ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್ -19 ವಿರುದ್ಧ ಭಾರತದ ಹೋರಾಟದಲ್ಲಿ ನಾಲ್ಕು ವಾರಗಳಲ್ಲಿ ನಾಲ್ಕನೇ ಬಾರಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ

Posted On: 14 APR 2020 1:04PM by PIB Bengaluru

ಕೋವಿಡ್ -19 ವಿರುದ್ಧ ಭಾರತದ ಹೋರಾಟದಲ್ಲಿ ನಾಲ್ಕು ವಾರಗಳಲ್ಲಿ ನಾಲ್ಕನೇ ಬಾರಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ

ಮೇ 3ರವರೆಗೆ ಲಾಕ್ ಡೌನ್ ಮುಂದುವರಿಕೆ ಘೋಷಣೆ

ಅತಿಯಾದ ಅಪಾಯ ಇರುವ ಪ್ರದೇಶಗಳು ಮತ್ತು ಹಾಟ್ ಸ್ಪಾಟ್ ಗಳ ಬಗ್ಗೆ ನಿರಂತರ ನಿಗಾ

ಕಡಿಮೆ ಅಪಾಯ ಇರುವ ಪ್ರದೇಶಗಳಲ್ಲಿ ಏಪ್ರಿಲ್ 20ರಿಂದ ನಿರ್ಬಂಧಗಳ ಸಡಿಲಿಕೆ

ಸರ್ಕಾರದಿಂದ ಸವಿವರವಾದ ಮಾರ್ಗಸೂಚಿ ನಾಳೆ ಬಿಡುಗಡೆ

ಹಿರಿಯರ ಕಾಳಜಿ ಮತ್ತು ಲಾಕ್ ಡೌನ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವನ್ನು ಪಾಲಿಸುವುದೂ ಸೇರಿದಂತೆ ಏಳು ವಿಷಯಗಳಲ್ಲಿ ಬೆಂಬಲ ಕೋರಿದ ಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಲಾಕ್ ಡೌನ್ ಅವಧಿಯನ್ನು 2020ರ ಮೇ 3ರವರೆಗೆ ವಿಸ್ತರಿಸುವುದಾಗಿ ಪ್ರಕಟಿಸಿದ್ದಾರೆ. ಈ ಹಿಂದೆ ಪ್ರಕಟಿಸಲಾಗಿದ್ದ 21 ದಿನಗಳ ಲಾಕ್ ಡೌನ್ 2020ರ ಏಪ್ರಿಲ್ 14ರಂದು ಕೊನೆಯಾಗುತ್ತಿತ್ತು.

ಕೊರೋನಾ ವೈರಾಣು ಪ್ರಸರಣ ತಡೆ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಲಾಕ್ ಡೌನ್ ವಿಸ್ತರಣೆಯ ನಿರ್ಧಾರವನ್ನು ಹಲವು ರಾಜ್ಯಗಳು, ತಜ್ಞರು ಮತ್ತು ಜನರು ನೀಡಿದ ಸಲಹೆಯನ್ನು ಗಮನದಲ್ಲಿಟ್ಟುಕೊಂಡು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಲಾಕ್ ಡೌನ್ ಅವಧಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮತ್ತು ಜಾಗರೂಕತೆ ಮುಂದುವರಿಸುವಂತೆ ಜನತೆಗೆ ಮನವಿ ಮಾಡಿದರು.

ಕಡಿಮೆ ಅಪಾಯ ಇರುವ ಪ್ರದೇಶಗಳಲ್ಲಿ 2020ರ ಏಪ್ರಿಲ್ 20ರಿಂದ ಕೆಲವೊಂದು ನಿರ್ದಿಷ್ಟ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡುವುದಾಗಿ ಪ್ರಧಾನಮಂತ್ರಿಯವರು ತಿಳಿಸಿದರು.

