ರಾಷ್ಟ್ರಪತಿಗಳ ಕಾರ್ಯಾಲಯ

COVID -19 ಕುರಿತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್ಸ್ ಮತ್ತು ಆಡಳಿತಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿ

Posted On: 03 APR 2020 4:55PM by PIB Bengaluru

COVID -19 ಕುರಿತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್ಸ್ ಮತ್ತು ಆಡಳಿತಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿ

 

COVID -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಅಪಾರ ಧೈರ್ಯ, ಶಿಸ್ತು ಮತ್ತು ಐಕಮತ್ಯವನ್ನು ತೋರಿಸುವ ಮೂಲಕ ದೇಶದ ಜನರು ಮಾದರಿಯಾಗಿದ್ದಾರೆ ಎಂದು ಹೇಳಿರುವ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು ಪ್ರಯತ್ನಗಳಿಗೆ ಹಿನ್ನಡೆ ಉಂಟುಮಾಡಿರುವ ಎರಡು ಘಟನೆಗಳಾದ ಆನಂದ್ ವಿಹಾರದಲ್ಲಿ ವಲಸೆ ಕಾರ್ಮಿಕರ ಗುಂಪು ಮತ್ತು ದೆಹಲಿಯ ನಿಜಾಮುದ್ದೀನ್‌ನಲ್ಲಿರುವ ತಬ್ಲಿಘಿ ಜಮಾತ್‌ನ ಸಭೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ,

ರಾಷ್ಟ್ರಪತಿಯವರು ಉಪರಾಷ್ಟ್ರಪತಿ ಶ್ರೀ ಎಂ.ವೆಂಕಯ್ಯ ನಾಯ್ಡು ಅವರೊಂದಿಗೆ ಇಂದು ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. COVID-19 ಸಾಂಕ್ರಾಮಿಕ ನಿಗ್ರಹಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಕ್ರಮಗಳಿಗೆ ಕೊಡುಗೆ ನೀಡುವ ಮಾರ್ಗಗಳ ಬಗ್ಗೆ ಚರ್ಚಿಸಿದರು.. ರಾಷ್ಟ್ರವ್ಯಾಪಿ ಲಾಕ್ ಡೌನ್ ಸಮಯದಲ್ಲಿ ಯಾರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳುವ ಅಗತ್ಯವನ್ನು ರಾಷ್ಟ್ರಪತಿಯವರು ಒತ್ತಿ ಹೇಳಿದರು.

ಇಂದಿನ ಸಭೆಯು ಮಾರ್ಚ್ 27 ರಂದು ಆಯ್ದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್‌ಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಮುಂದುವರಿದ ಭಾಗವಾಗಿದೆ. ಮಾರ್ಚ್ 27 ರಂದು ನಡೆದ ಸಮ್ಮೇಳನದಲ್ಲಿ 15 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳು ತಮ್ಮ ರಾಜ್ಯಗಳು / ಯುಟಿಗಳಲ್ಲಿನ ಪರಿಸ್ಥಿತಿಯ ಬಗ್ಗೆ ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಯವರಿಗೆ ತಿಳಿಸಿದ್ದರು. ಇಂದು, ಉಳಿದ 21 ರಾಜ್ಯಗಳು / ಯುಟಿಗಳ ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್‌ಗಳು, ಆಡಳಿತಾಧಿಕಾರಿಗಳು . COVID-19 ಸಂಬಂಧಿತ ಪ್ರಯತ್ನಗಳನ್ನು ಕುರಿತು ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿಯವರಿಗೆ ವಿವರಿಸಿದರು. ಅದೃಶ್ಯ ಶತ್ರುವಿನ ವಿರುದ್ಧ ಹೋರಾಡುವಲ್ಲಿ ಸಡಿಲತೆ ಅಥವಾ ತೃಪ್ತಿಗೆ ಯಾವುದೇ ಅವಕಾಶವಿಲ್ಲ ಎಂದು ಸಮ್ಮೇಳನದಲ್ಲಿ ಸರ್ವಾನುಮತ ವ್ಯಕ್ತವಾಯಿತು.

