರವಾನೆ

ಲಾಕ್ ಡೌನ್ ಅವಧಿಯಲ್ಲಿ ವಿದ್ಯಾರ್ಥಿಗಳಿಂದ ಶುಲ್ಕ ಪಡೆಯುವುದಕ್ಕೆ ತಡೆ

 

ದೇಶದಲ್ಲಿ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹರಡುವಿಕೆ ಪ್ರತಿಬಂಧಿಸಲು ಲಾಕ್ ಡೌನ್ 2020 ರ ಮೇ 3 ರವರೆಗೆ ಜಾರಿಯಲ್ಲಿರುವುದರಿಂದ , ಎಚ್.ಆರ್.ಡಿ. ಸಚಿವಾಲಯವು ವಿದ್ಯಾರ್ಥಿಗಳ ಹಿತ ರಕ್ಷಿಸಲು ಅವಶ್ಯ ಕ್ರಮ ಕೈಗೊಳ್ಳುವಂತೆ ಎ.ಐ.ಸಿ.ಟಿ.ಇ.ಗೆ ಸಲಹೆ ಮಾಡಿತ್ತು. ಅದರನ್ವಯ ಎ.ಐ.ಸಿ.ಟಿ.ಇ. ಯು ಕಾಲೇಜುಗಳಿಗೆ/ ಸಂಸ್ಥೆಗಳಿಗೆ ಕೆಲವು ಸೂಚನೆಗಳನ್ನು ನೀಡಿದೆ ಮತ್ತು ಕೋವಿಡ್ -19 ರಿಂದ ಎದುರಾಗಿರುವ ಭೀತಿಯ ಹಿನ್ನೆಲೆಯಲ್ಲಿ ಈ ಬಿಕ್ಕಟ್ಟಿನ ಸಮಯದಲ್ಲಿ ಸುರಕ್ಷಾ ಮುಂಜಾಗರೂಕತಾ ಕ್ರಮಗಳನ್ನು ಖಾತ್ರಿಪಡಿಸುವುದು ಭಾರತದ ಎಲ್ಲಾ ನಾಗರಿಕರ ಮೂಲಭೂತ ಜವಾಬ್ದಾರಿಯಾಗಿದೆ ಎಂದು ನಿರ್ದೇಶನವನ್ನು ನೀಡಿದೆ. ಅದರಂತೆ ಸಂಸ್ಥೆಗಳ ಮುಖ್ಯಸ್ಥರು ಆರೋಗ್ಯ ರಕ್ಷಣೆಯ ಮತ್ತು ಅವರ ಕಾಲೇಜು/ ಸಂಸ್ಥೆಗಳ ಎಲ್ಲಾ ಭಾಗೀದಾರರ ಹಿತವನ್ನು ಕಾಯುವ ಜವಾಬ್ದಾರಿ ಹೊಂದಿರುತ್ತಾರೆ. ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿ ಎಲ್ಲಾ ಕಾಲೇಜುಗಳು ಮತ್ತು ಸಂಸ್ಥೆಗಳು ಈ ಕೆಳಗಿನ ಮಾರ್ಗದರ್ಶಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

