PIB Headquarters
ಕೋವಿಡ್-19: ಪಿ ಐ ಬಿ ದೈನಿಕ ವರದಿ
Posted On:
15 APR 2020 6:49PM by PIB Bengaluru
ಕೋವಿಡ್-19: ಪಿ ಐ ಬಿ ದೈನಿಕ ವರದಿ
(ಕಳೆದ 24 ಗಂಟೆಗಳಲ್ಲಿ ಕೋವಿಡ್ -19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಪತ್ರಿಕಾ ಪ್ರಕಟಣೆಗಳನ್ನು ಮತ್ತು ಪಿಐಬಿ ಕೈಗೊಂಡ ವಾಸ್ತವದ ಪರಿಶೀಲನೆಯನ್ನು ಒಳಗೊಂಡಿದೆ)
ಕೋವಿಡ್ 19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್
ನಿನ್ನೆಯಿಂದೀಚೆಗೆ 1076 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ 11,439ಕ್ಕೆ ಏರಿದೆ. ಕೋವಿಡ್-19ರಿಂದ ದೇಶದಲ್ಲಿ 377 ಜನರು ಸಾವಿಗೀಡಾಗಿದ್ದಾರೆ. 1306 ಜನರು ಗುಣಮುಖರಾಗಿ/ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್ 19 ನಿರ್ವಹಣೆ ಮಾಡುವ ಸಲುವಾಗಿ ವರದಿಯಾದ ಪ್ರಕರಣಗಳ ಪ್ರಕಾರ ದೇಶದ ಪ್ರತಿಯೊಂದು ಜಿಲ್ಲೆಯನ್ನು ಹಾಟ್ ಸ್ಪಾಟ್ ಜಿಲ್ಲೆಗಳು, ಹಾಟ್ ಸ್ಪಾಟ್ ಅಲ್ಲದ ಜಿಲ್ಲೆಗಳು, ಮತ್ತು ಹಸಿರು ವಲಯದ ಜಿಲ್ಲೆಗಳು ಎಂದು ವಿಭಾಗಿಸಲಾಗಿದೆ. ಸಂಪುಟ ಕಾರ್ಯದರ್ಶಿಯವರು ಇಂದು ಉನ್ನತ ಮಟ್ಟದ ಪರಾಮರ್ಶೆ ಸಭೆ ನಡೆಸಿದರು. ಎಲ್ಲ ಸಂಪರ್ಕಗಳನ್ನು ಪತ್ತೆ ಮಾಡಲು ಮತ್ತು ಮನೆ ಮನೆ ಸಮೀಕ್ಷೆ ನಡೆಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ತಂಡದಲ್ಲಿ ಆರೋಗ್ಯ ಸಿಬ್ಬಂದಿ, ಸ್ಥಳೀಯ ಕಂದಾಯ ಸಿಬ್ಬಂದಿ, ನಗರಪಾಲಿಕೆ ಸಿಬ್ಬಂದಿ, ರೆಡ್ ಕ್ರಾಸ್ ಸಿಬ್ಬಂದಿ, ಎನ್.ವೈ.ಕೆ. ಮತ್ತು ಇತರ ಸ್ವಯಂಸೇವಕರೂ ಇದ್ದಾರೆ.
ದೇಶದಲ್ಲಿ ಕೋವಿಡ್ -19 ಮಹಾಮಾರಿಯ ನಿಗ್ರಹಕ್ಕಾಗಿ ಸಮಗ್ರ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಎಂ.ಎಚ್.ಎ.
ದೇಶದಲ್ಲಿ ಕೋವಿಡ್ 19 ನಿಗ್ರಹಕ್ಕಾಗಿ ಜಾರಿ ಮಾಡಿರುವ ಲಾಕ್ ಡೌನ್ ಕ್ರಮಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಸಚಿವಾಲಯಗಳು/ ಇಲಾಖೆಗಳು, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಎಂ.ಎಚ್.ಎ. ಸಮಗ್ರ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳು ಕೋವಿಡ್ 19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳನ್ನು, ಕಚೇರಿಗಳಲ್ಲಿ, ಕಾರ್ಯಸ್ಥಳದಲ್ಲಿ, ಕೈಗಾರಿಕೆಗಳಲ್ಲಿ ಮತ್ತು ಉದ್ದಿಮೆಗಳಲ್ಲಿ ಸಾಮಾಜಿಕ ಅಂತರಕ್ಕಾಗಿ ಎಸ್.ಓ.ಪಿ.ಗಳು, ಮತ್ತು ಲಾಕ್ ಡೌನ್ ನಿಯಮ ಉಲ್ಲಂಘನೆ ಅಪರಾಧಗಳಿಗೆ ವಿಪತ್ತು ನಿರ್ವಹಣಾ ಕಾಯಿದೆ 2005ರ ಸೂಕ್ತ ಸೆಕ್ಷನ್ ಗಳು ಮತ್ತು ಐಪಿಸಿ 1860ರಡಿಯಲ್ಲಿ ದಂಡದ ಬಗ್ಗೆ, ವಿವರಿಸುತ್ತವೆ.