ಹಿನ್ನೆಲೆಯಲ್ಲಿ, ದೇಶದ ಕೆಲವು ಭಾಗಗಳಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆದ ಘಟನೆಗಳ ಬಗ್ಗೆ ರಾಷ್ಟ್ರಪತಿಗಳು ಕಳವಳ ವ್ಯಕ್ತಪಡಿಸಿದರು. ಕೊರೊನಾವೈರಸ್ ವಿರುದ್ಧ ಹೋರಾಡಲು ಜನರ ಒಗ್ಗಟ್ಟಿನ ಅಭಿವ್ಯಕ್ತಿಯಾಗಿ ಭಾನುವಾರ ರಾತ್ರಿ 9 ಗಂಟೆಗೆ ಮನೆಗಳಲ್ಲಿ ಲೈಟ್ ಗಳನ್ನು ಸ್ವಿಚ್ ಆಫ್ ಮಾಡುವಂತೆ ಮತ್ತು ಅದರ ಬದಲಿಗೆ ಮೊಬೈಲ್ ದೀಪಗಳು, ಟಾರ್ಚ್‌ಗಳು ಅಥವಾ ದೀಪಗಳನ್ನು ಬೆಳಗುವಂತೆ ನಾಗರಿಕರಿಗೆ ಪ್ರಧಾನಮಂತ್ರಿಯವರು ಮಾಡಿರುವ ಮನವಿಯನ್ನು ಅವರು ತುಂಬು ಹೃದಯದಿಂದ ಅನುಮೋದಿಸಿದರು. ಜನರು ತಮ್ಮ ಸೃಷ್ಟಿಸಿಕೊಂಡಿರುವ ಭದ್ರಕೋಟೆಯು ಶಿಥಿಲವಾಗದಂತೆ ನೋಡಿಕೊಳ್ಳಬೇಕು ಹಾಗೂ ಸಾಮಾಜಿಕ ಅಂತರದ ಅಭ್ಯಾಸವನ್ನು ಅನುಸರಿಸಬೇಕು ಎಂದರು.

ಮಾರ್ಚ್ 27 ರಂದು ನಡೆದ ಹಿಂದಿನ ವಿಡಿಯೋ ಕಾನ್ಫರೆನ್ಸ್ ನಲ್ಲಿ ರಚನಾತ್ಮಕ ಚರ್ಚೆಗಳನ್ನು ನಡೆಸಲಾಗಿದೆ ಮತ್ತು ಹಲವಾರು ಉಪಯುಕ್ತ ಸಲಹೆಗಳನ್ನು ನೀಡಲಾಗಿದೆ ಎಂದು ರಾಷ್ಟ್ರಪತಿಯವರು ತಮ್ಮ ಆರಂಭಿಕ ನುಡಿಗಳಲ್ಲಿ ತಿಳಿಸಿದರು. ನಿವೃತ್ತ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಳ್ಳವುದು, ಮನಶ್ಶಾಸ್ತ್ರಜ್ಞರ ಪರಿಣತಿಯನ್ನು ಬಳಸಿಕೊಳ್ಳುವುದು, ಯುವಕರನ್ನು ಸ್ವಯಂಸೇವಕರಾಗಿ ಆಹ್ವಾನಿಸುವುದು, ದೈನಂದಿನ ಪರಿಶೀಲನಾ ಸಭೆಗಳೊಂದಿಗೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದು, ಹಸಿವಿನ ಸಹಾಯವಾಣಿ ಸ್ಥಾಪಿಸುವುದು, ಮನೆಗಳಿಗೆ ವಿತರಣೆಯನ್ನು ಉತ್ತೇಜಿಸುವುದು, ಪರಿಹಾರ ಕಾರ್ಯಗಳು ಮತ್ತು ಕ್ವಾರಂಟೈನ್ ಸೌಲಭ್ಯಗಳಿಗಾಗಿ ಕ್ರೀಡಾಂಗಣಗಳನ್ನು ಬಳಸಿಕೊಳ್ಳುವುದು ಮತ್ತು ಜಾಗೃತಿ ಮೂಡಿಸಲು ವಿಶ್ವವಿದ್ಯಾಲಯಗಳನ್ನು ಬಳಸಿಕೊಳ್ಳುವುದು- ಹೀಗೆ ಹಿಂದಿನ ಸಮ್ಮೇಳನದಲ್ಲಿ ವಿವಿಧ ರಾಜ್ಯಗಳ ಪ್ರಶಂಸನೀಯ ಉಪಕ್ರಮಗಳು ಗಮನ ಸೆಳೆದವು.