ಏಪ್ರಿಲ್ 20ರವರೆಗೆ ಪ್ರತಿ ಪಟ್ಟಣ, ಪ್ರತಿಯೊಂದು ಪೊಲೀಸ್ ಠಾಣೆ, ಪ್ರತಿ ಜಿಲ್ಲೆ, ಪ್ರತಿ ರಾಜ್ಯವನ್ನೂ, ಅವರು ಹೇಗೆ ಲಾಕ್ ಡೌನ್ ನಿಯಮ ಪಾಲಿಸುತ್ತಿದ್ದಾರೆ ಎಂದು ಮೌಲ್ಯಮಾಪನ ಮಾಡಲಾಗುವುದು. ಪರೀಕ್ಷೆಯಲ್ಲಿ ಮಿತಿ ಕಾಯ್ದೊಕೊಳ್ಳುವಲ್ಲಿ ಯಶಸ್ವಿಯಾದ ಪ್ರದೇಶಗಳಿಗೆ, ಯಾವುದು ಹಾಟ್ ಸ್ಪಾಟ್ ಪ್ರವರ್ಗದಲ್ಲಿ ಬರುವುದಿಲ್ಲವೋ ಅಲ್ಲಿ ಏಪ್ರಿಲ್ 20ರಿಂದ ಮುಕ್ತಗೊಳಿಸಲು ಅನುಮತಿಗೆ ಆಯ್ಕೆ ಮಾಡಲಾಗುವುದು. ಎಂದು ತಿಳಿಸಿದರು.

ಆದಾಗ್ಯೂ, ಒಂದೊಮ್ಮೆ ಲಾಕ್ ಡೌನ್ ನಿಯಮ ಉಲ್ಲಂಘನೆಯಾದರೆ, ಮತ್ತು ಕೊರೋನಾ ವೈರಸ್ ಪಸರಿಸುವ ಭೀತಿ ಇದ್ದಲ್ಲಿ, ತಕ್ಷಣವೇ ಅಂಥ ಅನುಮತಿ ಹಿಂಪಡೆಯಲಾಗುವುದುಎಂದು ಎಚ್ಚರಿಸಿದರು.

ಈ ನಿಟ್ಟಿನಲ್ಲಿ ವಿವರವಾದ ಮಾರ್ಗಸೂಚಿಗಳನ್ನು ಸರ್ಕಾರ ನಾಳೆ ಬಿಡುಗಡೆ ಮಾಡಲಿದೆ ಎಂದರು.

ಬಡವರು ಮತ್ತು ದಿನಗೂಲಿ ನೌಕರರ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ಅಪಾಯ ಇರುವ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಸರಳಗೊಳಿಸಲಾಗುವುದು ಎಂದು ತಿಳಿಸಿದರು.

ನಿತ್ಯ ಸಂಪಾದನೆಯಿಂದಲೇ ಜೀವನ ನಡೆಸುವವರು, ನನ್ನ ಕುಟುಂಬದವರಾಗಿದ್ದಾರೆ. ನನ್ನ ಉನ್ನತ ಆದ್ಯತೆ, ಅವರ ಬದುಕಿನ ಕಷ್ಟವನ್ನು ತಗ್ಗಿಸುವುದಾಗಿದೆ ಎಂದರು. ಸರ್ಕಾರ ಅವರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಮೂಲಕ ನೆರವಾಗಲು ಎಲ್ಲ ಸಾಧ್ಯ ಪ್ರಯತ್ನ ಮಾಡುತ್ತಿದೆ. ಹೊಸ ಮಾರ್ಗಸೂಚಿಗಳನ್ನು ರೂಪಿಸುವಾಗ ಅವರ ಹಿತವನ್ನೂ ಗಮನಕ್ಕೆ ತೆಗೆದುಕೊಳ್ಳಲಾಗಿದೆಎಂದು ತಿಳಿಸಿದರು.