  1. ಶುಲ್ಕ ಪಾವತಿ: ಕೆಲವು ಸಂಸ್ಥೆಗಳು ವಿದ್ಯಾರ್ಥಿಗಳು ಲಾಕ್ ಡೌನ್ ಅವಧಿಯಲ್ಲಿ ಸೇರ್ಪಡೆ ಶುಲ್ಕ ಸಹಿತ ಶುಲ್ಕ ಪಾವತಿಸುವಂತೆ ವಿದ್ಯಾರ್ಥಿಗಳಿಗೆ ಒತ್ತಡ ತರುತ್ತಿರುವುದು ಎ.ಐ.ಸಿ.ಟಿ.ಇ. ಯ ಗಮನಕ್ಕೆ ಬಂದಿದೆ. ಪ್ರಸ್ತುತ ಜಾರಿಯಲ್ಲಿರುವ ಲಾಕ್ ಡೌನ್ ತೆರವಾಗುವವರೆಗೆ ಮತ್ತು ಸಹಜ ಸ್ಥಿತಿ ನೆಲೆಗೊಳ್ಳುವವರೆಗೆ ಕಾಲೇಜುಗಳಾಗಲಿ, ಸಂಸ್ಥೆಗಳಾಗಲೀ ಶುಲ್ಕ ಪಾವತಿಗಾಗಿ ಬಲವಂತ ಮಾಡುವಂತಿಲ್ಲ. ಮುಂದುವರೆದು ಈ ಮಾರ್ಗದರ್ಶಿಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಎ.ಐ.ಸಿ.ಟಿ.ಇ. ಯು ಕಾಲಾನುಕ್ರಮದಲ್ಲಿ ಪರಿಷ್ಕೃತ ವೇಳಾ ಪಟ್ಟಿಯನ್ನು ಪ್ರಕಟಿಸಲಿದೆ. ಅದರನ್ವಯ , ಎಲ್ಲಾ ಕಾಲೇಜುಗಳು/ ಸಂಸ್ಥೆಗಳು ಮಾಹಿತಿಯನ್ನು ಕಾಲೇಜು ಜಾಲತಾಣಗಳಲ್ಲಿ ಪ್ರದರ್ಶಿಸಬೇಕು ಮಾತ್ರವಲ್ಲದೆ ಅದನ್ನು ಇ-ಮೈಲ್ ಮೂಲಕ ವಿದ್ಯಾರ್ಥಿಗಳಿಗೂ ತಿಳಿಸತಕ್ಕದ್ದು ಎಂದೂ ಸೂಚಿಸಲಾಗಿದೆ.
  2. ಫ್ಯಾಕಲ್ಟಿ ಸದಸ್ಯರಿಗೆ ವೇತನ ಪಾವತಿ: ವಿವಿಧ ಸಂಸ್ಥೆಗಳು ಅವುಗಳ ಫ್ಯಾಕಲ್ಟಿ ಮತ್ತು ಸಿಬ್ಬಂದಿಗಳಿಗೆ ಲಾಕ್ ಡೌನ್ ಅವಧಿಗೆ ವೇತನ ಪಾವತಿಸದೇ ಇರುವುದು ತಿಳಿದು ಬಂದಿದೆ. ಜೊತೆಗೆ ಕೆಲವು ಸಂಸ್ಥೆಗಳು ನಿರ್ದಿಷ್ಟ ಫ್ಯಾಕಲ್ಟಿ/ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕಿರುವ ಬಗ್ಗೆಯೂ ತಿಳಿದುಬಂದಿದೆ. ಈಗ ಸ್ಪಷ್ಟೀಕರಿಸಲಾಗಿರುವುದೇನೆಂದರೆ ಫ್ಯಾಕಲ್ಟಿಗೆ, ಸಿಬ್ಬಂದಿಗೆ ವೇತನ ಮತ್ತು ಇತರ ಬಾಕಿಗಳನ್ನು ಲಾಕ್ ಡೌನ್ ಅವಧಿಗೆ ಸಂಬಂಧಿಸಿದಂತೆ ಪಾವತಿಸಲಾಗುವುದು ಮತ್ತು ಈ ಅವಧಿಯಲ್ಲಿ ಕೆಲಸದಿಂದ ತೆಗೆದುಹಾಕಲಾಗಿದ್ದರೆ ಅದನ್ನು ಹಿಂಪಡೆಯಲಾಗುವುದು. ಆದುದರಿಂದ ಇದನ್ನು ಕಟ್ಟು ನಿಟ್ಟಾಗಿ ಅನುಸರಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಿತ ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ರವಾನಿಸಲಾಗಿದೆ ಮತ್ತು ಅದರಲ್ಲಿ ಕಾಲೇಜು/ ಸಂಸ್ಥೆಗಳಿಗೆ ಶುಲ್ಕ ಮರುಪಾವತಿ ಅಂಶವೂ ಅಡಕಗೊಂಡಿದೆ.