ಬಿಕ್ಕಟ್ಟಿನ ಸಂದರ್ಭದಲ್ಲಿ ಮನೆಯಿಲ್ಲದವರು, ನಿರುದ್ಯೋಗಿಗಳು ಮತ್ತು ಸಮಾಜದ ದುರ್ಬಲ ವರ್ಗದವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದ ರಾಷ್ಟ್ರಪತಿಯವರು, ಅವರ ಅಗತ್ಯತೆಗಳ ಬಗ್ಗೆ ನಾವು ಹೆಚ್ಚು ಸ್ಪಂದಿಸಬೇಕು ಎಂದು ಹೇಳಿದರು. ಯಾರೂ ಹಸಿವಿನಿಂದ ಬಳಲುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳುವ ಮಾರ್ಗಗಳು ಮತ್ತು ವಿಧಾನಗಳನ್ನು ಚರ್ಚಿಸಲು ಅವರು ಸಮ್ಮೇಳನದಲ್ಲಿ ಭಾಗವಹಿಸಿದ ಇತರರನ್ನು ಆಹ್ವಾನಿಸಿದರು. ಇದು ಒಂದು ದೊಡ್ಡ ಸವಾಲು ಎಂದು ಒಪ್ಪಿಕೊಂಡ ಅವರು, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಮಾಡಿದ ಪ್ರಯತ್ನಗಳಿಗೆ ರಾಜ್ಯಪಾಲರು ಕೊಡುಗೆ ನೀಡುತ್ತಾರೆ ಮತ್ತು ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಅಗತ್ಯವಿರುವವರಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಲಭ್ಯವಾಗುವಂತೆ ನೋಡಿಕೊಳ್ಳುವಾಗ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಂತೆ ಎಚ್ಚರ ವಹಿಸಬೇಕಾಗಿದೆ ಎಂದು ಅವರು ಹೇಳಿದರು.

ಹಿಂದಿನ ಸಮ್ಮೇಳನದಲ್ಲಿ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿ ರೆಡ್ ಕ್ರಾಸ್ ಮತ್ತು ಇತರ ಸ್ವಯಂಸೇವಾ ಸಂಸ್ಥೆಗಳ ಪಾತ್ರವನ್ನು ಚರ್ಚಿಸಲಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಮಾನವೀಯ ಸವಾಲನ್ನು ಎದುರಿಸುವಲ್ಲಿ ಸ್ವಯಂಪ್ರೇರಿತ ಸಂಘಟನೆಗಳುಗಳು ಮತ್ತು ಖಾಸಗಿ ವಲಯದ ಗರಿಷ್ಠ ಭಾಗವಹಿಸುವಿಕೆಯನ್ನು ಒಳಗೊಳ್ಳಲು ಮತ್ತು ಪ್ರೋತ್ಸಾಹಿಸಲು ಅವರು ಸಲಹೆಗಳನ್ನು ಆಹ್ವಾನಿಸಿದರು.

ಸಾಂಕ್ರಾಮಿಕ ರೋಗವನ್ನು ಹೋರಾಡುವಲ್ಲಿ, ಇದುವರೆಗೆ ನಮ್ಮ ಪ್ರಯತ್ನಗಳು ಸರಿಯಾದ ದಿಕ್ಕಿನಲ್ಲಿವೆ, ಕೆಲವು ಘಟನೆಗಳ ಹೊರತಾಗಿಯೂ, ಮತ್ತು ನಾವು ದೃಢ ನಿಶ್ಚಯದಿಂದ ಮುಂದುವರಿಯುತ್ತಿದ್ದೇವೆ ಎಂದು ಅವರು ತಮ್ಮ ಸಮಾರೋಪ ಭಾಷಣದಲ್ಲಿ ಹೇಳಿದರು.