ಗೃಹ ವ್ಯವಹಾರಗಳ ಸಚಿವಾಲಯದಿಂದ ಪರಿಷ್ಕೃತ ಸಮಗ್ರ ಮಾರ್ಗಸೂಚಿ
ಪ್ರಧಾನಮಂತ್ರಿಯವರ ಪ್ರಕಟಣೆಯ ಅನುಸರಣೆಯಾಗಿ, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂ.ಎಚ್.ಎ.) ಏಪ್ರಿಲ್ 14, 2020ರಂದು ಆದೇಶ ಹೊರಡಿಸಿದ್ದು, ಮೇ 3ರವರೆಗೆ ಭಾರತದಲ್ಲಿ ಲಾಕ್ ಡೌನ್ ಮುಂದುವರಿಸಿದೆ. ಎಂ.ಎಚ್.ಎ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಜಿಲ್ಲಾಡಳಿತಗಳು ದಿಗ್ಬಂಧನದ ವಲಯ ಎಂದು ಗುರುತು ಮಾಡದ ಪ್ರದೇಶಗಳಲ್ಲಿ ಹೆಚ್ಚುವರಿ ಚಟುವಟಿಕೆಗಳಿಗೆ ಅನುಮತಿ ನೀಡಿ, ಸಮಗ್ರ ಪರಿಷ್ಕೃತ ಮಾರ್ಗಸೂಚಿಗಳನ್ನು ಏಪ್ರಿಲ್ 15, 2020ರಂದು ಹೊರಡಿಸಿದೆ, ಇದರಲ್ಲಿ ದೇಶದಾದ್ಯಂತ ನಿರ್ಬಂಧಿತ ಚಟುವಟಿಕೆಗಳು ಮತ್ತು ದಿಗ್ಬಂಧನದ ವಲಯದಲ್ಲಿ ಅನುಮತಿಸಲಾಗಿರುವ ಚಟುವಟಿಕೆಗಳು ಮತ್ತು ಏಪ್ರಿಲ್ 20, 2020ರಿಂದ ಭಾರತದ ಉಳಿದೆಡೆ ಆಯ್ದ ಅನುಮತಿಸಲಾಗುವ ಚಟುವಟಿಕೆಗಳ ವಿವರಗಳಿವೆ.
ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕದ ತಡೆಗೆ ಲಾಕ್ ಡೌನ್ ಕ್ರಮಗಳು ಮುಂದುವರಿಯಲಿದ್ದು, ಮೇ 3, 2020ರವರೆಗೆ ಜಾರಿಯಲ್ಲಿರುತ್ತವೆ
ಭಾರತ ಸರ್ಕಾರ, ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯಗಳು/ಇಲಾಖೆಗಳಿಗೆ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಮತ್ತು ಪ್ರಾಧಿಕಾರಗಳಿಗೆ ನಿರ್ದೇಶನ ನೀಡಿದ್ದು, ಕೋವಿಡ್ 19 ಸೋಂಕು ಪ್ರಸರಣ ತಡೆಗೆ ಎಂ.ಎಚ್.ಎ. ಹೊರಡಿಸಿರುವ ಸಮಗ್ರ ಮಾರ್ಗಸೂಚಿಯಲ್ಲಿನ ಲಾಕ್ ಡೌನ್ ಕ್ರಮಗಳು ದೇಶವ್ಯಾಪಿ ಮುಂದುವರಿಯಲಿದ್ದು, ಮೇ 3, 2020ರವರೆಗೆ ಜಾರಿಯಲ್ಲಿರುತ್ತವೆ ಎಂದು ತಿಳಿಸಿದೆ.
ಕೋವಿಡ್ 19 ಸಾಂಕ್ರಾಮಿಕದ ಸ್ಥಿತಿಯಲ್ಲಿ ತೆರಿಗೆದಾರರಿಗೆ ನೆರವಾಗಲು 4,20 ಕೋಟಿ ರೂ. ಮೌಲ್ಯದ 10.2 ಲಕ್ಷಕ್ಕೂ ಅಧಿಕ ಮರುಪಾವತಿಗಳನ್ನು ಸಿಬಿಡಿಟಿ ಒಂದು ವಾರದ ಅವಧಿಯಲ್ಲಿ ಮಾಡಿದೆ
ಕೋವಿಡ್ 19 ಸಾಂಕ್ರಾಮಿಕದ ಸನ್ನಿವೇಶದಲ್ಲಿ ತೆರಿಗೆದಾರರಿಗೆ ನೆರವಾಗಲು 5 ಲಕ್ಷ ರೂ.ಗಳವರೆಗಿನ ಆದಾಯ ತೆರಿಗೆ ಮರುಪಾವತಿ ಬಾಕಿಯನ್ನು ಬಿಡುಗಡೆ ಮಾಡುವ ಸರ್ಕಾರದ ನಿರ್ಧಾರದ ಅನುಸರಣೆಯ ಸಲುವಾಗಿ 2020ರ ಏಪ್ರಿಲ್ 14ರವರೆಗೆ 10.2 ಲಕ್ಷ ಜನರಿಗೆ 4,250ಕೋಟಿ ರೂ. ಮೌಲ್ಯದ ಮರುಪಾವತಿ ಮಾಡಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಇಂದು ತಿಳಿಸಿದೆ. ಈ ಮರುಪಾವತಿಗಳು 19-20ನೇ ಹಣಕಾಸು ವರ್ಷದಲ್ಲಿ 2020ರ ಮಾರ್ಚ್ 31ರವರೆಗೆ ಈಗಾಗಲೇ ಮಾಡಲಾಗಿರುವ ಒಟ್ಟು ರೂ. 1.84 ಲಕ್ಷ ಕೋಟಿ ಮೌಲ್ಯದ 2.50 ಕೋಟಿ ಮರುಪಾವತಿಯ ಮೇಲಿನವುಗಳಾಗಿವೆ.
