ಹಣಕಾಸು ಸಚಿವಾಲಯ

ಕೋವಿಡ್-19 ಸಾಂಕ್ರಾಮಿಕ ಸ್ಥಿತಿಯ ಸಂದರ್ಭದಲ್ಲಿ ತೆರಿಗೆ ಪಾವತಿದಾರರಿಗೆ ನೆರವಾಗಲು ಒಂದೇ ವಾರದಲ್ಲಿ ಸಿಬಿಡಿಟಿಯಿಂದ 4,250 ಕೋಟಿ ರೂ. ಮೌಲ್ಯದ ಸುಮಾರು 10.2 ಲಕ್ಷ ಮರು ಪಾವತಿ

Posted On: 15 APR 2020 5:42PM by PIB Bengaluru

ಕೋವಿಡ್-19 ಸಾಂಕ್ರಾಮಿಕ ಸ್ಥಿತಿಯ ಸಂದರ್ಭದಲ್ಲಿ ತೆರಿಗೆ ಪಾವತಿದಾರರಿಗೆ ನೆರವಾಗಲು ಒಂದೇ ವಾರದಲ್ಲಿ ಸಿಬಿಡಿಟಿಯಿಂದ 4,250 ಕೋಟಿ ರೂ. ಮೌಲ್ಯದ ಸುಮಾರು 10.2 ಲಕ್ಷ ಮರು ಪಾವತಿ

 

ಕೋವಿಡ್-19 ಸಾಂಕ್ರಾಮಿಕ ಸ್ಥಿತಿಯ ಹಿನ್ನೆಲೆಯಲ್ಲಿ ತೆರಿಗೆ ಪಾವತಿದಾರರಿಗೆ ನೆರವಾಗಲು ಸರ್ಕಾರ 2020ರ ಏಪ್ರಿಲ್ 8 ರಂದು 5 ಲಕ್ಷ ರೂ.ವರೆಗಿನ ಬಾಕಿ ಇರುವ ಎಲ್ಲ ತೆರಿಗೆ ಮರು ಪಾವತಿಗಳನ್ನು ಮಾಡುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು. ಅದರಂತೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಇಂದು 2020ರ ಏಪ್ರಿಲ್ 14ರ ವರೆಗೆ ಸುಮಾರು 4,250 ಕೋಟಿ ರೂ. ಮೌಲ್ಯದ ಅಂದಾಜು 10.2 ಲಕ್ಷ ಮರು ಪಾವತಿಗಳನ್ನು ಈಗಾಗಲೇ ಮಾಡಲಾಗಿದೆ ಎಂದು ತಿಳಿಸಿದೆ. 2019-20ನೇ ಸಾಲಿನಲ್ಲಿ 2020ರ ಮಾರ್ಚ್ 31ರ ವರೆಗೆ ಮರು ಪಾವತಿ ಮಾಡಿರುವ ಸುಮಾರು 1.84 ಲಕ್ಷ ಕೋಟಿ ರೂ.ಗಳನ್ನು ಹೊರತುಪಡಿಸಿ, 2.50 ಕೋಟಿ ಮರು ಪಾವತಿಗಳನ್ನು ಮಾಡಲಾಗಿದೆ.

ಅಲ್ಲದೆ ಸಿಬಿಡಿಟಿ 1.75 ಲಕ್ಷಕ್ಕೂ ಅಧಿಕ ಮರುಪಾವತಿಗಳ ಪ್ರಕ್ರಿಯೆ ಈ ವಾರದಲ್ಲಿ ಆಗಲಿದೆ ಎಂದು ಹೇಳಿದೆ. ಈ ಮರುಪಾವತಿಗಳು 5 ರಿಂದ 7 ದಿನಗಳ ವಾಣಿಜ್ಯ ವಹಿವಾಟಿನ ಸಮಯದಲ್ಲಿ ತೆರಿಗೆ ಪಾವತಿದಾರರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆಯಾಗಲಿದೆ. ಆದರೆ ಸುಮಾರು 1.74 ಲಕ್ಷ ಪ್ರಕರಣಗಳಲ್ಲಿ ತೆರಿಗೆ ಪಾವತಿದಾರರ ಕಡೆಯಿಂದ ಅವರ ತೆರಿಗೆ ಬೇಡಿಕೆ ಕುರಿತಂತೆ ಇ-ಮೇಲ್ ಗೆ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ. ಅವರು ಬಾಕಿ ಉಳಿಸಿಕೊಂಡಿರುವ ತೆರಿಗೆ ಕುರಿತು 7 ದಿನಗಳಲ್ಲಿ ಉತ್ತರ ನೀಡಿದರೆ, ಅವರ ತೆರಿಗೆ ಮರುಪಾವತಿ ಪ್ರಕ್ರಿಯೆ ಕೈಗೊಳ್ಳಲಾಗುವುದು.

