ಉಪರಾಷ್ಟ್ರಪತಿಗಳ ಕಾರ್ಯಾಲಯ

ಯಾವುದೇ ಸಭೆ, ಸಮಾರಂಭಗಳನ್ನು ನಡೆಸದಂತೆ ಧಾರ್ಮಿಕ ಮುಖಂಡರಿಗೆ ಸೂಚಿಸುವಂತೆ ರಾಜ್ಯಪಾಲರು/ ಲೆಫ್ಟಿನೆಂಟ್ ಗವರ್ನರ್‌ಗಳಿಗೆ ಉಪ ರಾಷ್ಟ್ರಪತಿ ಕರೆ

Posted On: 03 APR 2020 2:01PM by PIB Bengaluru

ಯಾವುದೇ ಸಭೆ, ಸಮಾರಂಭಗಳನ್ನು ನಡೆಸದಂತೆ ಧಾರ್ಮಿಕ ಮುಖಂಡರಿಗೆ ಸೂಚಿಸುವಂತೆ ರಾಜ್ಯಪಾಲರು/ ಲೆಫ್ಟಿನೆಂಟ್ ಗವರ್ನರ್ಗಳಿಗೆ ಉಪ ರಾಷ್ಟ್ರಪತಿ ಕರೆ

 

ಕೃಷಿ ಉತ್ಪನ್ನಗಳ ಸುಗಮ ಕೊಯ್ಲು ಮತ್ತು ಸಂಗ್ರಹವನ್ನು ಖಾತ್ರಿಪಡಿಸಿಕೊಳ್ಳಲು ಗಮನಹರಿಸುವಂತೆ ಕರೆ

ವೈದ್ಯರ ಮೇಲಿನ ದಾಳಿಗೆ ಕಳವಳ: ಇಂತಹ ಹೇಯ ಕ್ರಮಗಳ ವಿರುದ್ಧ ಜನರು ಜಾಗೃತರಾಗಬೇಕು

ವಲಸೆ ಕಾರ್ಮಿಕರಿಗೆ ಆಹಾರ ಮತ್ತು ಆಶ್ರಯವನ್ನು ಒದಗಿಸಲು ಜನರು ದೊಡ್ಡ ಪ್ರಮಾಣದಲ್ಲಿ ನೆರವಾಗಬೇಕು

 

ತಮ್ಮ ಅನುಯಾಯಿಗಳು ಯಾವುದೇ ಸಭೆ ಸಮಾರಂಭಗಳನ್ನು ನಡೆಸದಂತೆ ಸಲಹೆ ನೀಡುವಂತೆ ಆಧ್ಯಾತ್ಮಿಕ ಮತ್ತು ಧಾರ್ಮಿಕ ಮುಖಂಡರಿಗೆ ಸೂಚಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳಿಗೆ ಉಪ ರಾಷ್ಟ್ರಪತಿ ಶ್ರೀ ಎಂ.ವೆಂಕಯ್ಯ ನಾಯ್ಡು ಕರೆ ಕೊಟ್ಟಿದ್ದಾರೆ. COVID-19.  ಹರಡುವುದನ್ನು ತಡೆಯಲು ಸಾಮಾಜಿಕ ಅಂತರದ ಮಾನದಂಡಗಳನ್ನು ಪಾಲಿಸುವಂತೆಯೂ ಅವರು ಕರೆ ನೀಡಿದರು. ಆಯಾ ರಾಜ್ಯಗಳಲ್ಲಿ ಕೃಷಿ ಉತ್ಪನ್ನಗಳ ಕೊಯ್ಲು ಮತ್ತು ಸಂಗ್ರಹಣೆಯನ್ನು ಖಚಿತಪಡಿಸಿಕೊಳ್ಳಲು ಮಾಡಿರುವ ವ್ಯವಸ್ಥೆಗಳ ಬಗ್ಗೆ ಗಮನಹರಿಸುವಂತೆಯೂ ಅವರು ತಿಳಿಸಿದರು.

ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರೊಂದಿಗೆ ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಉಪ ರಾಷ್ಟ್ರಪತಿಯವರು, ಆಯಾ ಪ್ರದೇಶಗಳಲ್ಲಿನ ಆಧ್ಯಾತ್ಮಿಕ ಮತ್ತು ಧಾರ್ಮಿಕ ಮುಖಂಡರನ್ನು ಸಂಪರ್ಕಿಸಿ, ಸಾಮಾಜಿಕ ಅಂತರ ಹಾಗೂ ವೈಯಕ್ತಿಕ ನೈರ್ಮಲ್ಯದ ಮಾರ್ಗಸೂಚಿಗಳನ್ನು ಅನುಸರಿಸುವಂತೆ ತಮ್ಮ ಅನುಯಾಯಿಗಳಿಗೆ ಕಟ್ಟುನಿಟ್ಟಾಗಿ ಮಾರ್ಗದರ್ಶನ ನೀಡುವಂತೆ ಒತ್ತಾಯಿಸಬೇಕೆಂದು ಸಲಹೆ ನೀಡಿದರು.

ದೇಶಾದ್ಯಂತ ವ್ಯಾಪಕ ಪ್ರತಿಕೂಲ ಪರಿಣಾಮಕ್ಕೆ ಕಾರಣವಾಗಿರುವ ಇತ್ತೀಚಿನ ತಪ್ಪಿಸಬಹುದಾದ ಘಟನೆಯನ್ನು ಉಲ್ಲೇಖಿಸಿದ ಉಪ ರಾಷ್ಟ್ರಪತಿಯವರು, ಇದನ್ನು ಎಚ್ಚರಿಕೆಯ ಗಂಟೆ ಎಂದು ಪರಿಗಣಿಸುವಂತೆ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳಿಗೆ ಎಚ್ಚರಿಕೆ ನೀಡಿದರು. "ನಿಮ್ಮ ರಾಜ್ಯಗಳಲ್ಲಿ ಯಾವುದೇ ಧಾರ್ಮಿಕ ಸಭೆಗಳು ನಡೆಯಲು ಅನುಮತಿ ನೀಡಬಾರದು" ಎಂದು ಅವರು ಹೇಳಿದರು.

ಬೆಳೆಗಳ ಕೊಯ್ಲಿನ ಋತುವನ್ನು ಉಲ್ಲೇಖಿಸಿದ ಶ್ರೀ ನಾಯ್ಡು ಅವರು, ರೈತರು ಯಾವುದೇ ತೊಂದರೆಗಳನ್ನು ಎದುರಿಸದಂತೆ ಕೃಷಿ ಯಂತ್ರೋಪಕರಣಗಳ ಸುಗಮ ಚಲನೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳ ಆಡಳಿತಗಳಿಗೆ ಸಲಹೆ ನೀಡುವಂತೆ ಒತ್ತಾಯಿಸಿದರು. 100 ಪ್ರತಿಶತದಷ್ಟು ಉತ್ಪನ್ನಗಳ ಸಂಗ್ರಹವನ್ನು ಅವರು ಖಚಿತಪಡಿಸಿಕೊಳ್ಳಬೇಕು. "ಇದು ಇಂದಿನ ಸಂದರ್ಭದ ಅವಶ್ಯಕತೆಯಾಗಿದೆ" ಎಂದು ತಿಳಿಸಿದರು.

ಕೆಲವು ರಾಜ್ಯಗಳಲ್ಲಿ ನಡೆದ ವೈದ್ಯರ ಮೇಲಿನ ಹಲ್ಲೆ ಘಟನೆಗಳ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ ಶ್ರೀ ನಾಯ್ಡು, ಇದು ದುರದೃಷ್ಟಕರ ಮತ್ತು ಖಂಡನೀಯ ಎಂದರು. COVID-19 ವಿರುದ್ಧದ ಯುದ್ಧದಲ್ಲಿ ವೈದ್ಯರು, ದಾದಿಯರು ಮತ್ತು ಇತರ ಮುಂಚೂಣಿ ಯೋಧರಾದ ನೈರ್ಮಲ್ಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಗಳ ನಿರ್ಣಾಯಕ ಹಾಗೂ ಜೀವ ಉಳಿಸುವ ಪಾತ್ರದ ಬಗ್ಗೆ ಜನರಿಗೆ ತಿಳುವಳಿಕೆ ನೀಡಬೇಕು ಎಂದು ಅವರು ರಾಜ್ಯಪಾಲರನ್ನು ಒತ್ತಾಯಿಸಿದರು. ಇಂತಹ ಘಟನೆಗಳು ವೈದ್ಯರು ಮತ್ತು ಇತರರ ಮೇಲೆ ನಿರಾಶಾದಾಯಕ ಪರಿಣಾಮ ಬೀರುತ್ತವೆ ಎಂದು ಅವರು ಹೇಳಿದರು.