ಲಾಕ್ ಡೌನ್ ಅವಧಿಯಲ್ಲಿ ಬೇಗ ಹಾಳಾಗುವ ಪದಾರ್ಥಗಳ ಅಂತರ ರಾಜ್ಯ ಸಾಗಾಟಕ್ಕೆ ಅನುವು ಮಾಡಿಕೊಡಲು ಅಖಿಲ ಭಾರತ ಕೃಷಿ ಸಾರಿಗೆ ಸಹಾಯವಾಣಿ ಕೇಂದ್ರ ಸಂಖ್ಯೆ 18001804200 ಮತ್ತು 14488ನ್ನು ಉದ್ಘಾಟಿಸಲಾಗಿದೆ
ಕೋವಿಡ್ 19 ನಿಗ್ರಹದ ಹಿನ್ನೆಲೆಯಲ್ಲಿ ಜಾರಿ ಗೊಳಿಸಲಾಗಿರುವ ಲಾಕ್ ಡೌನ್ ಅವಧಿಯಲ್ಲಿ ಬೇಗ ಹಾಳಾಗುವ ಕೃಷಿ ಉತ್ಪನ್ನಗಳ ಅಂತಾರಾಜ್ಯ ಸಾಗಾಟಕ್ಕೆ ಅನುವು ಮಾಡಿಕೊಡುವ ಸಲುವಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ಥೋಮರ್ ಅವರು ಅಖಿಲ ಭಾರತ ಕೃಷಿ ಸಾರಿಗೆ ಸಹಾಯವಾಣಿ ಕೇಂದ್ರಕ್ಕೆ ಕೃಷಿ ಭವನದಲ್ಲಿಂದು ನಡೆದ ಸಮಾರಂಭದಲ್ಲಿ ಚಾಲನೆ ನೀಡಿದರು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ 1.27 ಕೋಟಿಗೂ ಹೆಚ್ಚು ನಿರ್ಗತಿಕರು/ ಭಿಕ್ಷಕರು/ ನಿರ್ವಸತಿಗ ವ್ಯಕ್ತಿಗಳಿಗೆ ಲಾಕ್ ಡೌನ್ ಆರಂಭವಾದಾಗಿನಿಂದ ಉಚಿತ ಊಟದ ವ್ಯವಸ್ಥೆ ಮಾಡಿದೆ
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಲಾಕ್ ಡೌನ್ ಆರಂಭವಾದಾಗಿನಿಂದ (10.04.2020ರವರೆಗೆ) 1.27 ಕೋಟಿಗೂ ಹೆಚ್ಚು ನಿರ್ಗತಿಕರು/ ಭಿಕ್ಷಕರು/ ನಿರ್ವಸತಿಗ ವ್ಯಕ್ತಿಗಳಿಗೆ ಉಚಿತ ಊಟದ ವ್ಯವಸ್ಥೆ ಮಾಡಿದೆ.
ಪ್ರಧಾನಮಂತ್ರಿ ಮತ್ತು ಪಾಲಸ್ತೀನ್ ರಾಷ್ಟ್ರದ ಅಧ್ಯಕ್ಷರ ನಡುವೆ ದೂರವಾಣಿ ಸಂಭಾಷಣೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ಯಾಲಸ್ತೀನ್ ಅಧ್ಯಕ್ಷ ಘನತೆವೆತ್ತ ಶ್ರೀ ಮೊಹಮದ್ ಅಬ್ಬಾಸ್ ಅವರೊಂದಿಗೆ ದೂರವಾಣಿಯಲ್ಲಿ ಇಂದು ಮಾತುಕತೆ ನಡೆಸಿದರು. ಇಬ್ಬರೂ ನಾಯಕರು ಪ್ರಸಕ್ತ ಕೋವಿಡ್ 19 ಒಡ್ಡಿರುವ ಸವಾಲುಗಳ ಬಗ್ಗೆ ಚರ್ಚಿಸಿದರು ಮತ್ತು ತಮ್ಮ ತಮ್ಮ ರಾಷ್ಟ್ರಗಳಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ರೈತರಿಗೆ ಮತ್ತು ಕೃಷಿಗೆ ಲಾಕ್ ಡೌನ್ ಅವಧಿಯಲ್ಲಿ ಉನ್ನತ ಆದ್ಯತೆ ನೀಡುವಂತೆ – ಕೇಂದ್ರ ಮತ್ತು ರಾಜ್ಯಗಳಿಗೆ ಉಪ ರಾಷ್ಟ್ರಪತಿ ಕರೆ
ಉಪ ರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು ಅವರು ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಈ ಲಾಕ್ ಡೌನ್ ಸಮಯದಲ್ಲಿ ರೈತರಿಗೆ ಮತ್ತು ಕೃಷಿಗೆ ಉನ್ನತ ಆದ್ಯತೆ ನೀಡುವಂತೆ ಕರೆ ನೀಡಿದ್ದು, ಈ ಅವಧಿಯಲ್ಲಿ ಕೃಷಿ ಚಟುವಟಿಕೆ ಮತ್ತು ಕೃಷಿ ಉತ್ಪನ್ನಗಳ ಸಾಗಾಟ ಸುಗಮವಾಗಿ ನಡೆಯಲು ಅವಕಾಶ ನೀಡುವಂತೆ ತಿಳಿಸಿದ್ದಾರೆ. ಕೇಂದ್ರ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ಥೋಮರ್ ಅವರೊಂದಿಗೆ ಸಂವಾದದ ವೇಳೆ ಉಪ ರಾಷ್ಟ್ರಪತಿಯವರು ಕೃಷಿ ಸಚಿವಾಲಯ ಕೃಷಿ ಕ್ಷೇತ್ರದ ಉಳಿವಿಗೆ ಕೈಗೊಂಡಿರುವ ವಿವಿಧ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉತ್ಪಾದಕರು ಮತ್ತು ಗ್ರಾಹಕರ ಹಿತ ಕಾಯುವಂತೆ ತಾವು ಬಯಸುವುದಾಗಿ ತಿಳಿಸಿದರು.