ಬಾಬಾ ಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ಅವರಿಗೆ ಅವರ ಜನ್ಮ ಜಯಂತಿಯಾದ ಇಂದು ಗೌರವ ನಮನ ಸಲ್ಲಿಸಿದ ಪ್ರಧಾನಿ, ನನಗೆ ನಿಮಗೆಲ್ಲ ಎಷ್ಟು ತೊಂದರೆ ಆಗಿದೆ ಎಂದು ತಿಳಿದಿದೆ- ಕೆಲವರಿಗೆ ಊಟದ ಸಮಸ್ಯೆ, ಮತ್ತೆ ಕೆಲವರಿಗೆ ಒಂದು ಪ್ರದೇಶದಿಂದ ಮತ್ತೊಂದಕ್ಕೆ ಹೋಗಿ ಬರುವ ಸಮಸ್ಯೆ, ಕೆಲವರು ಮನೆ, ಕುಟುಂಬ, ಪರಿವಾರದಿಂದ ದೂರವಿದ್ದೀರಿ. ಆದರೂ ದೇಶಕ್ಕಾಗಿ ಒಬ್ಬ ಶಿಸ್ತುಬದ್ಧ ಸೈನಿಕರಂತೆ ನಿಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೀರಿ. ಇದು ನಮ್ಮ ಸಂವಿಧಾನದಲ್ಲಿ, we the people of India, ಶಕ್ತಿಯ ಬಗ್ಗೆ ಉಲ್ಲೇಖಿಸಲಾಗಿದೆ. ಇದೇ ಅಲ್ಲವೇ ಆ ಉಲ್ಲೇಖ.” ಎಂದರು.

ಭಾರತವು ದೇಶಕ್ಕೆ ಒಂದೇ ಒಂದು ಕೋವಿಡ್ -19 ಪ್ರಕರಣ ಬರುವ ಮೊದಲೇ ದೇಶವನ್ನು ರಕ್ಷಿಸಲು ಸಕ್ರಿಯವಾಗಿತ್ತು ಎಂದು ಪ್ರಧಾನಮಂತ್ರಿ ತಿಳಿಸಿದರು. ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆ, ಅಂತಾರಾಷ್ಟ್ರೀಯ ಪ್ರಯಾಣಿಕರ 14 ದಿನಗಳ ಕಾಲ ಕಡ್ಡಾಯ ಪ್ರತ್ಯೇಕೀಕರಣ, ಮಾಲ್, ಕ್ಲಬ್, ಜಿಮ್ ಗಳ ಮುಚ್ಚುವಿಕೆಯಂಥ ಕ್ರಮಗಳನ್ನು ಬಹಳ ಮೊದಲೇ ತೆಗೆದುಕೊಂಡಿತು ಎಂದರು. ಭಾರತ ಸಕ್ರಿಯವಾಗಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಅಂತ ನಿರ್ಧಾರವನ್ನು ಕೈಗೊಂಡಿತು. ಅದು 14 ಏಪ್ರಿಲ್ ಗೆ ಕೊನೆಯಾಗುತ್ತಿದೆ ಎಂದರು. ಇತರ ಕೋವಿಡ್ ಬಾಧಿತ ದೊಡ್ಡ ಮತ್ತು ಶಕ್ತಿಶಾಲಿ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಅತ್ಯಂತ ಬಲಿಷ್ಠ ಸ್ಥಿತಿಯಲ್ಲಿದೆ.