ಜನರ ತಾಳ್ಮೆ ಮತ್ತು ಸಹಕಾರಕ್ಕಾಗಿ ರಾಷ್ಟ್ರಪತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ಜೀವಕ್ಕೆ ಗಂಭೀರ ಅಪಾಯದ ನಡುವೆಯೂ ಸಮಾಜ, ರಾಷ್ಟ್ರ ಮತ್ತು ಮಾನವೀಯತೆಗೆ ಸೇವೆ ಸಲ್ಲಿಸುತ್ತಿರುವ ವೈದ್ಯರು, ಅಧಿಕಾರಿಗಳು ಮತ್ತು ನೌಕರರಿಗೆ ಧನ್ಯವಾದ ಹೇಳಿದರು. ಸಾಂಕ್ರಾಮಿಕ ರೋಗದ ವಿರುದ್ಧದ ಅಭಿಯಾನವನ್ನು ದೇಶದ ಜನರು ಸಂಪೂರ್ಣ ಜಾಗರೂಕತೆಯಿಂದ ಮತ್ತು ದೃಢ ನಿಶ್ಚಯದಿಂದ ಮುಂದುವರಿಸುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಸಮ್ಮೇಳನವನ್ನು ಆಯೋಜಿಸಿದ ಉಪ ರಾಷ್ಟ್ರಪತಿಯವರು, ಬಡವರ ದುಃಸ್ಥಿತಿಯನ್ನು ತಗ್ಗಿಸಲು ಭಾರತೀಯ ರೆಡ್‌ಕ್ರಾಸ್ ಸೊಸೈಟಿ, ಸಾಮಾಜಿಕ ಸಂಸ್ಥೆಗಳು ಮತ್ತು ಖಾಸಗಿ ವಲಯದ ಸ್ವಯಂಸೇವಕರೊಂದಿಗೆ ಜೊತೆಯಾಗುವಂತೆ ಹೇಳಿದರು. ಲಾಕ್‌ಡೌನ್ ಸಂದರ್ಭದಲ್ಲಿ ಅನೇಕ ರಾಜ್ಯಗಳಲ್ಲಿ ಕೊಯ್ಲು ನಡೆಯುತ್ತಿರುವುದರಿಂದ, ಸಮಾಜದ ಅತ್ಯಂತ ದುರ್ಬಲ ವರ್ಗಗಳನ್ನು, ವಿಶೇಷವಾಗಿ ರೈತರನ್ನು ಬೆಂಬಲಿಸುವಂತೆ ಸಮಾಜದ ವಿವಿಧ ಹಂತಗಳ ನಾಯಕರನ್ನು ಮನವೊಲಿಸುವಂತೆ ಅವರು ರಾಜ್ಯಪಾಲರು / ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಆಡಳಿತಾಧಿಕಾರಿಗಳನ್ನು ಕೋರಿದರು. ಜನರ ತೊಂದರೆಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ, ಈಗ ಬಿಕ್ಕಟ್ಟಿನಲ್ಲಿರುವ ಬಡ ಮತ್ತು ಅತ್ಯಂತ ದುರ್ಬಲ ವರ್ಗಗಳನ್ನು ಬೆಂಬಲಿಸಲು ಸಮಾಜದ ಗಣ್ಯರು ಮುಂದೆ ಬರುವುದು ಶಾಶ್ವತ ಮಾನವೀಯ ಮೌಲ್ಯಗಳಿಗೆ ನೆರವಾಗಲಿದೆ ಎಂದರು.