ಲಾಕ್ ಡೌನ್ ಅವಧಿಯಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆಯ ಉತ್ತೇಜನಕ್ಕೆ ಕೃಷಿ, ಸಹಕಾರ, ಮತ್ತು ರೈತರ ಕಲ್ಯಾಣ ಇಲಾಖೆಯ ಉಪಕ್ರಮ
ಭಾರತ ಸರ್ಕಾರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ರೈತರು ಮತ್ತು ಕೃಷಿ ಚಟುವಟಿಕೆಗಳಿಗೆ ಲಾಕ್ ಡೌನ್ ಅವಧಿಯಲ್ಲಿ ಅನುವು ಮಾಡಿಕೊಡಲು ಕ್ಷೇತ್ರೀಯ ಮಟ್ಟದಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ.
ದೇಶದಾದ್ಯಂತ ಜನತೆಗೆ ಅತ್ಯಾವಶ್ಯಕ ವೈದ್ಯಕೀಯ ಪೂರೈಕೆಯ ಖಾತ್ರಿಗೆ ಸರ್ಕಾರ ಮತ್ತು ವಾಯುಯಾನ ಉದ್ದಿಮೆ ಬದ್ಧವಾಗಿದೆ
ನಾಗರಿಕ ವಿಮಾನಯಾನ ಮತ್ತು ವಾಯುಯಾನ ಉದ್ದಿಮೆ ಭಾರತದ ಕೋವಿಡ್ -19 ವಿರುದ್ಧದ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲು ದೃಢಸಂಕಲ್ಪ ಮಾಡಿದ್ದು, ವೈದ್ಯಕೀಯ ಸರಕುಗಳನ್ನು ಭಾರತದೊಳಗೆ ಮತ್ತು ವಿದೇಶಗಳಿಗೆ ಸಮರ್ಥವಾಗಿ ಮತ್ತು ವೆಚ್ಚದ ಹೊರೆಯಾಗದ ರೀತಿಯಲ್ಲಿ ರವಾನೆ ಮಾಡುತ್ತಿವೆ. ನಾಗರಿಕ ವಿಮಾನ ಯಾನ ಸಚಿವಾಲಯದಿಂದ ಕಾರ್ಯಾಚರಣೆ ಮಾಡಲಾಗುತ್ತಿರುವ ಲೈಫ್ ಲೈನ್ ಉಡಾನ್ ವಿಮಾನಗಳು ಅತ್ಯಾವಶ್ಯಕವಾದ ವೈದ್ಯಕೀಯ ಸರಕನ್ನು ದೇಶದ ದೂರದ ಪ್ರದೇಶಗಳಿಗೂ ಸಾಗಿಸಿ ಭಾರತದ ಕೋವಿಡ್ 19 ವಿರುದ್ಧದ ಹೋರಾಟಕ್ಕೆ ಬೆಂಬಲವಾಗಿ ನಿಂತಿದೆ.
ಭಾರತೀಯ ಕೈಗಾರಿಕೆಗಳ ಒಕ್ಕೂಟದ ದೊಡ್ಡ ಶಾಖೆಗಳೊಂದಿಗೆ ಡಾ. ಹರ್ಷವರ್ಧನ್ ಸಂವಾದ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು 50ಕ್ಕೂ ಹೆಚ್ಚು ಭಾರತೀಯ ಕೈಗಾರಿಕಾ ನಾಯಕರುಗಳೊಂದಿಗೆ ಸಂವಾದನಾತ್ಮಕ ಸಭೆ ನಡೆಸಿದರು. ಕೋವಿಡ್-19 ವಿರುದ್ಧದ ಹೋರಾಟದ ಸಂದರ್ಭದಲ್ಲಿ ಆರ್ಥಿಕತೆಯ ಪುನರುಜ್ಜೀವನ, ಪರೀಕ್ಷಾ ಸೌಲಭ್ಯಗಳ ಲಭ್ಯತೆ, ದಿಗ್ಭಂಧನ ಸೌಲಭ್ಯಗಳು, ಔಷಧೀಯ ಉದ್ಯಮಕ್ಕೆ ಕಚ್ಚಾ ವಸ್ತುಗಳು, ರೋಗಗಳ ಕಣ್ಗಾವಲು, ಟೆಲಿಮೆಡಿಸಿನ್ ಸೌಲಭ್ಯಗಳ ಬಳಕೆ, ಮುನ್ನೆಚ್ಚರಿಕೆ ಆರೋಗ್ಯ ಸೇವೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಅವರ ಕಳವಳಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು..