ಈ ಐಟಿ ಇಲಾಖೆಯ ಜ್ಞಾಪನ (ರಿಮೈಂಡರ್) ಇ-ಮೇಲ್ ಗಳು ತೆರಿಗೆ ಪಾವತಿದಾರರ ಅನುಕೂಲಕ್ಕಾಗಿಯೇ ಕಳುಹಿಸಲಾಗುತ್ತಿದೆ. ಅವರ ಬಾಕಿ ತೆರಿಗೆ ವಿವರ, ಬ್ಯಾಂಕ್ ವಿವರಗಳು ಮತ್ತು ರಾಜಿ ಸಂಧಾನ/ ಹಿಂದಿನ ಪಾವತಿಯ ವೇಳೆ ಆಗಿರುವ ಮಿಸ್ ಮ್ಯಾಚ್ (ಹೊಂದಾಣಿಕೆಯಾಗದ) ಮತ್ತಿತರ ವಿಚಾರಗಳನ್ನು ಒಳಗೊಂಡಿವೆ.

ಸಿಬಿಡಿಟಿ ಅಂತಹ ಇ-ಮೇಲ್ ಗಳಿಗೆ ತೆರಿಗೆ ಪಾವತಿದಾರರ ಹಿತದೃಷ್ಟಿಯಿಂದ ಆದಷ್ಟು ಬೇಗ ಪ್ರತಿಕ್ರಿಯಿಸುವಂತೆ ಮನವಿ ಮಾಡಿದೆ. ಇದರಿಂದಾಗಿ ತ್ವರಿತವಾಗಿ ಮರು ಪಾವತಿ ಪ್ರಕ್ರಿಯೆಗಳನ್ನು ಕೈಗೊಳ್ಳಬಹುದಾಗಿದೆ. ಸಿಬಿಡಿಟಿ ತೆರಿಗೆ ಪಾವತಿದಾರರಿಗೆ ತಮ್ಮ ಇ-ಫೈಲಿಂಗ್ ಅಕೌಂಟ್ ಗೆ ಲಾಗ್ ಇನ್ ಆಗಿ ಇ-ಮೇಲ್ ಮೂಲಕ ಪರಿಶೀಲಿಸಿ, ಐಟಿ ಇಲಾಖೆಯ ನೋಟಿಸ್ ಗೆ ತಕ್ಷಣ ಪ್ರತಿಕ್ರಿಯಿಸುವಂತೆ ಮನವಿ ಮಾಡಿದೆ.

ಸಾಮಾಜಿಕ ಮಾಧ್ಯಮ ಸೇರಿದಂತೆ ಕೆಲವು ಮಾಧ್ಯಮಗಳಲ್ಲಿ ಸಿಬಿಡಿಟಿಯ ಕಂಪ್ಯೂಟರೀಕೃತ ಇ-ಮೇಲ್ ನಿಂದ ತೆರಿಗೆ ಪಾವತಿದಾರರಿಗೆ ಉತ್ತರಿಸಲು 7 ದಿನಗಳ ನೋಟಿಸ್ ನೀಡಲಾಗಿದೆ ಎಂಬ ಆಕ್ಷೇಪಗಳು ಎತ್ತಿರುವುದು ಕಂಡುಬಂದಿದೆ. ಆದರೆ ಈ ಕುರಿತು ಸ್ಪಷ್ಟನೆ ನೀಡುವುದೆಂದರೆ ಇವೆಲ್ಲಾ ತೆರಿಗೆ ಪಾವತಿದಾರರೊಂದಿಗೆ ಸಂವಹನ ನಡೆಸುವ ಸಾಮಾನ್ಯ ಪ್ರಕ್ರಿಯೆಗಳು, ಕೆಲವು ನ್ಯೂನತೆಗಳಿರುವ ಐಟಿಆರ್ ಗಳು, ಮೇಲ್ನೋಟಕ್ಕೆ ಕೆಲವು ಹೊಂದಾಣಿಕೆಯಾಗದ ಸಂಗತಿಗಳಿದ್ದರೆ ಅಂತಹ ಸಮಯದಲ್ಲಿ ತೆರಿಗೆ ಪಾವತಿದಾರರಿಂದ ಕೆಲವು ಸ್ಪಷ್ಟನೆಗಳನ್ನು ಕೇಳಲಾಗುವುದು. ಅಂತಹ ಪ್ರಕರಣಗಳಲ್ಲಿ ತೆರಿಗೆ ಪಾವತಿದಾರರಿಂದ ತ್ವರಿತ ಪ್ರತಿಕ್ರಿಯೆ ಬಂದರೆ ಐಟಿ ಇಲಾಖೆ ಮರು ಪಾವತಿಯನ್ನು ತ್ವರಿತಗೊಳಿಸುವ ಪ್ರಕ್ರಿಯೆಯನ್ನು ಕೈಗೊಳ್ಳಲು ನೆರವಾಗುತ್ತದೆ.

***


(Release ID: 1614865) Visitor Counter : 202