ಉತ್ತರ ಪ್ರದೇಶ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್ ಅವರು, ವಿಶ್ವವಿದ್ಯಾನಿಲಯಗಳು ಮತ್ತು ವೈದ್ಯಕೀಯ ಕಾಲೇಜುಗಳು ರೋಗಿಗಳ ಆರೈಕೆಯನ್ನು ಯುದ್ಧೋಪಾದಿಯಲ್ಲಿ ನಡೆಸಲು ವಿಧಾನಗಳನ್ನು ರೂಪಿಸಲು ಸಹಕರಿಸುತ್ತಿವೆ ಎಂದರು. ತಮ್ಮ ಶೈಕ್ಷಣಿಕ ವರ್ಷವನ್ನು ಮುಂದುವರಿಸಲು ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು ಅನುವು ಮಾಡಿಕೊಟ್ಟಿವೆ ಎಂದು ಹೇಳಿದರು. ರೈತರ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಅರಿತುಕೊಂಡಿದೆ ಮತ್ತು ಅವರಿಗೆ ನೆರವಿನ ಕ್ರಮಗಳನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ರಾಷ್ಟ್ರಪತಿಯವರು, ಎಲ್ಲಾ ರಾಜ್ಯಪಾಲರು ರೆಡ್‌ಕ್ರಾಸ್ ಸೊಸೈಟಿಯ ಘಟಕಗಳನ್ನು ಪುನಶ್ಚೇತನಗೊಳಿಸುವಂತೆ ಮತ್ತು ಅವುಗಳ ಸಹಾಯವನ್ನು ತೆಗೆದುಕೊಳ್ಳುವಂತೆ ಕರೆಕೊಟ್ಟರು.

ಚರ್ಚೆಯಲ್ಲಿ ಆಗಾಗ್ಗೆ ಮಧ್ಯಪ್ರವೇಶಿಸಿದ ಉಪ ರಾಷ್ಟ್ರಪತಿಯವರು, ಈ ಕೊಯ್ಲು ಸಮಯದಲ್ಲಿ ರೈತರಿಗೆ ಸಹಾಯ ಮಾಡಲು ಸರ್ಕಾರ ಪ್ರಾರಂಭಿಸಿರುವ ಕ್ರಮಗಳ ಬಗ್ಗೆ ರಾಜ್ಯಪಾಲರು / ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಆಡಳಿತಾಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು. ಈ ಪ್ರಯತ್ನದ ಸಮಯದಲ್ಲಿ ರೈತರು ಮತ್ತು ಭೂರಹಿತ ಕಾರ್ಮಿಕರಿಗೆ ಸಹಾಯ ನೀಡಲಾಗಿದೆಯೆ ಎಂದು ಅವರು ಆಂಧ್ರಪ್ರದೇಶದ ರಾಜ್ಯಪಾಲ ಶ್ರೀ ಬಿಸ್ವ ಭೂಷಣ್ ಹರಿಚಂದನ್ ಅವರನ್ನು ಕೇಳಿದರು.

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಶ್ರೀ ಗಿರೀಶ್ ಚಂದ್ರ ಮುರ್ಮು ಅವರು ಕೇಂದ್ರಾಡಳಿತ ಪ್ರದೇಶದ ಆಡಳಿತವು ತೀವ್ರ ಕಣ್ಗಾವಲು ಇಟ್ಟುಕೊಂಡಿದೆ ಮತ್ತು ರೋಗ ತಡೆಗಟ್ಟಲು ಹಾಟ್‌ಸ್ಪಾಟ್‌ಗಳನ್ನು ಗುರುತಿಸಿದೆ ಎಂದರು. "ತಬ್ಲಿಘಿ ಜಮಾತ್‌ನವರ ಚಲನೆಯಿಂದಾಗಿ ನಾವು ಸಮಸ್ಯೆಗಳನ್ನು ಎದುರಿಸಿದ್ದೇವೆ" ಎಂದು ಅವರು ಹೇಳಿದರು. ಆದಾಗ್ಯೂ, ಆಡಳಿತವು ವಲಸೆ ಕಾರ್ಮಿಕರು, ವಿದ್ಯಾರ್ಥಿಗಳನ್ನು ನೋಡಿಕೊಳ್ಳುತ್ತಿದೆ ಮತ್ತು ಸಾಕಷ್ಟು ಕ್ಯಾರೆಂಟೈನ್ ಕೇಂದ್ರಗಳನ್ನು ಸ್ಥಾಪಿಸಿದೆ ಎಂದರು. "ನಾವು ದೂರದ ಪ್ರದೇಶಗಳಿಗೆ ಆಹಾರ ಸರಬರಾಜನ್ನು ಖಚಿತಪಡಿಸುತ್ತಿದ್ದೇವೆ" ಎಂದು ಉಪ ರಾಷ್ಟ್ರಪತಿಯವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಲಡಾಕ್ ಲೆಫ್ಟಿನೆಂಟ್ ಗವರ್ನರ್ ಶ್ರೀ ರಾಧಾಕೃಷ್ಣ ಮಾಥುರ್ ಅವರು, ಇರಾನ್‌ನಿಂದ ಯಾತ್ರಾರ್ಥಿಗಳು ಮರಳಿದ ಕಾರಣ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕೆಲವು ಪ್ರದೇಶಗಳಿಗೆ ಪ್ರವೇಶದಲ್ಲಿರುವ ಕಷ್ಟ ಮತ್ತು ಕಠಿಣ ಭೂಪ್ರದೇಶವು ಕಾರ್ಯಾಚರಣೆಯನ್ನು ಕಷ್ಟಕರವಾಗಿಸುತ್ತದೆ ಎಂದು ಅವರು ಗಮನಸೆಳೆದರು. ಅಗತ್ಯವಿರುವ ಜನರಿಗೆ ಸಹಾಯ ನೀಡುವಲ್ಲಿ ಸ್ವಯಂಪ್ರೇರಿತ, ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳ ಕಾರ್ಯವನ್ನು ಅವರು ಶ್ಲಾಘಿಸಿದರು.