ಅವರು ಸಲ್ಲಿಸುತ್ತಿರುವ ಸೇವೆಗಳನ್ನು ಶ್ಲಾಘಿಸಿದ ಅವರು, ಇಂತಹ ದಾಳಿಯ ಹಿಂದಿನ ನಿಜವಾದ ಕಾರಣಗಳನ್ನು ಪತ್ತೆಹಚ್ಚಬೇಕಾಗಿದೆ ಮತ್ತು ಇತರರನ್ನು ಉಳಿಸಲು ವೈದ್ಯರು ಮತ್ತು ದಾದಿಯರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ ಎಂದು ಜನರಿಗೆ ಅರಿವು ಮೂಡಿಸಬೇಕಾಗಿದೆ ಎಂದರು.

ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಂದುವರಿಸಲು ಅನುವು ಮಾಡಿಕೊಡಲು ಆನ್‌ಲೈನ್ ಕೋರ್ಸ್‌ಗಳನ್ನು ನಡೆಸುವ ವ್ಯವಸ್ಥೆಗಳ ಬಗ್ಗೆ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳು ಖಚಿತಪಡಿಸಿಕೊಳ್ಳುವಂತೆ ಅವರು ತಿಳಿಸಿದರು.

ವಲಸೆ ಕಾರ್ಮಿಕರ ಅವಸ್ಥೆ, ಜನರಿಗೆ ಅಗತ್ಯ ಸರಕು ಮತ್ತು ಔಷಧಿಗಳ ಪೂರೈಕೆ ಬಗ್ಗೆ ತಿಳಿದುಕೊಳ್ಳಲು ಉಪ ರಾಷ್ಟ್ರಪತಿಯವರು ಪ್ರಯತ್ನಿಸಿದರು. ವಲಸೆ ಕಾರ್ಮಿಕರು ಎದುರಿಸುತ್ತಿರುವ ಕಷ್ಟಗಳನ್ನು ತಗ್ಗಿಸುವಲ್ಲಿ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ, ಅವರಿಗೆ ಆಹಾರ ಮತ್ತು ಆಶ್ರಯ ನೀಡುವ ವಿಷಯದಲ್ಲಿ ನೆರವಿಗೆ ಬರುವುದು ಸಮಾಜದ ಕರ್ತವ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ದೇಶಾದ್ಯಂತ ಲಾಕ್‌ಡೌನ್‌ನ್ನು ಅನುಸರಿಸುತ್ತಿರುವುದಕ್ಕಾಗಿ ಜನರನ್ನು ಶ್ಲಾಘಿಸಿದ ಶ್ರೀ ನಾಯ್ಡು, ಸಾಮಾಜಿಕ ಅಂತರದ ಮಾನದಂಡಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಕರೆ ನೀಡಿದರು. ಯಾವುದೇ ಉಲ್ಲಂಘನೆ, ವಿಚಲತೆ ಅಥವಾ ದುರ್ಬಲತೆಯಿಲ್ಲದೇ ಇದೇ ಧಾಟಿಯಲ್ಲಿ ನಿಯಮಗಳನ್ನು ಪಾಲಿಸಬೇಕು ಎಂದು ಅವರು ಜನರಿಗೆ ಮನವಿ ಮಾಡಿದರು.

ಮಾನ್ಯ ರಾಷ್ಟ್ರಪತಿಗಳು ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸಲಹೆಯನ್ನು ಪಾಲಿಸುವಂತೆ ಜನರನ್ನು ಒತ್ತಾಯಿಸಿದ ಅವರು, ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಐಸಿಎಂಆರ್ ಹೊರಡಿಸಿದ ಮಾರ್ಗಸೂಚಿಗಳನ್ನು ಪಾಲಿಸುವಂತೆ ವೈದ್ಯರು ಮತ್ತು ವಿಜ್ಞಾನಿಗಳಿಗೆ ಸಲಹೆ ನೀಡಿದರು.

35 ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಆಡಳಿತಾಧಿಕಾರಿಗಳು COVID-19 ಸಾಂಕ್ರಾಮಿಕ ರೋಗದ ನಿಗ್ರಹಕ್ಕೆ ಆಯಾ ಪ್ರದೇಶಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

 



(Release ID: 1610882) Visitor Counter : 158