ರೈಲ್ವೇ ಸಚಿವಾಲಯ

ಕೋವಿಡ್-19 ವಿರುದ್ಧ ದೇಶದ ಪ್ರಯತ್ನಗಳಿಗೆ ಪೂರಕವಾಗಿ ಭಾರತೀಯ ರೈಲ್ವೆಯ ಸಿದ್ಧತೆಗಳನ್ನು ರೈಲ್ವೆ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ರವರು ಪರಿಶೀಲಿಸಿದರು

Posted On: 01 APR 2020 1:40PM by PIB Bengaluru

ಕೋವಿಡ್-19 ವಿರುದ್ಧ ದೇಶದ ಪ್ರಯತ್ನಗಳಿಗೆ ಪೂರಕವಾಗಿ ಭಾರತೀಯ ರೈಲ್ವೆಯ ಸಿದ್ಧತೆಗಳನ್ನು ರೈಲ್ವೆ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ರವರು ಪರಿಶೀಲಿಸಿದರು

ಇತಿಹಾಸದಲ್ಲಿ ಮೊದಲ ಬಾರಿಗೆ, ರೈಲ್ವೆ ಅಪಘಾತದಲ್ಲಿ ಕಳೆದ ಹನ್ನೆರಡು ತಿಂಗಳಲ್ಲಿ ಒಬ್ಬ ಪ್ರಯಾಣಿಕರೂ ಪ್ರಾಣ ಕಳೆದುಕೊಂಡಿಲ್ಲ; ಕೋವಿಡ್-19ರ ದುಷ್ಪರಿಣಾಮವು ಭಾರತದ ಮೇಲೆ ಕನಿಷ್ಠಮಟ್ಟದಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಈಗ ಕೆಲಸ ಮಾಡುತ್ತಿದ್ದೇವೆ: ರೈಲ್ವೆ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್

ಆಹಾರ ಮತ್ತು ಇತರ ನೆರವಿನೊಂದಿಗೆ ಅಗತ್ಯವಿರುವ ಜನರನ್ನು ತಲುಪಲು ಅಧಿಕಾರಿಗಳಿಗೆ ನಿರ್ದೇಶಿಸಿದರು

 

ರೈಲ್ವೆ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಭಾರತೀಯ ರೈಲ್ವೆಯ ಅಧಿಕಾರಿಗಳಿಗೆ ಆಹಾರ ಮತ್ತು ಇತರ ಸಹಾಯವನ್ನು ಅಗತ್ಯವಿರುವ ಜನರಿಗೆ ಸಾಧ್ಯವಾದಷ್ಟು ಸಿಬ್ಬಂಧಿಯ ಸಾಮರ್ಥ್ಯ ಮತ್ತು ಸಂಪನ್ಮೂಲಗಳನ್ನು ಉಪಯೋಗಿಸಿ ತಲುಪಿಸುವಂತೆ ನಿರ್ದೇಶನ ನೀಡಿದ್ದಾರೆ. ರೈಲ್ವೆ ಸಂಸ್ಥೆಗಳು ಐಆರ್ ಸಿ ಟಿಸಿ ಮತ್ತು ಆರ್ ಪಿ ಎಫ್ ಈಗಾಗಲೇ ಅಗತ್ಯವಿರುವವರಿಗೆ ಉಚಿತ ಊಟದ ವಿತರಣೆಯಲ್ಲಿ ತೊಡಗಿವೆ. ರೈಲ್ವೆಯು ತಮ್ಮ ಕಾರ್ಯದ ವ್ಯಾಪ್ತಿಯನ್ನು ವಿಸ್ತರಿಸಬೇಕು ಮತ್ತು ಜಿಲ್ಲಾ ಅಧಿಕಾರಿಗಳು ಮತ್ತು ಎನ್‌ಜಿಒ ಗಳೊಂದಿಗೆ ಸಮಾಲೋಚಿಸಿ ರೈಲ್ವೆ ನಿಲ್ದಾಣಗಳ ಆಸುಪಾಸನ್ನು ಮೀರಿ ದೂರದ ಪ್ರದೇಶಗಳಿಗೆ ತಲುಪಬೇಕು ಎಂದು ಸಚಿವರು ಹೇಳಿದರು. ಸಭೆಯಲ್ಲಿ ರೈಲ್ವೆ ರಾಜ್ಯ ಸಚಿವ ಶ್ರೀ ಸುರೇಶ್ ಅಂಗಡಿ, ರೈಲ್ವೆ ಬೋರ್ಡ್ ಸದಸ್ಯರು ಜಿಎಂಗಳು ಮತ್ತು ರಾಷ್ಟ್ರದಾದ್ಯಂತ ಇರುವ ಸಾರ್ವಜನಿಕ ಉದ್ದಿಮೆಗಳ ಮುಖ್ಯಸ್ಥರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಿದರು.

ಕರೊನಾ ವಿರುದ್ಧದ ಹೋರಾಟದಲ್ಲಿ ಇಲ್ಲಿಯವರೆಗೆ ಮಾಡಲಾಗುತ್ತಿರುವ ಅಸಾಧಾರಣ ಕಾರ್ಯಗಳಿಗಾಗಿ ಮತ್ತು ಪ್ರಯಾಣಿಕರ ಬೋಗಿಗಳನ್ನು ಪ್ರತ್ಯೇಕತೆಯ ಬೋಗಿಗಳನ್ನಾಗಿ ಪರಿವರ್ತಿಸುವಂತಹ ನವೀನ ಪರಿಹಾರಗಳನ್ನು ಅಳವಡಿಸಿಕೊಳ್ಳುತ್ತಿರುವುದಕ್ಕಾಗಿ ರೈಲ್ವೆಗೆ ಅಭಿನಂದನೆ ಸಲ್ಲಿಸುತ್ತಾ ಶ್ರೀ ಪಿಯೂಷ್ ಗೋಯಲ್ ಅವರು ಎಲ್ಲಾ ವಲಯಗಳು ಈ ಬೋಗಿಗಳನ್ನು ಸಂಪೂರ್ಣವಾಗಿ ಸಿದ್ಧಪಡಿಸುವ ಸವಾಲನ್ನು ಎದುರಿಸಲಿದ್ದು ಆದಷ್ಟು ಬೇಗ ಇವುಗಳು ಸಜ್ಜಾಗಲಿವೆ ಎಂದು ವಿಶ‍್ವಾಸ ವ್ಯಕ್ತಪಡಿಸಿದರು. ಮೊದಲ 5000 ಬೋಗಿಗಳ ಪರಿವರ್ತನೆಯ ಕಾರ್ಯವು ಈಗಾಗಲೇ ಹಂತ ಹಂತವಾಗಿ ಪ್ರಾರಂಭವಾಗಿದೆ ಎನ್ನುವುದನ್ನು ಗಮನಿಸಬಹುದು.

ದೇಶಕ್ಕೆ ಪ್ರಧಾನಮಂತ್ರಿಯವರು ಕರೆ ನೀಡಿದ ನಂತರ, ಪಿಎಂ ಕೇರ್ ನಿಧಿಗೆ 151 ಕೋಟಿ ರೂ.ಗಳ ದೇಣಿಗೆ ನೀಡಲಾಗಿದೆ ಎಂದು ರೈಲ್ವೆ ಮಂಡಳಿ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಭಾರತೀಯ ರೈಲ್ವೆ ಮತ್ತು ರೈಲ್ವೆ ಸಾರ್ವಜನಿಕವಲಯ ಸಂಸ್ಥೆಗಳ ನೌಕರರು ಒಂದು ದಿನದ ಸಂಬಳವನ್ನು ಪಿಎಂ ಕೇರ್ ನಿಧಿಗೆ ದೇಣಿಗೆ ನೀಡಲು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಶ್ರೀ ವಿನೋದ್ ಕುಮಾರ್ ಯಾದವ್ ಮಾಹಿತಿ ನೀಡಿದರು. ಅನೇಕ ರೈಲ್ವೆ ಸಾರ್ವಜನಿಕವಲಯ ಸಂಸ್ಥೆಗಳು ದೇಶದ ಪ್ರಯತ್ನಗಳನ್ನು ಉತ್ತೇಜಿಸಲು ನಿಧಿಗೆ ದೇಣಿಗೆ ನೀಡಲು ಯೋಜಿಸುತ್ತಿವೆ.

ಪ್ರಮುಖ ವಸ್ತುಗಳನ್ನು ಪೂರೈಸಲು ರೈಲ್ವೆಯ ವಿಶೇಷ ಪಾರ್ಸೆಲ್ ರೈಲುಗಳ ಸೇವೆಯನ್ನು ಪರಿಶೀಲಿಸುವಾಗ, ಶ್ರೀ ಪಿಯೂಷ್ ಗೋಯಲ್ ಅವರು ಹೆಚ್ಚಿನ ಮಾರ್ಗಗಳಲ್ಲಿ ಸೇವೆಯು ಲಭ್ಯವಾಗುವಂತೆ ಅಧಿಕಾರಿಗಳನ್ನು ಕೇಳಿದರು, ಇದರಿಂದಾಗಿ ಔಷಧಿಗಳು, ಅಗತ್ಯ ಉಪಕರಣಗಳು, ಖಾದ್ಯಪದಾರ್ಥಗಳಂತಹ ಸರಕುಗಳನ್ನು ದೇಶಾದ್ಯಂತ ತ್ವರಿತವಾಗಿ ಪೂರೈಸಬಹುದು. ಇ-ಕಾಮರ್ಸ್ ಕಂಪನಿಗಳು ಮತ್ತು ಸಣ್ಣ ಪ್ರಮಾಣದಲ್ಲಿ ಅಗತ್ಯವಿರುವ ಇತರ ಪ್ರಮುಖ ಸರಕುಗಳ ಪೂರೈಕೆದಾರರು ಪಾರ್ಸೆಲ್ ರೈಲುಗಳಿಂದ ಪ್ರಯೋಜನ ಹೊಂದಲಿದ್ದಾರೆ. ಪಾರ್ಸೆಲ್ ವಿಶೇಷ ರೈಲುಗಳು ಈಗಾಗಲೇ 8 ಮಾರ್ಗಗಳಲ್ಲಿ ಓಡುತ್ತಿವೆ ಮತ್ತು ಇನ್ನೂ 20 ಮಾರ್ಗಗಳು ವಿವಿಧ ವಲಯಗಳಲ್ಲಿ ಓಡಿಸುವ ಯೋಜನೆಯಿದೆ.

ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂದಿನ ಕೆಲವು ವಾರಗಳು ನಿರ್ಣಾಯಕವಾಗಿವೆ ಮತ್ತು ನಮ್ಮೆಲ್ಲರ ದೃಢಪ್ರಯತ್ನವು ರಾಷ್ಟ್ರವು ಈ ಹೋರಾಟದಲ್ಲಿ ಗೆಲ್ಲುತ್ತದೆ ಎನ್ನುವುದನ್ನು ಖಚಿತಪಡಿಸುತ್ತದೆ ಎಂದು ಶ್ರೀ ಪಿಯೂಷ್ ಗೋಯಲ್ ಹೇಳಿದರು.

ಇತಿಹಾಸದಲ್ಲಿ ಮೊದಲ ಬಾರಿಗೆ, ರೈಲ್ವೆ ಅಪಘಾತದಲ್ಲಿ ಕಳೆದ ಹನ್ನೆರಡು ತಿಂಗಳುಗಳಲ್ಲಿ ಒಬ್ಬ ಪ್ರಯಾಣಿಕರೂ ಸಹ ಪ್ರಾಣ ಕಳೆದುಕೊಂಡಿಲ್ಲ ಎಂದು ಸಚಿವರು ಹೇಳಿದರು. ಕೋವಿಡ್-19ರ ದುಷ್ಪರಿಣಾಮವು ಭಾರತದ ಮೇಲೆ ಕನಿಷ್ಠಮಟ್ಟದಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಈಗ ಕೆಲಸ ಮಾಡುತ್ತಿದ್ದೇವೆ.

 


(Release ID: 1610087) Visitor Counter : 240