10 ಪಾಸಿಟಿವ್ ಕೋವಿಡ್ -19 ಪ್ರಕರಣಗಳು ತಬ್ಲೀಘಿ ಜಮಾತ್‌ಗೆ ಸಂಬಂಧಿಸಿವೆ ಎಂದು ಅಂಡಮಾನ್ ಮತ್ತು ನಿಕೋಬಾರ್ ಲೆಫ್ಟಿನೆಂಟ್ ಗವರ್ನರ್ ಅಡ್ಮಿರಲ್ ಡಿ.ಕೆ.ಜೋಶಿ (ನಿವೃತ್ತ) ಹೇಳಿದರು. ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರನ್ನೂ ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ ಎಂದರು. ಚತ್ತೀಸ್‌ಗಢ ರಾಜ್ಯಪಾಲರಾದ ಸುಶ್ರಿ ಅನುಸೂಯಾ ಯುಕೈ, ರೋಗದ ಹರಡುವಿಕೆಯನ್ನು ತ್ವರಿತವಾಗಿ ತಡೆಗಟ್ಟಲು ರಾಜ್ಯ ಸರ್ಕಾರ ಸಮಗ್ರ ಕಾರ್ಯತಂತ್ರವನ್ನು ಪ್ರಾರಂಭಿಸಿದೆ ಎಂದು ಹೇಳಿದರು. ರೈತರ ಬವಣೆಗಳನ್ನು ಉಲ್ಲೇಖಿಸಿದ ಅವರು, ಬೇಗ ಹಾಳಾಗುವ ಕೃಷಿ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಅನುಮತಿ ನೀಡಲಾಗಿದೆ ಎಂದು ಹೇಳಿದರು. ಉತ್ತರಾಖಂಡ್ ರಾಜ್ಯಪಾಲರಾದ ಶ್ರೀಮತಿ ಬೇಬಿ ರಾಣಿ ಮೌರ್ಯ ಅವರು, ಬಿಕ್ಕಟ್ಟಿನಿಂದ ಉದ್ಭವಿಸುವ ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯವನ್ನು ರಾಜ್ಯವು ಸೂಕ್ತವಾಗಿ ಹೆಚ್ಚಿಸಿದೆ ಎಂದು ಹೇಳಿದರು.

