ಗೃಹ ವ್ಯವಹಾರಗಳ ಸಚಿವಾಲಯ

ಪ್ರಧಾನಮಂತ್ರಿಗಳ ನಿರ್ದೇಶನದ ಮೇರೆಗೆ ಗೃಹ ಸಚಿವಾಲಯದಿಂದ ಎಲ್ಲ ರಾಜ್ಯಗಳಿಗೆ ರಾಜ್ಯ ವಿಪತ್ತು ಅಪಾಯ ನಿರ್ವಹಣಾ ನಿಧಿಯಿಂದ 11,092 ಕೋಟಿ ರೂ. ಬಿಡುಗಡೆಗೆ ಅನುಮೋದನೆ

Posted On: 03 APR 2020 7:10PM by PIB Bengaluru

ಪ್ರಧಾನಮಂತ್ರಿಗಳ ನಿರ್ದೇಶನದ ಮೇರೆಗೆ ಗೃಹ ಸಚಿವಾಲಯದಿಂದ ಎಲ್ಲ ರಾಜ್ಯಗಳಿಗೆ ರಾಜ್ಯ ವಿಪತ್ತು ಅಪಾಯ ನಿರ್ವಹಣಾ ನಿಧಿಯಿಂದ 11,092 ಕೋಟಿ ರೂ. ಬಿಡುಗಡೆಗೆ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಿನ್ನೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ವೇಳೆ ನೀಡಿದ್ದ ಭರವಸೆಯಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವ ಶ್ರೀ ಅಮಿತ್ ಷಾ, ಎಲ್ಲ ರಾಜ್ಯಗಳಿಗೆ ರಾಜ್ಯ ವಿಪತ್ತು ಅಪಾಯ ನಿರ್ವಹಣಾ ನಿಧಿ(ಎಸ್ ಡಿಆರ್ ಎಂ ಎಫ್) ಯಿಂದ 11,092 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಿದ್ದಾರೆ.

2020-21ನೇ ಸಾಲಿಗೆ ರಾಜ್ಯ ವಿಪತ್ತು ಅಪಾಯ ನಿರ್ವಹಣಾ ನಿಧಿಯ ಮೊದಲನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ಮುಂಗಡವಾಗಿಯೇ ಬಿಡುಗಡೆ ಮಾಡಿದ್ದು, ಇದು 11,092 ಕೋಟಿ ರೂ.ಗಳಾಗಲಿದೆ. ಈ ನಿಧಿ ರಾಜ್ಯ ಸರ್ಕಾರಗಳಿಗೆ ಲಭ್ಯವಿದ್ದು, ಅದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಕೋವಿಡ್-19 ವಿರುದ್ಧ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಹಾಗೂ ಮುಂಜಾಗ್ರತಾ ಕ್ರಮಗಳಿಗಾಗಿ ರಾಜ್ಯ ಸರ್ಕಾರಗಳಿಗೆ ಹೆಚ್ಚುವರಿ ನಿಧಿ ಈ ಮೂಲಕ ಲಭ್ಯವಾಗಲಿದೆ. ಕೇಂದ್ರ ಸರ್ಕಾರ 2020ರ ಮಾರ್ಚ್ 14 ರಂದು ಈಗಾಗಲೇ ರಾಜ್ಯ ವಿಪತ್ತು ಪ್ರತಿಸ್ಪಂದನಾ ನಿಧಿ(ಎಸ್ ಡಿ ಆರ್ ಎಫ್) ಬಳಕೆಗೆ ವಿಶೇಷ ನಿಯಮಗಳನ್ನು ಪ್ರಕಟಿಸಿದೆ. ಈ ನಿಧಿಯನ್ನು ಕ್ವಾರಂಟೈನ್ ಸೌಕರ್ಯಗಳನ್ನು ಸ್ಥಾಪಿಸುವುದು, ಮಾದರಿಗಳ ಸಂಗ್ರಹ ಮತ್ತು ಪರೀಕ್ಷೆ, ಹೆಚ್ಚುವರಿ ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪನೆ, ಅವಶ್ಯಕ ಸಾಮಗ್ರಿಗಳ ಖರೀದಿ, ಆರೋಗ್ಯ ರಕ್ಷಣೆ, ಪೌರಾಡಳಿತ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಅಗತ್ಯ ಸಂಬಂಧಿಸಿದ ವೈಯಕ್ತಿಕ ರಕ್ಷಣಾ ಸಲಕರಣೆಗಳ ಖರೀದಿ, ಥರ್ಮಲ್ ಸ್ಕ್ಯಾನರ್ ಗಳ ಖರೀದಿ, ಏರ್ ಪ್ಯೂರಿಫೈಯರ್, ವೆಂಟಿಲೇಟರ್ ಮತ್ತು ಸರ್ಕಾರಿ ಆಸ್ಪತ್ರೆಗಳ ಅವಶ್ಯಕ ಸಾಮಗ್ರಿಗಳ ಖರೀದಿಗೆ ಬಳಸಬಹುದಾಗಿದೆ.

ಕೇಂದ್ರ ಸರ್ಕಾರ, ಲಾಕ್ ಡೌನ್ ಕ್ರಮಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರು ಸೇರಿದಂತೆ ನಿರ್ಗತಿಕರು ಹಾಗೂ ವಸತಿ ರಹಿತರಿಗೆ ಆಹಾರ ಮತ್ತು ವಸತಿ ಪೂರೈಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಅದರಂತೆ ಕೇಂದ್ರ ಸರ್ಕಾರ 2020 ಮಾರ್ಚ್ 28ರಂದು ಎಸ್ ಡಿ ಆರ್ ಎಫ್ ನಿಧಿಯನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲು ಎಲ್ಲಾ ರಾಜ್ಯಗಳಿಗೆ ಅವಕಾಶ ಮಾಡಿಕೊಟ್ಟಿದೆ.

ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಅವರ ನಾಯಕತ್ವದಲ್ಲಿ  ವಿಶ್ವ ಆರೋಗ್ಯ ಸಂಸ್ಥೆ ‘ಸಾಂಕ್ರಾಮಿಕ’ ಎಂದು ಘೋಷಿಸಲ್ಪಟ್ಟಿರುವ ಈ ಅನಿರೀಕ್ಷಿತ ಜಾಗತಿಕ ಬಿಕ್ಕಟ್ಟನ್ನು ಎದುರಿಸಲು ಸಕಾಲದಲ್ಲಿ ರಾಜ್ಯಗಳಿಗೆ ಅಗತ್ಯ ನೆರವು ನೀಡಲು ಎಲ್ಲ ಕ್ರಮಗಳನ್ನು ಕೈಗೊಂಡಿದೆ.

*****


(Release ID: 1610921) Visitor Counter : 312