  3. ಸುಳ್ಳು ಸುದ್ದಿಯನ್ನು ಪ್ರೋತ್ಸಾಹಿಸದಿರುವುದು: ವಿವಿಧ ಹಿತಾಸಕ್ತಿ ಗುಂಪುಗಳು / ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದು ಆ ಮೂಲಕ ಸುಳ್ಳು ಸುದ್ದಿಗಳನ್ನು ಮತ್ತು ವದಂತಿಗಳನ್ನು ಹರಡುತ್ತಿದ್ದಾರೆ. ಇಂತಹ ಸುಳ್ಳು ಸುದ್ದಿಗಳಿಗೆ ಪ್ರೋತ್ಸಾಹ ನೀಡದೆ ಮತ್ತು ಅವುಗಳನ್ನು ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರುವುದು ಎಲ್ಲಾ ಭಾಗೀದಾರರ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ. ಎಂ.ಎಚ್.ಆರ್.ಡಿ/ ಯು.ಜಿ.ಸಿ./ ಎ.ಐ.ಸಿ.ಟಿ.ಇ. ಅಧಿಕೃತ ಜಾಲತಾಣಗಳಲ್ಲಿ ಪ್ರಕಟಗೊಂಡ ಮಾಹಿತಿಯನ್ನು ಮಾತ್ರವೇ ನಂಬಲರ್ಹ ಮಾಹಿತಿ ಎಂದು ಅದನ್ನು ಅವಲಂಬಿಸುವಂತೆ ಸಲಹೆ ಮಾಡಲಾಗಿದೆ. ಆದುದರಿಂದ ಈ ಜಾಲತಾಣಗಳನ್ನು ಯಾವುದೇ ಸಕಾಲಿಕ ಮಾಹಿತಿಗಾಗಿ ನಿರಂತರ ಗಮನಿಸಲು ಸೂಚಿಸಲಾಗಿದೆ. ಅದೇ ರೀತಿ ಸರಕಾರದ ಇತರ ಸುತ್ತೋಲೆಗಳಿಗೆ ಸಂಬಂಧಿತ ಸಚಿವಾಲಯಗಳ/ ಇಲಾಖೆಗಳ ಅಧಿಕೃತ ಜಾಲತಾಣಗಳನ್ನು ನೋಡಬಹುದು.
  4. ಪ್ರಧಾನ ಮಂತ್ರಿ ಅವರ ವಿಶೇಷ ವಿದ್ಯಾರ್ಥಿ ಯೋಜನೆ: ಈಗ ಚಾಲ್ತಿಯಲ್ಲಿರುವ ಲಾಕ್ ಡೌನ್ ಮತ್ತು ಅಂತರ್ಜಾಲದ ಪರಿಮಿತ ಲಭ್ಯತೆಯಿಂದಾಗಿ ಪಿ.ಎಂ.ಎಸ್.ಎಸ್.ಎಸ್. ನ 2020-2021 ರ ಶೈಕ್ಷಣಿಕ ವರ್ಷದ ಕಾರ್ಯಚಟುವಟಿಕೆಗಳು ವಿಳಂಬಗೊಂಡಿವೆ. ಆದಾಗ್ಯೂ ಇಲ್ಲಿ ಸ್ಪಷ್ಟೀಕರಿಸುವುದೇನೆಂದರೆ ಯೋಜನೆಯು ಲಾಕ್ ಡೌನ್ ಹಿಂಪಡೆದ ಬಳಿಕ ಅದು ಹಿಂದಿದ್ದಂತೆಯೇ ಮುಂದುವರಿಯುತ್ತದೆ. ಹೊಸ ವೇಳಾ ಪಟ್ಟಿಯನ್ನು ಒಳಗೊಂಡ ಕ್ಯಾಲೆಂಡರನ್ನು ಎ.ಐ. ಸಿ.ಟಿ.ಇ. ಜಾಲ ತಾಣದಲ್ಲಿ ಕ್ರಮೇಣ ಪ್ರಕಟಿಸಲಾಗುತ್ತದೆ.
  5. ಆನ್ ಲೈನ್ ತರಗತಿಗಳು ಮತ್ತು ಸೆಮಿಸ್ಟರ್ ಪರೀಕ್ಷೆಗಳು: ಹಾಲಿ ಸೆಮಿಸ್ಟರುಗಳಿಗೆ ಆನ್ ಲೈನ್ ತರಗತಿಗಳು ವಿಸ್ತರಿತ ಲಾಕ್ ಡೌನ್ ಅವಧಿಯಲ್ಲೂ ಮುಂದುವರಿಯಲಿವೆ. ಯು.ಜಿ.ಸಿ/ಎ.ಐ.ಸಿ.ಟಿ ಇ.ಗಳಿಂದ ಪರಿಷ್ಕೃತ ಶೈಕ್ಷಣಿಕ ಕ್ಯಾಲೆಂಡರ್ ಸದ್ಯದಲ್ಲೇ ಪ್ರಕಟಗೊಳ್ಳಲಿದೆ, ಸೆಮಿಸ್ಟರ್ ಪರೀಕ್ಷೆಗಳನ್ನು ಸಂಘಟಿಸುವುದಕ್ಕೆ ಸಂಬಂಧಿಸಿ ಸ್ಪಷ್ಟೀಕರಿಸುವುದು ಏನೆಂದರೆ ಯು.ಜಿ.ಸಿ.