ಗೋವಾ ರಾಜ್ಯಪಾಲ ಶ್ರೀ ಸತ್ಯ ಪಾಲ್ ಮಲಿಕ್, ಒಡಿಶಾ ರಾಜ್ಯಪಾಲ ಪ್ರೊ.ಗಣೇಶಿ ಲಾಲ್ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಡಾ.ಕಿರಣ್ ಬೇಡಿ, ಜಾರ್ಖಂಡ್ ರಾಜ್ಯಪಾಲ ಶ್ರೀಮತಿ ದ್ರೌಪದಿ ಮುರ್ಮು, ಅಸ್ಸಾಂ ರಾಜ್ಯಪಾಲ ಪ್ರೊ.ಜಗದೀಶ್ ಮುಖಿ, ಮಿಜೋರಾಂ ರಾಜ್ಯಪಾಲ ಶ್ರೀ ಪಿ.ಎಸ್ ಶ್ರೀಧರನ್ ಪಿಳ್ಳೈ, ಮಣಿಪುರದ ರಾಜ್ಯಪಾಲ ಡಾ.ನಜ್ಮಾ ಹೆಪ್ತುಲ್ಲಾ, ಮೇಘಾಲಯ ರಾಜ್ಯಪಾಲರಾದ ಶ್ರೀ ತಥಾಗತ ರಾಯ್, ಅರುಣಾಚಲ ಪ್ರದೇಶದ ರಾಜ್ಯಪಾಲ ಬ್ರಿಗೇಡಿಯರ್. (ಡಾ) ಬಿ.ಡಿ.ಮಿಶ್ರಾ (ನಿವೃತ್ತ), ಸಿಕ್ಕಿಂ ರಾಜ್ಯಪಾಲ ಶ್ರೀ ಗಂಗಾ ಪ್ರಸಾದ್, ತ್ರಿಪುರದ ರಾಜ್ಯಪಾಲ ಶ್ರೀ ರಮೇಶ್ ಬೈಸ್, ನಾಗಾಲ್ಯಾಂಡ್ ರಾಜ್ಯಪಾಲರಾದ ಶ್ರೀ ಆರ್.ಎನ್.ರವಿ, ಲಕ್ಷದ್ವೀಪ ಆಡಳಿತಾಧಿಕಾರಿ ಶ್ರೀ ದಿನೇಶ್ವರ ಶರ್ಮಾ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ಡಿಯು ಆಡಳಿತಾಧಿಕಾರಿ ಶ್ರೀ ಪ್ರಫುಲ್ ಪಟೇಲ್. ತಮಿಳುನಾಡಿನ ರಾಜ್ಯಪಾಲ ಶ್ರೀ ಬನ್ವಾರಿಲಾಲ್ ಪುರೋಹಿತ್, ಮಹಾರಾಷ್ಟ್ರದ ರಾಜ್ಯಪಾಲ ಶ್ರೀ ಭಗತ್ ಸಿಂಗ್ ಕೊಶಯಾರಿ, ಕೇರಳ ರಾಜ್ಯಪಾಲ ಶ್ರೀ ಆರಿಫ್ ಮೊಹಮ್ಮದ್ ಖಾನ್ ಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ಅನಿಲ್ ಬೈಜಾಲ್ ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಯವರಿಗೆ ತಮ್ಮ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸಮ್ಮೇಳನದ ಸಮಾರೋಪದಲ್ಲಿ ರಾಷ್ಟ್ರಪತಿಯವರು, ರಾಜ್ಯಪಾಲರು / ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಆಡಳಿತಾಧಿಕಾರಿಗಳ ಒಳನೋಟವುಳ್ಳ ಅಭಿಪ್ರಾಯಗಳನ್ನು ಶ್ಲಾಘಿಸಿದರು ಮತ್ತು ಜನರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಕಿವಿಗೊಟ್ಟು ಕೇಳಬೇಕು ಎಂದರು. ಗಂಭೀರ ಅಪಾಯದ ನಡುವೆಯೂ ಜನರಿಗೆ ಸೇವೆ ಸಲ್ಲಿಸಸುತ್ತಿರುವುದಕ್ಕಾಗಿ ಮತ್ತು ಅನುಕರಣೀಯ ಧೈರ್ಯ ಮತ್ತು ಸಂಕಲ್ಪವನ್ನು ಪ್ರದರ್ಶಿಸುತ್ತಿರುವುದಕ್ಕಾಗಿ ಅವರು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರನ್ನು ಶ್ಲಾಘಿಸಿದರು. ಅವಶ್ಯಕತೆ ಬಂದರೆ ತಾವು ಹಾಗೂ ಉಪ ರಾಷ್ಟ್ರಪತಿಯವರು ಯಾವಾಗಲೂ ಸಮಾಲೋಚನೆಗಾಗಿ ಲಭ್ಯವಿರುವುದಾಗಿ ರಾಷ್ಟ್ರಪತಿಯವರು ಪುನರುಚ್ಚರಿಸಿದರು.

 



(Release ID: 1610851) Visitor Counter : 220