ಲಾಕ್ ಡೌನ್ ಹಿನ್ನೆಲೆಯಲ್ಲಿ ಯುಪಿಎಸ್ಸಿಯಿಂದ ಪರೀಕ್ಷಾ ವೇಳಾಪಟ್ಟಿ ಕುರಿತ ಪ್ರಕಟಣೆ
ಅಭ್ಯರ್ಥಿಗಳು ಮತ್ತು ಸಲಹೆಗಾರರು ದೇಶದ ಎಲ್ಲಾ ಭಾಗಗಳಿಂದ ಪ್ರಯಾಣಿಸಬೇಕಾಗಿರುವ ಕಾರಣ ಎಲ್ಲಾ ಸಂದರ್ಶನಗಳು, ಪರೀಕ್ಷೆಗಳು ಮತ್ತು ನೇಮಕಾತಿ ಮಂಡಳಿಗಳ ದಿನಾಂಕಗಳನ್ನು ಕಾಲಕಾಲಕ್ಕೆ ಪರಿಶೀಲಿಸಲು ಯುಪಿಎಸ್ಸಿ ನಿರ್ಧರಿಸಿದೆ. ಎರಡನೇ ಹಂತದ ಲಾಕ್‌ಡೌನ್‌ನ ಬಳಿಕ ಉಳಿದಿರುವ ನಾಗರಿಕ ಸೇವೆಗಳ -2019ನೇ ಸಾಲಿನ ವ್ಯಕ್ತಿತ್ವ ಪರೀಕ್ಷೆಗಳಿಗೆ ಹೊಸ ದಿನಾಂಕದ ಬಗ್ಗೆ 2020ರ ಮೇ 3ರ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು. ಕೇಂದ್ರ ಲೋಕ ಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಸ್ವಯಂಪ್ರೇರಿತರಾಗಿ ತಮ್ಮ ಮೂಲ ವೇತನದ ಶೇ.30ರಷ್ಟನ್ನು ಒಂದು ವರ್ಷಗಳ ಕಾಲ ತ್ಯಜಿಸಲು ನಿರ್ಧರಿಸಿದ್ದಾರೆ.
ವಿಸಿ ಮತ್ತು ನೀತಿ ಆಯೋಗದ ಸದಸ್ಯರು ಮತ್ತು ಇಎಸಿ ಅಧ್ಯಕ್ಷರು, ಇಎಸಿ-ಪಿಎಂರಿಂದ ಸ್ವಯಂಪ್ರೇರಿತರಾಗಿ ಶೇ.30ರಷ್ಟು ವೇತನ ಕಡಿತದೊಂದಿಗೆ ಪಿಎಂ ಕೇರ್ಸ್ ಗೆ ದೇಣಿಗೆ
ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮತ್ತು ರಾಷ್ಟ್ರೀಯ ವಿಪತ್ತಿನ ವಿರುದ್ಧ ಸರ್ಕಾರ ನಡೆಸುತ್ತಿರುವ ಹೋರಾಟದ ಪ್ರಯತ್ನಗಳಿಗೆ ಬೆಂಬಲ ನೀಡಲು ನೀತಿ ಆಯೋಗದ ಉಪಾಧ್ಯಕ್ಷರು ಮತ್ತು ಸದಸ್ಯರು ಹಾಗೂ ಇಎಸಿ-ಪಿಎಂ ಅಧ್ಯಕ್ಷರು, ಸ್ವಯಂ ಪ್ರೇರಿತರಾಗಿ ತಮ್ಮ ವೇತನದ ಶೇ.30ರಷ್ಟನ್ನು ಒಂದು ವರ್ಷಕಾಲ ಕಡಿತಕ್ಕೆ ನಿರ್ಧರಿಸಿದ್ದಾರೆ. ಈ ಹಣವನ್ನು ಪಿಎಂ ನಾಗರಿಕ ನೆರವು ಮತ್ತು ತುರ್ತು ಸ್ಥಿತಿಯ ಪರಿಹಾರ (ಪಿಎಂಕೇರ್ಸ್)ನಿಧಿಗೆ ನೀಡಲಾಗುವುದು.
ಏಪ್ರಿಲ್ 2020ರಲ್ಲಿ 30,000 ನಿಲುವಂಗಿ (ಪಿಪಿಇ) ಉತ್ಪಾದನೆಗೆ ಭಾರತೀಯ ರೈಲ್ವೆಯ ಯೋಜನೆ
ಭಾರತೀಯ ರೈಲ್ವೆ ತನ್ನ ಉತ್ಪಾದನಾ ಘಟಕಗಳು, ಕಾರ್ಯಾಗಾರಗಳು ಮತ್ತು ಕ್ಷೇತ್ರೀಯ ಘಟಕಗಳ ಮೂಲಕ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ),ಗಳನ್ನು ಕೋವಿಡ್ -19 ಸೋಂಕಿತ ರೋಗಿಗಳೊಂದಿಗೆ ನೇರವಾಗಿ ವ್ಯವಹರಿಸುವ ವೈದ್ಯಕೀಯ ಮತ್ತು ಆರೋಗ್ಯ ಆರೈಕೆ ಸಿಬ್ಬಂದಿಗೆ ಪೂರೈಸಲು ನಿಲುವಂಗಿಗಳ ಉತ್ಪಾದನೆ ಆರಂಭಿಸಿದೆ. ಭಾರತೀಯ ರೈಲ್ವೆ 30 ಸಾವಿರ ಇಂಥ ನಿಲುವಂಗಿಗಳನ್ನು ಏಪ್ರಿಲ್ 2020ರೊಳಗೆ ತಯಾರಿಸಲು ಮತ್ತು ಮೇ 2020ರೊಳಗೆ 1 ಲಕ್ಷ ತಯಾರಿ ಮಾಡಲು ಯೋಜನೆ ರೂಪಿಸಿದೆ. ಪೋಟೋಟೈಪ್ ನಿಲುವಂಗಿಗಳು ಈಗಾಗಲೇ ನಿಗದಿತ ಪರೀಕ್ಷೆಗಳಲ್ಲಿ ಸಾಗಿ ಅನುಮತಿ ಪಡೆದಿದ್ದು, ಅತ್ಯುನ್ನತ ದರ್ಜೆಯವಾಗಿವೆ ಎಂದು ಗ್ವಾಲಿಯರ್ ನ ಡಿಆರ್.ಡಿ.ಓ. ಪ್ರಯೋಗಾಲಯದಿಂದ ಮಾನ್ಯತೆ ಗಳಿಸಿದೆ.
