ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಪ್ರಕಾರ ಇಪಿಎಫ್ ಮತ್ತು ಇಪಿಎಸ್ ಖಾತೆಗಳಿಗೆ ಜಮಾ ಮಾಡುವ ಸಲುವಾಗಿ ಇಪಿಎಫ್ಓ ಆನ್-ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ
Posted On:
11 APR 2020 2:31PM by PIB Bengaluru
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಪ್ರಕಾರ ಇಪಿಎಫ್ ಮತ್ತು ಇಪಿಎಸ್ ಖಾತೆಗಳಿಗೆ ಜಮಾ ಮಾಡುವ ಸಲುವಾಗಿ ಇಪಿಎಫ್ಓ ಆನ್-ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ
ಸುಮಾರು 79 ಲಕ್ಷ ಚಂದಾದಾರರು ಮತ್ತು ಸರಿಸುಮಾರು 3.8 ಲಕ್ಷ ಸಂಸ್ಥೆಗಳಿಗೆ ಪ್ರಯೋಜನ
ಮೂರು ತಿಂಗಳ ಅವಧಿಗೆ ಸಲ್ಲಿಕೆಯಾಗಬೇಕಾದ ಸಬ್ಸಿಡಿಯನ್ನು ರೂ.4800 ಕೋಟಿ ಎಂದು ಅಂದಾಜು ಮಾಡಲಾಗಿದೆ
ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಶಾಸನಾತ್ಮಕ ಸಂಸ್ಥೆಯಾಗಿರುವ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಓ)ಯು, ಸರ್ವವ್ಯಾಪಿ ಕೊರೊನಾ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಬಡವರಿಗೆ ನೆರವಾಗುವ ದೃಷ್ಟಿಯಿಂದ 26.03.2020ರಂದು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ಪ್ರಕಟಿಸಿದ ಪ್ಯಾಕೇಜ್ ನ ಆಧಾರದಲ್ಲಿ ತನ್ನ ಚಂದಾದಾರರ ಇಪಿಎಫ್ ಮತ್ತು ಇಪಿಎಸ್ ಖಾತೆಗಳಿಗೆ ಹಣ ಜಮಾ ಮಾಡಲು ಎಲೆಕ್ಟ್ರಾನಿಕ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಈ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಚಲನ್ ಮತ್ತು ಪಾವತಿ (ಇಸಿಆರ್) ವಿವರವನ್ನು ಸಲ್ಲಿಸುವ ಮೂಲಕ ಅರ್ಹ ಸಂಘಟನೆ/ಸಂಸ್ಥೆಗಳು ಸರ್ಕಾರ ಪ್ರಕಟಿಸುವ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ಇಪಿಎಫ್ ಮತ್ತು ಇಪಿಎಸ್ (ಸಂಬಳದ ಶೇ.24) ಖಾತೆಯಲ್ಲಿನ ಇಸಿಆರ್ ನಲ್ಲಿ ನಮೂದಾಗಿರುವ ನೌಕರರು ಮತ್ತು ಉದ್ಯೋಗದಾತರರ ಪರವಾಗಿರುವ ಬಾಕಿ ಮೊತ್ತವನ್ನು ಕೇಂದ್ರ ಸರ್ಕಾರವು, ಮಾಸಿಕ ರೂ.15000ಕ್ಕಿಂತ ಕಡಿಮೆ ಸಂಬಳದ ಆದಾಯವನ್ನು ಹೊಂದಿರುವ ಇಪಿಎಫ್ ಸದಸ್ಯರ ಪಾಲು ಯುಎಎನ್ ನಲ್ಲಿನ 3 ತಿಂಗಳ ಮೊತ್ತವನ್ನು ಜಮಾ ಮಾಡಲಿದೆ. ಅವರು ನೂರ ಜನರ ವರೆಗೆ ನೌಕರರನ್ನು ಹೊಂದಿರುವ ಮತ್ತು ಅವರಲ್ಲಿ ಶೇ.90 ಅಥವಾ ಅದಕ್ಕಿಂತ ಹೆಚ್ಚಿನ ಮಾಸಿಕ ವೇತನವು ರೂ.15000ಕ್ಕಿಂತ ಕಡಿಮೆ ಇರುವ ಮತ್ತು ಈಗಾಗಲೇ ಇಪಿಎಫ್ ವ್ಯಾಪ್ತಿಗೆ ಬರುವ ಸಂಸ್ಥೆ/ಕಾರ್ಖಾನೆಗಳಲ್ಲಿ ಉದ್ಯೋಗಸ್ಥರಾಗಿರಬೇಕು. ಈ ಪ್ಯಾಕೇಜ್ ನಿಂದ ಸುಮಾರು 79 ಲಕ್ಷ ಚಂದಾದಾರರು ಮತ್ತು ಸರಿಸುಮಾರು 3.8 ಲಕ್ಷ ಸಂಸ್ಥೆಗಳಿಗೆ ಪ್ರಯೋಜನವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇದರಿಂದ ಮೂರು ತಿಂಗಳ ಅವಧಿಯಲ್ಲಿ ರೂ.4800 ಕೋಟಿ ಸಬ್ಸಿಡಿ ಪಾವತಿಯಾಗುವ ಅಂದಾಜು ಮಾಡಲಾಗಿದೆ.
ಕೊರೊನಾ ವೈರಸ್ ವ್ಯಾದಿಯ ವಿರುದ್ಧ ಹೋರಾಡುವಲ್ಲಿ ಬಡವರಿಗೆ ನೆರವಾಗುವ ದೃಷ್ಟಿಯಿಂದ 26.03.2020ರಂದು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿಎಂಜಿಕೆವೈ)ಯನ್ನು ಜಾರಿಗೆ ತಂದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಕಡಿಮೆ ವೇತನದ ಗಳಿಕೆಯನ್ನು ಹೊಂದಿರುವ ಇಪಿಎಫ್ ಸದಸ್ಯರ ಉದ್ಯೋಗದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಮತ್ತು ಇಪಿಎಫ್ ವ್ಯಾಪ್ತಿಗೆ ಬರುವ ಅರ್ಹ ಸಂಸ್ಥೆಗಳಿಗೆ ಸಹಾಯ ಮಾಡುವ ದೃಷ್ಟಿಯಿಂದ ಪಿಎಂಜಿಕೆವೈ ಪ್ಯಾಕೇಜ್ ಜಾರಿಗೆ ತರಲಾಗಿದೆ.
ಈ ಪ್ಯಾಕೇಜ್ ಅನುಷ್ಠಾನಕ್ಕೆ ತರುವ ದೃಷ್ಟಿಯಿಂದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು, ಯೋಜನೆಯ ಉದ್ದೇಶ, ಅರ್ಹತಾ ಮಾನದಂಡ, ಸಿಂಧುತ್ವದ ಅವಧಿ, ಪ್ರಕ್ರಿಯೆ ಮತ್ತು ಪರಿಹಾರವನ್ನು ಪಡೆಯುವ ವಿಧಾನದ ಬಗ್ಗೆ ವಿವರವಾದ ಅಧಿಸೂಚನೆಯನ್ನು ಹೊರಡಿಸಿದೆ.
ಸಂಸ್ಥೆಗಳು ಅರ್ಹ ಉದ್ಯೋಗಿಗಳ ಪರಿಹಾರವನ್ನು ಪಡೆದುಕೊಳ್ಳುವ ದೃಷ್ಟಿಯಿಂದ ಎಲೆಕ್ಟ್ರಾನಿಕ್ ಚಲನ್ ಹಾಗೂ ರಿಟರ್ನ್ (ಇಸಿಆರ್) ಸಲ್ಲಿಕೆಯ ವ್ಯವಸ್ಥೆಯನ್ನು ಆರಂಭಿಸಲಾಗಿದೆ.
