ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್–19 ಅಪ್ ಡೇಟ್ಸ್

Posted On: 11 APR 2020 6:22PM by PIB Bengaluru

ಕೋವಿಡ್–19 ಅಪ್ ಡೇಟ್ಸ್

 

ದೇಶದಲ್ಲಿ ಕೋವಿಡ್-19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಭಾರತ ಸರ್ಕಾರವು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಜೊತೆ ಸೇರಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಿದರು ಮತ್ತು ಕೋವಿಡ್-19 ಹೋರಾಟಕ್ಕಾಗಿ ಅವರ ಸಾಮೂಹಿಕ ಸಂಕಲ್ಪವನ್ನು ತಿಳಿಸಿದರು.

ಶ್ರೇಣೀಕೃತ ಪ್ರತಿಕ್ರಿಯೆಯ ವಿಧಾನವನ್ನು ಅನುಸರಿಸಿ ಭಾರತ ಸರ್ಕಾರವು ತನ್ನ ನಿರಂತರ ಪ್ರಯತ್ನಗಳಲ್ಲಿ, ಪಿಪಿಇಗಳು, ಎನ್ 95 ಮುಖಗವಸುಗಳು, ಪರೀಕ್ಷಾ ಕಿಟ್‌ಗಳು, ಔಷಧಿಗಳು ಮತ್ತು ವೆಂಟಿಲೇಟರ್‌ಗಳನ್ನು ಒಳಗೊಂಡಿರುವ ಮುಖ್ಯವಾದ ವಸ್ತುಗಳ ಸರಬರಾಜಿನಲ್ಲಿ ಯಾವುದೇ ಕೊರತೆಯಿಲ್ಲ ಎಂದು ಖಾತ್ರಿಪಡಿಸುತ್ತಿದೆ. ಕೋವಿಡ್ ರೋಗಿಗಳ ಆರೈಕೆಗಾಗಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಮೀಸಲಾದ ಕೋವಿಡ್-19 ಆಸ್ಪತ್ರೆಗಳನ್ನು ಹೆಚ್ಚಿಸಲು ಸರ್ಕಾರವು ಭರವಸೆ ನೀಡುತ್ತಿದೆ.

ಪ್ರಸ್ತುತ, ಕೇಂದ್ರ ಮತ್ತು ರಾಜ್ಯಗಳ ಒಟ್ಟುಗೂಡಿಸಿದ ಸಂಖ್ಯೆ:

· ಮೀಸಲಾದ ಕೋವಿಡ್ ಸೌಲಭ್ಯಗಳ ಸಂಖ್ಯೆ: 586

· ಪ್ರತ್ಯೇಕಿಸಿದ ಹಾಸಿಗೆಗಳು: 1,04,613

· ಐಸಿಯು ಹಾಸಿಗೆಗಳು: 11,836

ಮುಂಚೂಣಿಯ ಆರೋಗ್ಯ ಕಾರ್ಯಕರ್ತರ ಸಾಮರ್ಥ್ಯ ವೃದ್ಧಿಗಾಗಿ, ನವದೆಹಲಿಯ ಏಮ್ಸ್, ಕೋವಿಡ್-19ರ ರೋಗಿಗಳ ಆರೈಕೆಗಾಗಿ ವೆಬಿನಾರ್‌ಗಳ ಸರಣಿಯನ್ನು ಆಯೋಜಿಸುತ್ತಿದೆ. ಈ ವೆಬಿನಾರ್‌ಗಳ ವೇಳಾಪಟ್ಟಿಯನ್ನು ನಿಯಮಿತವಾಗಿ https://www.mohfw.gov.in ನಲ್ಲಿ ಪ್ರಕಟಿಸಲಾಗುತ್ತಿದೆ.

ಅಲ್ಲದೆ, ಆಯುಷ್ ಸಚಿವಾಲಯವು ಉಸಿರಾಟದ ಆರೋಗ್ಯಕ್ಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಾರ್ಗಸೂಚಿಗಳನ್ನು ಹೊರಡಿಸಿದೆ ಮತ್ತು ದೇಶಾದ್ಯಂತ ವೈರಸ್ ಅನ್ನು ಒಳಗೊಂಡಿರುವಲ್ಲಿ ಆಯುಷ್ ಪರಿಹಾರಗಳನ್ನು ಜಿಲ್ಲಾ ಕಾಂಟಿನ್ಜೆನ್ಸಿ (ಆಕಸ್ಮಿಕಗಳ) ಯೋಜನೆಯಲ್ಲಿ ಸೇರಿಸಬೇಕೆಂದು ಪ್ರಸ್ತಾಪಿಸಿದೆ. ಈ ಮಾರ್ಗಸೂಚಿಗಳು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಾಲತಾಣದಲ್ಲಿ ಸಹ ಲಭ್ಯವಿದೆ.

ಕೋವಿಡ್-19 ಅನ್ನು ಎದುರಿಸಲು ಹಲವಾರು ಜಿಲ್ಲೆಗಳು ಹೊಸ ಮಾದರಿಗಳನ್ನು ಅಳವಡಿಸಿಕೊಳ್ಳುತ್ತಿವೆ.

ಮೊದಲು ಕ್ಲಸ್ಟರ್ ಪತ್ತೆಯಾದ ಆಗ್ರಾ, ಅದರ ಕೋವಿಡ್-19 ನಿರ್ವಹಣಾ ವಿಧಾನದ ಭಾಗವಾಗಿ ಕ್ಲಸ್ಟರ್ ತಡೆಗಟ್ಟುವಿಕೆಯ ತಂತ್ರದ ಮೇಲೆ ಕೇಂದ್ರೀಕರಿಸಿದೆ. ರಾಜ್ಯ, ಜಿಲ್ಲಾಡಳಿತ ಮತ್ತು ಮುಂಚೂಣಿ ಕಾರ್ಮಿಕರು ತಮ್ಮ ಸ್ಮಾರ್ಟ್ ಸಿಟಿ ಇಂಟಿಗ್ರೇಟೆಡ್ ವಿತ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ (ಐಸಿಸಿಸಿ) ಅನ್ನು ಕೇಂದ್ರ ಯೋಜನಾ ಸ್ಥಳಗಳನ್ನಾಗಿ ಬಳಸಿಕೊಳ್ಳುವ ಮೂಲಕ ತಮ್ಮ ಪ್ರಯತ್ನಗಳನ್ನು ಸಮನ್ವಯಗೊಳಿಸಿದರು. ಕ್ಲಸ್ಟರ್ ಮಟ್ಟದಲ್ಲಿ ತಡೆಗಟ್ಟುವಿಕೆಯ ಮತ್ತು ಹರಡುವಿಕೆಯ ತಡೆಗಟ್ಟುವ ಯೋಜನೆಗಳ ಅಡಿಯಲ್ಲಿ, ಜಿಲ್ಲಾಡಳಿತವು ಕೇಂದ್ರಬಿಂದುಗಳನ್ನು ಗುರುತಿಸಿತು, ನಕ್ಷೆಯಲ್ಲಿ ಪಾಸಿಟಿವ್ ದೃಢಪಡಿಸಿದ ಪ್ರಕರಣಗಳ ಪ್ರಭಾವವನ್ನು ವಿವರಿಸಿದೆ ಮತ್ತು ಜಿಲ್ಲಾಡಳಿತವು ಮಾಡಿದ ಸೂಕ್ಷ್ಮ ಯೋಜನೆಯ ಪ್ರಕಾರ ವಿಶೇಷ ಕಾರ್ಯಪಡೆಗಳನ್ನು ನಿಯೋಜಿಸಿತು. ಹಾಟ್‌ಸ್ಪಾಟ್‌ಗಳನ್ನು ಸಕ್ರಿಯ ಸಮೀಕ್ಷೆ ಮತ್ತು ಧಾರಕ ಯೋಜನೆಯ ಮೂಲಕ ನಿರ್ವಹಿಸಲಾಗಿದೆ. ಕೇಂದ್ರಬಿಂದುವಿನಿಂದ 3 ಕಿ.ಮೀ ವ್ಯಾಪ್ತಿಯಲ್ಲಿ ಪ್ರದೇಶವನ್ನು ಗುರುತಿಸಲಾಗಿದ್ದು, 5 ಕಿ.ಮೀ ಬಫರ್ ವಲಯವನ್ನು ಧಾರಕ ವಲಯವೆಂದು ಗುರುತಿಸಲಾಗಿದೆ. ಈ ಧಾರಕ ವಲಯಗಳಲ್ಲಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸೇರಿಸಲಾಯಿತು ಮತ್ತು 1248 ತಂಡಗಳನ್ನು ನಿಯೋಜಿಸಲಾಯಿತು; ಪ್ರತಿ ತಂಡವು ಎಎನ್‌ಎಂಗಳು/ ಆಶಾ/ ಎಡಬ್ಲ್ಯೂಡಬ್ಲ್ಯೂ ಸೇರಿದಂತೆ 2 ಕೆಲಸಗಾರರನ್ನು ಹೊಂದಿದ್ದು, ಮನೆ ಮನೆಗಳ ತಪಾಸಣೆಯ ಮೂಲಕ 9.3 ಲಕ್ಷ ಜನರನ್ನು ತಲುಪಿದೆ. ಹೆಚ್ಚುವರಿಯಾಗಿ, ಮೊದಲ ಸಂಪರ್ಕದ ಪತ್ತೆಹಚ್ಚುವಿಕೆಯ ಪರಿಣಾಮಕಾರಿ ಮತ್ತು ಆರಂಭಿಕ ಟ್ರ್ಯಾಕಿಂಗ್ ಅನ್ನು ಸಂಪೂರ್ಣವಾಗಿ ರೂಪಿಸಲಾಗಿದೆ. ಇದಲ್ಲದೆ, ಸಕ್ರಿಯ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಪ್ರತ್ಯೇಕತೆ, ಪರೀಕ್ಷೆ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಸ್ಥಾಪಿಸುವತ್ತ ಗಮನ ಹರಿಸಲಾಗಿದೆ. ಇದರೊಂದಿಗೆ, ಅಗತ್ಯವಿರುವವರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಒದಗಿಸಲಾಗಿದೆಯೆನ್ನುವುದನ್ನು ಖಚಿತಪಡಿಸಲಾಯಿತು ಮತ್ತು ಅಗತ್ಯ ಪೂರೈಕೆ ಸರಪಳಿಯನ್ನು ನಿರ್ವಹಿಸಲಾಯಿತು. ನಾಗರಿಕರಿಗೆ ಮನೆ ಮನೆಗೆ ವಿತರಣೆಯನ್ನು ಖಾತ್ರಿಪಡಿಸಲಾಯಿತು ಮತ್ತು ಲಾಕ್‌ಡೌನ್ ಸಮಯದಲ್ಲಿ ಇ-ಪಾಸ್ ಸೌಲಭ್ಯವು ಅಗತ್ಯ ಸರಕುಗಳು ಮತ್ತು ಸೇವೆಗಳ ಸಾಗಾಣಿಕೆಗೆ ಅನುಕೂಲವಾಯಿತು. ಈ ಕಾರ್ಯದಲ್ಲಿ, ಜಿಲ್ಲಾಡಳಿತವು ನಾಗರಿಕರ ಜಾಗೃತಿ ಮತ್ತು ಕೆಲಸದ ಮೇಲೆ ನಿರಂತರವಾಗಿ ಗಮನ ಹರಿಸಿತು. ಜನರನ್ನು ತಲುಪಲು, ಕೇಂದ್ರ ಸಹಾಯವಾಣಿಗಳನ್ನು ಸ್ಥಾಪಿಸಲಾಯಿತು ಮತ್ತು ಪ್ರತಿಕ್ರಿಯೆಗಳನ್ನು ಸಂಘಟಿಸಲು ಬಹುಕ್ರಿಯಾತ್ಮಕ ತಂಡವನ್ನು ಸ್ಥಾಪಿಸಲಾಯಿತು.

ಆಗ್ರಾ ಅಳವಡಿಸಿಕೊಂಡ ಕ್ಲಸ್ಟರ್ ಧಾರಕ ತಂತ್ರವನ್ನು ಇತರ ರಾಜ್ಯಗಳೊಂದಿಗೆ ಉತ್ತಮ ತಂತ್ರವಾಗಿ ಹಂಚಿಕೊಳ್ಳಲಾಗುತ್ತಿದೆ.

ನಿನ್ನೆಯಿಂದ ಭಾರತದಲ್ಲಿ ಕೋವಿಡ್-19 ದೃಢಪಡಿಸಿದ ಪ್ರಕರಣಗಳಲ್ಲಿ 1035 ಪ್ರಕರಣಗಳ ಹೆಚ್ಚಳ ಕಂಡುಬಂದಿದೆ ಮತ್ತು ಸಕ್ರಿಯ ಪ್ರಕರಣಗಳಲ್ಲಿ 855 ಹೆಚ್ಚಳವಾಗಿದೆ. ಪ್ರಸ್ತುತ ಸಂಭವಿಸಿದ ಒಟ್ಟು ಸಾವುಗಳು 239. 642 ಜನರನ್ನು ಗುಣಪಡಿಸಲಾಗಿದೆ/ ಚೇತರಿಕೆಯ ನಂತರ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಒಟ್ಟು 7447 ಪ್ರಕರಣಗಳು ವರದಿಯಾಗಿವೆ.

ಕೋವಿಡ್-19 ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in

ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in ಮತ್ತು ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು.

ಕೋವಿಡ್-19ರ ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯವಾಣಿ ಸಂಖ್ಯೆ. : + 91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19 ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***


(Release ID: 1613433) Visitor Counter : 210