ಪಾರ್ಸಲ್ ರೈಲುಗಳು ರೈಲ್ವೆ ಇಲಾಖೆಗೆ ಆದಾಯ ತರಲು ಆರಂಭಿಸಿವೆ; 20400ಕ್ಕೂ ಹೆಚ್ಚು ಟನ್ ಗಳಷ್ಟು ಸರಕನ್ನು ಲಾಕ್ ಡೌನ್ ಅವಧಿಯಲ್ಲಿ ತುಂಬಿ ಸಾಗಿಸಿದ್ದು, ಆದಾಯವು ರೂ.7.4 ಕೋಟಿ ಆಗಿದೆ
ಔಷಧ ಪೂರೈಕೆ, ವೈದ್ಯಕೀಯ ಸಲಕರಣೆಗಳು, ಆಹಾರ ಇತ್ಯಾದಿ ಅತ್ಯಾವಶ್ಯಕ ವಸ್ತುಗಳನ್ನು ಸಾಗಣೆ ಮಾಡಿದ ಸಣ್ಣ ಪಾರ್ಸಲ್ ರೈಲುಗಳು ಕೋವಿಡ್ 19 ವಿರುದ್ಧದ ಹೋರಾಟದ ಲಾಕ್ ಡೌನ್ ಅವಧಿಯಲ್ಲಿ ಅತ್ಯಂತ ಮಹತ್ವಪೂರ್ಣವಾಗಿವೆ. ಈ ಮಹತ್ವದ ಅಗತ್ಯವನ್ನು ಪೂರೈಸುವ ಸಲುವಾಗಿ, ಭಾರತೀಯ ರೈಲ್ವೆಯು ರೈಲ್ವೆ ಪಾರ್ಸೆಲ್ ವ್ಯಾನ್‌ಗಳನ್ನು ಇ-ಕಾಮರ್ಸ್ ಘಟಕಗಳು ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಇತರ ಗ್ರಾಹಕರಿಂದ ತ್ವರಿತ ಸಾಮೂಹಿಕ ಸಾಗಣೆಗೆ ಲಭ್ಯವಾಗುವಂತೆ ಮಾಡಿದೆ. ಅಗತ್ಯ ವಸ್ತುಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಆಯ್ದ ಮಾರ್ಗಗಳಲ್ಲಿ ಸಮಯ ನಿಗದಿಪಡಿಸಿದ ಪಾರ್ಸೆಲ್ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ನಿರ್ಧರಿಸಿದೆ.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614800
ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ನ ದೂರದ ಪ್ರದೇಶಗಳಿಗೆ ವಿಶೇಷ ಅಂಚೆ ವ್ಯವಸ್ಥೆ
ಜಮ್ಮು ಮತ್ತ ಕಾಶ್ಮೀರ ಮತ್ತು ಲಡಾಕ್ ಕೇಂದ್ರಾಡಳಿತ ಪ್ರದೇಶದ ಅಂಚೆ ಕಚೇರಿಗಳು ಹಣಕಾಸಿನ ವಹಿವಾಟಿಗೆ ಅನುಕೂಲ ಒದಗಿಸುವ ಪ್ರಾಥಮಿಕ ಉದ್ದೇಶದಿಂದ ತೆರೆದಿದ್ದು- ಸುಲಭವಾಗಿ ಹಣ ಹಿಂಪಡೆಯುವುದು ಮತ್ತು ಹಣವನ್ನು ಠೇವಣಿ ಇಡುವುದರಿಂದ ಜನರು ತಮ್ಮ ದಿನನಿತ್ಯದ ಅಗತ್ಯತೆಗಳನ್ನು ಪೂರೈಸಲು ಸಾಕಷ್ಟು ಹಣದ ಹರಿವನ್ನು ಹೊಂದಲು ಅವಕಾಶವಾಗಿದೆ.. ಈ ನಿಟ್ಟಿನಲ್ಲಿ, ಅಂಚೆ ಕಚೇರಿಗಳಲ್ಲಿ ಆಧಾರ್ ಸಂಪರ್ಕಿತ ಪಾವತಿ ವ್ಯವಸ್ಥೆಯನ್ನು (ಎಇಪಿಎಸ್) ಸಹ ಸಕ್ರಿಯಗೊಳಿಸಲಾಗಿದೆ ಇದರಿಂದ ಯಾವುದೇ ಬ್ಯಾಂಕಿನಲ್ಲಿ ಬ್ಯಾಂಕ್ ಖಾತೆ ಹೊಂದಿರುವ ಜನರು ಯಾವುದೇ ಅಂಚೆ ಕಚೇರಿಯಿಂದ ತಿಂಗಳಿಗೆ 10,000 / - ರೂ ವರೆಗೆ ಹಿಂಪಡೆಯಬಹುದಾಗಿದೆ.