ಒಂದು, ಒಂದೂವರೆ ತಿಂಗಳುಗಳ ಹಿಂದೆ, ಹಲವು ರಾಷ್ಟ್ರಗಳು ಕೊರೋನಾ ಸೋಂಕಿನ ವಿಚಾರದಲ್ಲಿ ಭಾರತಕ್ಕೆ ಸರಿಸಮಾನವಾಗಿದ್ದವು. ಆದರೆ, ಇಂದು ಕೊರೋನಾ ಪ್ರಕರಣಗಳು ಆ ದೇಶದಲ್ಲಿ25ರಿಂದ 30ಪಟ್ಟು ಹೆಚ್ಚಾಗಿದೆ. ಸಾವಿರಾರು ಜನರು ದೂರಂತದ ಸಾವು ಕಂಡಿದ್ದಾರೆ. ಭಾರತ ಸಮಗ್ರ ದೃಷ್ಟಿಕೋನದ ಕ್ರಮಗಳನ್ನು ಕೈಗೊಳ್ಳದೇ ಇದ್ದಿದ್ದರೆ, ತ್ವರಿತ ಮತ್ತು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳದೇ ಇದ್ದಿದ್ದರೆ, ಭಾರತದ ಸ್ಥಿತಿ ಇಂದು ಬೇರೆಯೇ ಆಗಿರುತ್ತಿತ್ತು”, ಎಂದು ತಿಳಿಸಿದರು.

ಭಾರತ ಲಾಕ್ ಡೌನ್ ನಿಂದ ಪ್ರಯೋಜನ ಪಡೆದಿದೆ. ನಾವು ಅನುಸರಿಸಿದ ಮಾರ್ಗ ಸರಿಯಾಗಿದೆ ಎಂಬುದು ಸ್ಪಷ್ಟವಾಗಿದೆ. ಅದು ದೇಶದ ಹಲವರ ಪ್ರಾಣ ಕಾಪಾಡಿದೆ ಎಂದು ಪ್ರಧಾನಮಂತ್ರಿ ಹೇಳಿದರು

ಕೇವಲ ಆರ್ಥಿಕ ನೆಲೆಗಟ್ಟಿನಲ್ಲ ನೋಡಿದರೆ, ನಿಶ್ಚಿತವಾಗಿ ದೊಡ್ಡ ಬೆಲೆ ತೆತ್ತಿದ್ದೇವೆ ಎನಿಸುತ್ತದೆ. ಆದರೆ, ಭಾರತದ ಜನರ ಜೀವದ ವಿಚಾರಕ್ಕೆ ಹೋಲಿಸಿದರೆ, ಅದಕ್ಕೆ ಯಾವುದೇ ಹೋಲಿಗೆ ಸರಿಯಲ್ಲ ಎಂದರು. ನಮ್ಮ ಸೀಮಿತ ಸ್ಥಿತಿಯಲ್ಲಿ ನಾವು ಕೈಗೊಂಡಿರುವ ಕ್ರಮ ಸರಿಯಾದುದಾಗಿದೆ. ಇದು ಇಂದು ಇಡೀ ವಿಶ್ವದಲ್ಲೇ ಚರ್ಚೆಯಾಗುತ್ತಿದೆ”, ಎಂದು ತಿಳಿಸಿದರು.

ದೇಶದಲ್ಲಿ ಸಾಕಷ್ಟು ಔಷಧ, ಆಹಾರ ಮತ್ತು ಇತರ ಅಗತ್ಯ ವಸ್ತುಗಳ ದಾಸ್ತಾನಿದೆ ಎಂದ ಪ್ರಧಾನಮಂತ್ರಿ, ಆರೋಗ್ಯ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ಭರವಸೆ ನೀಡಿದರು

ಜನವರಿಯಲ್ಲಿ ಕೊರೋನಾ ವೈರಾಣು ಪರೀಕ್ಷೆಗೆ ದೇಶದಲ್ಲಿ ಒಂದು ಒಂದು ಪ್ರಯೋಗಾಲಯವಿತ್ತು, ಈಗ ದೇಶದಲ್ಲಿ 220 ಪ್ರಯೋಗಾಲಯ ಕಾರ್ಯಾಚರಣೆ ಮಾಡುತ್ತಿವೆ. ಜಾಗತಿಕ ಅನುಭವದ ರೀತ್ಯ 10 ಸಾವಿರ ಕೋವಿಡ್ ರೋಗಿಗಳಿದ್ದರೆ, 1500 ರಿಂದ 1600 ಹಾಸಿಗೆಗಳು ಸಾಕಾಗುತ್ತವೆ. ಆದರೆ ಭಾರತದಲ್ಲಿ ಈಗ 1 ಲಕ್ಷ ಹಾಸಿಗೆಗಳನ್ನು ಸಿದ್ಧಪಡಿಸಿದ್ದೇವೆ ಮತ್ತು 600ಕ್ಕೂ ಹೆಚ್ಚು ಸಮರ್ಪಿತ ಆಸ್ಪತ್ರೆಗಳಿವೆ ಎಂದರು. ನಾವು ಮಾತನಾಡುವಂತೆ ಈ ಸೌಲಭ್ಯಗಳೂ ತ್ವರಿತವಾಗಿ ಹೆಚ್ಚುತ್ತಿವೆಎಂದು ತಿಳಿಸಿದರು.

ಕೊರೋನಾ ಸಾಂಕ್ರಾಮಿಕದ ವಿರುದ್ಧದ ಹೋರಾಟಕ್ಕೆ ಏಳು ಹೆಜ್ಜೆಗಳನ್ನು ಅನುಸರಿಸುವಂತೆ ಪ್ರಧಾನಮಂತ್ರಿ ಜನತೆಗೆ ಮನವಿ ಮಾಡಿದರು.

ಮೊದಲನೆಯದು, ನೀವು ನಿಮ್ಮ ಮನೆಯಲ್ಲಿರುವ ಹಿರಿಯರ ಅದರಲ್ಲೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರ ಬಗ್ಗೆ ವಿಶೇಷ ಕಾಳಜಿ ವಹಿಸಿ..

ಎರಡನೆಯದು,ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಲಕ್ಷ್ಮಣ ರೇಖೆಯನ್ನು ದಾಟಬೇಡಿ ಹಾಗೂ ಲಾಕ್ ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಬೇಡಿ, ನಿಯಮ ಪಾಲಿಸಿ, ಮನೆಯಲ್ಲಿಯೇ ತಯಾರಿಸಲಾದ ಮಾಸ್ಕ್ ಗಳನ್ನು ಧರಿಸಿ.

ಮೂರನೆಯದು, ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು, ಆಯುಷ್ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ.

ನಾಲ್ಕನೆಯದು, ಆರೋಗ್ಯ ಸೇತು ಆಪ್ ಅನ್ನು ನಿಮ್ಮ ಮೊಬೈಲ್ ಗೆ ಡೌನ್ ಲೋಡ್ ಮಾಡಿಕೊಳ್ಳಿ, ಇದು ಕೋವಿಡ್ 19 ಸಾಂಕ್ರಾಮಿಕ ಪಸರಿಸದಂತೆ ತಡೆಯುತ್ತದೆ. ಇತರರಿಗೂ ಕೂಡ ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಪ್ರೇರೇಪಿಸಿ.

ಐದನೆಯದು, ನಿಮ್ಮ ಮನೆಯ ಬಳಿ ಇರುವ ಬಡ ಕುಟುಂಬಗಳ ಅವಶ್ಯಕತೆ ಪೂರೈಸಿ

ಆರನೆಯದು, ನಿಮ್ಮ ಕೈಕೆಳಗೆ ಕೆಲಸ ಮಾಡುವವರ ಬಗ್ಗೆ ಕರುಣೆ ತೋರಿಸಿ, ಯಾವುದೇ ಕಾರಣಕ್ಕೂ ಅವರ ಜೀವನೋಪಾಯ ಕಸಿದುಕೊಳ್ಳಬೇಡಿ

ಏಳನೆಯದು, ದೇಶದ ಕೊರೋನಾ ಸೈನಿಕರು ಅಂದರೆ ನಮ್ಮ ವೈದ್ಯರು, ದಾದಿಯರು, ನೈರ್ಮಲ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ ಗಳ ಬಗ್ಗೆ ಸಂಪೂರ್ಣ ಗೌರವ ತೋರಿಸಿ.

 

*****



(Release ID: 1614309) Visitor Counter : 428