ಯು ಪರೀಕ್ಷೆಗಳನ್ನು ನಡೆಸುವುದಕ್ಕೆ ಸಂಬಂಧಿಸಿ ಶಿಫಾರಸುಗಳನ್ನು ಮಾಡುವುದಕ್ಕಾಗಿ ಸಮಿತಿಯನ್ನು ರಚಿಸಿದೆ. ಪರೀಕ್ಷೆಗಳಲ್ಲಿ ಅಂಕಗಳ ನೀಡಿಕೆ ಮತ್ತು ಉತ್ತೀರ್ಣತೆ ಮಾನದಂಡಗಳ ಬಗ್ಗೆಯೂ ಅದು ಪರಿಶೀಲಿಸುತ್ತದೆ . ಈ ನಿಟ್ಟಿನಲ್ಲಿ ನಿರ್ದೇಶನಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುತ್ತದೆ. ಯು.ಜಿ.ಸಿ./ ಎ.ಐ.ಸಿ.ಟಿ ಇ. ಜಾಲತಾಣಗಳನ್ನು ಇದಕ್ಕಾಗಿ ನಿಯಮಿತವಾಗಿ ನೋಡುತ್ತಿರಬಹುದು.
  6. ಇಂಟರ್ನ್ ಶಿಪ್: ಚಾಲ್ತಿಯಲ್ಲಿರುವ ಲಾಕ್ ಡೌನ್ ನಿಂದಾಗಿ ಕೆಲವು ವಿದ್ಯಾರ್ಥಿಗಳಿಗೆ ಈ ಬೇಸಿಗೆಯಲ್ಲಿ ಅವರ ಇಂಟರ್ನ್ ಶಿಪ್ ಮಾಡಲು ಸಾಧ್ಯವಾಗದೇ ಹೋಗಬಹುದು, ಆದುದರಿಂದ ಅವರು ಮನೆಯಿಂದಲೇ ಇಂಟರ್ನ್ ಶಿಪ್ ಮಾಡಬಹುದು. ಅದು ಸಾಧವಾಗದೇ ಹೋದಲ್ಲಿ ಆ ಆವಶ್ಯಕತೆಯನ್ನು 2020 ರ ಡಿಸೆಂಬರ್ ತಿಂಗಳಲ್ಲಿ ಪೂರೈಸಬಹುದು.
  7. ಇತರ ಕಾಲೇಜು/ ಸಂಸ್ಥೆಗಳ ಜೊತೆ ಅಂತರ್ಜಾಲ ಬ್ಯಾಂಡ್ ವಿಡ್ತ್ ಹಂಚಿಕೊಳ್ಳುವಿಕೆ: ; ಕೆಲವು ನಿರ್ದಿಷ್ಟ ವಿದ್ಯಾರ್ಥಿಗಳಿಗೆ ಅಂತರ್ಜಾಲ ಸೇವೆ ಪಡೆಯುವಲ್ಲಿ ತೊಂದರೆ ಇದ್ದಲ್ಲಿ ಕಾಲೇಜುಗಳು/ ಸಂಸ್ಥೆಗಳು ತಮ್ಮ ವ್ಯಾಪ್ತಿ ಪ್ರದೇಶದಲ್ಲಿರುವ ಇತರ ಕಾಲೇಜು/ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ತಮ್ಮ ಕಾಲೇಜು/ ಸಂಸ್ಥೆಗಳಲ್ಲಿರುವ ಅಂತರ್ಜಾಲ ಸೌಲಭ್ಯವನ್ನು ಬಳಸಲು ಅವಕಾಶ ಒದಗಿಸುವಂತೆ ಸಲಹೆ ಮಾಡಲಾಗಿದೆ. ಅದೇ ರೀತಿ ಕಾಲೇಜು/ ಸಂಸ್ಥೆಗಳೂ ತಮ್ಮ ಕ್ಯಾಂಪಸ್ ಅಂತರ್ಜಾಲ ಸೌಲಭ್ಯವನ್ನು ಇತರ ಕಾಲೇಜು/ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಬಳಸಲು ಅನುಮತಿಸಬಹುದಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮತ್ತು ನಿರ್ದಿಷ್ಟ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಬ್ಯಾಂಡ್ ವಿಡ್ತ್ ಲಭ್ಯ ಇಲ್ಲದ ಕಾರಣದಿಂದ ಹಾಜರಾತಿ ನಿಯಮವನ್ನು ಸಡಿಲಿಸಬಹುದಾಗಿದೆ.

ಎಲ್ಲಾ ಕಾಲೇಜುಗಳು/ ಸಂಸ್ಥೆಗಳು ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು , ತಪ್ಪಿದಲ್ಲಿ ಜಾರಿಯಲ್ಲಿರುವ ನಿಯಮಗಳಡಿಯಲ್ಲಿ ಕ್ರಮ ಜರುಗಿಸಲಾಗುವುದು.

***



(Release ID: 1615567) Visitor Counter : 159