ದೇಖೋ ಅಪ್ನಾ ದೇಶ್ ಎರಡನೇ ವೆಬಿನರ್ ಸರಣಿಯಲ್ಲಿ ನಾಳೆ ಕೋಲ್ಕತ್ತಾದ ಶ್ರೇಷ್ಠ ಇತಿಹಾಸ ಮತ್ತು ಸಂಸ್ಕೃತಿಯನ್ನು ತಿಳಿಯಿರಿ
ಲಾಕ್ ಡೌನ್ ಅವಧಿಯಲ್ಲಿ ಪ್ರವಾಸೋದ್ಯಮ ಸಚಿವಾಲಯದ ದೇಖೋ ಅಪ್ನಾ ದೇಶ್ ವಿಬೆನರ್ ಸರಣಿಗೆ ಉತ್ತಮ ಸ್ಪಂದನೆ ದೊರಕುತ್ತಿದೆ.ದೆಹಲಿಯ ಯಶಸ್ಸಿನ ಬಳಿಕ, ಈಗ ದೇಖೋ ಅಪ್ನಾ ದೇಶ್ ಎರಡನೇ ವೆಬಿನರ್ ಸರಣಿ ನಾಳೆ (16ನೇ ಏಪ್ರಿಲ್) ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 12ರವರೆಗೆ ನಡೆಯಲಿದೆ. ಈ ವೆಬಿನರ್ ಜನರಿಗೆ ಕೋಲ್ಕತ್ತಾ ಬಗ್ಗೆ ಮತ್ತು ಅದರ ಸಂಸ್ಕೃತಿಯ ಬಗ್ಗೆ ತಿಳಿಯಲು ನೆರವಾಗಲಿದೆ.
ಕೋವಿಡ್ 19 ಕುರಿತಂತೆ ಜಾಗೃತಿ ಮೂಡಿಸಲು ಮತ್ತು ಜನರ ಸುರಕ್ಷತೆಗಾಗಿ ಸ್ಮಾರ್ಟ್ ಸಿಟಿಗಳು ಅತ್ಯಾಧುನಿಕ ತಂತ್ರಜ್ಞಾನ ಬಳಸುತ್ತಿವೆ
ಕೋವಿಡ್ ಮಹಾಮಾರಿಯ ತಡೆಗೆ ಪವರ್ ಗ್ರಿಡ್ ಸಿಎಸ್ಆರ್ ಚಟುವಟಿಕೆ ಕೈಗೊಂಡಿದೆ
ಇಡೀ ದೇಶವೇ ಲಾಕ್ ಡೌನ್ ನಲ್ಲಿರುವಾಗ, ಇಂಧನ ಸಚಿವಾಲಯದ ಅಡಿಯಲ್ಲಿ ಬರುವ ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆ ಪವರ್ ಗ್ರಿಡ್ 24x7 ವಿದ್ಯುತ್ ಪೂರೈಕೆಯ ಜವಾಬ್ದಾರಿಯ ನಿರ್ವಹಣೆಯ ಜೊತೆಗೆ ಭಾರತದಲ್ಲಿ ಸಾಂಕ್ರಾಮಿಕದ ಪರಿಣಾಮದಿಂದ ಬಾಧಿತರಾಗಿರುವವರಿಗೆ ಮಾನವೀಯ ನಲೆಗಟ್ಟಿನಲ್ಲಿ ಪರಿಹಾರ ಚಟುವಟಿಕೆಗಳನ್ನೂ ಕೈಗೊಂಡಿದೆ.
ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ
- ಕೇರಳ: ದೇಶದ ಎರಡನೇ ಹಾಗೂ ರಾಜ್ಯದ ಪ್ರಥಮ ಗರ್ಭಿಣಿ ಕೋವಿಡ್ ರೋಗಿ ಗುಣಮುಖರಾಗಿ ಕೊಲ್ಲಂ ಎಂ.ಸಿ.ಯಿಂದ ಬಿಡುಗಡೆಯಾಗಿದ್ದಾರೆ, ನ್ಯೂಯಾರ್ಕ್ ಮತ್ತು ದುಬೈನಲ್ಲಿ ಇನ್ನಿಬ್ಬರು ಮಲೆಯಾಳಿಗಳು ಸಾವಿಗೀಡಾಗಿದ್ದಾರೆ. ಇದರೊಂದಿಗೆ ಕೋವಿಡ್ ಗೆ ವಿದೇಶದಲ್ಲಿ ಬಲಿಯಾದ ಕೇರಳಿಗರ ಸಂಖ್ಯೆ 30ಕ್ಕೆ ಏರಿದೆ. ತಿರಿಸ್ಸೂರ್ ಪೂರಂ ಉತ್ಸವವನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ರದ್ದು ಮಾಡಲಾಗಿದೆ.
- ತಮಿಳುನಾಡು: ಚೆನ್ನೈ ನಗರಪಾಲಿಕೆ ಮೇ 3ರಹೊತ್ತಿಗೆ 40 ಸಾವಿರ ಮಾದರಿ ಪರೀಕ್ಷಿಸಲಿದೆ. ನಗರದಾದ್ಯಂತ 10ಸಾವಿರ ಕ್ವಾರಂಟೈನ್ ಪ್ರದೇಶ ನಿರ್ಮಿಸಲಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ ನಿನ್ನೆಯವರೆಗೆ 1204 ಆಗಿತ್ತು. 81 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 1955 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಚೆನ್ನೈ (211) ಮತ್ತು ಕೊಯಮತ್ತೂರು 126 ಪ್ರಕರಣಗಳಿಂದ ಮುಂದಿವೆ.