ಈ ಯೋಜನೆಯಲ್ಲಿನ ಪ್ರಯೋಜನವನ್ನು ಪಡೆದುಕೊಳ್ಳುವ ದೃಷ್ಟಿಯಿಂದ ಯಾವುದೇ ಅರ್ಹ ಸಂಸ್ಥೆಯ ಉದ್ಯೋಗದಾತನು ಸಂಸ್ಥೆಯ ಎಲ್ಲ ಉದ್ಯೋಗಿಗಳಿಗೆ ವೇತನವನ್ನು ವಿತರಣೆ ಮಾಡಬೇಕು ಮತ್ತು ಅಗತ್ಯ ಪ್ರಮಾಣಪತ್ರ ಮತ್ತು ಘೋಷಣೆಯೊಂದಿಗೆ ಎಲೆಕ್ಟ್ರಾನಿಕ್ ಚಲನ್ ಹಾಗೂ ರಿಟರ್ನ್ (ಇಸಿಆರ್) ಸಲ್ಲಿಕೆ ಮಾಡಬೇಕು.
ಇಸಿಆರ್ ಅಪ್-ಲೋಡ್ ಮಾಡಿದ ಬಳಿಕ ಮತ್ತು ಸಂಸ್ಥೆ ಹಾಗೂ ನೌಕರರ ಅರ್ಹತೆಯು ಸಿಂಧುತ್ವವನ್ನು ಹೊಂದಿದ ನಂತರ ಅರ್ಹ ನೌಕರರಿಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ಪರಿಹಾರದಲ್ಲಿ ಬಾಕಿ ಇರುವ ನೌಕರರು ಮತ್ತು ಮಾಲೀಕರ ಪಾಲಿನ ಮೊತ್ತವನ್ನು ಚಲನ್ ನಲ್ಲಿ ಪ್ರತ್ಯೇಕವಾಗಿ ತೋರಿಸಲಿದೆ. ಉಳಿಕೆ ಮೊತ್ತವನ್ನು ಮಾಲೀಕರು ಪಾವತಿ ಮಾಡಬೇಕಾಗಿರುತ್ತದೆ.
ಚಲನ್ ನಲ್ಲಿ ತೋರಿಸಲಾಗಿರುವಂತೆ ಇತರ ನೌಕರರಿಗೆ ತಾನು ಪಾವತಿ ಮಾಡಬೇಕಿರುವ ಬಾಕಿ ಮೊತ್ತವನ್ನು ಮಾಲೀಕನು ಸಲ್ಲಿಸಿದ ಬಳಿಕ, ಇಪಿಎಫ್ ಮತ್ತು ಇಪಿಎಸ್ ಪಾಲನ್ನು ಕೇಂದ್ರ ಸರ್ಕಾರವು ಸಂಸ್ಥೆಯ ಅರ್ಹ ನೌಕರರ ಯುಎಎನ್ ನಲ್ಲಿ ನೇರವಾಗಿ ಜಮೆ ಮಾಡಲಿದೆ.
ಈ ಯೋಜನೆಯ ವಿವರಗಳು ಮತ್ತು ಪ್ಯಾಕೇಜ್ ನ ಅನೇಕ ವಿಷಯಗಳಿಗೆ ಸಂಬಂಧಿಸಿದ ಸ್ಪಷ್ಟನೆಗಳನ್ನು ಒಳಗೊಂಡ FAQಗಳು ಇಪಿಎಫ್ಓ ವೆಬ್-ತಾಣದಲ್ಲಿ ಕೋವಿಡ್-19 ಶೀರ್ಷಿಕೆ ಅಡಿಯಲ್ಲಿ ಲಭ್ಯವಿರುತ್ತವೆ.
***
(Release ID: 1613339)
Visitor Counter : 392
Read this release in:
Malayalam
,
English
,
Gujarati
,
Urdu
,
Hindi
,
Marathi
,
Bengali
,
Assamese
,
Punjabi
,
Odia
,
Tamil
,
Telugu