- ಕರ್ನಾಟಕ: ಕೇಂದ್ರೀಕೃತ ಸಂಗ್ರಹಣೆಗಾಗಿ ಕೇಂದ್ರದ ಆದೇಶ ಮತ್ತು ಚೀನಾ ಸರ್ಕಾರದ ನೀತಿ ಬದಲಾವಣೆಗಳಿಂದಾಗಿ ಒಂದು ಲಕ್ಷ ಕ್ಷಿಪ್ರ ಪರೀಕ್ಷಾ ಕಿಟ್‌ಗಳಿಗಾಗಿ ರಾಜ್ಯ ಕಾಯುತ್ತಿದೆ. ಒಟ್ಟು ಕೋವಿಡ್ ದೃಢಪಟ್ಟ ಪ್ರಕರಣಗಳು 260. ಸಾವಿನ ಸಂಖ್ಯೆ 10, ಗುಣಮುಖರಾದವರು 71, ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣ 69 ದಾಖಲಾಗಿದೆ. ಮೈಸೂರು 48 ಮತ್ತು ಬೆಳಗಾವಿ 18.
- ತೆಲಂಗಾಣ: ಏಪ್ರಿಲ್ 20ರ ನಂತರ ರಾಜ್ಯ ಲಾಕ್ ಡೌನ್ ನಿರ್ಬಂಧಗಳನ್ನು ಹಂತಹಂತವಾಗಿ ಸಡಿಲಗೊಳಿಸಲು ಯೋಜಿಸಿದೆ. ಡಿಆರ್.ಡಿ.ಎಲ್. ಹೈದ್ರಾಬಾದ್ ಮಾದರಿ ಪಡೆಯಲು, ಕೋವ್ ಸಾಕ್ – ಕೋವಿಡ್ ಮಾದರಿ ಸಂಗ್ರಹಣೆ ಕಿಯೋಸ್ಕ್ ಅಭಿವೃದ್ಧಿಪಡಿಸಿದೆ. ಈವರೆಗೆ ವರದಿಯಾಗಿರುವ ಒಟ್ಟು ಪ್ರಕರಣಗಳು 644.
- ಆಂಧ್ರಪ್ರದೇಶ: 19 ಹೊಸ ಪ್ರಕರಣ ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 502 ಆಗಿದೆ. ಈವರೆಗೆ 11 ಮಂದಿ ಸಾವಿಗೀಡಾಗಿದ್ದಾರೆ. ಗುಣಮುಖರಾದವರು 16, ಹೆಚ್ಚಿನ ಪ್ರಕರಣಗಳು ಗುಂಟೂರು (118), ಕರ್ನೂಲ್ (97), ನೆಲ್ಲೂರು (56), ಕೃಷ್ಣ (45), ಪ್ರಕಾಶಂ (42), ಕಡಪ (33), ಪಶ್ಚಿಮ ಗೋದಾವರಿ (31). ರಾಜ್ಯ ಬಡವರಿಗೆ ನಾಳೆಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಉಚಿತ ಪಡಿತರ ವಿತರಿಸಲಿದೆ.
- ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದ ಏಕೈಕ ಕೋವಿಡ್ -19 ರೋಗಿಯಲ್ಲಿ ಮೂರನೇ ಪರೀಕ್ಷೆಯಲ್ಲಿ ಸೋಂಕು ಇಲ್ಲ ಎಂಬುದು ದೃಢಪಟ್ಟಿದೆ.
- ಅಸ್ಸಾಂ: ಅಸ್ಸಾಂನಲ್ಲಿನ ಮದ್ಯದ ಅಂಗಡಿಗಳು ಮೇ 3ರವರೆಗೆ ತತ್ ಕ್ಷಣವೇ ಮುಚ್ಚಲ್ಪಟ್ಟಿವೆ.
- ಮಣಿಪುರ: ಪೈಲಟ್ ನ 11 ಕುಟುಂಬ ಸದಸ್ಯರು (ಮಣಿಪುರದಲ್ಲಿ ನೆಲೆಸಿರುವವರು), ಮೇಘಾಲಯದಲ್ಲಿನ ಅವರ ಮಾವನಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
- ಮೇಘಾಲಯ: ಮೇಘಾಲಯದಲ್ಲಿ ಪ್ರಥಮ ಕೋವಿಡ್ -19 ಪ್ರಕರಣದ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರ ಪರೀಕ್ಷೆಯನ್ನು ಗುವಾಹತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇಂದು ನಡೆಸಲಾಯಿತು, ಎಲ್ಲ ಸೋಂಕಿಲ್ಲ ಎಂದು ವರದಿ ಬಂದಿದೆ.
- ಮಿಜೋರಾಂ: ಮಿಜೋರಾಂ 1800 ಮಾರಕ ಕೊರೊನಾ ಪರೀಕ್ಷಾ ಕಿಟ್ ಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ ಪಡೆದಿದೆ.
- ನಾಗಾಲ್ಯಾಂಡ್: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ನಾಗಾಲ್ಯಾಂಡ್ ನ ಕೋಹಿಮಾದಲ್ಲಿ ಇಂದು ಹೊಗೆ ಮೂಲಕ ಸೋಂಕು ನಿವಾರಣೆ ಕ್ರಮ ಕೈಗೊಂಡಿದೆ.
- ತ್ರಿಪುರ: ಮುಖ್ಯಮಂತ್ರಿಯವರು ಕೊರೊನಾ ಸಾಂಕ್ರಾಮಿಕದ ವೇಳೆ ಜನತೆಗೆ ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಂಡು ಸುರಕ್ಷಿತವಾಗಿರಲು ಮನವಿ ಮಾಡಿದ್ದಾರೆ.
Fact Check on #Covid19
***
(Release ID: 1614859)
Visitor Counter : 377
Read this release in:
English
,
Urdu
,
Hindi
,
Marathi
,
Assamese
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam